ಶುಕ್ರವಾರ, ಆಗಸ್ಟ್ 7, 2020
28 °C

ಆ್ಯಪ್‌ ನಂತರ ಈಗ ಚೀನಾದ ವಿದ್ಯುತ್ ಉಪಕರಣಗಳ ಮೇಲೆ ಭಾರತ ನಿರ್ಬಂಧ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಚೀನಾದೊಂದಿಗಿನ ಗಡಿ ವಿವಾದದ ಹಿನ್ನೆಲೆಯಲ್ಲಿ ಆ ದೇಶದ 59 ಮೊಬೈಲ್‌ ಅಪ್ಲಿಕೇಷನ್‌ಗಳನ್ನು ನಿಷೇಧಿಸಿದ್ದ ಭಾರತ, ಈಗ ಚೀನಾದ ವಿದ್ಯುತ್ ಉಪಕರಣಗಳಿಗೂ ನಿಷೇಧ ಹೇರಿದೆ.

ಚೀನಾದಿಂದ ವಿದ್ಯುತ್‌ ಉಪಕರಣಗಳನ್ನು ಇನ್ನು ಮುಂದೆ ಭಾರತ ಆಮದು ಮಾಡಿಕೊಳ್ಳುವುದಿಲ್ಲ ಎಂದು ಇಂಧನ ಸಚಿವ ಆರ್. ಕೆ. ಸಿಂಗ್ ಶುಕ್ರವಾರ ಹೇಳಿದ್ದಾರೆ.

ವಿಡಿಯೊ ಕಾನ್ಫರೆನ್ಸ್‌ ಮೂಲಕ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಚೀನಾ ಮತ್ತು ಪಾಕಿಸ್ತಾನದ ಉಪಕರಣಗಳ ಆಮದನ್ನು ನಿರ್ಬಂಧಿಸಲಾಗಿದೆ. ಉಪಕರಣಗಳನ್ನು ಪೂರೈಸಲು ಚೀನಾದ ಸಂಸ್ಥೆಗಳಿಗೆ ರಾಜ್ಯದ ‘ಡಿಸ್ಕಾಮ್‌’ (ರಾಜ್ಯಗಳ ವಿದ್ಯುತ್‌ ಪ್ರಸರಣಾ ಇಲಾಖೆಗಳು) ಆರ್ಡರ್‌ಗಳನ್ನೂ ಸಲ್ಲಿಸಬಾರದು,’ ಎಂದು ಅವರು ತಿಳಿಸಿದರು.

‘ನಾವು ಇಲ್ಲಿ ಎಲ್ಲವನ್ನೂ ತಯಾರಿಸುತ್ತೇವೆ. ಆದರೆ, ಭಾರತವು ಚೀನಾದಿಂದ ₹21,000 ಕೋಟಿ ರೂ. ಮೌಲ್ಯದ ಉಪಕರಣಗಳನ್ನೂ ಸೇರಿದಂತೆ ಒಟ್ಟಾರೆ ₹71,000 ಕೋಟಿ ರೂ. ಮೌಲ್ಯದ ವಿದ್ಯುತ್ ಉಪಕರಣಗಳನ್ನು ಆಮದು ಮಾಡಿಕೊಳ್ಳುತ್ತಿದೆ,’ ಎಂದು ಸಿಂಗ್ ಅವರು ಮಾಹಿತಿ ನೀಡಿದರು.

‘ಇಷ್ಟು ದೊಡ್ಡ ಪ್ರಮಾಣದ ವಿದ್ಯುತ್‌ ಉಪಕರಣಗಳು ದೇಶವನ್ನು ಆಕ್ರಮಿಸಿಕೊಳ್ಳುತ್ತಿದೆ ಎಂದರೆ ಒಂದು ದೇಶವಾಗಿ ನಾವು ಸಹಿಸಲಾಗದು. ನಾವು ಚೀನಾ ಮತ್ತು ಪಾಕಿಸ್ತಾನದಿಂದ ಏನನ್ನೂ ಪಡೆಯದಿರಲು ನಿರ್ಧರಿಸಿದ್ದೇವೆ. ಚೀನಾದ ವಸ್ತುಗಳು ನಮ್ಮ ಮೇಲೆ ಪರಿಣಾಮ ಬೀರಿವೆ. ಅವುಗಳಲ್ಲಿ ‘ಮಾಲ್ವೇರ್‌ಗಳ ಅಥವಾ ಟ್ರೋಜನ್ ಹಾರ್ಸ್‌ಗಳು (ಸಾಫ್ಟ್‌ವೇರ್‌ ವ್ಯವಸ್ಥೆಯನ್ನು ಹಾಳು ಮಾಡಬಹುದಾದ ವೈರಸ್‌ಗಳು)’ ಇರುವ ಸಾಧ್ಯತೆಗಳಿವೆ. ಅವುಗಳನ್ನು ದೂರದಿಂದಲೇ ಚಾಲು ಮಾಡಲು ಸಾಧ್ಯವಿದೆ. ಈ ಮೂಲಕ ನಮ್ಮ ವಿದ್ಯುತ್ ವ್ಯವಸ್ಥೆಗಳನ್ನು ದುರ್ಬಲಗೊಳಿಸಲಾಗುತ್ತದೆ,’ ಎಂದು ಅವರು ತಿಳಿಸಿದರು.

‘ವಿದ್ಯುತ್‌ ಗೋಪುರಕ್ಕೆ ಬೇಕಾದ ಉಪಕರಣಗಳು, ಕಂಡಕ್ಟರ್‌ಗಳು, ಟ್ರಾನ್ಸ್‌ಫಾರ್ಮರ್‌ಗಳು ಮತ್ತು ಮೀಟರ್‌ಗಳ ಕೆಲವು ಭಾಗಗಳನ್ನು ಸದ್ಯ ಭಾರತ ಆಮದು ಮಾಡಿಕೊಳ್ಳುತ್ತಿದೆ. ಇವುಗಳನ್ನು ಇಲ್ಲಿಯೇ ತಯಾರಿಸಲಾಗುತ್ತದೆ. ಅವುಗಳೆಲ್ಲವೂ ಇಲ್ಲಿಯೇ ಲಭ್ಯವಿವೆ,’ ಎಂದು ಶರ್ಮಾ ತಿಳಿಸಿದರು.

‘ರಾಜ್ಯಗಳ ಡಿಸ್ಕಾಮ್‌ಗಳು ಚೀನೀ ಕಂಪನಿಗಳಿಗೆ ಉಪಕರಣಕ್ಕಾಗಿ ಆರ್ಡರ್‌ ಮಾಡಬಾರದು ಎಂದು ನಾವು ವಿನಂತಿಸುತ್ತೇವೆ’ ಎಂದು ಅವರು ಹೇಳಿದರು.

ಸರ್ಕಾರವು ‘ಆತ್ಮ ನಿರ್ಭರ ಭಾರತ ಮಿಷಯನ್‌’ ಅನ್ನು ಘೋಷಿಸಿದೆ. ಇದರಂತೆ, ಚೀನಾದಿಂದ ಉಪಕರಣಗಳನ್ನು ಆಮದು ಮಾಡಿಕೊಳ್ಳದಿರಲು ನಿರ್ಧರಿಸಲಾಗಿದೆ. ಆಮದು ಮಾಡಿದ ಉಪಕರಣಗಳು ಪರಿಶೀಲನೆಗೆ ಒಳಪಡುತ್ತವೆ ಎಂದೂ ಸಿಂಗ್‌ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು