ಪಕ್ಷೇತರರಾಗಿ ನೆಹರು ಆಪ್ತನನ್ನೇ ಸೋಲಿಸಿದ್ದ ಸುಗಂಧಿ!

ಶನಿವಾರ, ಏಪ್ರಿಲ್ 20, 2019
28 °C
ಕೃಷ್ಣಾ ಮೇಲ್ದಂಡೆ ಯೋಜನೆಗಾಗಿ 1964ರಲ್ಲೇ 22 ದಿನ ಸತ್ಯಾಗ್ರಹ ನಡೆಸಿದ್ದ ನೇತಾರ

ಪಕ್ಷೇತರರಾಗಿ ನೆಹರು ಆಪ್ತನನ್ನೇ ಸೋಲಿಸಿದ್ದ ಸುಗಂಧಿ!

Published:
Updated:
Prajavani

ವಿಜಯಪುರ: ಅದು ಕಾಂಗ್ರೆಸ್‌ ಹಾಗೂ ಆಗಿನ ಪ್ರಧಾನಿ ಜವಾಹರಲಾಲ್‌ ನೆಹರು ಪ್ರಭಾವದ ಉತ್ತುಂಗದ ಕಾಲ. ವಿಜಯಪುರ ಉತ್ತರ ಕ್ಷೇತ್ರದಲ್ಲಿ ನೆಹರು ಆಪ್ತ ರಾಜಾರಾಮ ದುಬೆ ಸಂಸದರಾಗಿದ್ದರು. ಆದರೆ, ಅಂಥವರ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದ ಶ್ರೇಯ ಸುಗಂಧಿ ಮುರಗೆಪ್ಪ ಅವರದು.

ಸ್ವಾತಂತ್ರ್ಯ ಪೂರ್ವದಲ್ಲಿ, ಎರಡು ಬಾರಿ ಬಾಂಬೆ ಅಸೆಂಬ್ಲಿಗೆ ಪ್ರಚಂಡ ಬಹುಮತದಿಂದ ಶಾಸಕರಾಗಿ ಆಯ್ಕೆಯಾಗಿದ್ದ ಮುರಗೆಪ್ಪ, ಸ್ವಾತಂತ್ರ್ಯಾನಂತರ ಕಾಂಗ್ರೆಸ್‌ನಲ್ಲಿನ ಗುಂಪುಗಾರಿಕೆ, ಸ್ವಜನ ಪಕ್ಷಪಾತದಿಂದ ಬೇಸತ್ತು ಅಲ್ಲಿಂದ ಹೊರಬಂದರು.

ಸರ್ದಾರ್‌ ವಲ್ಲಭಭಾಯಿ ಪಟೇಲ್, ಮೊರಾರ್ಜಿ ದೇಸಾಯಿ ಸೇರಿದಂತೆ ಇನ್ನಿತರ ಪ್ರಮುಖರು ಸುಗಂಧಿಯವರನ್ನು ಕಾಂಗ್ರೆಸ್‌ನಲ್ಲೇ ಉಳಿಸಿಕೊಳ್ಳಲು ಯತ್ನಿಸಿದರೂ ಫಲ ಸಿಗಲಿಲ್ಲ.

1952ರಲ್ಲಿ ನಡೆದ ಮೊದಲ ಲೋಕಸಭಾ ಚುನಾವಣೆಯಲ್ಲಿ ನೆಹರು ಆಪ್ತ ರಾಜಾರಾಮ ದುಬೆ ವಿರುದ್ಧ ಪ್ರಜಾಸೋಷಿಯಲಿಸ್ಟ್‌ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಸೋತರು. ಆಗ ಕ್ಷೇತ್ರದ ಜನರು ‘ಸೋತವರು ನೀವಲ್ಲ; ನಾವು’ ಎಂದು ಬಿಕ್ಕಳಿಸಿದ್ದರು ಎಂಬುದನ್ನು, ಸಾಹಿತಿ ಈಶ್ವರಚಂದ್ರ ಚಿಂತಾಮಣಿ ತಾವು ಬರೆದಿರುವ ‘ಸುಗಂಧಿ ಮುರಗೆಪ್ಪಣ್ಣನವರ’ ಎಂಬ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.

ಮುಂದಿನ ಚುನಾವಣೆ ಬಂದಾಗ (1957), ಮುರಗೆಪ್ಪ ಮತ್ತೆ ದುಬೆ ಅವರಿಗೆ ಮುಖಾಮುಖಿಯಾದರು. ಈ ಬಾರಿ ಪಕ್ಷೇತರರಾಗಿ ಅಖಾಡಕ್ಕಿಳಿದಿದ್ದ ಅವರಿಗೆ ಅ‍ಪಾರ ಜನಬೆಂಬಲ ವ್ಯಕ್ತವಾಗಿತ್ತು. ವಿಜಯಪುರದ ಅಡತಿ, ಕಿರಾಣಾ, ಬಟ್ಟೆ ಬಜಾರಿನ ವ್ಯಾಪಾರಿಗಳು ತಮ್ಮ ಅಂಗಡಿಗಳಿಗೆ ಕೀಲಿ ಹಾಕಿ, ಸುಗಂಧಿ ಪರ ಕ್ಷೇತ್ರದಾದ್ಯಂತ ಪ್ರಚಾರ ನಡೆಸಿದ್ದರು. ಹಳ್ಳಿ, ಹಳ್ಳಿಯಲ್ಲೂ ಜನ ಸ್ವಯಂಪ್ರೇರಿತರಾಗಿ ಚುನಾವಣೆ ಪ್ರಚಾರ ಮಾಡಿದ್ದರು. ಇದೆಲ್ಲದರ ಫಲವಾಗಿ, ಈ ಚುನಾವಣೆಯಲ್ಲಿ ಗೆಲುವು ಸುಗಂಧಿ ಅವರದ್ದಾಗಿತ್ತು.

ವಿಜಯಪುರ ಲೋಕಸಭಾ ಕ್ಷೇತ್ರದ ಇತಿಹಾಸದಲ್ಲಿ ಇದುವರೆಗೆ ಪಕ್ಷೇತರರಾಗಿ ಗೆಲುವು ಸಾಧಿಸಿರುವುದು ಇವರೊಬ್ಬರೇ. 1962ರ ಚುನಾವಣೆಯಲ್ಲಿ ಮತ್ತೆ ಸ್ವತಂತ್ರ ಪಾರ್ಟಿಯಿಂದ ಸ್ಪರ್ಧಿಸಿ, ದುಬೆ ವಿರುದ್ಧ ಸೋತರು.

ನೀರಾವರಿಯ ಕನಸುಗಾರ; ಸಾಕಾರಕ್ಕಾಗಿ ಹೋರಾಟ

ಹೈದರಾಬಾದ್‌ ನಿಜಾಮರು ಹಾಗೂ ಬ್ರಿಟಿಷರ ಕಾಲದಲ್ಲಿ ರೂಪುಗೊಂಡಿದ್ದ ಕೃಷ್ಣಾ ಮೇಲ್ದಂಡೆ ಯೋಜನೆಯ ಸಾಕಾರಕ್ಕಾಗಿ ತಮ್ಮ ಜೀವನವನ್ನೇ ಮುಡುಪಿಟ್ಟು,ಹಲ ಹೋರಾಟ ನಡೆಸಿದವರು ಸುಗಂಧಿ ಮುರಗೆಪ್ಪ.

1952–53ರಲ್ಲಿ ಕೊಯ್ನಾ, ನಾಗಾರ್ಜುನ ಸಾಗರ ಹಾಗೂ ಶ್ರೀಶೈಲ ನೀರಾವರಿ ಯೋಜನೆಗಳ ಆರಂಭಕ್ಕೆ ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶದಿಂದ ಒತ್ತಡ ಶುರುವಾಗಿತ್ತು. ಈ ಸಂದರ್ಭದಲ್ಲಿಯೇ ಉತ್ತರ ಕರ್ನಾಟಕಕ್ಕೆ ಕೃಷ್ಣಾ ನದಿಯ ಮಹತ್ವ, ಎರಡೂ ರಾಜ್ಯಗಳಿಂದ ಈ ಭಾಗಕ್ಕಾಗುವ ಶಾಶ್ವತ ಪೆಟ್ಟಿನ ಬಗ್ಗೆ ಮನವರಿಕೆ ಮಾಡಿಕೊಟ್ಟವರು ಸುಗಂಧಿ.

ಆಲಮಟ್ಟಿಯಲ್ಲಿ ಕೃಷ್ಣೆಗೆ ಅಡ್ಡಲಾಗಿ ಅಣೆಕಟ್ಟು ಕಟ್ಟಿ ನೀರು ಸಂಗ್ರಹಿಸಿದರೆ ನೀರಾವರಿ, ವಿದ್ಯುತ್ ಉತ್ಪಾದನೆ, ಕೃಷಿ, ಕೃಷಿ ಅವಲಂಬಿತ ಕೈಗಾರಿಕೆಗಳು ಬೆಳೆಯಲು ವಿಪುಲ ಅವಕಾಶಗಳಿವೆ ಎಂಬುದನ್ನು ಸಂಸತ್ತಿನಲ್ಲೂ ಪ್ರಸ್ತಾಪಿಸಿದ್ದರು. ಬ್ರಿಟಿಷ್‌ ಸರ್ಕಾರಕ್ಕೆ ಹಾಗೂ ನಂತರದಲ್ಲಿ ಕೇಂದ್ರ–ರಾಜ್ಯ ಸರ್ಕಾರಕ್ಕೂ ಹಲವು ಬಾರಿ ಮನವರಿಕೆ ಮಾಡಿಕೊಟ್ಟಿದ್ದರು.

‘ಅವಿಭಜಿತ ವಿಜಯಪುರ ಜಿಲ್ಲೆಯ ಸಮಗ್ರ ಹಿತದೃಷ್ಟಿಯಿಂದ ಯೋಜನಾಬದ್ಧವಾಗಿ ವಿಚಾರ ಮಾಡುತ್ತಿದ್ದ ಏಕವೇಮ ಮುತ್ಸದ್ದಿ. ಸಾರವಾಡ, ಕಾಖಂಡಕಿ, ಬಬಲೇಶ್ವರ ಭಾಗಕ್ಕೆ ನೀರಾವರಿ, ವಿಜಾಪುರಕ್ಕೆ ಶಾಶ್ವತ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಬೇಕು ಎಂದು ಕನಸು ಕಂಡು ‘ಬಿದರಿ’ ಯೋಜನೆ ರೂಪಿಸಿದ್ದ ಕನಸುಗಾರ’ ಎಂದು ಅವರ ನಿಕಟವರ್ತಿ, ರಾಜಕಾರಣಿ ಎನ್‌.ಕೆ.ಉಪಾಧ್ಯಾಯ ಉಲ್ಲೇಖಿಸಿದ್ದಾರೆ.

ಯೋಜನೆ ಅನುಷ್ಠಾನಕ್ಕಾಗಿ ಸತ್ಯಾಗ್ರಹ

ಜಲಾಶಯ ನಿರ್ಮಾಣಕ್ಕಾಗಿ ಆಲಮಟ್ಟಿಯಲ್ಲಿ 1964ರ ಮೇ 22ರಂದು ಲಾಲ್‌ಬಹದ್ದೂರ್‌ ಶಾಸ್ತ್ರಿ ಅವರು ಶಿಲಾನ್ಯಾಸ ನೆರವೇರಿಸಿದ್ದರು. ಆದರೆ, ಕೆಲ ದಿನಗಳಲ್ಲೇ ಬಾಗಲಕೋಟೆ ಭಾಗದಿಂದ ಇದಕ್ಕೆ ಆಕ್ಷೇಪ ವ್ಯಕ್ತವಾಯಿತು. ತಮ್ಮ ಕನಸಿನ ಯೋಜನೆಗೆ ವಿರೋಧ ವ್ಯಕ್ತವಾಗಿದ್ದನ್ನು ಕಂಡು ಸುಗಂಧಿ ಆಕ್ರೋಶಗೊಳ್ಳುತ್ತಾರೆ.

ಒತ್ತಡಕ್ಕೆ ಮಣಿಯಬಾರದು ಎಂದು ಆಗ್ರಹಿಸಿ ವಿಜಾಪುರದಲ್ಲಿ ಸತ್ಯಾಗ್ರಹಕ್ಕೆ ಕೂರುತ್ತಾರೆ. ಎಲ್ಲೆಡೆ ಬೆಂಬಲ ವ್ಯಕ್ತವಾಗುತ್ತದೆ. 22 ದಿನ ನಡೆದ ಸತ್ಯಾಗ್ರಹ ಕೊನೆಗಾಣಿಸಲಿಕ್ಕಾಗಿ, ಆಗಿನ ಕೇಂದ್ರ ನೀರಾವರಿ ಸಚಿವ ಕೆ.ಎಲ್‌.ರಾವ್ ವಿಜಾಪುರಕ್ಕೆ ದೌಡಾಯಿಸುತ್ತಾರೆ. ಸತ್ಯಾಗ್ರಹಿಗಳ ಆಗ್ರಹದಂತೆ ಸ್ವತಃ ಆಲಮಟ್ಟಿಗೆ ಭೇಟಿ ಕೊಟ್ಟು, ಯೋಜನೆ ಚಾಲನೆಯ ಭರವಸೆ ನೀಡಿದ್ದಾಗಿ ಆಲಮಟ್ಟಿಯ ವಿರೂಪಾಕ್ಷಪ್ಪ ರೇಷ್ಮಿ, ಬಸಪ್ಪ ರೇಷ್ಮಿ ಆಗಿನ ಹೋರಾಟದ ಬಗ್ಗೆ ಹೇಳುತ್ತಿದ್ದರು ಎಂಬುದನ್ನು ಎಂದು ರೈತ ಮುಖಂಡ ಬಸವರಾಜ ಕುಂಬಾರ, ಜಿ.ಸಿ.ಮುತ್ತಲದಿನ್ನಿ ‘ಪ್ರಜಾವಾಣಿ’ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !