ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆಮಿಷಕ್ಕೆ ಬಲಿಯಾಗದವರಿಗೆ ನಮಸ್ಕಾರ’

ಚುನಾವಣೆ ವೇಳೆ ಬಿಜೆಪಿ ಅಪಪ್ರಚಾರದಿಂದ ಕಾಂಗ್ರೆಸ್‌ಗೆ ಹಿನ್ನಡೆ: ಸಿದ್ದರಾಮಯ್ಯ
Last Updated 11 ಜೂನ್ 2018, 19:30 IST
ಅಕ್ಷರ ಗಾತ್ರ

ಬಾಗಲಕೋಟೆ: ‘ಸಮ್ಮಿಶ್ರ ಸರ್ಕಾರ ರಚನೆ ವೇಳೆ, ಬಿಜೆಪಿಯವರ ಅಮಿಷಕ್ಕೆ ನಮ್ಮ ಪಕ್ಷದ ಶಾಸಕರು ಬಲಿಯಾಗಲಿಲ್ಲ. ಅವರಿಗೆ ದೊಡ್ಡ ನಮಸ್ಕಾರ ಹೇಳುವೆ’ ಎಂದು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಮುಖ್ಯಸ್ಥರೂ ಆದ ಬಾದಾಮಿ ಶಾಸಕ ಸಿದ್ದರಾಮಯ್ಯ ಹೇಳಿದರು.

ಬಾದಾಮಿಯಲ್ಲಿ ಸೋಮವಾರ ಕಾರ್ಯಕರ್ತರಿಗೆ ಆಯೋಜಿಸಿದ್ದ ಕೃತಜ್ಞತಾ ಸಮಾವೇಶದಲ್ಲಿ ಮಾತನಾಡಿದ ಅವರು, ‘ನಮ್ಮವರು (ಕಾಂಗ್ರೆಸ್‌ನವರು) ಯಾರೂ ಬಿಜೆಪಿಗೆ ಹೋಗಲ್ಲ’ ಎಂದು ಪುನರುಚ್ಚರಿಸಿದರು.

‘ಕಪ್ಪು ಹಣದ ವಿರುದ್ಧ ಹೋರಾಟ ಮಾಡುವುದಾಗಿ ಒಂದು ಕಡೆ ಬಿಜೆಪಿಯವರು ಹೇಳುತ್ತಾರೆ. ಇನ್ನೊಂದು ಕಡೆ ಅದೇ ಕಪ್ಪು ಹಣ ಕೊಟ್ಟು ಶಾಸಕರನ್ನು ಕೊಂಡುಕೊಳ್ಳಲು ನೋಡುತ್ತಾರೆ. ನಾಚಿಕೆಯಾಗುವುದಿಲ್ಲವೇ ಪ್ರಧಾನಿ ನರೇಂದ್ರ ಮೋದಿ? ಶಾಸಕರನ್ನು ಕೊಳ್ಳಲು ಚೆಕ್ ಮೂಲಕ ಹಣ ಕೊಡುತ್ತಿದ್ದೀರಾ?’ ಎಂದರು.

‘ಕಾಂಗ್ರೆಸ್‌ ಶಾಸಕರನ್ನು ಸಂಪರ್ಕಿಸಿದ್ದು ನಿಜ ಎಂದು ಸ್ವತಃ ಯಡಿಯೂರಪ್ಪ ವಿಧಾನಸಭೆಯಲ್ಲಿ ಒಪ್ಪಿಕೊಂಡಿದ್ದಾರೆ. ಇದಕ್ಕಿಂತ ಸಾಕ್ಷಿ ಬೇಕಾ? ಇದು ಬಿಜೆಪಿಯವರ ಭಂಡತನ ಬಿಂಬಿಸುತ್ತದೆ. ಚುನಾವಣೆ ವೇಳೆ ಯಡಿಯೂರಪ್ಪ, ನರೇಂದ್ರ ಮೋದಿ, ಅಮಿತ್ ಶಾ ಕಾಂಗ್ರೆಸ್ ಸರ್ಕಾರದ ವಿರುದ್ಧ ಅಪಪ್ರಚಾರ ಮಾಡಿದರು. ಅದನ್ನೇ ಜನ ನಂಬಿದ್ದು ನಮಗೆ ಹಿನ್ನಡೆಯಾಯಿತು. ಬಿಜೆಪಿಯವರಿಗೆ ನಿಜ ಹೇಳಿ ಗೊತ್ತೇ ಇಲ್ಲ. ಹಿಟ್ಲರ್‌ನ ಮಂತ್ರಿ ಗೋಬೆಲ್ಸ್‌ನ ತತ್ವದಂತೆ ಸುಳ್ಳು ಹೇಳುವುದೇ ಅವರ ರಾಜಕೀಯ ಸಿದ್ಧಾಂತ’ ಎಂದು ವಾಗ್ದಾಳಿ ನಡೆಸಿದರು.

‘ಅಪಪ್ರಚಾರದ ನಡುವೆಯೂ ಶೇ 38ರಷ್ಟು ಮತ ಕಾಂಗ್ರೆಸ್‌ಗೆ ಬಂದಿದೆ. ಬಿಜೆಪಿಗೆ ಶೇ 36ರಷ್ಟು ಮತ ಬಿದ್ದಿದೆ. ಅವರಿಗೆ ವೋಟ್ ಬಂದಿಲ್ಲ ಆದರೆ ಸೀಟ್ ಬಂದಿವೆ. ನಮಗೆ ಓಟ್ ಬಂದಿದೆ; ಸೀಟ್ ಬಂದಿಲ್ಲ. ಮತದಾರರು ನಾವು ಮಾಡಿದ ಕಾರ್ಯಕ್ರಮಗಳಿಗೆ ಮನ್ನಣೆ ಕೊಟ್ಟಿಲ್ಲ ಎಂಬುದಕ್ಕೆ ನೋವಿದೆ. ಅದಕ್ಕೆ ಕಾರ್ಯಕರ್ತರು ಎದೆಗುಂದುವ ಅಗತ್ಯವಿಲ್ಲ. ಪ್ರಧಾನಿ ನರೇಂದ್ರ ಮೋದಿ ಜನಪ್ರಿಯತೆ ವೇಗವಾಗಿ ಕೆಳಗೆ ಹೋಗುತ್ತಿದೆ. ಅದಕ್ಕೆ ದೇಶದಲ್ಲಿ ನಡೆದ ಉಪ ಚುನಾವಣೆಗಳ ಫಲಿತಾಂಶವೇ ಸಾಕ್ಷಿ. ಜಾತ್ಯತೀತತೆ ಮೇಲೆ ನಂಬಿಕೆ ಇಟ್ಟಿರುವ ಕಾಂಗ್ರೆಸ್ 2019ರಲ್ಲಿ ಅಧಿಕಾರಕ್ಕೆ ಬರುವ ಸ್ಪಷ್ಟ ಸೂಚನೆ ಕಾಣುತ್ತಿದೆ’ ಎಂದರು.

‘ಸಮಾಜ ಒಡೆಯುವ ಕೆಲಸ ಮಾಡಿಲ್ಲ..’

‘ಹಿಂದೂ ಹಾಗೂ ಲಿಂಗಾಯತ ಸಮಾಜ ಒಡೆಯುವ ಕೆಲಸ ಮಾಡಲಿಲ್ಲ. ನಾವು ಎಲ್ಲರನ್ನೂ ಜೋಡಿಸುತ್ತೇವೆ ಹೊರತು ಸಮಾಜ ಒಡೆಯುವುದಿಲ್ಲ. ಮನುಷ್ಯರ ನಡುವಿನ ಬಾಂಧವ್ಯ ಗಟ್ಟಿಮಾಡುವವರು ನಾವು; ಹುಳಿ ಹಿಂಡುವ, ವಿಷ ಇಡುವ ಕೆಲಸ ಮಾಡೊಲ್ಲ’ ಎಂದು ಸಿದ್ದರಾಮಯ್ಯ, ಭಾಷಣದಲ್ಲಿ ಯಾರ ಹೆಸರೂ ಪ್ರಸ್ತಾಪಿಸದೇ ಹೇಳಿದರು.

‘ಇನ್ನೊಂದು ಮದುವೆ ಮಾಡಲಿದ್ದೇವೆ’

‘ಕ್ಷೇತ್ರದಲ್ಲಿ ಜನಸಂಪರ್ಕದ ವೇಳೆ ಶಾಸಕ ಸಿದ್ದರಾಮಯ್ಯ ಅವರ ಉತ್ಸಾಹ, ಚುರುಕುತನ ಗಮನಿಸಿದರೆ ಅವರಿಗೆ ವಯಸ್ಸು 71 ಅಲ್ಲ 21 ಅನಿಸುತ್ತಿದೆ. ಅವರಿಗೆ ನಾವೆಲ್ಲಾ ಇನ್ನೊಂದು ಮದುವೆ ಮಾಡಬೇಕೆಂದಿದ್ದೇವೆ’ ಎಂದು ಮಾಜಿ ಶಾಸಕ ಬಿ.ಬಿ.ಚಿಮ್ಮನಕಟ್ಟಿ ಚಟಾಕಿ ಹಾರಿಸಿದರು.

‘ಸಿದ್ದರಾಮಯ್ಯ ಬಾದಾಮಿಯಲ್ಲಿ 50 ಸಾವಿರ ಮತಗಳ ಅಂತರದಿಂದ ಗೆಲ್ಲಬೇಕಿತ್ತು. ಆದರೆ ಕೆಲವು ಮಂದಿ ಅವರನ್ನು ಕೆಡವಲೆಂದೇ (ಸೋಲಿಸಲು) ಇಲ್ಲಿಗೆ ಕರೆತಂದಿದ್ದರು. ಅಡುಗೆ ಮನೆಯೊಳಗೆ ಸೇರಿಸಿದರೆ ಅನ್ನಕ್ಕೆ ವಿಷ ಹಾಕುವ ಮಂದಿ ನಮ್ಮಲ್ಲಿ ಇದ್ದಾರೆ. ಅಂಥವರಿಂದಲೇ ಗೆಲುವಿನ ಅಂತರ ಕಡಿಮೆ ಆಯ್ತು. ನಾವು ಸಡಿಲ ಬಿಟ್ಟಿದ್ದರೆ ಚಾಮುಂಡೇಶ್ವರಿಯಲ್ಲಿ ಆದ ಮೋಸ ಇಲ್ಲಿಯೂ ಆಗುತ್ತಿತ್ತು’ ಎಂದು ಚಿಮ್ಮನಕಟ್ಟಿ ಮಾರ್ಮಿಕವಾಗಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT