ಸಮ್ಮಿಶ್ರ ಸರ್ಕಾರ ಬೇಕೇ, ಮೋದಿ ಬೇಕೇ

ಸೋಮವಾರ, ಮೇ 27, 2019
24 °C
ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಜಗದೀಶ ಶೆಟ್ಟರ್‌ ಪ್ರಶ್ನೆ

ಸಮ್ಮಿಶ್ರ ಸರ್ಕಾರ ಬೇಕೇ, ಮೋದಿ ಬೇಕೇ

Published:
Updated:
Prajavani

ಹೊಸಪೇಟೆ: ‘ಸಮ್ಮಿಶ್ರ ಸರ್ಕಾರದಿಂದ ಯಾವುದೇ ರೀತಿಯ ಅಭಿವೃದ್ಧಿ ಸಾಧ್ಯವಿಲ್ಲ ಎನ್ನುವುದಕ್ಕೆ ರಾಜ್ಯದ ಕಾಂಗ್ರೆಸ್‌–ಜೆ.ಡಿ.ಎಸ್‌. ಸರ್ಕಾರವೇ ನಿದರ್ಶನ. ಇಂತಹ ಸರ್ಕಾರ ಈ ದೇಶಕ್ಕೆ ಬೇಕೇ ಅಥವಾ ಐದು ವರ್ಷಗಳಿಂದ ಸ್ವಚ್ಛ ಆಡಳಿತ ಕೊಡುತ್ತಿರುವ ನರೇಂದ್ರ ಮೋದಿಯವರು ಬೇಕೇ ಎಂಬುದನ್ನು ಜನ ನಿರ್ಧರಿಸಬೇಕು’ ಎಂದು ಬಳ್ಳಾರಿ ಲೋಕಸಭೆ ಚುನಾವಣೆ ಉಸ್ತುವಾರಿ, ಶಾಸಕ ಜಗದೀಶ ಶೆಟ್ಟರ್‌ ಪ್ರಶ್ನಿಸಿದರು.

ಬುಧವಾರ ಇಲ್ಲಿ ನಡೆದ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಉದ್ಘಾಟಿಸಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಕಾಂಗ್ರೆಸ್‌–ಜೆ.ಡಿ.ಎಸ್‌. ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದು ಹಲವು ತಿಂಗಳಾಗಿವೆ. ಆದರೆ, ಎರಡೂ ಪಕ್ಷಗಳ ಮುಖಂಡರು ಪರಸ್ಪರ ಬೈದಾಡುವುದರಲ್ಲಿ ನಿರತರಾಗಿದ್ದಾರೆ. ಯಾವುದೇ ಅಭಿವೃದ್ಧಿ ಕೆಲಸಗಳಾಗಿಲ್ಲ’ ಎಂದು ಆರೋಪಿಸಿದರು.

‘ಲೋಕಸಭೆ ಚುನಾವಣೆಗೆ ಟಿಕೆಟ್‌ ಹಂಚಿಕೆಯಲ್ಲಿ ಎರಡೂ ಪಕ್ಷಗಳ ನಡುವೆ ಹಗ್ಗಜಗ್ಗಾಟ ನಡೆದಿದೆ. ’ನಾವು ಭಿಕ್ಷುಕರಲ್ಲ’ ಎಂದು ಕುಮಾರಸ್ವಾಮಿ ಹೇಳುತ್ತಾರೆ. ಅದಕ್ಕೆ ಪ್ರತಿಯಾಗಿ ಸಿದ್ದರಾಮಯ್ಯನವರು, ‘ಯಾರು ಭಿಕ್ಷುಕರಲ್ಲ’ ಎನ್ನುತ್ತಾರೆ. ‘ಅಧಿಕಾರಿಗಳು ನನ್ನ ಮಾತು ಕೇಳುತ್ತಿಲ್ಲ. ಆಡಳಿತ ನಡೆಸುವುದು ಗೊತ್ತಾಗುತ್ತಿಲ್ಲ’ ಎಂದು ಅಸಹಾಯತೆ ವ್ಯಕ್ತಪಡಿಸುವ ಕುಮಾರಸ್ವಾಮಿ ಆ ಸ್ಥಾನದಲ್ಲಿ ಮುಂದುವರಿಯುವುದು ಬೇಡ. ಸಿಕ್ಕ ಅಧಿಕಾರ ನಡೆಸಲಿಕ್ಕೆ ಆಗದವರು ಬಿಜೆಪಿ ಮೇಲೆ ‘ಆಪರೇಷನ್‌ ಕಮಲ’ದ ಆರೋಪ ಮಾಡುತ್ತಿದ್ದಾರೆ’ ಎಂದರು.

‘ಪ್ರಧಾನಿ ನರೇಂದ್ರ ಮೋದಿಯವರನ್ನು ಸೋಲಿಸಲು ದೇಶದಲ್ಲಿ ಮಹಾಘಟಬಂಧನ್‌ ರಚಿಸಲಾಗಿದೆ. ಆದರೆ, ಅವರಲ್ಲೇ ಹೊಂದಾಣಿಕೆ ಇಲ್ಲ. ಈಗಾಗಲೇ ಬಿಹಾರ, ತಮಿಳುನಾಡು, ಮಹಾರಾಷ್ಟ್ರದಲ್ಲಿ ಬಿಜೆಪಿ ಅಲ್ಲಿನ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು, ಯಶಸ್ವಿಯಾಗಿ ಸೀಟು ಹೊಂದಾಣಿಕೆ ಮಾಡಿಕೊಂಡಿದೆ. ಐದು ವರ್ಷಗಳಲ್ಲಿ ಒಂದೇ ಒಂದು ಹಗರಣವಿಲ್ಲದೆ ಸ್ವಚ್ಛ ಆಡಳಿತ ನೀಡಿರುವ ಮೋದಿಯವರು ಪುನಃ ದೇಶದ ಪ್ರಧಾನಿಯಾಗುವುದು ಖಚಿತ’ ಎಂದು ಭರವಸೆ ವ್ಯಕ್ತಪಡಿಸಿದರು.

‘ಜಮ್ಮು ಮತ್ತು ಕಾಶ್ಮೀರದ ವಿಚಾರದಲ್ಲಿ ಕಾಂಗ್ರೆಸ್‌ ಪಕ್ಷ ತನ್ನ ಅಧಿಕಾರದ ಅವಧಿಯಲ್ಲಿ ಕಠಿಣ ನಿಲುವು ತಾಳದ ಕಾರಣ ಅದು ಸಮಸ್ಯೆಯಾಗಿಯೇ ಉಳಿದಿದೆ. ಮೋದಿಯವರು ಅಧಿಕಾರಕ್ಕೆ ಬಂದ ನಂತರ ಹಂತ ಹಂತವಾಗಿ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಿದ್ದಾರೆ. ಪುಲ್ವಾಮ ಘಟನೆ ನಂತರ ಸೈನಿಕರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದಾರೆ. ಕೆಲ ದಿನಗಳಲ್ಲಿ ಅದರ ಪರಿಣಾಮ ನೋಡಬಹುದು. ಪಾಕಿಸ್ತಾನ ಸರ್ವನಾಶವಾಗುವುದು ಖಚಿತ’ ಎಂದರು.

ಶಾಸಕ ಬಿ. ಶ್ರೀರಾಮುಲು ಮಾತನಾಡಿ, ’ದೇಶದಲ್ಲಿ ಪೂರ್ಣ ಪ್ರಮಾಣದ ಬಹುಮತದ ಸರ್ಕಾರ ಬರಬೇಕು. ಅದಕ್ಕಾಗಿ ಮತ್ತೊಮ್ಮೆ ಮೋದಿ ಅವರನ್ನು ದೇಶದ ಪ್ರಧಾನಿ ಮಾಡಬೇಕು’ ಎಂದು ಮನವಿ ಮಾಡಿದರು.

‘ಬಳ್ಳಾರಿ ಲೋಕಸಭೆ ಉಪಚುನಾವಣೆಯ ಸೋಲಿನಿಂದ ಪಕ್ಷದ ಕಾರ್ಯಕರ್ತರು ಎದೆಗುಂದಬೇಕಿಲ್ಲ. ಈಗಿನಿಂದಲೇ ಹಗಲಿರುಳು ಶ್ರಮಿಸಿ ಸಾರ್ವತ್ರಿಕ ಚುನಾವಣೆಯಲ್ಲಿ ಮತ್ತೆ ಜಯಭೇರಿ ಬಾರಿಸೋಣ’ ಎಂದರು.

ಪಕ್ಷದ ಜಿಲ್ಲಾ ಅಧ್ಯಕ್ಷ ಚನ್ನಬಸವನಗೌಡ ಪಾಟೀಲ, ಮುಖಂಡರಾದ ಮೃತ್ಯುಂಜಯ ಜಿನಗಾ, ಚಂದ್ರ ನಾಯ್ಕ, ವಿರೂಪಾಕ್ಷ ಗೌಡ, ರಾಣಿ ಸಂಯುಕ್ತಾ, ಹನುಮಂತಪ್ಪ, ವೈ.ಯಮುನೇಶ್, ತಿಮ್ಮಾರೆಡ್ಡಿ, ಕಿಶೋರ್ ಪತ್ತಿಕೊಂಡ, ಅನಂತ ಪದ್ಮನಾಭ, ಮುರಾರಿಗೌಡ, ಓದೋ ಗಂಗಪ್ಪ, ಸುಬ್ಬರಾವ್, ಹನುಮಂತಪ್ಪ ಇದ್ದರು.

ಆಕ್ಷೇಪ: ವೇದಿಕೆ ಮೇಲೆ ಕರೆದಿಲ್ಲ ಎಂದು ಪಕ್ಷದ ಮುಖಂಡ ಸುಭಾಷ ಎದ್ದು ನಿಂತು ಆಕ್ಷೇಪ ವ್ಯಕ್ತಪಡಿಸಿದರು. ಅವರನ್ನು ಶ್ರೀರಾಮುಲು ಸಮಾಧಾನ ಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !