ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಟ್ರೇಲಿಯಾ: ಕಾಳ್ಗಿಚ್ಚಿನ ಆರ್ಭಟ

Last Updated 21 ಡಿಸೆಂಬರ್ 2019, 19:56 IST
ಅಕ್ಷರ ಗಾತ್ರ

ಬಾರ್ಗೊ, ಆಸ್ಟ್ರೇಲಿಯಾ: ಬಿಸಿಗಾಳಿ ಬೀಸುತ್ತಿರುವುದರಿಂದ ಕಾಳ್ಗಿಚ್ಚು ನಿಯಂತ್ರಿಸಲಾಗದ ಮಟ್ಟಕ್ಕೆ ತಲುಪಿದೆ. ಸಿಡ್ನಿ ಸೇರಿದಂತೆ ದಕ್ಷಿಣ ಆಸ್ಟ್ರೇಲಿಯಾದ ಹಲವು ನಗರಗಳು ಹೊಗೆಯಿಂದ ಆವರಿಸಿವೆ.

ಬಾರ್ಗೊ ಪಟ್ಟಣದ ಸುತ್ತಮುತ್ತಲ 4.57 ಲಕ್ಷ ಎಕರೆ ಪ್ರದೇಶ ಉರಿದು ಬೂದಿಯಾಗಿದೆ. ಜನರನ್ನು ಸುರಕ್ಷಿತ ಪ್ರದೇಶಗಳೆಡೆಗೆ ಸ್ಥಳಾಂತರಿಸಲಾಗಿದೆ.ಆಸ್ಟ್ರೇಲಿಯಾದ ಪಶ್ಚಿಮ ಭಾಗದಿಂದ ಪೂರ್ವ ಕರಾವಳಿ ಕಡೆಗೆ ಬಿಸಿಗಾಳಿ ಬೀಸುತ್ತಿದ್ದು, ಕರಾವಳಿಯುದ್ದಕ್ಕೂ ವ್ಯಾಪಿಸಿರುವ ಅರಣ್ಯ, ಪಟ್ಟಣಗಳು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿವೆ. ಬೆಂಕಿಯನ್ನು ಆರಿಸಲು ವಿಪತ್ತು ನಿರ್ವಹಣಾ ಸಿಬ್ಬಂದಿ ಶ್ರಮಿಸುತ್ತಿದ್ದಾರೆ. ಜಲಬಾಂಬ್‌ ವಿಮಾನಗಳು ಕಾರ್ಯಾಚರಣೆಗೆ ಇಳಿದಿವೆ.

ಶನಿವಾರ ಅಡಿಲೇಡ್‌ ಬೆಟ್ಟಗಳಲ್ಲಿ ವ್ಯಾಪಿಸಿರುವ ಕಾಳ್ಗಿಚ್ಚಿಗೆ ಒಬ್ಬ ಬಲಿಯಾಗಿದ್ದಾನೆ. ಈ ಭಾಗದಲ್ಲಿದ್ದ 15 ಮನೆಗಳು ಉರಿದು ಬೂದಿಯಾಗಿವೆ. 23 ಅಗ್ನಿಶಾಮಕ ಸಿಬ್ಬಂದಿಗೆ ಸುಟ್ಟಗಾಯಗಳಾಗಿವೆ ಎಂದು
ವರದಿಯಾಗಿದೆ.

ದಾಖಲೆ ಉಷ್ಣಾಂಶ: ದಕ್ಷಿಣಾರ್ಧಗೋಳದಲ್ಲಿ ಬೇಸಿಗೆ ಇರುವುದುಕಾಳ್ಗಿಚ್ಚಿನ ತೀವ್ರತೆಯನ್ನು ಹೆಚ್ಚಿಸಿದೆ. 130 ಕಿ.ಮೀ ವ್ಯಾಪ್ತಿಯ ಸಿಡ್ನಿ ನಗರವನ್ನು ವಿಷಕಾರಿ ಹೊಗೆ ಆವರಿಸಿದೆ. ನ್ಯೂ ಸೌತ್‌ ವೇಲ್ಸ್‌ ರಾಜ್ಯದ ಸರಾಸರಿ ಉಷ್ಣಾಂಶ ದಾಖಲೆ ಮಟ್ಟಕ್ಕೆ ಏರಿದ್ದು, 47 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ.

ವಾಪಸಾದ ಪ್ರಧಾನಿ: ಪೆಸಿಫಿಕ್‌ ಸಾಗರದ ಹವಾಯಿ ದ್ವೀಪಕ್ಕೆ ಕುಟುಂಬದ ಜೊತೆ ತೆರಳಿದ್ದ ಪ್ರಧಾನಿ ಸ್ಕಾಟ್‌ ಮಾರಿಸನ್‌ ಕಾಳ್ಗಿಚ್ಚಿನ ಹಿನ್ನೆಲೆಯಲ್ಲಿ ಪ್ರವಾಸ ಮೊಟಕುಗೊಳಿಸಿ ಆಸ್ಟ್ರೇಲಿಯಾಗೆ ವಾಪಸಾಗಿದ್ದಾರೆ. ದೇಶ ಕಾಳ್ಗಿಚ್ಚಿಗೆ ಸಿಲುಕಿರುವಾಗ ಪ್ರಧಾನಿ ಅವರ ಹವಾಯಿ ಪ್ರವಾಸದ ಕುರಿತು ನಾಗರಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಇದಕ್ಕೆ ಪ್ರಧಾನಿ ಕ್ಷಮೆ ಕೋರಿದ್ದು, ಶನಿವಾರ ರಾತ್ರಿ ಮರಳಿದ್ದಾರೆ. ನ್ಯೂ ಸೌತ್‌ ವೇಲ್ಸ್‌ನ ಅಗ್ನಿಶಾಮಕ ಕೇಂದ್ರಕ್ಕೆ ಭೇಟಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT