ಶುಕ್ರವಾರ, ಏಪ್ರಿಲ್ 23, 2021
22 °C
ಯಲಹಂಕ: ರೈಲ್ವೆ ಕೆಳ ಸೇತುವೆ ಇಲ್ಲದೆ ಜನರ ಪರದಾಟ lಹಳಿ ಮೇಲೆ ನಡೆದೇ ಹೋಗಬೇಕಾದ ಸ್ಥಿತಿ

2 ದಶಕಗಳ ಬೇಡಿಕೆಗೆ ಇನ್ನೂ ಸಿಕ್ಕಿಲ್ಲ ಸ್ಪಂದನೆ

ಡಿ.ಸುರೇಶ್ Updated:

ಅಕ್ಷರ ಗಾತ್ರ : | |

Prajavani

ಯಲಹಂಕ: ಇಲ್ಲಿನ ರೈಲ್ವೆ ನಿಲ್ದಾಣದ ಸಮೀಪದಲ್ಲಿ ರೈಲ್ವೆ ಕೆಳಸೇತುವೆ ನಿರ್ಮಾಣ ಕಾಮಗಾರಿ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಇದರಿಂದಾಗಿ, ಸಾರ್ವಜನಿಕರು ರೈಲ್ವೆ ಹಳಿಗಳನ್ನು ದಾಟಿಕೊಂಡು ಹೋಗುವ ಮೂಲಕ ಪ್ರತಿನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ.

ಯಲಹಂಕ ಹಳೇನಗರ ಮತ್ತು ಉಪನಗರಕ್ಕೆ ಕೊಂಡಿಯಂತಿರುವ ಈ ರಸ್ತೆಯಲ್ಲಿ ವಿದ್ಯಾರ್ಥಿಗಳು, ಮಹಿಳೆಯರು, ವೃದ್ಧರು ಹಾಗೂ ಕೂಲಿಕಾರ್ಮಿಕರು ಸೇರಿದಂತೆ ಪ್ರತಿನಿತ್ಯ ಸಾವಿರಾರು ಜನರು ಸಂಚರಿಸುತ್ತಾರೆ. ಯಲಹಂಕ ರೈಲುನಿಲ್ದಾಣ ಮುಖ್ಯ ಜಂಕ್ಷನ್ ಆಗಿದ್ದು, ಇತ್ತೀಚೆಗೆ ಆಧುನಿಕ ರೀತಿಯಲ್ಲಿ ಅಭಿವೃದ್ಧಿ ಕಂಡಿದೆ. ನಿತ್ಯ 53 ರೈಲುಗಳು ಈ ಮಾರ್ಗದಲ್ಲಿ ಸಂಚರಿಸುತ್ತವೆ. ಇಂತಹ ದಟ್ಟಣೆಯ ನಡುವೆ ಪಾದ ಚಾರಿಗಳು ಭಯದಿಂದ ರೈಲ್ವೆ ಹಳಿಗಳನ್ನು ದಾಟಿ ಕೊಂಡು ತೆರಳಬೇಕಾದ ಪರಿಸ್ಥಿತಿ ಇದೆ.

ಕೆಳಸೇತುವೆ ನಿರ್ಮಾ ಣಕ್ಕೆ ಒತ್ತಾಯಿಸಿ 20 ವರ್ಷಗಳಿಂದ ರೈಲ್ವೆ ಸಚಿವರು ಹಾಗೂ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಸಾಕಷ್ಟು ಸಲ ಮನವಿ ಸಲ್ಲಿಸಲಾಗಿದೆ. ಆದರೆ, ಈವರೆಗೂ ಕಾಮಗಾರಿಗೆ ವೇಗ ಸಿಕ್ಕಿಲ್ಲ ಎಂದು ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.

ಏಳು ವರ್ಷಗಳ ಹಿಂದೆ ಕೆಳಸೇತುವೆ ನಿರ್ಮಾಣಕ್ಕೆ ಚಾಲನೆ ದೊರೆತಿತ್ತು. ಆದರೆ, ರಾಜಕೀಯ ಕಿತ್ತಾಟ, ರೈಲ್ವೆ ಇಲಾಖೆ ಮತ್ತು ಬಿಬಿಎಂಪಿ ನಡುವೆ ಸಮನ್ವಯದ ಕೊರತೆಯಿಂದ ಯೋಜನೆ ನನೆಗುದಿಗೆ ಬಿದ್ದಿತು.

ಇದೇ ರಸ್ತೆಯಲ್ಲಿ ಮಿನಿ ವಿಧಾನಸೌಧವಿದ್ದು, ಈ ಕಟ್ಟಡದಲ್ಲಿ 26 ಇಲಾಖೆಗಳು ಕಾರ್ಯನಿರ್ವಹಿಸುತ್ತಿವೆ. ಕೆಳಸೇತುವೆ ನಿರ್ಮಾಣವಾದರೆ ವಾಹನ ಸವಾರರು ಯಲಹಂಕ ಹಳೇನಗರದಿಂದ ಮಿನಿ ವಿಧಾನಸೌಧ ಮತ್ತು ದೊಡ್ಡಬಳ್ಳಾಪುರ ಮುಖ್ಯರಸ್ತೆಗೆ ಐದು ನಿಮಿಷಗಳಲ್ಲೇ ತಲುಪಬಹುದು. ಆದರೆ, ಈಗ ಕೊಂಡಪ್ಪ ಮತ್ತು ಕಾಮಾಕ್ಷಮ್ಮ ಬಡಾವಣೆಗಳ ಜನರು ಸಂತೆ ವೃತ್ತ, ಪೊಲೀಸ್ ಠಾಣೆ ವೃತ್ತಗಳನ್ನು ಬಳಸಿಕೊಂಡು 2 ಕಿ.ಮೀ. ದೂರ ಸಂಚರಿಸಬೇಕಾಗಿದೆ ಎಂದು ಸ್ಥಳೀಯ ನಿವಾಸಿ ಮುನಿರಾಜು ದೂರಿದರು.

ಕೆಳಸೇತುವೆ ನಿರ್ಮಾಣವಾಗುವುದರಿಂದ ಯಲಹಂಕ ರೈಲುನಿಲ್ದಾಣ ಮತ್ತು ಬಸ್‌ ನಿಲ್ದಾಣಗಳಿಗೆ ತಲುಪುವ ಜನರಿಗೂ ಹೆಚ್ಚಿನ ಅನುಕೂಲವಾಗಲಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕಾಮಗಾರಿಯನ್ನು ಕೈಗೊಂಡು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು. ಆ ಮೂಲಕ ಈ ಭಾಗದ ಜನರು ಎದುರಿಸುತ್ತಿರುವ ಸಮಸ್ಯೆ
ಯನ್ನು ಬಗೆಹರಿಸಬೇಕು ಎಂದು ಅವರು ಆಗ್ರಹಿಸಿದರು.

‘ಶೀಘ್ರ ಕಾಮಗಾರಿಗೆ ಚಾಲನೆ’

ಕೆಳಸೇತುವೆ ನಿರ್ಮಿಸುವ ಸಂಬಂಧ 2012ರಲ್ಲಿ ರೈಲ್ವೆ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ, ಕೆಲವು ತಾಂತ್ರಿಕ ಕಾರಣಗಳಿಂದ ಯೋಜನೆಗೆ ಹಿನ್ನಡೆಯಾಗಿತ್ತು. ರಸ್ತೆ ವಿಸ್ತರಣೆ ಮಾಡುವ ವಿಚಾರದಲ್ಲಿ ಸ್ವಲ್ಪ ತೊಡಕಿದ್ದು, ಆದಷ್ಟು ಬೇಗನೆ ಇದನ್ನು ಬಗೆಹರಿಸಿ ಬಿಬಿಎಂಪಿ ಮತ್ತು ರೈಲ್ವೆ ಇಲಾಖೆಯ ಸಹಭಾಗಿತ್ವದಲ್ಲಿ ಕಾಮಗಾರಿ ಆರಂಭಿಸಲಾಗುವುದು.
-ಎಸ್.ಆರ್.ವಿಶ್ವನಾಥ್, ಶಾಸಕ, ಯಲಹಂಕ

‘ರೈಲ್ವೆಗೆ ₹8.40 ಕೋಟಿ ಸಂದಾಯ’

ವಾಹನಗಳ ದ್ವಿಮುಖ ಸಂಚಾರಕ್ಕೆ 9 ಮೀಟರ್ ಅಗಲದ ಬಾಕ್ಸ್ ಅಳವಡಿಸಬೇಕೆಂದು ರೈಲ್ವೆ ಇಲಾಖೆಗೆ ಪ್ರಸ್ತಾವ ಸಲ್ಲಿಸಿ, ಈಗಾಗಲೇ ₹8.40 ಕೋಟಿ ಸಂದಾಯ ಮಾಡಲಾಗಿದೆ. ಇಲಾಖೆಯವರು 5 ಮೀಟರ್ ಅಗಲದ ಬಾಕ್ಸ್ ಅಳವಡಿಸುವುದಾಗಿ ಹೇಳಿದ್ದಾರೆ, ಆದರೆ, ಕೆಳಸೇತುವೆ ನಿರ್ಮಾಣವಾದರೆ ಈ ರಸ್ತೆಯಲ್ಲಿ ವಾಹನ ಸಂಚಾರ ಹೆಚ್ಚಾಗಲಿದ್ದು, ಮತ್ತೊಮ್ಮೆ ಪರಿಶೀಲಿಸಿ 9 ಮೀಟರ್ ಬಾಕ್ಸ್ ಅಳವಡಿಸಬೇಕೆಂದು ಕೋರಿ ಪತ್ರ ಬರೆಯಲಾಗಿದೆ. ಅಲ್ಲದೆ ಹೆಚ್ಚಿನ ಹಣದ ಅವಶ್ಯಕತೆಯಿದ್ದರೆ ನೀಡಲು ಸಿದ್ಧರಿರುವುದಾಗಿ ತಿಳಿಸಲಾಗಿದೆ.

-ಅಶೋಕ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್, ರಸ್ತೆ ಮತ್ತು ಮೂಲಸೌಕರ್ಯ ವಿಭಾಗ, ಬಿಬಿಎಂಪಿ

ಪ್ರಜಾವಾಣಿ ‘ಜನಸ್ಪಂದನ’ ನಾಳೆ

‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕೆಗಳ ಆಶ್ರಯದಲ್ಲಿ ಜನಸ್ಪಂದನ ಕಾರ್ಯಕ್ರಮ (ಸಿಟಿಜನ್‌ ಫಾರ್‌ ಚೇಂಜ್‌) ಯಲಹಂಕ ಉಪನಗರದ ಬಿಬಿಎಂಪಿ ಕಚೇರಿಯ ಆವರಣದಲ್ಲಿ ಜುಲೈ 7ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರ ವರೆಗೆ ನಡೆಯಲಿದೆ.

ಕ್ಷೇತ್ರದ ಜನರು ತಮ್ಮ ದೂರುಗಳನ್ನು ನೇರವಾಗಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಹೇಳಿಕೊಂಡು ಸ್ಥಳದಲ್ಲೇ ಪರಿಹಾರ ಪಡೆಯಬಹುದು.

ಕ್ಷೇತ್ರದ ಶಾಸಕ ಎಸ್‌.ಆರ್‌.ವಿಶ್ವನಾಥ್‌, ವಾರ್ಡ್‌ಗಳ ಪಾಲಿಕೆ ಸದಸ್ಯರು, ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ, ಬೆಸ್ಕಾಂ, ಜಲಮಂಡಳಿ ಹಾಗೂ ಪೊಲೀಸ್‌ ಇಲಾಖೆಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಕ್ಷೇತ್ರದ ಕುಂದುಕೊರತೆಗಳ ಬಗ್ಗೆ ಗಮನ ಸೆಳೆದು ಸ್ಥಳದಲ್ಲೇ ಪರಿಹಾರ ಪಡೆಯಲು ಸ್ಥಳೀಯರು ಈ ಅವಕಾಶ ಬಳಸಿಕೊಳ್ಳಬಹುದು.

ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಜುಲೈ 7ರಂದು ಬೆಳಿಗ್ಗೆ 9ರಿಂದ ಸ್ಥಳದಲ್ಲೇ ಹೆಸರು ನೋಂದಾಯಿಸಬಹುದು.

ಕುಂದು ಕೊರತೆಗಳನ್ನು ಮುಂಚಿತವಾಗಿ janaspandana@printersmysore.co.in
ಗೆ ಇ–ಮೇಲ್‌ ಕೂಡ ಮಾಡಬಹುದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು