ಶನಿವಾರ, ಜುಲೈ 24, 2021
21 °C

ಕೋವಿಡ್ ಜತೆ ಡೆಂಗೆ ಕಾಟ, ಒಟ್ಟೊಟ್ಟಿಗೆ ಎರಡು ತಪಾಸಣೆ: ವಿಜ್ಞಾನಿಗಳ ಎಚ್ಚರಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಮುಂಗಾರು ಅವಧಿಯಲ್ಲಿ ಡೆಂಗೆ ಸೋಂಕು ಭಾರತದಾದ್ಯಂತ ಹರಡಲು ಸಜ್ಜಾಗಿದ್ದು, ಕೋವಿಡ್‌ನಿಂದ ಸಂಕಷ್ಟ ಎದುರಿಸುತ್ತಿರುವ ದೇಶದಲ್ಲಿ ಸೊಳ್ಳೆಯಿಂದ ಹಬ್ಬುವ ಸೋಂಕು ಇನ್ನಷ್ಟು ಬಿಕ್ಕಷ್ಟು ಸೃಷ್ಟಿಸಲಿದೆ. ಎರಡೂ ಸೋಂಕುಗಳನ್ನು ಎದುರಿಸಲು ದೇಶದ ಆರೋಗ್ಯ ವ್ಯವಸ್ಥೆಗೆ ಸಾಧ್ಯವಾಗ ದಿರಬಹುದು ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ. 

‘ಡೆಂಗೆ-ಕೋವಿಡ್-19’ ‍ಋತು ಎರಡು ವಿಭಿನ್ನ ರೋಗನಿರ್ಣಯ ಪರೀಕ್ಷೆಗಳನ್ನು ಒಳಗೊಳ್ಳುತ್ತದೆ. ಇವು ರೋಗಿಗಳ ಮೇಲೂ ಭಾರಿ ಒತ್ತಡವನ್ನು ಉಂಟು ಮಾಡಲಿವೆ. ಪ್ರತಿ ಸೋಂಕೂ ಇತರರನ್ನು ಇಕ್ಕಟ್ಟಿಗೆ ಸಿಲುಕಿಸಲಿದ್ದು, ಈ ಸಂಕೀರ್ಣ ಸ್ಥಿತಿಯು ಬಹುಶಃ ಇನ್ನಷ್ಟು ಹೆಚ್ಚು ಮಾರಕವಾಗಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. 

ವೈರಾಣುಶಾಸ್ತ್ರಜ್ಞ ಶಾಹೀದ್ ಜಮೀಲ್ ಅವರು 2016–19ರ ಅವಧಿಯ ದತ್ತಾಂಶಗಳನ್ನು ವಿಶ್ಲೇಷಿಸಿ, ಪ್ರತಿ ವರ್ಷ ದೇಶದಲ್ಲಿ 1ರಿಂದ 2 ಲಕ್ಷ ಡೆಂಗೆ ಪ್ರಕರಣಗಳು ವರದಿಯಾಗುತ್ತಿವೆ ಎಂದಿದ್ದಾರೆ. 

ಸೋಂಕು ರೋಗ ಹರಡುವಿಕೆ ತಡೆಯುವ ರಾಷ್ಟ್ರೀಯ ಕಾರ್ಯಕ್ರಮದ (ಎನ್‌ವಿಬಿಡಿಸಿಸಿ) ದತ್ತಾಂಶಗಳ ಪ್ರಕಾರ, 2019ರಲ್ಲಿ 1,36,422 ಡೆಂಗ್ಯೂ ಪ್ರಕರಣ ವರದಿಯಾಗಿದ್ದು, ಈ ಪೈಕಿ 132 ಜನರು ಮೃತಪಟ್ಟಿದ್ದಾರೆ.

‘ಈ ವೈರಸ್ ದಕ್ಷಿಣ ಭಾರತದಲ್ಲಿ ವರ್ಷ ಪೂರ್ತಿ ಹಾಗೂ ಉತ್ತರ ಭಾರತದಲ್ಲಿ ಮುಂಗಾರು ಅವಧಿ ಹಾಗೂ ಚಳಿಗಾಲದ ಆರಂಭದಲ್ಲಿ ಇರುತ್ತದೆ’ ಎಂದು ಜಮೀಲ್ ತಿಳಿಸಿದ್ದಾರೆ. 

ಕೋವಿಡ್ ಹಾಗೂ ಡೆಂಗೆ ಎರಡೂ ಸೋಂಕುಗಳಲ್ಲಿ ತೀವ್ರ ಜ್ವರ, ತಲೆನೋವು ಹಾಗೂ ಮೈಕೈನೋವು ಮೊದಲಾದ ಸಾಮಾನ್ಯ ರೋಗಲಕ್ಷಣಗಳು ಗೋಚರಿಸುತ್ತವೆ. ಎರಡೂ ಒಂದಕ್ಕೊಂದು ಪೂಕರವಾಗಿರುವು ದರಿಂದ ಡೆಂಗ್ಯೂ ಋತುವಿನಲ್ಲಿ ಕೋವಿಡ್ ಇನ್ನಷ್ಟು ಉಲ್ಬಣಿಸಬಹುದು ಎಂದು ಕೋಲ್ಕತ್ತದ ಎಮಿಟಿ ವಿಶ್ವವಿದ್ಯಾಲಯದ ವೈರಾಣುತಜ್ಞ ದೃಬಜ್ಯೋತಿ ಚಟ್ಟೋಪಾಧ್ಯಾಯ ತಿಳಿಸಿದ್ದಾರೆ.

‘ಈ ಪರಿಸ್ಥಿತಿ ತುಂಬಾ ನಿರ್ಣಾಯಕವಾಗಿರಲಿದೆ. ರೋಗ ಲಕ್ಷಣಗಳು ಒಂದನ್ನೊಂದು ಮೀರಿಸುತ್ತವೆ. ಏಕಕಾಲಕ್ಕೆ ಆಕ್ರಮಿಸುವ ಸೋಂಕುಗಳು ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸುತ್ತವೆ. ವ್ಯಕ್ತಿಯ ರೋಗನಿರೋಧಕ ವ್ಯವಸ್ಥೆಯನ್ನು ದುರ್ಬಲಗೊಳ್ಳುತ್ತದೆ ’ ಎಂದು ಅವರು ವಿವರಿಸಿದ್ದಾರೆ. 

‘ಪ್ರತಿ ಡೆಂಗೆ ಋತುವಿನಲ್ಲಿ ಆಸ್ಪತ್ರೆಗಳು ತುಂಬಿರುತ್ತವೆ. ಪರಿಸ್ಥಿತಿಯನ್ನು ನಿರ್ವಹಣೆ ಮಾಡುವುದೇ ಕಷ್ಟವಾಗಿರುತ್ತದೆ. ಪರಿಸ್ಥಿತಿ ಹೀಗಿರುವಾಗಿ ಒಟ್ಟೊಟ್ಟಿಗೆ ಎರಡೆರಡು ಸೋಂಕುಗಳನ್ನು ನಿಭಾಯಿಸುವುದಾದರೂ ಹೇಗೆ? ಎರಡೂ ಸೋಂಕುಗಳ ರೋಗಲಕ್ಷಣಗಳು ಒಂದೇ ಇವೆ. ರೋಗಿಯೊಬ್ಬರಿಗೆ ಕೋವಿಡ್ ಬಂದಿದೆಯೇ ಅಥವಾ ಡೆಂಗ್ಯೂ ಆವರಿಸಿದೆಯೇ ಎಂದು ಪ್ರತ್ಯೇಕಿಸಿ ನೋಡಲು ನಾವು ಸಜ್ಜಾಗಿದ್ದೇವೆಯೇ? ಎಂದು ವೈರಾಣುತಜ್ಞೆ ಉಪಾಸನಾ ರಾಯ್ ಪ್ರಶ್ನಿಸಿದ್ದಾರೆ.

ಡೆಂಗೆ ಋತು ಸಂಪೂರ್ಣವಾಗಿ ಆರಂಭವಾಗುವ ಮೊದಲು ತುರ್ತಾಗಿ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

***

ಈ ಬಗ್ಗೆ ಆಳವಾದ ಅಧ್ಯಯನ ನಡೆದಿಲ್ಲ. ದಕ್ಷಿಣ ಅಮೆರಿಕದಲ್ಲಿ ಲಭ್ಯವಿರುವ ಮಾಹಿತಿ ಪ್ರಕಾರ, ಇದು ಅಪಾಯಕಾರಿ. ಆರೋಗ್ಯ ಮೂಲಸೌಕರ್ಯಗಳಿಗೆ ಸವಾಲು

- ದೃಬಜ್ಯೋತಿ ಚಟ್ಟೋಪಾಧ್ಯಾಯ, ಎಮಿಟಿ ವಿಶ್ವವಿದ್ಯಾಲಯದ ವೈರಾಣುತಜ್ಞ

***

ಒಮ್ಮೆ ಡೆಂಗೆ ಋತು ಆರಂಭವಾದರೆ, ಸೋಂಕು ಆಕ್ರಮಣಕಾರಿಯಾಗಿ ಹರಡುತ್ತದೆ. ಜ್ವರ ಬಂದವರು ಡೆಂಗ್ಯೂ, ಕೋವಿಡ್ ಎರಡೂ ತಪಾಸಣೆಗೆ ಒಳಗಾಗಬೇಕಾಗುತ್ತದೆ

- ಉಪಾಸನಾ ರಾಯ್, ವೈರಾಣುತಜ್ಞೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು