ಮಂಗಳವಾರ, ಸೆಪ್ಟೆಂಬರ್ 21, 2021
26 °C

ಪೆರುವಿನಲ್ಲಿ ಸಿಕ್ಕಿಹಾಕಿಕೊಂಡಿರುವ 20 ಭಾರತೀಯರಿಗೆ ಬೇಕಿದೆ ಸರ್ಕಾರದ ಸಹಾಯ ಹಸ್ತ

ಶ್ರುತಿ ಎಚ್.ಎಂ.ಶಾಸ್ತ್ರಿ Updated:

ಅಕ್ಷರ ಗಾತ್ರ : | |

covid outbreak

ಲಿಮ:  ಸುಮಾರು 20-40 ಮಂದಿ ಭಾರತೀಯರು ಪೆರುವಿನ ವಿವಿಧ ಭಾಗಗಳಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಕೆಲವೆಡೆ ಇಂಟರ್ನೆಟ್ ಸಂಪರ್ಕವೂ ಇಲ್ಲ ಎಂದು 'ಪ್ರಜಾವಾಣಿ' ಜತೆ ಮಾತನಾಡಿದ ಪ್ರವಾಸಿಗರೊಬ್ಬರು ಹೇಳಿದ್ದಾರೆ.

ಈ ಗುಂಪಿನ ಪೈಕಿ ದಕ್ಷಿಣ ಅಮೆರಿಕಗೆ ಹನಿಮೂನ್‌ಗೆ ಹೋಗಿ ವಾಪಸ್ ಬರುತ್ತಿರುವ ಮಾಜಿ ಗಗನಸಖಿ ಮತ್ತು ಆಕೆಯ ಪತಿ ಇದ್ದಾರೆ.
ಪೆರು ಅಧ್ಯಕ್ಷ ಮಾರ್ಟಿನ್ ವಿಜ್‌ಕರ್ರಾ ಅವರು ಮಾರ್ಚ್ 15ರಂದು ದೇಶದಾದ್ಯಂತ ದಿಗ್ಬಂಧನ ಘೋಷಿಸಿದ್ದರು. ಮಾರ್ಚ್ 16ಕ್ಕೆ ಎಲ್ಲ ಗಡಿಗಳನ್ನು ಮುಚ್ಚಿ, ಎಲ್ಲ ವಿಮಾನ ಸೇವೆಗಳಿಗೆ ನಿರ್ಬಂಧ ವಿಧಿಸಲಾಗಿತ್ತು.

ಎಲ್ಲಿಗೂ ಹೋಗಲಾರದೆ ಪೆರುವಿನಲ್ಲಿ ಸಿಕ್ಕಿಹಾಕಿಕೊಂಡಿರುವ ಚೆನ್ನೈ ಮೂಲದ ಮಾಜಿ ಗಗನ ಸಖಿ ಸಮೀರಾ ಖಾನ್, ಪ್ರಜಾವಾಣಿ ಜತೆ ಮಾತನಾಡಿದ್ದು ಅಲ್ಲಿನ ಪರಿಸ್ಥಿತಿ ಏನೆಂಬುದನ್ನು ವಿವರಿಸಿದ್ದಾರೆ. ದೇಶವ್ಯಾಪಿ ದಿಗ್ಬಂಧನ ಘೋಷಣೆ ಮಾಡುವಾಗ ನಾವು ಅಮೆಜಾನ್ ಅರಣ್ಯ ಪ್ರದೇಶದಲ್ಲಿದ್ದೆವು. ಮಾರ್ಚ್ 16ರಂದು ನಾವು ಇಕ್ವಿಟೋಸ್‌ಗೆ ತಲುಪಿದಾಗಲೇ  ದಿಗ್ಬಂಧನ ವಿಷಯ ನಮಗೆ ಗೊತ್ತಾಗಿದ್ದು. ಲಿಮದಿಂದ ವಿಮಾನ ಇದೆಯೇ ಎಂದು ನಾವು ವಿಚಾರಿಸಿದೆವು. ಎಲ್ಲ ರೀತಿಯ ಸಾರಿಗೆ ಸಂಪರ್ಕ ನಿಲ್ಲಿಸಲಾಗಿತ್ತು. ವೈರಸ್  ಭೀತಿಯಿಂದಾಗಿ ಹೋಟೆಲ್‌ಗಳೆಲ್ಲ ವಿದೇಶಿಯರನ್ನು ಶತ್ರುಗಳಂತೆ ಕಾಣುತ್ತಿವೆ. ತುಂಬಾ ಕಷ್ಟದಿಂದ ನಾವು ಲಾಡ್ಜ್‌ ಪಡೆದೆವು. ನಮ್ಮ ಪ್ರವಾಸ ಕೊನೆಯ ಹಂತದಲ್ಲಿದ್ದು, ಹಣವೂ ಕಡಿಮೆಯಿದೆ. ದಿನದ ಒಂದು ಹೊತ್ತು ಊಟ ಮಾಡುತ್ತಿದ್ದೇವೆ. ಹೋಟೆಲ್‌ನವರು ಬೆಳಗ್ಗೆ ಉಚಿತ ಉಪಾಹಾರ ನೀಡುತ್ತಿದ್ದಾರೆ. ನಾವು ಪ್ರವಾಸ ಆರಂಭಿಸಿಗ ಪೆರುವಿನಲ್ಲಾಗಲೀ, ಭಾರತದಲ್ಲಾಗಲೀ ಕೋವಿಡ್-19 ಪ್ರಕರಣಗಳಿರಲಿಲ್ಲ.

ಈ ದಂಪತಿಗಳು ಮಾರ್ಚ್ 10ಕ್ಕೆ ಪೆರುವಿಗೆ ತಲುಪುವ ಮುನ್ನ ಬ್ರೆಜಿಲ್, ಚಿಲಿ ಮತ್ತು ಬೊಲಿವಿಯಾ ಸುತ್ತಾಡಿದ್ದರು.
ಇವರ ಜತೆ ಇತರ ಹಲವಾರು ಪ್ರವಾಸಿಗರು ಭಾರತೀಯ ರಾಯಭಾರಿ ಕಚೇರಿಯ ಮೊರೆ ಹೋಗಿತ್ತು. ಇಲ್ಲಿಯವರೆಗೆ ಯಾವುದೇ ಸಹಾಯ ಸಿಕ್ಕಿಲ್ಲ ಎಂದಿದ್ದಾರೆ. ಅದೇ ವೇಳೆ ಅಮೆರಿಕ ಮತ್ತು ಬ್ರಿಟನ್ ತಮ್ಮ ದೇಶದ  ಪ್ರಜೆಗಳನ್ನು ಕರೆದೊಯ್ಯುತ್ತಿದ್ದು, ಭಾರತ ಸರ್ಕಾರದ ಸಹಾಯ ಹಸ್ತಕ್ಕಾಗಿ ಪೆರುವಿನಲ್ಲಿರುವ ಈ ಭಾರತೀಯರು ಕಾಯುತ್ತಿದ್ದಾರೆ.

ಕೆಲವರು ಟ್ವಿಟರ್‌ ಮೂಲಕ ವಿದೇಶಾಂಗ ಸಚಿವಾಲವನ್ನು ಸಂಪರ್ಕಿಸಿದ್ದರು. ಮಕ್ಕಳ ಹಕ್ಕು ಕಾರ್ಯಕರ್ತರಾದ ಬೆಂಗಳೂರು ಮೂಲದ ವೃಶಿ ರೆಡ್ಡಿ ಎಂಬವರೂ ಪೆರುವಿನಲ್ಲಿ ಸಿಕ್ಕಿಹಾಕಿಕೊಂಡಿದ್ದು, ನಮ್ಮನ್ನು ರಕ್ಷಿಸಿ ಎಂದು ಬುಧವಾರ ರಾತ್ರಿ ಟ್ವೀಟ್ ಮಾಡಿದ್ದರು.
ವೃಶಿ ರೆಡ್ಡಿ ದೂರದ ಪ್ರದೇಶವೊಂದರಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. 

ನನ್ನ ಕೆಲಸ ಆರಂಭ ಮಾಡುವ ಮುನ್ನ ಅಲ್ಲಿನ ಪ್ರದೇಶಗಳನ್ನು ನೋಡಲು ಹೋಗಿದ್ದೆ. ಲಾಕ್‌ಡೌನ್ ಘೋಷಣೆಗೆ ಸ್ವಲ್ಪ ಮುಂಚೆ ನಾನು ಆಗ್ನೇಯ ಪೆರುವಿನಲ್ಲಿರುವ ಮನು ರಾಷ್ಟ್ರೀಯ ಉದ್ಯಾನಕ್ಕೆ ಬಂದು ತಲುಪಿದೆ. ನಮ್ಮ ಲಾಡ್ಜ್‌ನಿಂದ 10 ಕಿಮಿ ದೂರದಲ್ಲಿ ಒಂದು ಗ್ರಾಮವಿದೆ. ಅಲ್ಲಿ ಯಾವುದೇ ಸಾರಿಗ ಸಂಪರ್ಕವಿಲ್ಲ. 5 ದಿನಕ್ಕಾಗುವ ಆಹಾರವಷ್ಟೇ ನನ್ನಲ್ಲಿ ಉಳಿದಿದೆ. ಈಗಾಗಲೇ  ಹಲವಾರು ರಾಷ್ಟ್ರಗಳು  ತಮ್ಮ ಪ್ರಜೆಗಳನ್ನು  ಕರೆದೊಯ್ಯಲು ವಿಮಾನ ವ್ಯವಸ್ಥೆ ಮಾಡಿವೆ. ಆದರೆ ನಮ್ಮನ್ನು ಯಾವಾಗ ಇಲ್ಲಿಂದ ರಕ್ಷಿಸುತ್ತಾರೆ ಎಂದು ನಮಗೆ ಗೊತ್ತಿಲ್ಲ ಎಂದಿದ್ದಾರೆ ವೃಶಿ.

ಲಿಮದಿಂದ 20 ಗಂಟೆ ಕಾಲ ಪ್ರಯಾಣದ ದಾರಿಯಿರುವ ಪ್ರದೇಶದಲ್ಲಿ ಸಿಕ್ಕಿಹಾಕಿಕೊಂಡಿರುವ ಪೀಯುಷ್.ಪಿ ಅವರ ಪರಿಸ್ಥಿತಿ ಇದೇ ರೀತಿಯಿದೆ. ಇಲ್ಲಿನ ಸ್ಥಳೀಯರು ಲಾಕ್‍ಡೌನ್‌ಗೆ ಸಹಕರಿಸುತ್ತಿದ್ದಾರೆ. ಸರ್ಕಾರದ ಮಧ್ಯಪ್ರವೇಶವಿಲ್ಲದೆ ಇಲ್ಲಿಂದ ಹೊರ ಬರುವುದು ಅಸಾಧ್ಯ.  ನಾನು ಬುಕ್ ಮಾಡಿದ್ದ ಮೂರು ವಿಮಾನಗಳು ರದ್ದಾಗಿವೆ. ನನ್ನ ಕೈಯಲ್ಲಿ ಹಣ ಕಡಿಮೆ ಇದೆ. ರದ್ದಾಗಿರುವ ವಿಮಾನದ ಟಿಕೆಟ್ ಹಣ ವಾಪಸ್ ಬರುವುದನ್ನೇ ಕಾಯುತ್ತಿದ್ದೇನೆ ಎಂದು ಪೀಯುಷ್ ಹೇಳಿದ್ದಾರೆ.

ಭಾರತಕ್ಕೆ ಬಂದರೆ ನಾವು ಖಂಡಿತವಾಗಿಯೂ 14 ದಿನ ಕ್ವಾರೆಂಟೈನ್‌ನಲ್ಲಿರುತ್ತೇವೆ. ಆದಷ್ಟು ಬೇಗ ನಮ್ಮನ್ನು ಭಾರತಕ್ಕೆ ತಲುಪಿಸಿ. ಮಾರ್ಚ್ 31ರ ವರೆಗೆ ಎಲ್ಲ ವಿಮಾನಗಳು ರದ್ದು ಆಗಿರುವುದರಿಂದ ಭಾರತ ಏರ್‌ಲಿಫ್ಟ್ ಮಾಡಲಿದೆ ಎಂಬ ನಿರೀಕ್ಷೆ ನಮ್ಮದು ಎಂದು ಅವರು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು