ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಸ್ಥಾನ: ವಿಶ್ವಾಸಮತಕ್ಕೆ ಅಶೋಕ್‌ ಗೆಹ್ಲೋಟ್‌ ಸಜ್ಜು

ಕಾಂಗ್ರೆಸ್ ತಂತ್ರಗಾರಿಕೆ; ಬಿಜೆಪಿ ಬೇಡಿಕೆ ಇಡದಿದ್ದರೂ ಸಂಖ್ಯಾಬಲದ ಮೇಲೆ ನಂಬಿಕೆ
Last Updated 19 ಜುಲೈ 2020, 18:52 IST
ಅಕ್ಷರ ಗಾತ್ರ

ನವದೆಹಲಿ/ಜೈಪುರ: ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್‌ ಅವರಿಗೆ ವಿಧಾನಸಭೆಯಲ್ಲಿ ಬಹುಮತ ಇದೆ. ಅಗತ್ಯಬಿದ್ದರೆ ವಿಶ್ವಾಸಮತ ಯಾಚನೆಗೆ ಸಿದ್ಧ ಎಂದು ಕಾಂಗ್ರೆಸ್ ಭಾನುವಾರ ಹೇಳಿಕೊಂಡಿದೆ.

‘ಅಗತ್ಯವೆನಿಸಿದರೆ, ವಿಶ್ವಾಸಮತ ಯಾಚನೆ ಕುರಿತು ಮುಖ್ಯಮಂತ್ರಿ ನಿರ್ಧರಿಸುತ್ತಾರೆ’ ಎಂದು ಕಾಂಗ್ರೆಸ್ ಮುಖಂಡ ಅಜಯ್ ಮಾಕನ್ ಹೇಳಿದ್ದಾರೆ.

ಉಪಮುಖ್ಯಮಂತ್ರಿಯಾಗಿದ್ದ ಸಚಿನ್ ಪೈಲಟ್ ಅವರಿಂದ ಬಂಡಾಯ ಎದುರಿಸುತ್ತಿರುವ ಗೆಹ್ಲೋಟ್, ತಮ್ಮ ಪಟ್ಟುಗಳನ್ನು ಬಿಗಿಗೊಳಿಸುತ್ತಿದ್ದಾರೆ. ಪ್ರಾದೇಶಿಕ ಪಕ್ಷದ ಇಬ್ಬರು ಶಾಸಕರ ಬೆಂಬಲ ಪಡೆದಿರುವ ಅವರು, ಬಂಡಾಯ ಶಾಸಕರನ್ನು ಸೆಳೆಯಲು ತಂತ್ರ ಹೆಣೆದಿದ್ದಾರೆ. ಶನಿವಾರ ರಾಜ್ಯಪಾಲರನ್ನು ಭೇಟಿ ಮಾಡಿದ್ದ ಗೆಹ್ಲೋಟ್ ಭಾರತೀಯ ಬುಡಕಟ್ಟು ಪಕ್ಷದ (ಬಿಟಿಪಿ) ಇಬ್ಬರು ಶಾಸಕರ ಬೆಂಬಲ ಪತ್ರವನ್ನು ಅವರಿಗೆ ಸಲ್ಲಿಸಿದರು.

ಪೈಲಟ್ ಗುಂಪಿನ ಕನಿಷ್ಠ ಇಬ್ಬರು ಶಾಸಕರು (ಗಜೇಂದ್ರಸಿಂಗ್, ಬ್ರಿಜೇಂದ್ರ ಓಲಾ) ಗೆಹ್ಲೋಟ್ ಬಣಕ್ಕೆ ಮರಳುವ ಮನಸ್ಸು ಹೊಂದಿದ್ದಾರೆ ಎಂಬುದು ಮುಖ್ಯಮಂತ್ರಿ ಪಾಳಯದಲ್ಲಿ ನೆಮ್ಮದಿ ಮೂಡಿಸಿದೆ.ಹೀಗಾಗಿ ಬುಧವಾರವೇ ರಾಜಸ್ಥಾನ ವಿಧಾನಸಭೆಯ ಅಧಿವೇಶನ ಕರೆದು, ಸಂಖ್ಯಾಬಲ ಪ್ರದರ್ಶಿಸಲು ಕಾಂಗ್ರೆಸ್ ಯೋಜನೆ ಹಾಕಿಕೊಂಡಿದೆ.

ರಾಜೀನಾಮೆಗೆ ಪಟ್ಟು:ರಾಜಸ್ಥಾನದ ಕಾಂಗ್ರೆಸ್ ಸರ್ಕಾರ ಪತನಗೊಳಿಸುವ ಸಂಚಿನಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿರುವ ಕೇಂದ್ರ ಸಚಿವ ಗಜೇಂದ್ರ ಸಿಂಗ್‌ ಶೇಖಾವತ್ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್‌ ಭಾನುವಾರ ಒತ್ತಾಯಿಸಿದೆ.

ಕೇಂದ್ರ ಸಚಿವರಾಗಿ ಮುಂದುವರಿಯಲು ಶೇಖಾವತ್‌ಗೆ‌ ನೈತಿಕತೆಯಿಲ್ಲ. ತನಿಖೆಯಲ್ಲಿ ಪ್ರಭಾವ ಬೀರುವ ಸಾಧ್ಯತೆ ಇರುವುದರಿಂದ ಅವರು ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್‌ ಆಗ್ರಹಿಸಿದೆ.

ಕಿಂಗ್‌ಮೇಕರ್ಬಿಟಿಪಿ

ಭಾರತೀಯ ಬುಡಕಟ್ಟು ಪಕ್ಷ (ಬಿಟಿಪಿ) ತನ್ನನ್ನು ಕಿಂಗ್‌ ಮೇಕರ್‌ ಎಂದು ಭಾನುವಾರ ಹೇಳಿಕೊಂಡಿದೆ. ‘200 ಸದಸ್ಯ ಬಲದ ರಾಜಸ್ಥಾನ ವಿಧಾನಸಭೆಯಲ್ಲಿ ನಮ್ಮ ಪಕ್ಷದ ಇಬ್ಬರು ಶಾಸಕರಿದ್ದಾರೆ. ಆದರೆ ನಾವೇ ಕಿಂಗ್‌ಮೇಕರ್ ಸ್ಥಾನದಲ್ಲಿದ್ದೇವೆ. ಸದನದಲ್ಲಿ ಇದು ಕಡಿಮೆ ಸಂಖ್ಯೆ ಎನಿಸಿದರೂ, ಬಿಟಿಪಿ ದೊಡ್ಡ ಶಕ್ತಿ ಹೊಂದಿದೆ’ ಎಂದು ಪಕ್ಷದ ಅಧ್ಯಕ್ಷ ಮಹೇಶ್‌ಭಾಯ್ ಸಿ. ವಾಸವ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT