ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಸಿಯುತ್ತಿದೆಯೇ ಟ್ರಂಪ್‌ ಜನಪ್ರಿಯತೆ? 2020ರಲ್ಲಿ ಗೆಲುವು ಕಠಿಣವೇ?

Last Updated 8 ಜೂನ್ 2020, 19:30 IST
ಅಕ್ಷರ ಗಾತ್ರ

ಮಾಂಟ್‌ಕ್ಲೇರ್‌ (ಅಮೆರಿಕ): ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಜನಪ್ರಿಯತೆಯು ಕಳೆದ ವಾರಾಂತ್ಯದಲ್ಲಿ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಅಮೆರಿಕದಲ್ಲಿ ಇತ್ತೀಚೆಗೆ ನಡೆಸಿದ ಸಮೀಕ್ಷೆಯ ಪ್ರಕಾರ ಹತ್ತರಲ್ಲಿ ಎಂಟು ಮಂದಿ, ‘ದೇಶವು ತಪ್ಪು ಹಾದಿಯಲ್ಲಿ ಸಾಗುತ್ತಿದೆ, ಪರಿಸ್ಥಿತಿ ಕೈಮೀರುತ್ತಿದೆ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವಾರಾಂತ್ಯದಲ್ಲಿ ಬಿಡುಗಡೆಯಾಗಿದ್ದ ಉದ್ಯೋಗ ವರದಿಯು ನಿರೀಕ್ಷೆಗಿಂತ ಉತ್ತಮವಾಗಿತ್ತು. ಇದರಿಂದ ಟ್ರಂಪ್ ಸ್ವಲ್ಪ ಉತ್ತೇಜಿತರಾಗಿದ್ದರು. ಆದರೆ, ಕೊರೊನಾ ವೈರಸ್‌ ವಿಚಾರ, ಅದರಿಂದಾಗಿ ಉಂಟಾಗಿರುವ ಆರ್ಥಿಕ ಕುಸಿತ, ರಾಷ್ಟ್ರದಾದ್ಯಂತ ನಡೆಯುತ್ತಿರುವ ಪ್ರತಿಭಟನೆ ಮುಂತಾದವುಗಳನ್ನು ನಿಭಾಯಿಸುವಲ್ಲಿ ಹೆಣಗಾಡುತ್ತಿದ್ದಾರೆ.

ಅಮೆರಿಕದ ಅಧ್ಯಕ್ಷ ಸ್ಥಾನಕ್ಕೆ ಡೆಮಾಕ್ರಟಿಕ್‌ ಪಕ್ಷದ‌ ಅಭ್ಯರ್ಥಿಯಾಗಿ ಜೋ ಬಿಡನ್‌ ಹೊರಹೊಮ್ಮಿದ್ದಾರೆ. ಅವರು ಪ್ರಚಾರವನ್ನೂ ಆರಂಭಿಸಿದ್ದಾರೆ. ಆದರೆ, 2020ರ ಚುನಾವಣೆಯು ಆಡಳಿತ ಮತ್ತು ರಾಷ್ಟ್ರೀಯ ಬಿಕ್ಕಟ್ಟನ್ನು ಕೇಂದ್ರೀಕರಿಸುವ ಬದಲು, ಟ್ರಂಪ್‌ ಅವರನ್ನೇ ಕೇಂದ್ರೀಕರಿಸುವಂತೆ ಕಂಡುಬರುತ್ತಿದೆ. ಚುನಾವಣೆಗೆ ಇನ್ನು ಐದು ತಿಂಗಳು ಇರುವಂತೆಯೇ ಜನಪ್ರಿಯತೆಯಲ್ಲಿ ಪ್ರತಿಸ್ಪರ್ಧಿ ಬಿಡನ್‌ ಅವರಿಗಿಂತ ಹಿಂದೆ ಸರಿದಿದ್ದ ಟ್ರಂಪ್‌ ಅವರಿಗೆ, ಕಳೆದ ವಾರ ಬಿಡುಗಡೆಯಾಗಿದ್ದ ಉದ್ಯೋಗ ವರದಿಯು ಬಹಳ ಮಹತ್ವದ್ದಾಗಿತ್ತು.

‘ಟ್ರಂಪ್‌ ಅವರು ಸಂವಿಧಾನವನ್ನು ಉಲ್ಲಂಘಿಸುತ್ತಿದ್ದಾರೆ ಮತ್ತು ವಿನಾಕಾರಣ ಅಮೆರಿಕನ್ನರನ್ನು ವಿಭಜಿಸುತ್ತಿದ್ದಾರೆ’ ಎಂದು ಮಾಜಿ ರಕ್ಷಣಾ ಕಾರ್ಯದರ್ಶಿ ಕಳೆದ ವಾರ ಆರೋಪಿಸಿದ್ದರು. ಈ ಹೇಳಿಯನ್ನು ಟ್ರಂಪ್‌ ಆಡಳಿತದ ಮಾಜಿ ಮುಖ್ಯಸ್ಥರೂ ಬೆಂಬಲಿಸಿದ್ದರು. ಸಾಲದೆಂಬಂತೆ, ‘ದೇಶವು ತಪ್ಪು ಹಾದಿಯಲ್ಲಿದೆ, ನಿಯಂತ್ರಣ ಮೀರುತ್ತಿದೆ ಎಂದು ಶೇ 80ರಷ್ಟು ಮಂದಿ ಅಮೆರಿಕನ್ನರು ಭಾವಿಸಿದ್ದಾರೆ ಎಂಬುದು ಸಮೀಕ್ಷೆಯಿಂದ ತಿಳಿದು ಬಂದಿದೆ’ ಎಂಬ ವರದಿಯನ್ನು ವಾಲ್‌ಸ್ಟ್ರೀಟ್‌ ಜರ್ನಲ್‌ ಹಾಗೂ ಬಿಬಿಸಿ ನ್ಯೂಸ್‌ ಪ್ರಕಟಿಸಿದ್ದವು.

‘ಪರಿಸ್ಥಿತಿ ಗಂಭೀರವಾಗಿದೆ’ ಎಂಬುದನ್ನು ಟ್ರಂಪ್‌ ಅವರ ಪ್ರಚಾರ ಕಾರ್ಯವನ್ನು ನೋಡಿಕೊಳ್ಳುತ್ತಿರುವ ಅವರ ಸಮೀಪವರ್ತಿಗಳು ಖಾಸಗಿಯಾಗಿ ಒಪ್ಪುತ್ತಾರೆ. ಜತೆಗೆ, ಅರ್ಥವ್ಯವಸ್ಥೆಯು ಚೇತರಿಸಿದರೆ ಮತ್ತು ನಿರುದ್ಯೋಗ ಸಮಸ್ಯೆ ಇಳಿಕೆಯಾದರೆ ‘ದೇಶ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ’ ಎಂದು ಮತದಾರರಲ್ಲಿ ವಿಶ್ವಾಸ ಮೂಡಿಸಲು ಸಾಧ್ಯ ಎಂದು ಅವರು ಹೇಳುತ್ತಾರೆ. ಪೊಲೀಸರ ಕ್ರೌರ್ಯದ ಬಗ್ಗೆ ವ್ಯಾಪಕ ಚರ್ಚೆಯಾಗುತ್ತಿರುವುದು ಮತ್ತು ಕೊರೊನಾ ಸೋಂಕು ನಿಯಂತ್ರಣಕ್ಕೆ ಬಾರದಿರುವುದು ಟ್ರಂಪ್‌ ಅವರ ಚುನಾವಣಾ ಹಾದಿಯಲ್ಲಿ ಮುಳ್ಳಾಗುವ ಸಾಧ್ಯತೆ ಇದೆ.

ಪೊಲೀಸ್‌ ಕ್ರೌರ್ಯಕ್ಕೆ ಬಲಿಯಾದ ಜಾರ್ಜ್‌ ಫ್ಲಾಯ್ಡ್‌ ಬಗ್ಗೆ ಟ್ರಂಪ್‌ ಹಲವು ಬಾರಿ ಗೌರವದ ಮಾತುಗಳನ್ನಾಡಿದ್ದಾರೆ. ಆದರೆ, ಹಲವು ಬಾರಿ ಅವರು ಆಡಿರುವ ಜನಾಂಗೀಯ ನಿಂದನೆಯ ಮಾತುಗಳು, ಕಪ್ಪು ವರ್ಣೀಯರನ್ನು ಕುರಿತ ಅವರ ಕಾಳಜಿಯ ಬಗ್ಗೆ ಸಂದೇಹ ಮೂಡುವಂತೆ ಮಾಡಿವೆ.

ಕಳೆದ ವಾರ ಟ್ರಂಪ್‌ ಅವರ ಟ್ವೀಟ್‌ ಒಂದಕ್ಕೆ ಪ್ರತಿಕ್ರಿಯಿಸಿದ್ದ ಅವರ ಬೆಂಬಲಿಗರೊಬ್ಬರು, ‘ಫ್ಲಾಯ್ಡ್‌ನನ್ನು ಹುತಾತ್ಮ ಎಂಬಂತೆ ಬಿಂಬಿಸುವುದು ಸರಿಕಾಣಿಸುವುದಿಲ್ಲ’ ಎಂದಿದ್ದರು. ಅಷ್ಟೇ ಅಲ್ಲ, ಪ್ರತಿಭಟನಕಾರರು ನಡೆಸುತ್ತಿರುವ ದಾಂದಲೆ, ಹಿಂಸಾಚಾರಗಳನ್ನು ಬಾರಿಬಾರಿ ಟೀಕಿಸಿ, ಅವರನ್ನು ‘ಕೊಲೆಗಡುಕರು’ ಎಂದು ಜರೆದಿದ್ದರು. ರಾಷ್ಟ್ರಗೀತೆಗೆ ಗೌರವ ಸೂಚಿಸದೆ, ಮಂಡಿಯೂರಿ ಪ್ರತಿಭಟನಕಾರರಿಗೆ ಬೆಂಬಲ ಸೂಚಿಸಿದ್ದ ಕಪ್ಪುವರ್ಣೀಯ ಕ್ರೀಡಾಪಟುವನ್ನೂ ಅವರು ಟೀಕಿಸಿದ್ದರು.

ಜನರಲ್ಲಿ ಉದ್ವಿಗ್ನತೆ ಸೃಷ್ಟಿಸಲು ಜನಾಂಗೀಯ ನಿಂದನೆಯ ಮಾತುಗಳನ್ನಾಡುವುದು ಟ್ರಂಪ್‌ ಅವರ ರಾಜಕೀಯದ ಲಕ್ಷಣವಾಗಿದೆ. ಹಿಂದಿನ ಅಧ್ಯಕ್ಷ ಬರಾಕ್‌ ಒಬಾಮ ಅವರ ಜನನ ಪ್ರಮಾಣಪತ್ರದ ಬಗ್ಗೆ ಪ್ರಶ್ನೆಗಳನ್ನು ಎತ್ತುವ ಮೂಲಕ ಟ್ರಂಪ್‌ ಇದನ್ನು ಆರಂಭಿಸಿದ್ದರು. 2016ರಲ್ಲಿ ಈ ತಂತ್ರ ಟ್ರಂಪ್‌ ಪರವಾಗಿ ಕೆಲಸ ಮಾಡಿತ್ತು.

ಎರಡನೇ ಬಾರಿಯೂಆ ತಂತ್ರ ಫಲ ನೀಡುವುದೇ ಎಂಬುದು ಪ್ರಶ್ನೆಯಾಗಿದೆ. ‘ಟ್ರಂಪ್‌ ಅವರನ್ನು ಬೆಂಬಲಿಸುತ್ತಿದ್ದ ಶ್ವೇತವರ್ಣೀಯರು, ಬಿಡನ್‌ ಅವರತ್ತ ವಾಲುತ್ತಿದ್ದಾರೆ’ ಎಂಬುದು ಅಮೆರಿಕದಲ್ಲಿ ಪ್ರತಿಭಟನೆಗಳು ಆರಂಭವಾಗುವುದಕ್ಕೂ ಮುನ್ನ ನಡೆಸಿದ್ದ ಸಮೀಕ್ಷೆಗಳಲ್ಲಿ ಕಂಡುಬಂದಿತ್ತು.

ಗೃಹನಿರ್ಮಾಣ, ಶಿಕ್ಷಣ ಮುಂತಾದ ವಿಚಾರಗಳಿಗೆ ಸಂಬಂಧಿಸಿದಂತೆ ತಮ್ಮ ಆರ್ಥಿಕ ನೀತಿಯನ್ನು ಈ ವಾರದಲ್ಲಿ ಘೋಷಿಸುವುದಾಗಿ ಬಿಡನ್‌ ಹೇಳಿದ್ದರು. ಆಡಳಿತಕ್ಕೆ ಸಂಬಂಧಿಸಿದಂತೆ ಬಿಡನ್‌ ಅವರ ಯೋಜನೆಗಳೇನು ಎಂದು ತಿಳಿಯಲು ಅಮೆರಿಕದ ರಾಜಕೀಯ ವಲಯ ಉತ್ಸುಕವಾಗಿದೆ. ಆದರೆ ತಾವೇ ವಿಧಿಸಿದ್ದ ಗಡುವನ್ನ ಮೀರುವುದು ಬಿಡನ್‌ ಅವರ ಹವ್ಯಾಸ.

ಡೆಮಾಕ್ರೆಟರನ್ನು ಬೆಂಬಲಿಸುವ ಪ್ರಗತಿಪರರಿಗೆ ‘ಮಧ್ಯಮ ಮಾರ್ಗ’ದ ಬಿಡನ್‌ ಇಷ್ಟದ ಅಭ್ಯರ್ಥಿ ಅಲ್ಲದಿದ್ದರೂ, ಬರ್ನಿ ಸ್ಯಾಂಡರ್ಸ್‌ ಹಾಗೂ ಎಲಿಜಬೆತ್‌ ವಾರೆನ್‌ ಅವರ ಸೋಲಿನ ನಂತರ ಒಲ್ಲದ ಮನಸ್ಸಿನಿಂದ ಬಿಡನ್‌ ಅವರನ್ನು ಬೆಂಬಲಿಸುತ್ತಿದ್ದಾರೆ.

ಟ್ರಂಪ್‌ ಅವರು ಡೆಮಾಕ್ರೆಟರನ್ನು ಒಗ್ಗೂಡಿಸುವ ಏಕೈಕ ಶಕ್ತಿಯಾಗಲಿದ್ದಾರೆ. ಆದರೆ, ಮಧ್ಯಮ ಮಾರ್ಗದತ್ತ ವಾಲಿರುವ ಕಾರಣಕ್ಕೆ ದೂರ ಸರಿದಿರುವ ಡೆಮಾಕ್ರೆಟ್‌ ಬೆಂಬಲಿಗರಲ್ಲಿ ಬಿಡನ್‌ ಅವರು ವಿಶ್ವಾಸ ತುಂಬಬಲ್ಲರೇ ಎಂಬುದು ಪ್ರಶ್ನೆಯಾಗಿದೆ.‌

ಕಳೆದ ವಾರ ಬಿಡನ್‌ ಅವರು ನಾಲ್ಕು ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡರು. ಆದರೆ ಟ್ರಂಪ್‌ ಬಾರಿಬಾರಿ ಜನರ ಮುಂದೆ ಕಾಣಿಸಿಕೊಂಡರು. ಟ್ರಂಪ್‌ ಅವರ ಮೈನೆ ಭೇಟಿಯು ಚುನಾವಣಾ ರ್‍ಯಾಲಿಗೆ ಕಡಿಮೆ ಇರಲಿಲ್ಲ.

ಆರೋಗ್ಯ ಸಮಸ್ಯೆಗಳ ಹೊರತಾಗಿಯೂ ಬಿಡನ್‌ ಅವರು ಈ ವಾರದಲ್ಲಿ ಕೆಲವು ಪ್ರವಾಸ ಯೋಜನೆ ಹಾಕಿಕೊಂಡಿದ್ದಾರೆ. ಟ್ರಂಪ್‌ ಅವರೂ ಕೆಲವು ಯೋಜನೆಗಳನ್ನು ರೂಪಿಸಿದ್ದಾರೆ. ಕೊರೊನಾ ಸೋಂಕಿಗೆ ಪ್ರತಿ ದಿನವೂ ಸಾವಿರಾರು ಮಂದಿ ಒಳಗಾಗುತ್ತಿರುವುದರ ನಡುವೆಯೂ ಚುನಾವಣಾ ಪ್ರಚಾರವು ಹೊಸ ಹಾದಿ ಹಿಡಿಯುತ್ತಿದೆ ಎಂಬುದರ ಸ್ಪಷ್ಟ ಸೂಚನೆ ಇದಾಗಿದೆ. ಇಬ್ಬರು ಅಭ್ಯರ್ಥಿಗಳೂ 70 ವರ್ಷ ವಯಸ್ಸು ಮೀರಿದವರಾಗಿದ್ದು, ಸೋಂಕಿಗೊಳಗಾಗುವ ಅಪಾಯವಿದೆ ಎಂಬುದನ್ನು ಇಲ್ಲಿ ನೆನಪಿಡಬೇಕಾಗಿದೆ.

‘ಸಾಮಾಜಿಕ ಅಶಾಂತಿ ಹಾಗೂ ಆರೋಗ್ಯ ಕ್ಷೇತ್ರದ ಬಿಕ್ಕಟ್ಟಿನಿಂದ ಉಂಟಾಗಿರುವ ಸ್ಥಿತಿಯನ್ನು ನಿರ್ವಹಿಸಲು ಟ್ರಂಪ್‌ ಹೆಣಗಾಡುತ್ತಿರಬಹುದು. ಆದರೆ, ಅವರ ಮರು ಆಯ್ಕೆಯಲ್ಲಿ ದೇಶದ ಅರ್ಥವ್ಯವಸ್ಥೆಗಿಂತ ಮಹತ್ವದ ವಿಚಾರ ಬೇೆರೆ ಇಲ್ಲ’ ಎಂದು ಟ್ರಂಪ್‌ ಪರ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರು ಹೇಳುತ್ತಿದ್ದಾರೆ.

‘ಜನಪ್ರಿಯತೆಯಲ್ಲಿ ಆಗಿರುವ ಕುಸಿತದಿಂದ ಮೇಲೆ ಬರಲು ನಿರುದ್ಯೋಗ ಪ್ರಮಾಣವು ಕೊರೊನಾ ಪೂರ್ವದ ಸ್ಥಿತಿಗೆ ಬರುವುದು ಟ್ರಂಪ್‌ ಅವರಿಗೆ ಅತ್ಯಗತ್ಯವೇನೂ ಅಲ್ಲ. ಬದಲಿಗೆ, ದೇಶವು ಸರಿಯಾದ ದಿಕ್ಕಿನಲ್ಲಿ ಚಲಿಸುತ್ತಿದೆ ಎಂದು ಮತದಾರರಿಗೆ ಮನವರಿಕೆ ಮಾಡಿಕೊಡುವುದು ಹೆಚ್ಚು ಅಗತ್ಯ’ ಎಂದು ಅವರು ಹೇಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT