ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸರ ಹತ್ಯೆ ಪ್ರಕರಣ: ಬಿಕ್ರು ಗ್ರಾಮದಲ್ಲಿ ತನಿಖಾ ತಂಡದ ಪರಿಶೀಲನೆ

Last Updated 12 ಜುಲೈ 2020, 18:47 IST
ಅಕ್ಷರ ಗಾತ್ರ

ಕಾನ್ಪುರ: ಸಮೀಪದ ಬಿಕ್ರು ಗ್ರಾಮದಲ್ಲಿ ಕುಖ್ಯಾತ ರೌಡಿಶೀಟರ್ ವಿಕಾಸ್ ದುಬೆಯಿಂದಈಚೆಗೆ ನಡೆದಿದ್ದ ಎಂಟು ಪೊಲೀಸರ ಹತ್ಯೆಗೆ ಸ್ಥಳೀಯ ಪೊಲೀಸರ ಮೌನಸಮ್ಮತಿಯೂ ಕಾರಣವಾಗಿತ್ತು ಎಂಬ ಆರೋಪ ಕುರಿತಂತೆ ತನಿಖೆ ನಡೆಸುತ್ತಿರುವ ವಿಶೇಷ ತಂಡ ಭಾನುವಾರ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿತು.

ಉತ್ತರಪ್ರದೇಶದಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸಂಜಯ್‍ ಭೂಸರೆಡ್ಡಿ ನೇತೃತ‍್ವದ ವಿಶೇಷ ತಂಡ ಈ ಆರೋಪ ಕುರಿತಂತೆ ತನಿಖೆ ನಡೆಸುತ್ತಿದೆ. ಭೂಸರೆಡ್ಡಿ ಅವರ ಜೊತೆಗೆ ಡಿಜಿ ಹರಿರಾಂ ಮತ್ತು ಡಿಐಜಿ ರವೀಂದ್ರ ಗೌಡ್ ಅವರೂ ಭೇಟಿ ನೀಡಿದ್ದರು.

ಎಂಟು ಪೊಲೀಸರ ಹತ್ಯೆ ನಡೆದಿದ್ದ ಸ್ಥಳವನ್ನು ತಂಡ ಪರಿಶೀಲಿಸಿತು. ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಹಿರಿಯ ಪೊಲೀಸ್‍ ಅಧಿಕಾರಿಗಳಿಂದ ಪ್ರಕರಣದ ವಿವರ ಪಡೆಯಿತು. ಹತ್ಯೆಗೂ ಮೊದಲು ವಿಕಾಸದುಬೆಗೆ ಇತರೆ ಪ್ರಕರಣಗಳಲ್ಲಿ ದೊರೆತಿದ್ದ ಜಾಮೀನು ರದ್ದತಿಗೆ ಏಕೆ ಆದ್ಯತೆ ಮೇಲೆ ಕ್ರಮವಹಿಸಲಿಲ್ಲ ಎಂಬ ಬಗ್ಗೆಯೂ ತಂಡ ಮಾಹಿತಿ ಪಡೆಯಿತು.

ಹಲವು ಪ್ರಕರಣಗಳಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದ ನಂತರವೂ ದುಬೆ ತಂಡದ ಸದಸ್ಯರಿಗೆ ಶಸ್ತ್ರಾಸ್ತ್ರಗಳ ಲೈಸೆನ್ಸ್ ಸಿಕ್ಕಿದ್ದಾದರೂ ಹೇಗೆ ಎಂಬ ಬಗ್ಗೆಯೂ ತಂಡ ತನಿಖೆ ನಡೆಸುತ್ತಿದೆ ಎಂದು ಅಧಿಕಾರಿಗಳ ಮೂಲಗಳು ತಿಳಿಸಿವೆ.

ತನಿಖೆಗೆ ಏಕ ಸದಸ್ಯ ಆಯೋಗ
ಲಖನೌ ವರದಿ:
ಈ ಮಧ್ಯೆ, ಕಾನ್ಪುರದಲ್ಲಿ ನಡೆದ ಎಂಟು ಪೊಲೀಸರ ಹತ್ಯೆ ಮತ್ತು ಕುಖ್ಯಾತ ರೌಡಿಶೀಟರ್‌ ವಿಕಾಸ ದುಬೆ ಎನ್‍ಕೌಂಟರ್ ಪ್ರಕರಣದ ತನಿಖೆಗೆ ಉತ್ತರ ಪ್ರದೇಶ ಸರ್ಕಾರ ಏಕ ಸದಸ್ಯ ಆಯೋಗವನ್ನು ರಚಿಸಿದೆ.

ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಶಶಿಕಾಂತ್ ಅಗರವಾಲ್ ಆಯೋಗದ ನೇತೃತ್ವ ವಹಿಸಲಿದ್ದು, ಎರಡು ತಿಂಗಳ ಅವಧಿಯಲ್ಲಿ ವರದಿ ಸಲ್ಲಿಸಲು ಸೂಚನೆ ನೀಡಲಾಗಿದೆ ಎಂದು ಸರ್ಕಾರದ ಹೇಳಿಕೆ ತಿಳಿಸಿದೆ.

ಹೇಳಿಕೆಯ ಅನುಸಾರ, ಆಯೋಗವು ಪೊಲೀಸ್ ಇಲಾಖೆ ಮತ್ತು ಇತರೆ ಇಲಾಖೆಗಳಲ್ಲಿನ ಜನರೊಂದಿಗೆ ವಿಕಾಸ ದುಬೆಗೆ ಇದ್ದ ಸಂಪರ್ಕಗಳ ಕುರಿತೂ ಆಯೋಗ ತನಿಖೆ ನಡೆಸಲಿದೆ.

ಅಮಾನತುಗೊಂಡಿದ್ದ ಎಸ್‍ಐಯಿಂದ ರಕ್ಷಣೆ ಕೋರಿ ‘ಸುಪ್ರೀಂ’ಗೆ ಅರ್ಜಿ
ನವದೆಹಲಿ:‌
ದುಬೆಗೆ ಪ್ರಮುಖ ಮಾಹಿತಿ ಒದಗಿಸಿದ್ದ ಆರೋಪದ ಮೇಲೆ ಅಮಾನತಿಗೆ ಒಳಗಾಗಿ, ಸದ್ಯ ಬಂಧನದಲ್ಲಿರುವ ಪೊಲೀಸ್‍ ಅಧಿಕಾರಿ ಈಗ ರಕ್ಷಣೆ ಕೋರಿ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.

ದುಬೆ ಮತ್ತು ಆತನ ಸಹಚರರ ವಿರುದ್ಧ ನಡೆದಂತೆ ಎನ್‍ಕೌಂಟರ್‍ ನಡೆಯಬಹುದು ಎಂಬ ಅರ್ಜಿಯಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ. ಸಬ್‌ಇನ್‌ಸ್ಪೆಕ್ಟರ್‌ ಕೃಷ್ಣ ಕುಮಾರ್‌ ಶರ್ಮಾ ಪರವಾಗಿ ಅವರ ಪತ್ನಿ ಅರ್ಜಿ ಸಲ್ಲಿಸಿದ್ದು, ಕಾನೂನುಬಾಹಿರ ಮಾರ್ಗಗಳ ಮೂಲಕ ತನ್ನ ಪತಿಯನ್ನೂ ಇನ್ನಿಲ್ಲವಾಗಿಸಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಬಂಧಿಸಲು ಪೊಲೀಸರು ಬರುತ್ತಿದ್ದಾರೆ ಎಂಬ ಮಾಹಿತಿಯನ್ನು ದುಬೆಗೆ ರವಾನಿಸಿದ್ದ ಆರೋಪದ ಮೇಲೆ ಶರ್ಮಾ ಮತ್ತು ಇತರೆ ಮೂವರನ್ನು ಅಮಾನತುಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT