ಶುಕ್ರವಾರ, ಡಿಸೆಂಬರ್ 6, 2019
18 °C

ಪೊಲೀಸರ ವಿರುದ್ಧ ಪೋಸ್ಟ್‌ ಪ್ರಕಟಿಸಿದ್ದಕ್ಕೆ ಎಫ್‌ಐಆರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬೆಂಗಳೂರು: ‘ಕಾರು ಟೋಯಿಂಗ್‌ ಮಾಡದಿರಲು ವೈಟ್‌ಫೀಲ್ಡ್‌ ಸಂಚಾರ ಪೊಲೀಸರು ₹2 ಸಾವಿರ ಪಡೆದಿದ್ದಾರೆ’ ಎಂದು ಆರೋಪಿಸಿ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಪ್ರಕಟಿಸಿದ್ದರು ಎನ್ನಲಾದ ಪ್ರಿಯಾ ಸುಬ್ರಹ್ಮಣ್ಯ ಎಂಬುವರ ವಿರುದ್ಧ ವೈಟ್‌ಫೀಲ್ಡ್‌ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ.

‘ವೈಟ್‌ಫೀಲ್ಡ್‌ ಸಂಚಾರ ಠಾಣೆಯ ಎಎಸ್‌ಐ ಕೆಂಪರಾಜು ನೀಡಿದ ದೂರಿನನ್ವಯ ಮಹಿಳೆ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಮಹಿಳೆಯನ್ನು ವಿಚಾರಣೆಗೆ ಒಳಪಡಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಪೊಲೀಸರು ಹೇಳಿದರು.

‘ಡಿ. 4ರಂದು ಕೆಂಪರಾಜು, ಟೈಗರ್ ವಾಹನದಲ್ಲಿ ಕರ್ತವ್ಯದಲ್ಲಿದ್ದರು. ಮಧ್ಯಾಹ್ನ 3.40 ಗಂಟೆ ಸುಮಾರಿಗೆ ವೈಟ್‌ಫೀಲ್ಡ್‌ ಮುಖ್ಯರಸ್ತೆಯಲ್ಲೇ ‘ಕೆಎ 03 ಎಂಆರ್ 3688’ ನೋಂದಣಿ ಸಂಖ್ಯೆಯ ಕಾರು ನಿಂತಿದ್ದರಿಂದ ಸಾರ್ವಜನಿಕರ ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಗುತ್ತಿತ್ತು. ಅದನ್ನು ಗಮನಿಸಿದ ಕೆಂಪರಾಜು, ಕಾರು ಟೋಯಿಂಗ್‌ ಮಾಡಿಸಿದ್ದರು. ಠಾಣೆಗೆ ಬಂದಿದ್ದ ಚಾಲಕ ರಾಜಶೇಖರ್‌, ₹1,100 ದಂಡ ಪಾವತಿಸಿ ರಸೀದಿ ಪಡೆದುಕೊಂಡು ಕಾರು ತೆಗೆದುಕೊಂಡು ಹೋಗಿದ್ದರು’.

‘ಅದೇ ದಿನ ರಾತ್ರಿ 7.25 ಗಂಟೆ ಸುಮಾರಿಗೆ ಪ್ರಿಯಾ ಅವರು ಪೊಲೀಸ್‌ ಠಾಣೆ ಫೋಟೊ ಸಮೇತ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಪ್ರಕಟಿಸಿದ್ದರು’ ಎಂದು ಪೊಲೀಸರು ಹೇಳಿದರು.

‘ಪ್ರಿಯಾ ಅವರು ಪೊಲೀಸ್ ಇಲಾಖೆ ಹಾಗೂ ನನ್ನ ವೃತ್ತಿಯ ಬಗ್ಗೆ ಅವಹೇಳನಕಾರಿಯಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಪ್ರಕಟಿಸಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ’ ಎಂದು ದೂರಿನಲ್ಲಿ ಕೆಂಪರಾಜು ಒತ್ತಾಯಿಸಿದ್ದಾರೆ’ ಎಂದು ವಿವರಿಸಿದರು. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು