ಹುಬ್ಬಳ್ಳಿ–ಧಾರವಾಡ ಅಭಿವೃದ್ಧಿ: ರಾಜ್ಯ ಸರ್ಕಾರದ ತಾರತಮ್ಯ ನೀತಿ– ಮ.ನಾಗರಾಜ ಆರೋಪ

7

ಹುಬ್ಬಳ್ಳಿ–ಧಾರವಾಡ ಅಭಿವೃದ್ಧಿ: ರಾಜ್ಯ ಸರ್ಕಾರದ ತಾರತಮ್ಯ ನೀತಿ– ಮ.ನಾಗರಾಜ ಆರೋಪ

Published:
Updated:
Deccan Herald

ಹುಬ್ಬಳ್ಳಿ: ಅವಳಿ ನಗರದ ಅಭಿವೃದ್ಧಿಗೆ ಅನುದಾನ ನೀಡದ ರಾಜ್ಯ ಸರ್ಕಾರ ತಾರತಮ್ಯ ಮಾಡುತ್ತಿದೆ. ಕೇವಲ ಮೂರು ಜಿಲ್ಲೆಗಳ ಮುಖ್ಯಮಂತ್ರಿಯಂತೆ ಕುಮಾರಸ್ವಾಮಿ ವರ್ತಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಮ. ನಾಗರಾಜ ಲೇವಡಿ ಮಾಡಿದರು.

ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಸೋಮವಾರ ನಡೆಸಿದ ಮೂರನೇ ದಿನದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಬಹುಮತ ಇಲ್ಲದಿದ್ದರೂ ಕಾಂಗ್ರೆಸ್– ಜೆಡಿಎಸ್ ಅಪವಿತ್ರ ಮೈತ್ರಿ ಮಾಡಿಕೊಂಡು ಅಧಿಕಾರ ನಡೆಸುತ್ತಿವೆ. ಹಳೆಯ ಮೈಸೂರು ಭಾಗದ ಜಿಲ್ಲೆಗಳನ್ನು ಹೊರತುಪಡಿಸಿ ಬೇರೆ ಯಾವುದೇ ಜಿಲ್ಲೆಗಳ ಅಭಿವೃದ್ಧಿಗೆ ಅನುದಾನ ಸಿಗುತ್ತಿಲ್ಲ. ಹುಬ್ಬಳ್ಳಿ– ಧಾರವಾಡದ ರಸ್ತೆಗಳು ಹದಗೆಟ್ಟಿದ್ದರೆ, ಅವುಗಳ ದುರಸ್ತಿ ಸಾಧ್ಯವಾಗದಿದ್ದರೆ ಅದಕ್ಕೆ ಕಾರಣ ಪಾಲಿಕೆಯಲ್ಲಿ ಅಧಿಕಾರ ಹಿಡಿದಿರುವ ಬಿಜೆಪಿಯಲ್ಲ, ಅನುದಾನ ನೀಡದ ರಾಜ್ಯ ಸರ್ಕಾರ’ ಎಂದರು.

ಪಾಲಿಕೆಯ ನಿವೃತ್ತ ನೌಕರರ ಪಿಂಚಣಿ ಮೊತ್ತವನ್ನು ಬಿಡುಗಡೆ ಮಾಡಿಲ್ಲ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಹುಬ್ಬಳ್ಳಿಗೆ ಬಂದಿದ್ದರು, ‘ಬಾಕಿ ಹಣವನ್ನು ಬಿಸಾಕುತ್ತೇನೆ’ ಎಂದು ಹೇಳಿಕೆ ನೀಡಿದ್ದರು. ಹಣ ಮಾತ್ರ ಬರಲಿಲ್ಲ. ಈಗಲೂ ಅದೇ ಪರಿಸ್ಥಿತಿ ಮುಂದುವರೆದಿದೆ ಎಂದು ಅವರು ಹೇಳಿದರು.

ನೂರು ದಿನ ಆಡಳಿತ ನಡೆಸಿರುವ ಕುಮಾರಸ್ವಾಮಿ 50 ದೇವಸ್ಥಾನಗಳಿಗೆ ಭೇಟಿ ನೀಡಿದ್ದಾರೆ. ಆ ಎಲ್ಲ ದೇವಸ್ಥಾನಗಳೂ ದಕ್ಷಿಣ ಕರ್ನಾಟಕದಲ್ಲೇ ಇವೆ. ಈ ವಿಷಯದಲ್ಲಿಯೂ ಅವರು ತಾರತಮ್ಯ ಮಾಡುತ್ತಿದ್ದಾರೆ. ಹುಬ್ಬಳ್ಳಿಯ ಮೂರು ಸಾವಿರ ಮಠ, ಸಿದ್ಧಾರೂಢ ಮಠಕ್ಕೂ ಭೇಟಿ ನೀಡಲಿ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ನಾಗೇಶ್ ಕಲಬುರ್ಗಿ, ಕಾರ್ಯದರ್ಶಿ ವಸಂತ ನಾಡಜೋಶಿ, ಮುಖಂಡರಾದ ಮಕೃಷ್ಣಾ ಗಂಡಗಾಳೆಕರ್, ರಾಜು ಕಾಳೆ, ವಿನೋದ ರೇವಣಕರ, ಸಿದ್ದು ಮುಗುಳಿಶೆಟ್ಟರ, ಪ್ರಶಾಂತ ಆವಣಗಿ ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !