ಶರಾವತಿ ಯೋಜನೆ ಬೇಡವೇ ಬೇಡ: ಪಶ್ಚಿಮ ಘಟ್ಟಗಳ ಸಂರಕ್ಷಣೆ ಕಾರ್ಯಪಡೆ

ಬುಧವಾರ, ಜೂಲೈ 17, 2019
23 °C

ಶರಾವತಿ ಯೋಜನೆ ಬೇಡವೇ ಬೇಡ: ಪಶ್ಚಿಮ ಘಟ್ಟಗಳ ಸಂರಕ್ಷಣೆ ಕಾರ್ಯಪಡೆ

Published:
Updated:
Prajavani

ಬೆಂಗಳೂರು: ಎತ್ತಿನಹೊಳೆ ಯೋಜನೆಯನ್ನು ಪರಿಸರಕ್ಕೆ ಹಾನಿ ಆಗದಂತೆ ಕಾರ್ಯರೂಪಕ್ಕೆ ತರಬೇಕು. ಶರಾವತಿಯಿಂದ ಬೆಂಗಳೂರಿಗೆ ನೀರು ಹರಿಸುವ ಯೋಜನೆ ಸಹಿತ ಇತರ ಯಾವುದೇ ಬೃಹತ್‌ ಯೋಜನೆ ಬೇಡ ಎಂಬ ಸಲಹೆಯನ್ನು ಪಶ್ಚಿಮ ಘಟ್ಟಗಳ ಸಂರಕ್ಷಣೆ ಕಾರ್ಯಪಡೆ ಸರ್ಕಾರಕ್ಕೆ ನೀಡಿದೆ.

ಬುಧವಾರ ಇಲ್ಲಿ ಕಾರ್ಯಪಡೆಯ ಅಧ್ಯಕ್ಷ ಡಾ.ಎಸ್.ಚಂದ್ರಶೇಖರ್‌ ಅಂತಿಮ ವರದಿಯನ್ನು ಅರಣ್ಯ ಸಚಿವ ಸತೀಶ್‌ ಜಾರಕಿಹೊಳಿ ಅವರಿಗೆ ಸಲ್ಲಿಸಿದ ಬಳಿಕ ಈ ಮಾಹಿತಿ ನೀಡಿದರು.

ಪಶ್ಚಿಮ ಘಟ್ಟ ಸಂರಕ್ಷಣೆಗೆ ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಾದರಿಯಲ್ಲಿ ಸಂವಿಧಾನದ ಕಲಂ 371 (ಜೆ) ಅಡಿಯಲ್ಲಿ ಪಶ್ಚಿಮ ಘಟ್ಟ ಪ್ರದೇಶಾಭಿವೃದ್ಧಿ ಪ್ರಾಧಿಕಾರ ಸ್ಥಾಪಿಸಬೇಕು, ಮಾಫಿಯಾಗಳ ಅಕ್ರಮ ಚಟುವಟಿಕೆಗಳನ್ನು ತಡೆಯಲೇಬೇಕು, ಬೃಹತ್‌ ಯಂತ್ರಗಳ ಮೇಲೆ ನಿಗಾ ವಹಿಸಬೇಕು, ಕುದುರೆಮುಖ ಅರಣ್ಯ ಪ್ರದೇಶದಲ್ಲಿ ಅರಣ್ಯ ಮತ್ತು ಪರಿಸರ ಸಂಶೋಧನಾ ವಿಶ್ವವಿದ್ಯಾಲಯ ಸ್ಥಾಪಿಸಬೇಕು, ಆನೆ ಮತ್ತು ಇತರ ವನ್ಯಜೀವಿಗಳು ಕಾಡಿನಿಂದ ನಾಡಿಗೆ ಬರುವುದನ್ನು ತಡೆಗಟ್ಟಲು ವೈಜ್ಞಾನಿಕ ಕ್ರಮ ಕೈಗೊಳ್ಳಬೇಕು, ಆನೆ ಕಾರಿಡಾರ್ ಅಭಿವೃದ್ಧಿಪಡಿಸಬೇಕು, ಜೇನು ನೊಣಗಳನ್ನು ರಾಜ್ಯದ ಕೀಟವೆಂದು ಘೋಷಿಸಬೇಕು, ಮಹಶೀರ್‌ ಮೀನನ್ನು ರಾಜ್ಯ ಮೀನು ಎಂದು ಘೋಸಿಸಬೇಕು ಸಹಿತ ಒಟ್ಟು 32 ಸಲಹೆಗಳನ್ನು ನೀಡಲಾಗಿದೆ. ಆದರೆ ಬಹುತೇಕ ನಿಷ್ಕ್ರಿಯಗೊಂಡಿರುವ ಗ್ರಾಮ ಅರಣ್ಯ ಸಮಿತಿಯ ಬಗ್ಗೆ ಯಾವುದೇ ಪ್ರಸ್ತಾಪ ಮಾಡಿಲ್ಲ.

4 ವರ್ಷದಲ್ಲಿ ಆನೆ ಕಾರಿಡಾರ್‌: ‘ಆನೆ ಕಾರಿಡಾರ್‌ಗೆ ಸರ್ಕಾರ ಈ ವರ್ಷ ₹100 ಕೋಟಿ ಅನುದಾನ ನೀಡಿದೆ. ಇದರಿಂದ ಸುಮಾರು 100 ಕಿ.ಮೀ.ದೂರಕ್ಕೆ ಕಾರಿಡಾರ್‌ ನಿರ್ಮಿಸಲಾಗುವುದು. 3–4 ವರ್ಷದಲ್ಲಿ ಯೋಜನೆ ಪೂರ್ಣಗೊಳ್ಳಲಿದೆ. ವರದಿಯನ್ನು ಅಧ್ಯಯನ ನಡೆಸಿದ ಬಳಿಕ ಅದನ್ನು ಜಾರಿಗೆ ತರುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು. ಕಸ್ತೂರಿರಂಗನ್‌ ವರದಿಗೆ ಸಂಬಂಧಿಸಿದಂತೆ ರಾಜ್ಯದ ಜನತೆಯ ಹಿತಾಸಕ್ತಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಕೇಂದ್ರದಿಂದ ಇದರ ಬಗ್ಗೆ ಇನ್ನೂ ಪ್ರತಿಕ್ರಿಯೆ ಬಂದಿಲ್ಲ’ ಎಂದು ಸಚಿವ ಸತೀಶ್‌ ಜಾರಕಿಹೊಳಿ ಹೇಳಿದರು.

ಶರಾವತಿ ನೀರು–ಪ್ರತಿಕ್ರಿಯಿಸಲ್ಲ: ಡಿಕೆಶಿ

ಶರಾವತಿ ನದಿಯಿಂದ ಬೆಂಗಳೂರಿಗೆ ನೀರು ತರಿಸುವ ವಿಚಾರ ಹಿಂದಿನಿಂದಲೂ ಇದೆ. ಇದೀಗ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಅವರು ವಿಷಯವನ್ನು ಜನರ ಮುಂದಿಟ್ಟಿದ್ದಾರೆ. ಇದರ ಬಗ್ಗೆ ಈ ಹಂತದಲ್ಲಿ ನಾನು ಪ್ರತಿಕ್ರಿಯೆ ನೀಡಲಾರೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !