ಶಿವರಾಮೇಗೌಡ ವಿರುದ್ಧ ಕ್ರಮ: ವಿಶ್ವನಾಥ್

ಶುಕ್ರವಾರ, ಏಪ್ರಿಲ್ 19, 2019
22 °C

ಶಿವರಾಮೇಗೌಡ ವಿರುದ್ಧ ಕ್ರಮ: ವಿಶ್ವನಾಥ್

Published:
Updated:
Prajavani

ಬೆಂಗಳೂರು: ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಜಾತಿ ಪ್ರಸ್ತಾಪಿಸಿ ಟೀಕೆ ಮಾಡಿರುವ ಜೆಡಿಎಸ್ ಸಂಸದ ಎಲ್‌.ಆರ್.ಶಿವರಾಮೇಗೌಡ ವಿರುದ್ಧ ಶಿಸ್ತುಕ್ರಮ ಕೈಗಳ್ಳಲಾಗುವುದು ಎಂದು ಆ ಪಕ್ಷದ ರಾಜ್ಯ ಘಟಕದ‌ ಅಧ್ಯಕ್ಷ ಎಚ್. ವಿಶ್ವನಾಥ್ ಹೇಳಿದರು.

ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ನಡೆದ ಸಂವಾದದಲ್ಲಿ ಮಾತನಾಡಿದ ಅವರು, ‘ಮಂಡ್ಯದಲ್ಲಿ ಎಲ್ಲಾ ಸಮುದಾಯದವರು ಇದ್ದಾರೆ‌. ಶಿವರಾಮೇಗೌಡ ಸಂಸದರು, ಈ ರೀತಿ ಮಾತನಾಡಬಾರದಿತ್ತು. ಅವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಅವರ ವಿರುದ್ಧ ಶಿಸ್ತು ಕ್ರಮಕ್ಕೆ ಸಿದ್ದರಾಗಿದ್ದೇವೆ’ ಎಂದರು.

ಸುಮಲತಾ ಅವರು ಅಂಬರೀಷ್ ಅವರ ಧರ್ಮ ಪತ್ನಿ, ಮಂಡ್ಯದ ಸೊಸೆ. ಚುನಾವಣೆ ಕಾರಣಕ್ಕೆ ಟೀಕೆ ಮಾಡುವುದು  ಸರಿಯಲ್ಲ. ವೈಯಕ್ತಿಕ ಸಂಬಂಧಗಳು ಬಹಳ ಮುಖ್ಯ. ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಸೇರಿದಂತೆ ಯಾವ ಪಕ್ಷದವರೇ ಆಗಲಿ ವೈಯಕ್ತಿಕ ಟೀಕೆ ಮಾಡುವುದು, ಜಾತಿ ವಿಷಯ ಪ್ರಸ್ತಾಪಿಸುವುದು ಒಳ್ಳೆಯದಲ್ಲ. ಜನ ಇದನ್ನು ಕ್ಷಮಿಸುವುದಿಲ್ಲ ಎಂದು ಹೇಳಿದರು.

‘ಸಚಿವ ಎಚ್‌.ಡಿ.ರೇವಣ್ಣ ಹೇಳಿಕೆಗೆ ನಾನು ಕ್ಷಮೆ ಕೇಳಿದ್ದೇನೆ. ಈಶ್ವರಪ್ಪ ಕೂಡ ಸರ್ಕಾರ ನೆಗೆದು ಬಿದ್ದೋಗಿದೆ ಎಂದಿದ್ದಾರೆ. ಇಂತಹ ಹೇಳಿಕೆ ಸರಿಯಲ್ಲ’ ಎಂದರು.

‘ಸುಮಲತಾ ಈಗ ಪಕ್ಷೇತರ ಅಭ್ಯರ್ಥಿಯಲ್ಲ. ಬಿಜೆಪಿಯ ಬೆಂಬಲ ಅವರಿಗೆ ಇದೆ. ಈ ಚುನಾವಣೆಯಲ್ಲಿ ದೇವೇಗೌಡರ ಕುಟುಂಬದವರು ಸೋತರೆ ಸರ್ಕಾರ ಪತನವಾಗುತ್ತದೆ ಎಂಬ ವಾದದಲ್ಲಿ ಹುರುಳಿಲ್ಲ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತ ಸಿದ್ದರಾಮಯ್ಯ ಅವರನ್ನು ಗಡೀಪಾರು ಮಾಡಿದ್ದಾರಾ’ ಎಂದು ಪ್ರಶ್ನಿಸಿದರು.

ಇಡೀ ರಾಷ್ಟ್ರದಲ್ಲಿ ಚುನಾವಣೆ ನಡೆಯುತ್ತಿದೆ. ಮಂಡ್ಯಕ್ಕೆ ಸೀಮಿತ ಆಗಿರುವ ಮಾಧ್ಯಮಗಳ ಬಗ್ಗೆ ‌ಜನ ಬೇಸರವಾಗಿದ್ದಾರೆ. ಬೇರೆ ಕ್ಷೇತ್ರಗಳ ವಸ್ತುಸ್ಥಿತಿಯನ್ನೂ ಮಾಧ್ಯಮಗಳು ಪ್ರಸಾರ ಮಾಡಬೇಕು ಎಂದು ಹೇಳಿದರು.

‘ಜೆಡಿಎಸ್‌ ಅಧ್ಯಕ್ಷರಿದ್ದೀರಿ, ತಿಜೋರಿ ನಿಮ್ಮ ಕೈಯಲ್ಲೆ ಇದೆ’ ಎಂಬ ಪ್ರಶ್ನೆಗೆ ‘ಶಿವನೇ ಶಿವನೇ, ತಿಜೋರಿ ನನ್ನ ಹತ್ರನೂ ಇಲ್ಲ, ದಿನೇಶ್‌ ಗುಂಡೂರಾವ್ ಹತ್ರನೂ ಇಲ್ಲ’ ಎಂದು ಹಾಸ್ಯ ಚಟಾಕಿ ಹಾರಿಸಿದರು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !