ಗೃಹಿಣಿ ಸಾವು ಇನ್ನೂ ನಿಗೂಢ; ಟೆಕಿ ಸೆರೆ

7
ಕಟ್ಟಡದಿಂದ ಬಿದ್ದಳೆಂದ ಪತಿ * ಗಂಡನೇ ಕೊಂದಿದ್ದಾನೆ: ಆರೋಪ

ಗೃಹಿಣಿ ಸಾವು ಇನ್ನೂ ನಿಗೂಢ; ಟೆಕಿ ಸೆರೆ

Published:
Updated:
Deccan Herald

ಬೆಂಗಳೂರು: ಲಕ್ಕಸಂದ್ರದ 15ನೇ ಅಡ್ಡರಸ್ತೆ ನಿವಾಸಿ ಫಾಜಿಯಾ ಭಾನು (23) ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ, ಮೃತರ ಪತಿ ಮೊಹಮದ್ ಸಮೀವುಲ್ಲಾನನ್ನು (34) ಆಡುಗೋಡಿ ಪೊಲೀಸರು ಬಂಧಿಸಿದ್ದಾರೆ.

ಫಾಜೀಯಾ ಸೆ.27ರಂದು ಮೃತಪಟ್ಟಿದ್ದರು. ‘ಸಂಜೆ 5.30ರ ಸುಮಾರಿಗೆ ಪತ್ನಿ ಮಹಡಿಯಿಂದ ಬಿದ್ದಳು. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದೆ. ಆದರೆ, ರಾತ್ರಿ 8.30ರ ಸುಮಾರಿಗೆ ಕೊನೆಯುಸಿರೆಳೆದಳು’ ಎಂದು ಸಮೀವುಲ್ಲಾ ದೂರು
ಕೊಟ್ಟಿದ್ದರು.

ಆದರೆ, ‘ಫಾಜಿಯಾ ಸಂಜೆಯೇ ಬಿದ್ದಿದ್ದರೆ, ಅಳಿಯ ನಮಗೇಕೆ ವಿಷಯ ತಿಳಿಸಲಿಲ್ಲ. ಆಕೆ ಸತ್ತು ಹೋದ ವಿಚಾರ ನಮಗೆ ಗೊತ್ತಾಗಿದ್ದು 11.30ಕ್ಕೆ. ಅದೂ ಬೇರೊಬ್ಬರ ಮೂಲಕ. ಅಳಿಯನೇ ಮಗಳನ್ನು ಕೊಂದು ನಾಟಕವಾಡುತ್ತಿದ್ದಾನೆ’ ಎಂದು ಆರೋಪಿಸಿ ಮೃತರ ಪೋಷಕರು ಪ್ರತಿದೂರು
ನೀಡಿದ್ದರು.

ಹೀಗಾಗಿ, ಪೊಲೀಸರು ಅನುಮಾನಾಸ್ಪದ ಸಾವು (ಐಪಿಸಿ 174ಸಿ) ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದರು.

‘ನೆರೆಹೊರೆಯವರನ್ನು ವಿಚಾರಿಸಿದಾಗ ಸಮೀವುಲ್ಲಾ–ಫಾಜಿಯಾ ದಂಪತಿ ಸಂಜೆ 5.30ಕ್ಕೆ ಮನೆಯಲ್ಲಿ ಜೋರಾಗಿ ಗಲಾಟೆ ಮಾಡುತ್ತಿದ್ದರು. ಒಮ್ಮೆಲೆ ಆಕೆ ಚೀರಿಕೊಂಡಳು. ಆ ನಂತರ ಜಗಳ ನಿಂತು ಹೋಯಿತು’ ಎಂದು ಹೇಳಿಕೆ ಕೊಟ್ಟರು. ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಸಹ, ‘ಫಾಜಿಯಾ ಸಾಯುವುದಕ್ಕೂ ಮುನ್ನ ಅವರ ಮೇಲೆ ಹಲ್ಲೆ ನಡೆದಿರುವ ಸಾಧ್ಯತೆ ಇದೆ’ ಎಂದು ಹೇಳಿದರು. ಹೀಗಾಗಿ, ಸೆಕ್ಷನ್ ಬದಲಿಸಿ ವರದಕ್ಷಿಣೆ ಕಿರುಕುಳ (498ಎ) ಹಾಗೂ ಕೊಲೆ (ಐಪಿಸಿ 302) ಪ್ರಕರಣಗಳಡಿ ಎಫ್‌ಐಆರ್ ಮಾಡಿದೆವು’ ಎಂದು ಆಡುಗೋಡಿ ಪೊಲೀಸರು ಹೇಳಿದ್ದಾರೆ.

‘ಸಮೀವುಲ್ಲಾನನ್ನು ಬಂಧಿಸಿ, ವಿಚಾರಣೆ ನಡೆಸಿದ್ದೇವೆ. ‘ನಾನು ಕೊಂದಿಲ್ಲ’ ಎಂದಷ್ಟೇ ಆತ ಹೇಳಿದ್ದಾನೆ. ನ್ಯಾಯಾಲಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಮರಣೋತ್ತರ ಪರೀಕ್ಷೆಯ ಅಂತಿಮ ವರದಿ ಬಂದ ನಂತರ, ಪುನಃ ಕಸ್ಟಡಿಗೆ ಪಡೆದು ಹೆಚ್ಚಿನ ವಿಚಾರಣೆಗೆ ಒಳ‍ಪಡಿಸಲಾಗುವುದು’ ಎಂದು ಮಾಹಿತಿ ನೀಡಿದರು.

ಎರಡನೇ ಮದುವೆ: ಬಿ.ಟೆಕ್ ಪದವೀಧರನಾದ ಸಮೀವುಲ್ಲಾ, ಸಾಫ್ಟ್‌ವೇರ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಾನೆ. ಮೊದಲ ಪತ್ನಿಗೆ ವಿಚ್ಛೇದನ ನೀಡಿದ್ದ ಈತ, ವರ್ಷದ ಹಿಂದೆ ಫಾಜಿಯಾ ಅವರನ್ನು ವಿವಾಹವಾಗಿದ್ದ. ಗುರಪ್ಪನಪಾಳ್ಯದ ಅಪಾರ್ಟ್‌ಮೆಂಟ್‌ನಲ್ಲಿ ನೆಲೆಸಿದ್ದ ದಂಪತಿ, ತಿಂಗಳ ಹಿಂದಷ್ಟೇ ವಾಸ್ತವ್ಯವನ್ನು ಲಕ್ಕಸಂದ್ರಕ್ಕೆ ಬದಲಾಯಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಮೊಬೈಲ್ ಸಹ ಕಿತ್ತುಕೊಂಡಿದ್ದ

‘ಅಳಿಯ ತುಂಬ ಹಟವಾದಿ. ನಾನು ಹೇಳಿದ್ದೇ ನಡೆಯಬೇಕು ಎಂಬ ಮನಸ್ಥಿತಿವುಳ್ಳವನು. ಸಣ್ಣಪುಟ್ಟ ವಿಚಾರಕ್ಕೂ ಮಗಳೊಂದಿಗೆ ಜಗಳವಾಡುತ್ತಿದ್ದ. ತಾಯಿ ಜತೆ ಹೆಚ್ಚು ಮಾತನಾಡುತ್ತಾಳೆಂದು ಮೊಬೈಲನ್ನೂ ಕಿತ್ತಿಟ್ಟುಕೊಂಡಿದ್ದ. ಇತ್ತೀಚೆಗೆ ಆಕೆಯನ್ನು ಸಂಬಂಧಿಕರ ಮದುವೆ ಸಮಾರಂಭಕ್ಕೆ ಕರೆದುಕೊಂಡು ಹೋಗಿದ್ದೆವು. ಅದಕ್ಕೆ, ‘ಯಾರನ್ನು ಕೇಳಿ ಮನೆಯಿಂದ ಹೊರಗೆ ಹೋಗಿದ್ದು’ ಎಂದು ಆಕೆಯೊಂದಿಗೆ ಗಲಾಟೆ ಮಾಡಿದ್ದ. ಅದೇ ವಿಚಾರವಾಗಿ ಸೆ.27ರಂದೂ ಜಗಳ ತೆಗೆದು ಹೊಡೆದು ಸಾಯಿಸಿದ್ದಾನೆ’ ಎಂದು ಫಾಜಿಯಾ ತಂದೆ ಅಕ್ಬರ್ ಪಾಷಾ ದೂರಿದ್ದಾರೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 2

  Sad
 • 0

  Frustrated
 • 0

  Angry

Comments:

0 comments

Write the first review for this !