ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಗನ ಕೊಂದು, ಪತ್ನಿಯ ಆತ್ಮಹತ್ಯೆಗೂ ಪ್ರಚೋದನೆ!

ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹಗಳು ಪತ್ತೆ
Last Updated 2 ಜೂನ್ 2019, 19:45 IST
ಅಕ್ಷರ ಗಾತ್ರ

ಬೆಂಗಳೂರು: ತನ್ನ ಹನ್ನೆರಡು ವರ್ಷದ ಮಗನನ್ನು ನೇಣು ಹಾಕಿ ಕೊಂದಿರುವ ಸುರೇಶ್ ಬಾಬು ಎಂಬಾತ, ಪತ್ನಿ ಗೀತಾಬಾಯಿ (34) ಎಂಬುವರ ಆತ್ಮಹತ್ಯೆಗೂ ಕಾರಣನಾಗಿದ್ದಾನೆ.

ಎಚ್‌ಎಎಲ್‌ ಬಳಿಯ ವಿಭೂತಿಪುರದ ಮನೆಯೊಂದರಲ್ಲಿ ಗೀತಾಬಾಯಿ ಹಾಗೂ ಅವರ ಮಗನ ಮೃತದೇಹಗಳು ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿವೆ. ಕೊಲೆ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ಆರೋಪದಡಿ ಗೀತಾಬಾಯಿ ಅವರ ಪತಿ ಸುರೇಶ್‌ ಬಾಬುನನ್ನು ಎಚ್‌ಎಎಲ್‌ ಪೊಲೀಸರು ಬಂಧಿಸಿದ್ದಾರೆ.

ಸಾಮೂಹಿಕ ಆತ್ಮಹತ್ಯೆಗೆ ನಿರ್ಧರಿಸಿದ್ದ ಕುಟುಂಬ: ‘ಸ್ಥಳೀಯ ನಿವಾಸಿಯಾದ ಸುರೇಶ್ ಬಾಬು ಹಾಗೂ ಗೀತಾಬಾಯಿ, ಹಲವು ವರ್ಷಗಳ ಹಿಂದೆ ಮದುವೆ ಆಗಿದ್ದರು. ದಂಪತಿಗೆ ಮಗ ಹಾಗೂ ಮಗಳು ಇದ್ದರು’ ಎಂದು ಪೊಲೀಸರು ಹೇಳಿದರು.

‘ದಂಪತಿ ಚೀಟಿ ವ್ಯವಹಾರ ಮಾಡುತ್ತಿದ್ದರು. ಅದರಲ್ಲಿ ನಷ್ಟವಾಗಿದ್ದರಿಂದ ಗ್ರಾಹಕರಿಗೆ ಹಣ ವಾಪಸ್ ಕೊಟ್ಟಿರಲಿಲ್ಲ. ಶನಿವಾರ ಸಂಜೆ ಮನೆ ಬಳಿ ಬಂದಿದ್ದ ಕೂಲಿ ಕಾರ್ಮಿಕರಾದ ಸುಧಾ, ತಾವು ಕಟ್ಟಿರುವ ₹ 40 ಸಾವಿರ ಹಣವನ್ನು ವಾಪಸ್ ಕೊಡುವಂತೆ ಕೇಳಿದ್ದರು. ಆಗ ಮಾತಿಗೆ ಮಾತು ಬೆಳೆದು ಗಲಾಟೆ ನಡೆದಿತ್ತು.’

‘ಸ್ಥಳೀಯರೇ ಜಗಳ ಬಿಡಿಸಿದ್ದರು. ಮರ್ಯಾದೆ ಹೋಯಿತು ಎಂದು ನೊಂದ ದಂಪತಿ, ತಮ್ಮಿಬ್ಬರು ಮಕ್ಕಳ ಜೊತೆ ಆತ್ಮಹತ್ಯೆ ಮಾಡಿಕೊಳ್ಳಲು ತೀರ್ಮಾನಿಸಿದ್ದರು. ಈ ಬಗ್ಗೆ ಆರೋಪಿಯೇ ಹೇಳಿಕೆ ನೀಡಿದ್ದಾನೆ’ ಎಂದು ಪೊಲೀಸರು ಹೇಳಿದರು.

‘ಶನಿವಾರ ತಡರಾತ್ರಿ ಮಗನನ್ನು ಫ್ಯಾನ್‌ಗೆ ನೇಣು ಹಾಕಿ ಕೊಂದಿದ್ದ ಸುರೇಶ್‌, ಪತ್ನಿಗೂ ಆತ್ಮಹತ್ಯೆ ಮಾಡಿಕೊಳ್ಳುವಂತೆ ಹೇಳಿದ್ದ. ಅದರಂತೆ ಗೀತಾಬಾಯಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಳು. ಅವರಿಬ್ಬರ ಸಾವು ಕಂಡು ಗಾಬರಿಗೊಂಡ ಮಗಳು, ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲವೆಂದು ಕೂಗಾಡಿದ್ದಳು. ಆಗ ಸುರೇಶ್‌, ಆತ್ಮಹತ್ಯೆ ಮಾಡಿಕೊಳ್ಳದೆ ಮಗಳನ್ನು ಕರೆದುಕೊಂಡು ಹೊರಗೆ ಬಂದು ಕೊಠಡಿಗೆ ಬಾಗಿಲು ಹಾಕಿದ್ದರು ಎಂಬ ಸಂಗತಿ ತನಿಖೆಯಿಂದ ಗೊತ್ತಾಗಿದೆ’ ಎಂದು ಪೊಲೀಸರು ಹೇಳಿದರು.

ಮೀಟರ್‌ ಬಡ್ಡಿ ಕಥೆ ಕಟ್ಟಿದ: ‘ಭಾನುವಾರ ನಸುಕಿನಲ್ಲಿ ಮನೆ ಎದುರು ಚೀರಾಡಿದ್ದ ಸುರೇಶ್, ಪತ್ನಿ ಹಾಗೂ ಮಗ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಸ್ಥಳೀಯರಿಗೆ ಹೇಳಿದ್ದ’ ಎಂದು ಪೊಲೀಸರು ಹೇಳಿದರು.

‘ಹೊಯ್ಸಳ ಗಸ್ತು ವಾಹನದ ಸಿಬ್ಬಂದಿ ಮನೆಗೆ ಹೋದಾಗ,‘ಸಾಲ ನೀಡಿದ್ದ ಕೆಲವರು ಮನೆಗೆ ಬಂದು ಮೀಟರ್ ಬಡ್ಡಿ ನೀಡುವಂತೆ ಪೀಡಿಸುತ್ತಿದ್ದರು. ಅದರಿಂದ ನೊಂದು ಪತ್ನಿ–ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂಬುದಾಗಿ ತಿಳಿಸಿದ್ದ. ಅದೇ ರೀತಿಯಲ್ಲೇ ದೂರು ಸಹ ಕೊಟ್ಟಿದ್ದ’ ಎಂದರು.

ಕೃತ್ಯವನ್ನು ಮೊಬೈಲ್‌ನಲ್ಲಿ ಸೆರೆಹಿಡಿದ ಮಗಳು

‘ಆರೋಪಿ ಸುರೇಶ್‌ ಮಗನನ್ನು ನೇಣಿಗೆ ಹಾಕಿ ಕೊಂದ ದೃಶ್ಯವನ್ನು ಮಗಳೇ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾಳೆ. ಅದೇ ದೃಶ್ಯ ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಆತ್ಮಹತ್ಯೆಯನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಲು ತೀರ್ಮಾನಿಸಿದ್ದ ಸುರೇಶ್, ಮಗಳ ಕೈಗೆ ಮೊಬೈಲ್‌ ಕೊಟ್ಟಿದ್ದ. ಆ ಬಗ್ಗೆ ಮಗಳಿಂದಲೂ ಹೇಳಿಕೆ ಪಡೆಯಲಾಗಿದೆ’ ಎಂದು ತಿಳಿಸಿದರು.

‘ಸುರೇಶ್‌ ಮನೆಯಲ್ಲಿದ್ದಾಗಲೇ ತಾಯಿ– ಮಗ ಮೃತಪಟ್ಟಿದ್ದರು. ಜೊತೆಗೆ ಆತ ನೀಡಿದ್ದ ದೂರಿನಲ್ಲಿ ಹಲವು ಅನುಮಾನಗಳಿದ್ದವು. ಅದೇ ಆಯಾಮದಲ್ಲಿ ತನಿಖೆ ನಡೆಸಲಾಗುತ್ತಿತ್ತು. ಮನೆಯಲ್ಲಿದ್ದ ಮೊಬೈಲ್‌ಗಳನ್ನೆಲ್ಲ ಜಪ್ತಿ ಮಾಡಿ ಪರಿಶೀಲನೆ ನಡೆಸಲಾಯಿತು. ಅವಾಗಲೇ ದೃಶ್ಯ ಕಂಡಿತ್ತು. ಆ ಬಗ್ಗೆ ವಿಚಾರಿಸಿದಾಗ ಮಗಳೇ ಎಲ್ಲ ವಿಷಯವನ್ನು ತಿಳಿಸಿದಳು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT