‘ಆಪ್‌ ನೆ ಮುಜೆ ಜುಕಾದಿಯಾ‘

7
ಅಭಿಮಾನಿಗಳ ಪ್ರೀತಿಗೆ ಕಾವ್ಯಾತ್ಮಕವಾಗಿ ಉದ್ಘರಿಸಿದ್ದ ಅಟಲ್ ಜೀ

‘ಆಪ್‌ ನೆ ಮುಜೆ ಜುಕಾದಿಯಾ‘

Published:
Updated:

ಧಾರವಾಡ: 1984ರಲ್ಲಿ ಬೆಳಗಾವಿಯಿಂದ ಹುಬ್ಬಳ್ಳಿಗೆ ಹೋಗುತ್ತಿದ್ದ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಧಾರವಾಡದಲ್ಲಿ ಬರಮಾಡಿಕೊಂಡ ಅಭಿಮಾನಿಗಳು, ಗುಲಾಬಿಯ ಬೃಹತ್ ಮಾಲೆ ಹಾಕಿದ್ದರು. ಜನರ ಪ್ರೀತಿ ಕಂಡ ವಾಜಪೇಯಿ ಅವರು ಅಭಿಮಾನದಿಂದ ‘ಆಪ್‌ ನೆ ಮುಜೆ ಜುಕಾದಿಯಾ’ (ನೀವು ನನ್ನ ಬಾಗುವಂತೆ ಮಾಡಿದಿರಿ) ಎಂದು ಕಾವ್ಯಾತ್ಮಕವಾಗಿ ಹೇಳಿದ್ದನ್ನು ಉದ್ಯಮಿ ಲಲಿತ ಭಂಡಾರಿ ನೆನೆದು ಭಾವುಕರಾದರು.

‘ವಾಜಪೇಯಿ ಅವರು ಬರುತ್ತಿದ್ದಾರೆ ಎಂಬ ಮಾಹಿತಿ ಪಡೆದು, ಶಂಕರರಾವ್‌ ಚಿಂಚೋರೆ (ಪಾಲಿಕೆ ಸದಸ್ಯ ದೀಪಕ ಚಿಂಚೋರೆ ಅವರ ತಂದೆ) ಅವರ ನೇತೃತ್ವದಲ್ಲಿ ನಗರದ ಕಡಪಾ ಮೈದಾನದ ಬಳಿ ಅವರ ಕಾರನ್ನು ತಡೆದೆವು. ನಮ್ಮನ್ನು ಕಂಡು ಅತ್ಯಂತ ಸಂತಸದಿಂದ ಕಾರಿನಿಂದ ಇಳಿದ ಅವರು ಕೆಲವರ ಹೆಸರು ಕರೆದು ಮಾತನಾಡಿಸಿದ್ದು ನಿಜಕ್ಕೂ ಅಚ್ಚರಿ ಮೂಡಿಸಿತು. ಕೆಲವು ನಿಮಿಷಗಳ ಆ ಭೇಟಿಯಲ್ಲಿ ನನ್ನ ಹೆಗಲೆ ಮೇಲೆ ಅವರ ಎರಡೂ ಕೈಗಳನ್ನಿಟ್ಟು ಮಾತನಾಡಿದ್ದು ಇಂದಿಗೂ ಮನಸ್ಸಿನಲ್ಲಿ ಅಚ್ಚೊತ್ತಿದೆ’ ಎಂದರು.

ವಾಜಪೇಯಿ ಅವರು 1984ರ ನಂತರ 1995ರಲ್ಲಿ ವಿಧಾನಸಭಾ ಚುನಾವಣೆ ಪ್ರಚಾರಕ್ಕೆ ಧಾರವಾಡಕ್ಕೆ ಬಂದಿದ್ದನ್ನು ಬಿಜೆಪಿಯ ಹಿರಿಯ ಮುಖಂಡ ದತ್ತಾ ಡೋರ್ಲೆ ನೆನಪಿಸಿಕೊಂಡರು.

‘ಚಂದ್ರಕಾಂತ ಬೆಲ್ಲದ ಅವರ ಪರ ಪ್ರಚಾರಕ್ಕೆ ಧಾರವಾಡಕ್ಕೆ ಬಂದಿದ್ದರು. ಹುಬ್ಬಳ್ಳಿಯ ನವೀನ್ ಹೋಟೆಲಿನಲ್ಲಿ ತಂಗಿದ್ದರು. ಧಾರವಾಡದಲ್ಲಿ ಈಗಿರುವ ರಂಗಾಯಣದ ಜಾಗದಲ್ಲಿ ‘ಓಪನ್ ಏರ್ ಥಿಯೇಟರ್‌’ ಎಂದು ಕರೆಯುತ್ತಿದ್ದ ಜಾಗವಿತ್ತು. ಅಲ್ಲೇ ಬಹಿರಂಗ ಭಾಷಣಕ್ಕೆ ವೇದಿಕೆ ಸಜ್ಜು ಮಾಡಿದ್ದೆವು. ಇಲ್ಲಿನ ಸರ್ಕೀಟ್ ಹೌಸ್‌ನಲ್ಲಿ ಕೆಲ ಹೊತ್ತು ವಿಶ್ವಾಂತಿ ಪಡೆದ ಅವರಿಗೆ ಉಪಾಹಾರವಾಗಿ ಏನು ನೀಡಬೇಕು ಎಂಬುದು ಗೊಂದಲಕ್ಕೀಡು ಮಾಡಿತು’ ಎಂದರು.

‘ಶಿವಪ್ಪನ ಕ್ಯಾಂಟೀನ್‌ ಗಿರ್ಮಿಟ್‌, ಮಿರ್ಚಿ ಜತೆ, ಬೃಂಧಾವನ ಹೋಟೆಲಿನ ಇಡ್ಲಿ ಮತ್ತು ಧಾರವಾಡ ಪೇಢೆಯನ್ನು ನೀಡಿದೆವು. ಗಿರ್ಮಿಟ್, ಮಿರ್ಚಿ ಹಾಗೂ ಪೇಢೆಯನ್ನು ಬಹಳಾ ಇಷ್ಟಪಟ್ಟು ಸವಿದರು. ಈ ಸಂದರ್ಭದಲ್ಲಿ ಜನಸಂಘದ ವೈ.ಎಚ್‌.ಪಾಟೀಲ, ಆಂಜನೇಯ ಶಿರೂರ ಅವರನ್ನು ನೆನೆದರು. ರಾಜೇಂದ್ರ ಗೋಕಲೆ, ಹೇಮರಾಜ ಭಂಡಾರಿ, ಚಂದ್ರಕಾಂತ ಬೆಲ್ಲದ, ಪ್ರಹ್ಲಾದ ಜೋಶಿ ಮೊದಲಾದವರು ಅವರೊಂದಿಗೆ ಇದ್ದೆವು. ಆಗ ಪಕ್ಷದ ಸಂಘಟನೆ ಕುರಿತಂತೆ ಸಭೆ ನಡೆಸಿದ್ದರು. ಅವರ ಅಗಾಧ ನೆನಪು, ಮೃದು ಹಾಗೂ ನೇರ ಮಾತು ಇಂದಿಗೂ ಕಿವಿಯಲ್ಲಿ ರಿಂಗಣಿಸುತ್ತಿದೆ’ ಎಂದು ಡೋರ್ಲೆ ನೆನಪಿಸಿಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !