ಭಾನುವಾರ, ಆಗಸ್ಟ್ 1, 2021
27 °C

ಸ್ಕಿಲ್, ರಿಸ್ಕಿಲ್, ಅಪ್‌ಸ್ಕಿಲ್: ಎಲ್ಲ ಸಮಯದಲ್ಲೂ ಪ್ರಸ್ತುತವಾಗಿರಲು ಮೋದಿ ಮಂತ್ರ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ನವದೆಹಲಿ: ಎಲ್ಲ ಸಮಯದಲ್ಲೂ ಪ್ರಸ್ತುತವಾಗಿರಲು ಕೌಶಲ ಬೆಳೆಸಿಕೊಳ್ಳುವುದು ಮುಖ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ವಿಶ್ವ ಯುವ ಕೌಶಲ ದಿನದ ಅಂಗವಾಗಿ ವಿಡಿಯೊ ಮೂಲಕ ದೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಉದ್ಯಮ ಮತ್ತು ಮಾರುಕಟ್ಟೆಗಳು ವೇಗವಾಗಿ ಬದಲಾಗುತ್ತಿರುವ ಈ ಸಂದರ್ಭದಲ್ಲಿ ಹೇಗೆ ಪ್ರಸ್ತುತತೆ ಉಳಿಸಿಕೊಳ್ಳಬೇಕು ಎಂದು ಜನ ನನ್ನ ಬಳಿ ಕೇಳುತ್ತಿರುತ್ತಾರೆ. ಕೊರೊನಾ ವೈರಸ್ ಸಾಂಕ್ರಾಮಿಕದ ಈ ಸಂದರ್ಭದಲ್ಲಿ ಇದು ಅನಿವಾರ್ಯವೂ ಹೌದು. ಇದಕ್ಕೆ ಸ್ಕಿಲ್, ರಿಸ್ಕಿಲ್, ಅಪ್‌ಸ್ಕಿಲ್ ಮಂತ್ರವೇ (ಕೌಶಲ ಹೊಂದುವುದು, ಹೊಸ ಕೌಶಲ ಬೆಳೆಸಿಕೊಳ್ಳುವುದು ಮತ್ತು ಕೌಶಲ ಅಭಿವೃದ್ಧಿಪಡಿಸಿಕೊಳ್ಳುವುದು) ಉತ್ತರ’ ಎಂದು ಹೇಳಿದ್ದಾರೆ.

‘ಕೌಶಲವು  ನಮಗೆ ನಾವೇ ಕೊಟ್ಟುಕೊಳ್ಳುವ ಉಡುಗೊರೆ. ಅದು ಅನುಭವ ಹೆಚ್ಚಿಸುತ್ತದೆ. ಕೌಶಲವು ಸಮಯರಹಿತವಾದದ್ದು ಮತ್ತು ಹೆಚ್ಚು ಸಮಯವಾಗುತ್ತಿದ್ದಂತೆ ಉತ್ತಮಗೊಳ್ಳುತ್ತಾ ಹೋಗುತ್ತದೆ. ಕೌಶಲ ಎಂಬುದು ವಿಶಿಷ್ಟವಾದದ್ದು. ಅದು ನಿಮ್ಮನ್ನು ಇತರರಿಗಿಂತ ಭಿನ್ನವಾಗಿ ರೂಪಿಸುತ್ತದೆ’ ಎಂದು ಮೋದಿ ಹೇಳಿದ್ದಾರೆ.

‘ವಿಶ್ವ ಯುವ ಕೌಶಲ ದಿನದ ಈ ಸಂದರ್ಭದಲ್ಲಿ ಯುವಕರಿಗೆ ಶುಭಾಶಯ ಕೋರುತ್ತೇನೆ. ಕೊರೊನಾ ಸಾಂಕ್ರಾಮಿಕದ ಈ ಕಾಲದಲ್ಲಿ ವೃತ್ತಿ ಸಂಸ್ಕೃತಿ ಬದಲಾಗುತ್ತಿದೆ. ಕೆಲಸದ ವಿಧಾನವೂ ಬದಲಾಗುತ್ತಿದೆ. ನಿರಂತರವಾಗಿ ಬದಲಾಗುತ್ತಿರುವ ಹೊಸ ತಂತ್ರಜ್ಞಾನದ ಮೇಲೂ ಪರಿಣಾಮವಾಗಿದೆ. ಆದರೆ, ಯುವಕರು ಹೊಸ ಕೌಶಲಗಳನ್ನು ಬೆಳೆಸಿಕೊಂಡು ಬದಲಾಗುತ್ತಿದ್ದಾರೆ’ ಎಂದು ಪ್ರಧಾನಿ ಹೇಳಿದ್ದಾರೆ.

‘ಕೆಲವು ಜನ ಯಾವಾಗಲೂ ಜ್ಞಾನ ಮತ್ತು ಕೌಶಲದ ನಡುವೆ ಗೊಂದಲ ಮಾಡಿಕೊಳ್ಳುತ್ತಾರೆ. ಅಂತಹವರಿಗೆ ನಾನು ಹೇಳುವುದು ಇಷ್ಟೇ; ನೀವು ಪುಸ್ತಕ ಓದುವ ಮೂಲಕ ಅಥವಾ ಅಂತರ್ಜಾಲದಲ್ಲಿ ನೋಡುವ ಮೂಲಕ ಸೈಕಲ್ ರೈಡ್ ಹೇಗೆ ಮಾಡಬೇಕು ಎಂಬುದನ್ನು ತಿಳಿಯಬಹುದು. ಇದು ಜ್ಞಾನ. ಆದರೆ ಇದು ನಿಮಗೆ ಸೈಕಲ್ ತುಳಿಯಲು ಧೈರ್ಯ ನೀಡುವುದಿಲ್ಲ. ನಿಜವಾಗಿ ನೀವು ಸೈಕಲ್ ತುಳಿಯಬೇಕಿದ್ದರೆ ಕೌಶಲ ಬೇಕು’ ಎಂದು ಅವರು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು