ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಧರ್ಮ ಒಡೆಯುವವರಿಗೆ, ಪಾಠ ಕಲಿಸಿದ್ದೀರಿ’

ಕೆಪಿಟಿಸಿಎಲ್ – ಹೆಸ್ಕಾಂ ವೀರಶೈವ ಲಿಂಗಾಯತ ವೇದಿಕೆ: ರಾಜ್ಯಮಟ್ಟದ ಸಮ್ಮೇಳನ
Last Updated 7 ಜುಲೈ 2019, 12:59 IST
ಅಕ್ಷರ ಗಾತ್ರ

ಕೂಡಲಸಂಗಮ : ‘ಕೆಲವರು ತಮ್ಮ ಸ್ವಾರ್ಥಕ್ಕಾಗಿ ವೀರಶೈವ ಲಿಂಗಾಯತ ಧರ್ಮ ಒಡೆಯುವ ಕಾರ್ಯಮಾಡಿದರು. ಅದು ಫಲಿಸಲಿಲ್ಲ, ನೀವು ಪ್ರಜ್ಞಾವಂತ ತೀರ್ಮಾನ ಕೈಗೊಂಡು ಒಡೆಯಲು, ಮುರಿಯಲು ಬಂದವರಿಗೆ ಸೂಕ್ತ ಪಾಠ ಕಲಿಸಿದ್ದೀರಿ’ ಎಂದು ಶ್ರೀಶೈಲ ಪೀಠದ ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಕೂಡಲಸಂಗಮ ಸಭಾಭವನದಲ್ಲಿ ಭಾನುವಾರ ಕೆಪಿಟಿಸಿಎಲ್ ಮತ್ತು ಹೆಸ್ಕಾಂಗಳ ವೀರಶೈವ ಲಿಂಗಾಯತ ವೇದಿಕೆಯಿಂದ ಹಮ್ಮಿಕೊಂಡದ್ದ ರಾಜ್ಯ ಮಟ್ಟದ ಎರಡನೇ ಸಮ್ಮೇಳನದ ಸಾನ್ನಿಧ್ಯ ವಹಿಸಿ ಮಾತನಾಡಿ, ‘ಪ್ರಾಮಾಣಿಕತೆ ಹಾಗೂ ನಿಷ್ಠೆಯಿಂದ ಕೆಲಸಮಾಡಬೇಕು, ಮಾಡುವ ಕಾಯಕ ದೇವರ ಪೂಜೆಯಂತಿರಬೇಕು. ವೀರಶೈವ ಲಿಂಗಾಯತ ವೇದಿಕೆ ಭವಿಷ್ಯದಲ್ಲಿ ಎಲ್ಲ ಸರ್ಕಾರಿ ನೌಕರ ಇಲಾಖೆಗಳನ್ನು ಒಗ್ಗೂಡಿಸಿ ಸಂಘಟಿತ ಸಮಾವೇಶ ನಡೆಸಬೇಕು. ನಮ್ಮ ಪೀಠವೂ ಸೂರ್ಯನ ಹೆಸರಿನ ಪೀಠವಾಗಿದ್ದು ಆಧ್ಯಾತ್ಮಿಕ ಬೆಳಕು ಕೊಡುವ ಕಾರ್ಯಮಾಡುತ್ತಿದೆ’ ಎಂದರು.

‘ಹಣ ಸಂಪಾದನೆಯೇ ಬದುಕಿನ ಗುರಿಯಾಗಬಾರದು. ಶಾಂತಿ, ನೆಮ್ಮದಿ, ಆದರ್ಶ, ಮೌಲ್ಯಗಳಿಲ್ಲದೇ ಇರುವ ಹಣದಿಂದ ಯಾವುದೇ ಪ್ರಯೋಜನವಾಗದು. ಟೇಬಲ್ ಕೆಳಗೆ ಕೈ ಚಾಚುವ ವ್ಯಕ್ತಿಯು ಸಮಾಜದಲ್ಲಿ ಎಂದು ತಲೆ ಎತ್ತಿ ಸ್ವಾಭಿಮಾನದಿಂದ ಬದುಕಲು ಸಾಧ್ಯವಾಗದು’ ಎಂದರು.

‘ಕೆಪಿಟಿಸಿಎಲ್ ಮತ್ತು ಹೆಸ್ಕಾಂನಲ್ಲಿ ಕೆಲಸ ಮಾಡುವವರು ಜಗತ್ತಿಗೆ ಶಕ್ತಿ ಮತ್ತು ಬೆಳಕನ್ನು ನೀಡುವ ಇಲಾಖೆಗೆ ಸಂಬಂಧಿಸಿದವರು. ಇಲ್ಲಿ ಕೆಲಸ ಮಾಡುವ ವೀರಶೈವ -ಲಿಂಗಾಯತರ ಸಂಘಟನೆ ಮಾಡಿರುವುದು ಶ್ಲಾಘನೀಯ. ಇದು ಇನ್ನಷ್ಟು ವಿಕಾಸಗೊಂಡು ಸರ್ಕಾರದ ಎಲ್ಲ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುವ ಎಲ್ಲ ವೀರಶೈವ -ಲಿಂಗಾಯತರ ಸಂಘಟನೆ ಮಾಡಲು ಪ್ರಯತ್ನಿಸಬೇಕು’ ಎಂದರು.

ಸರ್ಕಾರದ ಸೇವೆ ನಿಷ್ಠೆಯಿಂದ ಮಾಡುವ ಜೋತೆಗೆ ವೀರಶೈವ ಲಿಂಗಾಯತ ಧರ್ಮದ ಆಚಾರ ವಿಚಾರಗಳನ್ನು ಕೂಡಾ ಅಳವಡಿಸಿಕೊಳ್ಳಬೇಕು. ಧರ್ಮಾಚರಣೆಯು ನಮ್ಮ ಕಾಯಕಕ್ಕೆ ಶಕ್ತಿ ತುಂಬುವ ಜೊತೆಗೆ ಸಮಾಜದಲ್ಲಿ ನಮ್ಮ ಗೌರವ ಹೆಚ್ಚಿಸಲಿದೆ. 'ಸಾಂಘೇ ಶಕ್ತಿ ಕತಾ ಯುಗೇ' ಎಂಬ ಉಕ್ತಿಯಂತೆ ಈ ಕಲಿಯುಗದಲ್ಲಿ ಸಂಘಟನೆಗೊಳ್ಳುವುದರಿಂದಲೇ ಶಕ್ತಿವಂತರಾಗಲು ಸಾಧ್ಯ. ನಾವು ಶಕ್ತಿಹೀನರಾದರೆ ನಮ್ಮನ್ನು ಎಲ್ಲರೂ ತುಳಿಯುತ್ತಾರೆ. ಶಕ್ತಿವಂತರಾಗಲು ಸಂಘಟನೆ ಅಗತ್ಯ. ಶಕ್ತಿವಂತರಾಗುವುದು ಆತ್ಮರಕ್ಷಣೆಗೆ ಹೊರತು ಇನ್ನೊಬ್ಬರ ಮೇಲೆ ದೌರ್ಜನ್ಯ ಮಾಡಲಿಕ್ಕಾಗಿ ಅಲ್ಲ ಎಂಬುದನ್ನು ಸರ್ವರೂ ಅರ್ಥೈಸಿಕೊಳ್ಳಬೇಕು ಎಂದು ಶ್ರೀಗಳು ಹೇಳಿದರು.

ಸಮ್ಮೇಳನ ಉದ್ಘಾಟಿಸಿದ ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಶಂಕರ ಬಿದರಿ ಮಾತನಾಡಿ, ‘ಶತಮಾನಗಳ ಇತಿಹಾಸ ಇರುವ ವೀರಶೈವ-ಲಿಂಗಾಯತ ಧರ್ಮ ಒಡೆಯಲು ಯಾರಿಂದಲೂ ಸಾಧ್ಯವಿಲ್ಲ. ತುಮಕೂರ ಸಿದ್ಧಗಂಗಾ ಮಠದ ಲಿಂಗೈಕ್ಯ ಶಿವಕುಮಾರ ಸ್ವಾಮೀಜಿ ಅವರಿಗಿಂತ ದೊಡ್ಡವರು ಯಾರೂ ಇಲ್ಲ ಅಂತಹವರೇ ವೀರಶೈವ- ಲಿಂಗಾಯತ ಎರಡೂ ಒಂದೇ ಎಂದು ಹೇಳಿದ್ದರು. ಗ್ರಾಮೀಣ ಪ್ರದೇಶದಲ್ಲಿರವವರು ಲಿಂಗಾಯತರು ಎಂದು ಕರೆದುಕೊಂಡರೆ, ನಗರ ಪ್ರದೇಶದಲ್ಲಿ ವಾಸಿಸುವರು ವೀರಶೈವರು ಎಂದು ಕರೆದುಕೊಂಡರು. ಆದರೆ ಇತ್ತೀಚೆಗೆ ಕೆಲವರು ವಿನಾಕಾರಣ ಧರ್ಮ ಒಡೆಯುವ ಕಾರ್ಯದಲ್ಲಿ ತೊಡಗಿದ್ದಾರೆ. ಇದರ ಫಲವಾಗಿ ಹಿಮಾಯಲಯದ ಎತ್ತರಕ್ಕಿದ್ದ ಸಮಾಜ ಸದ್ಯ ಪಾತಾಳಕ್ಕೆ ಕುಸಿದಿದೆ’ ಎಂದು ವಿಷಾದ ವ್ಯಕ್ತಪಡಿಸಿದರು.

‘ವೀರಶೈವ -ಲಿಂಗಾಯತ ಬೇದ ಮಾಡಿ ಕಿತ್ತಾಡಿದರೆ ಸಮಾಜದ ನಾವುಗಳೇ ಹಾಳಾಗಿ, ಇದು ಬೆರೆಯವರಿಗೆ ಲಾಭವಾಗುತ್ತದೆ. ಅನೇಕ ಒಳಪಂಗಡಗಳಿಂದ ವಿಸ್ತಾರವಾದ ಈ ಸಮಾಜ ಹಾಳಾಗುತ್ತದೆ. ಕಾರಣ ಧರ್ಮ ಒಡೆಯುವ ಕಾರ್ಯವನ್ನು ಕೈ ಬಿಟ್ಟು ಎಲ್ಲರೂ ಒಂದಾದರೆ ಸಮಾಜಕ್ಕೆ ಹಿಂದಿನ ಗತ ವೈಭವ ಮರುಕಳಿಸುತ್ತದೆ’ ಎಂದರು.

ಕೊಣ್ಣೂರಿನ ಡಾ. ಪ್ರಭುದೇವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕೆಪಿಟಿಸಿಎಲ್ ನಿರ್ದೇಶಕ ಕೆ.ವಿ. ಶಿವಕುಮಾರ ಅಧ್ಯಕ್ಷತೆ ವಹಿಸಿದ್ದರು. ಟಿ.ಎಂ. ಶಿವಪ್ರಕಾಶ, ಎಲ್. ಮಹಾದೇವಯ್ಯ, ಎಂ. ರೇಣುಕಾಪ್ರಸಾದ, ಮನೋಹರ ಬೇವಿನಮರದ, ಕೊಟ್ರೇಶ ತಳಸ್ತ, ಬಿ.ಎಸ್. ಹೆಬ್ಬಾಳ, ಶ್ರೀಕಾಂತ ಸಸಾಲಟ್ಟಿ, ಎಂ.ಬಿ. ಪಾಟೀಲ, ಬಸವರಾಜ ಭೀಮಾರೆಡ್ಡಿ, ಡಿ. ನಟರಾಜ, ಎಸ್.ಎಸ್. ಮಿಠಾರೆ, ನಾಗಭೂಷಣ, ಎಂ.ಟಿ. ಶರಣಪ್ಪ, ಭೀಮಪ್ಪ ಚಿಣಗಿ, ಪ್ರಕಾಶ ಪಾಟೀಲ, ನೀಲಪ್ಪ ಧೋತ್ರೆ, ಎಸ್. ಜಗದೀಶ, ರಾಜಕುಮಾರ ಬಿರಾದಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT