ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಈಗಲೂ ಅಷ್ಟೇ ಅಪಾಯಕಾರಿ: ಮೋದಿ

Last Updated 26 ಜುಲೈ 2020, 22:29 IST
ಅಕ್ಷರ ಗಾತ್ರ

ನವದೆಹಲಿ : ‘ಕೊರೊನಾ ವೈರಸ್‌, ಆರಂಭದಲ್ಲಿ ಎಷ್ಟಿತ್ತೋ ಈಗಲೂ ಅಷ್ಟೇ ಅಪಾಯಕಾರಿಯಾಗಿದೆ. ನಾವು ಬಹಳ ಎಚ್ಚರದಿಂದ ಇದರ ವಿರುದ್ಧದ ಹೋರಾಟ ಮುಂದುವರಿಸಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದರು.

‘ಕೊರೊನಾ ಅಪಾಯವು ಸದ್ಯಕ್ಕೆ ದೂರವಾಗುವುದಿಲ್ಲ. ಕೆಲವು ಪ್ರದೇಶಗಳಲ್ಲಿ ಇದು ಹೆಚ್ಚಿನ ವೇಗದಲ್ಲಿ ಪಸರಿಸುತ್ತಿದೆ. ನಾವು ಇನ್ನೂ ಕೆಲ ಸಮಯದ ಕಾಲ ಅತಿ ಎಚ್ಚರದಿಂದ ಇರುವುದು ಅಗತ್ಯ. ಇತರ ಕೆಲವು ರಾಷ್ಟ್ರಗಳಿಗೆ ಹೋಲಿಸಿದರೆ ನಾವು ಉತ್ತಮ ಸ್ಥಿತಿಯಲ್ಲಿದ್ದೇವೆ. ನಮ್ಮಲ್ಲಿ ಸಾಯುವವರ ಪ್ರಮಾಣ ಕಡಿಮೆ ಇದೆ. ಲಕ್ಷಾಂತರ ಜೀವಗಳನ್ನು ಉಳಿಸುವಲ್ಲಿ ಭಾರತ ಯಶಸ್ವಿಯಾಗಿದೆ’ ಎಂದು ತಮ್ಮ ‘ಮನದ ಮಾತು’, ತಿಂಗಳ ಬಾನುಲಿ ಕಾರ್ಯಕ್ರಮದಲ್ಲಿ ಹೇಳಿದರು.

ಕೋವಿಡ್‌ ವಿರುದ್ಧದ ಹೋರಾಟದಲ್ಲಿ ಅನೇಕ ಗ್ರಾಮಗಳು, ಗ್ರಾಮ ಪಂಚಾಯಿತಿಗಳು ಹೊಸ ಹೊಸ ರಚನಾತ್ಮಕ ಹಾದಿಯಲ್ಲಿ ಇತರರಿಗೆ ನೆರವಾಗುತ್ತಿರುವುದನ್ನು ಉಲ್ಲೇಖಿಸಿದ ಮೋದಿ, ಕೋವಿಡ್‌ ಸಂಕಷ್ಟದ ಈ ಸಂದರ್ಭದಲ್ಲಿ ನಮ್ಮ ಗ್ರಾಮೀಣ ಪ್ರದೇಶಗಳು ಇಡೀ ದೇಶಕ್ಕೆ ದಾರಿದೀಪದಂತಿವೆ ಎಂದರು.

‘ಕಿರಿಕಿರಿ ಎನಿಸುತ್ತದೆ, ಸಂವಹನಕ್ಕೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಮಾತನಾಡುವಾಗ ಕೆಲವರು ಮಾಸ್ಕ್‌ಅನ್ನು ಬಾಯಿಯಿಂದ ಸರಿಸುವುದನ್ನು ಉಲ್ಲೇಖಿಸಿ, ‘ಯಾವಾಗ ಮಾಸ್ಕ್‌ ಅಗತ್ಯವೋ ಆ ಸಂದರ್ಭದಲ್ಲಿ ನಾವು ಅದನ್ನು ಸರಿಸಲು ಮುಂದಾಗುತ್ತೇವೆ. ಹೀಗೆ ಮಾಡುವುದಕ್ಕೂ ಮುನ್ನ, ಕೋವಿಡ್‌ ರೋಗಿಗಳ ಆರೈಕೆ ಮಾಡುವ ವೈದ್ಯರನ್ನು ಒಮ್ಮೆ ನೆನಪಿಸಿಕೊಳ್ಳಿ. ಹಲವು ಗಂಟೆಗಳ ಕಾಲ ಅವರು ಮಾಸ್ಕ್‌ ಧರಿಸಿರುತ್ತಾರೆ. ಕೆಲವೊಮ್ಮೆ ಎಂಟರಿಂದ ಹತ್ತು ಗಂಟೆಗಳ ಕಾಲ ನಿರಂತರವಾಗಿ ಮಾಸ್ಕ್‌ ಧರಿಸಿ, ಇತರರ ಜೀವ ಉಳಿಸಲು ಶ್ರಮಿಸುತ್ತಾರೆ. ಒಂದು ಕ್ಷಣವೂ ನಿರ್ಲಕ್ಷ್ಯ ತೋರದ ಇಂಥ ಕೊರೊನಾ ಯೋಧರ ಬಗ್ಗೆ ಒಮ್ಮೆ ಯೋಚಿಸಿ’ ಎಂದರು.

ಪಿಯುಸಿ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಿದ ವಿವಿಧ ರಾಜ್ಯಗಳ ವಿದ್ಯಾರ್ಥಿಗಳ ಜತೆಗೆ ಅವರು ದೂರವಾಣಿ ಸಂವಾದ ನಡೆಸಿದರು

ಗಡಿಯಲ್ಲಷ್ಟೇ ಯುದ್ಧ ಅಲ್ಲ...

ನವದೆಹಲಿ (ಪಿಟಿಐ) ‘ಯುದ್ಧ ಗಡಿಯಲ್ಲಷ್ಟೇ ನಡೆಯುವುದಿಲ್ಲ. ದೇಶದೊಳಗೆ ವಿವಿಧ ರೂಪಗಳಲ್ಲಿ ನಾವು ಶತ್ರುವಿನ ವಿರುದ್ಧ ಹೋರಾಡಬೇಕಾಗುತ್ತದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಜುಲೈ 26 ಕಾರ್ಗಿಲ್‌ ಯುದ್ಧದ 21ನೇ ವಿಜಯ ದಿವಸವೂ ಆಗಿರುವುದರಿಂದ ‘ಮನದ ಮಾತು’ ಕಾರ್ಯಕ್ರಮದಲ್ಲಿ ಸೈನಿಕರ ತ್ಯಾಗವನ್ನು ಸ್ಮರಿಸಿದ ಅವರು, ‘ಭಾರತವು ಸ್ನೇಹ ಹಸ್ತವನ್ನು ಚಾಚಿದರೆ, ಬೆನ್ನಿಗೆ ಚೂರಿ ಇರಿಯುವ ಮೂಲಕ ಪಾಕಿಸ್ತಾನವು ಪ್ರತಿಕ್ರಿಯೆ ನೀಡಿತ್ತು’ ಎಂದರು.

‘ಕೆಲವು ಸಂದರ್ಭದಲ್ಲಿ ವಿಚಾರದ ಗಂಭೀರತೆಯನ್ನು ಅರಿಯದೆಯೇ, ಜನರು ದೇಶಕ್ಕೆ ಅಪಾಯಕಾರಿಯಾಗಬಲ್ಲ ವಿಚಾರಗಳಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಬೆಂಬಲ ಸೂಚಿಸುತ್ತಿರುತ್ತಾರೆ. ನಾವು ವ್ಯಕ್ತಪಡಿಸುವ ಅಭಿಪ್ರಾಯವು, ಗಡಿಯಲ್ಲಿ ಹುತಾತ್ಮರಾಗುವ ಸೈನಿಕರ ಗೌರವಕ್ಕೆ ತಕ್ಕುದಾದದ್ದೇ ಎಂಬುದನ್ನು ಚಿಂತಿಸಬೇಕು’ ಎಂದರು. ಕಾರ್ಗಿಲ್‌ ಯುದ್ಧದ ಬಳಿಕ ಅಂದಿನ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು ಮಾಡಿದ್ದ ಭಾಷಣವನ್ನು ನೆನಪಿಸಿಕೊಂಡರು. ವೈರತ್ವವನ್ನು ಮುಂದುವರಿಸುವುದು ಕೆಲವರ ಸ್ವಭಾವ ಎಂದು ಚೀನಾದ ಹೆಸರು ಉಲ್ಲೇಖಿಸದೆಯೇ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT