ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಯಲ್ಲೇ ಕೆಲಸ ಮಾಡಿ ದಟ್ಟಣೆ ತಪ್ಪಿಸಿ!

Last Updated 22 ಅಕ್ಟೋಬರ್ 2018, 20:15 IST
ಅಕ್ಷರ ಗಾತ್ರ

ಬೆಂಗಳೂರು: ಮಾಹಿತಿ ತಂತ್ರಜ್ಞಾನ ಆಧಾರಿತ ಎಲೆಕ್ಟ್ರಾನಿಕ್‌ ವಸ್ತುಗಳು ಸಂಚಾರ ದಟ್ಟಣೆ ನಿವಾರಿಸಲು ನೆರವಾಗಬಹುದೇ?

ಹೌದೆನ್ನುತ್ತದೆಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಯ ಅಧ್ಯಯನ ಸಂಸ್ಥೆ (ಐಸೆಕ್‌)ಯ ಅಧ್ಯಯನ ವರದಿ.ಬೆಂಗಳೂರು ಸ್ಮಾರ್ಟ್‌ ಸಿಟಿಯಾಗಬಹುದೇ ಅಥವಾ ವಾಸಯೋಗ್ಯವಾಗಬಹುದೇ ಎಂಬ ಶೀರ್ಷಿಕೆಯಲ್ಲಿ ಐಸೆಕ್‌ನ ಪ್ರಾಧ್ಯಾಪಕರಾದ ಕಲಾ ಎಸ್‌. ಶ್ರೀಧರ್‌, ಸಹ ಪ್ರಾಧ್ಯಾಪಕರಾದ ಎಸ್‌. ಮಾನಸಿ ಮತ್ತು ಎನ್‌. ಲತಾ ಅವರು ನಡೆಸಿದ ಅಧ್ಯಯನ ವರದಿಯಲ್ಲಿ ತಂತ್ರಜ್ಞಾನ ಬಳಕೆಯ ಕುರಿತು ವಿಶ್ಲೇಷಿಸಿದ್ದಾರೆ.

ಕೌಶಲ ಆಧರಿತ ಕೆಲಸಗಳನ್ನು ದೂರಸಂಪರ್ಕ ತಂತ್ರಜ್ಞಾನ ಬಳಸಿಕೊಂಡು ಮನೆಯಲ್ಲೇ ಕುಳಿತು ಕೆಲಸ ನಿರ್ವಹಿಸುವುದು ಈ ಸಾಧ್ಯತೆಯನ್ನು ತೆರೆದಿಟ್ಟಿದೆ.

ಈ ವ್ಯವಸ್ಥೆಯು ಕಚೇರಿ ಸ್ಥಳ, ಪ್ರಯಾಣದ ಸಮಯ, ಸಂಚಾರ ದಟ್ಟಣೆ, ವಾಯು ಮಾಲಿನ್ಯವನ್ನು ನಿವಾರಿಸುತ್ತದೆ ಮತ್ತು ಉದ್ಯೋಗಿಗಳ ಉತ್ಪಾದಕತೆ ಹೆಚ್ಚಿಸುವಲ್ಲಿ ಸಂದೇಹವೇ ಇಲ್ಲ ಎಂದು ವರದಿ ಅಭಿಪ್ರಾಯಪಟ್ಟಿದೆ.

ಹೇಗೆ ಸಾಧ್ಯ?

ನಗರದಲ್ಲಿರುವಶೇ 99.2ರಷ್ಟು ಜನರಲ್ಲಿ ಮೊಬೈಲ್‌ ಫೋನ್‌ಗಳಿವೆ. 14.5ರಷ್ಟು ಮಂದಿಯ ಬಳಿ ಕಂಪ್ಯೂಟರ್ ಇದೆ. 8.7ರಷ್ಟು ಮನೆಗಳಲ್ಲಿ ಇಂಟರ್‌ನೆಟ್‌ ಸಂಪರ್ಕ ಇದೆ. ಈ ಮೂಲಕ ಪರಿಣಾಮಕಾರಿ ಸಂವಹನ ಮಾಡಬಹುದು. ಈ ವ್ಯವಸ್ಥೆಯ ಮೂಲಕವೇ ಕಚೇರಿ ಕೆಲಸಗಳನ್ನು ನಿರ್ವಹಿಸಬಹುದು. ಮುಖ್ಯವಾದ ಸೂಚನೆಗಳು, ಮಾಹಿತಿಗಳನ್ನು ಕುಳಿತಲ್ಲಿಯೇ ವಿನಿಮಯ ಮಾಡಬಹುದು ಎನ್ನುತ್ತದೆ ವರದಿ.

ನಗರದ ಮನೆಗಳಲ್ಲಿ ದೊಡ್ಡ ಪ್ರಮಾಣದ ಮಾಹಿತಿ ತಂತ್ರಜ್ಞಾನ ಸಂಬಂಧಿಸಿದ ಸಾಮಗ್ರಿಗಳಿವೆ (ಡೇಟಾಸೆಟ್‌). ಸಮೀಕ್ಷೆಗೆ ಒಳಪಡಿಸಿದ 1,500 ಮಂದಿ ಪೈಕಿ ಶೇ 3ರಷ್ಟು ಜನ ಮನೆಯಲ್ಲೇ ಕುಳಿತು ಕೆಲಸ ಮಾಡುತ್ತಾರೆ. ಈ ವ್ಯವಸ್ಥೆಯಿಂದ ಪ್ರಯಾಣದ ಸಮಯವನ್ನು ಉಳಿಸಬಹುದು. ಪ್ರಯಾಣಕ್ಕೆ ಬಳಸುವ ವೇಳೆಯನ್ನೇ ಕೆಲಸಕ್ಕೆ ಬಳಸಬಹುದು. ಪ್ರಯಾಣದ ವೆಚ್ಚ, ಸಂಚಾರ ದಟ್ಟಣೆ ಸಮಸ್ಯೆಗಳಲ್ಲಿ ಉದ್ಯೋಗಿಗಳು ಸಿಲುಕುವುದನ್ನು ತಪ್ಪಿಸಲು ಸಾಧ್ಯ. ಮಾಹಿತಿ ತಂತ್ರಜ್ಞಾನದ ಕೆಲಸಗಳು ತಂತ್ರಾಂಶ ಮತ್ತು ಕೌಶಲ ಆಧರಿತವಾಗಿರುವ ಕಾರಣ ವ್ಯಕ್ತಿ ಕಚೇರಿಗೆಹಾಜರಿರಬೇಕೆಂದೇನೂ ಇಲ್ಲ ಎಂದು ವಿಶ್ಲೇಷಿಸಲಾಗಿದೆ.

ಸದ್ಯ ನಗರದಲ್ಲಿ ಈ ವ್ಯವಸ್ಥೆಯ ಅಡಿ ಕೆಲಸ ಮಾಡುವವರ ಸಂಖ್ಯೆ ಗಣನೀಯವಾಗಿ ಏರಿಕೆ ಆಗಿಲ್ಲ. ಆದರೆ, ಮನೆಯಲ್ಲಿದ್ದುಕೊಂಡೇ ವಿವಿಧ ಕ್ಷೇತ್ರಗಳ ಕೆಲಸಗಳನ್ನು ಸಂಯೋಜಿಸುವವರೂ ಇದ್ದಾರೆ. ಇವರ ಪೈಕಿ ಬಹುತೇಕರು ಸ್ವಂತಉದ್ಯಮಿಗಳಾಗಿದ್ದಾರೆ. ಆದ್ದರಿಂದ ಉದ್ಯೋಗಗಳು ಕೌಶಲ ಬಳಕೆಗೆ ಪೂರಕವಾಗುವಂತಿರಬೇಕು. ಇಂಥ ಕ್ಷೇತ್ರಗಳಿಗೆ ಬೇಕಾದಂತೆ ತಂತ್ರಜ್ಞಾನ ಎಲ್ಲೆಡೆ ಲಭ್ಯವಾದಲ್ಲಿ ಸಂಚಾರಅವಧಿ ಇಳಿಸುವ ಆಶಯ ಈಡೇರಬಹುದು ಎಂದು ವರದಿ ಹೇಳಿದೆ. ನಗರದಲ್ಲಿ ಬೃಹತ್‌ ಸಂಖ್ಯೆಯ ಉದ್ಯೋಗಿಗಳು ಕೌಶಲ ಆಧರಿತ ಕ್ಷೇತ್ರದಲ್ಲಿ ಕಾರ್ಯನಿರತರಾಗಿದ್ದಾರೆ. ಅವರು ಈ ವ್ಯವಸ್ಥೆಯನ್ನು ಹೆಚ್ಚು ಬಳಸುವಂತಾಗಬೇಕು ಎಂದು ಸಂಶೋಧನಾ ತಂಡದ ನೇತೃತ್ವ ವಹಿಸಿದ್ದ ಪ್ರೊ.ಕಲಾ ಹೇಳಿದರು.

ಈ ಅಧ್ಯಯನಕ್ಕೆ ಇಂಡಿಯನ್‌ ಕೌನ್ಸಿಲ್‌ ಆಫ್‌ ಸೋಷಿಯಲ್‌ ಸೈನ್ಸ್‌ ರಿಸರ್ಚ್‌ ನೆರವು ನೀಡಿತ್ತು.

ಮೆಟ್ರೊ ರೈಲು ಬಳಕೆ: ಪ್ರಯಾಣದ ಅವಧಿ ಇಳಿಕೆ

ಬೆಂಗಳೂರು: ನಗರದ ಪ್ರಯಾಣದ ಅವಧಿಯಲ್ಲಿ ಗಣನೀಯ ಸುಧಾರಣೆ ಕಂಡುಬಂದಿದೆ. 2001ರಲ್ಲಿ ಒಂದು ಏಕಮುಖ ಪ್ರಯಾಣದ ಅವಧಿ ಸರಾಸರಿ 40 ನಿಮಿಷಗಳಷ್ಟು ಆಗುತ್ತಿತ್ತು. 2017ರಲ್ಲಿ ಅದು 29 ನಿಮಿಷಕ್ಕೆ ಇಳಿದಿದೆ.

–ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಯ ಅಧ್ಯಯನ ಸಂಸ್ಥೆ (ಐಸೆಕ್‌)ಯ ಅಧ್ಯಯನ ವರದಿ ಈ ಅಂಶಗಳನ್ನು ಬಹಿರಂಗಪಡಿಸಿದೆ. ಬಿಎಂಟಿಸಿ ಹಾಗೂ ಮೆಟ್ರೊ ರೈಲಿನ ಸುಧಾರಿತ ಪ್ರಯಾಣ ಸೇವೆಗಳು ಈ ಬದಲಾವಣೆಗೆ ಕಾರಣ.

ಐಸೆಕ್‌ನ ಪ್ರಾಧ್ಯಾಪಕರಾದ ಕಲಾ ಎಸ್‌. ಶ್ರೀಧರ್‌ ಮತ್ತು ಸಹ ಪ್ರಾಧ್ಯಾಪಕರಾದ ಎಸ್‌. ಮಾನಸಿ ಮತ್ತು ತಂಡದವರು ಈ ಅಧ್ಯಯನ ನಡೆಸಿದ್ದರು. ಬಿಬಿಎಂ‍ಪಿ ವ್ಯಾಪ್ತಿಯ ವಿವಿಧ ವಲಯಗಳ 27 ವಾರ್ಡ್‌ಗಳ 1,500 ಮನೆಗಳಿಗೆ ಭೇಟಿ ನೀಡಿ ಈ ಸಮೀಕ್ಷೆ ನಡೆಸಲಾಗಿತ್ತು.5,514 ಜನರನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು.

ನಗರದಲ್ಲಿ ಕಚೇರಿ ಉದ್ಯೋಗಿಗಳು ಪ್ರತಿದಿನ ಸರಾಸರಿ 7.7 ಕಿಲೋಮೀಟರ್‌ ಏಕಮುಖ ಪ್ರಯಾಣ ಮಾಡುತ್ತಾರೆ. ಮಾಹಿತಿ ತಂತ್ರಜ್ಞಾನದ ಉದ್ಯೋಗಿಗಳು ಸರಾಸರಿ 11 ಕಿಲೋಮೀಟರ್‌ಗಳಷ್ಟು ಏಕಮುಖ ಪ್ರಯಾಣ ಮಾಡುತ್ತಾರೆ. ಇವರ ಪ್ರಯಾಣದ ಅವಧಿ ಸರಾರಿ 40 ನಿಮಿಷ. ಉದ್ಯಮಿಗಳ ಪ್ರಯಾಣ ಅವಧಿ ಸರಾಸರಿ 19 ನಿಮಿಷ. ಏಕೆಂದರೆ ಅವರ ವಸತಿ ಪ್ರದೇಶ ಉದ್ಯಮ ಕೇಂದ್ರಕ್ಕೆ ಸಮೀಪವಾಗಿರುತ್ತದೆ ಎಂಬುದನ್ನು ಸಮೀಕ್ಷೆ ಗುರುತಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT