ಸೋಮವಾರ, ಆಗಸ್ಟ್ 2, 2021
26 °C

ಮಾತುಕತೆ ಮೂಲಕ ಬಿಕ್ಕಟ್ಟು ಇತ್ಯರ್ಥ: ಚೀನಾ

ಪಿಟಿಐ Updated:

ಅಕ್ಷರ ಗಾತ್ರ : | |

India-china

ಬೀಜಿಂಗ್: ನೈಜ ನಿಯಂತ್ರಣ ರೇಖೆಯುದ್ದಕ್ಕೂ (ಎಲ್‌ಎಸಿ) ಶಾಂತಿ ಕಾಪಾಡಲು ಮತ್ತು ಮಾತುಕತೆಯ ಮೂಲಕ ಗಡಿ ವಿವಾದವನ್ನು ಪರಿಹರಿಸಿಕೊಳ್ಳಲು ಚೀನಾ ಮತ್ತು ಭಾರತ ಒಪ್ಪಿಕೊಂಡಿವೆ. ‘ಭಿನ್ನಾಭಿಪ್ರಾಯಗಳು ವಿವಾದಗಳಾಗಿ ಪರಿವರ್ತನೆ ಆಗಬಾರದು’ ಎಂಬುದಾಗಿ ಈ ಹಿಂದೆ ಉಭಯ ದೇಶಗಳು ತೆಗೆದುಕೊಂಡಿದ್ದ ಒಮ್ಮತದ ನಿರ್ಧಾರವನ್ನು ಅನುಷ್ಠಾನಗೊಳಿಸಲು ಮುಂದಾಗಿವೆ. 

ಉಭಯ ದೇಶಗಳ ನಡುವಿನ ಬಿಕ್ಕಟ್ಟನ್ನು ಶಾಂತಿಯುತವಾಗಿ ಬಗೆಹರಿಸುವ ನಿಟ್ಟಿನಲ್ಲಿ ನಡೆಯುತ್ತಿರುವ ಸೇನಾ ಮಾತುಕತೆಯ ಬಳಿಕ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರೆ ಹು ಚುನ್ಯಿಂಗ್ ಅವರು ಈ ಹೇಳಿಕೆ ನೀಡಿದ್ದಾರೆ. 

‘ಜೂನ್ 6ರಂದು ಚುಸುಲ್ ಮೊಲ್ಡೊ ಪ್ರದೇಶದಲ್ಲಿ ಎರಡೂ ದೇಶಗಳ ಕಮಾಂಡರ್‌ಗಳ ನಡುವೆ ಮಾತುಕತೆ ನಡೆಯಿತು. ಗಡಿಯಲ್ಲಿನ ಪರಿಸ್ಥಿತಿ ಚರ್ಚಿಸಲು ಎರಡೂ ಕಡೆಯ ರಾಜತಾಂತ್ರಿಕ ಹಾಗೂ ಸೇನಾ ಪ್ರಮುಖರು ನಿಕಟ ಸಂಪರ್ಕದಲ್ಲಿ ಇದ್ದಾರೆ’ ಎಂದು ಹು ತಿಳಿಸಿದ್ದಾರೆ.

ಪ್ರಧಾನಿ ಮೋದಿ ಹಾಗೂ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ನಡುವೆ ಈ ಹಿಂದೆ ನಡೆದಿದ್ದ ಎರಡು ಅನೌಪಚಾರಿಕ ಮಾತುಕತೆಯನ್ನು ಉಲ್ಲೇಖಿಸಿದ ಅವರು, ‘ಗಡಿಯುದ್ದಕ್ಕೂ ಶಾಂತಿ ಮತ್ತು ನೆಮ್ಮದಿ ಕಾಪಾಡಲು ಹೆಚ್ಚು ವಿಶ್ವಾಸ ಬೆಳೆಸುವ ಕ್ರಮಗಳನ್ನು ಉಭಯ ದೇಶಗಳ ಸೇನೆಗಳು ತೆಗೆದುಕೊಳ್ಳಲಿವೆ. ಈ ಮೂಲಕ ಗಡಿಯಲ್ಲಿ ಒಳ್ಳೆಯ ವಾತಾವರಣ ನಿರ್ಮಿಸಲಿವೆ’ ಎಂದು ಅಭಿಪ್ರಾಯಪಟ್ಟರು.

‘ಒಟ್ಟಾರೆ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಗಡಿ ಸಮಸ್ಯೆಗಳನ್ನು ಸರಿಯಾದ ದಿಕ್ಕಿನಲ್ಲಿ ಪರಿಹರಿಸುವ ಸಂಬಂಧ ಸಮಾಲೋಚನೆಗೆ ಎರಡೂ ಕಡೆಯವರು ಸಿದ್ಧರಾಗಿದ್ದಾರೆ’ ಎಂದು ಹು ಹೇಳಿದ್ದಾರೆ.

ಸದ್ಯದ ಗಡಿ ಬಿಕ್ಕಟ್ಟನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ರಾಜತಾಂತ್ರಿಕ ಹಾಗೂ ಸೇನಾ ಮಾತುಕತೆ ನಡೆಸಲು ಎರಡೂ ದೇಶಗಳು ಒಪ್ಪಿಕೊಂಡಿವೆ ಎಂದು ಭಾರತದ ವಿದೇಶಾಂಗ ಸಚಿವಾಲಯ ತಿಳಿಸಿದ ಮರುದಿನವೇ ಹ್ಯು ಚುನ್ಯಿಂಗ್ ಈ ಹೇಳಿಕೆ ನೀಡಿದ್ದಾರೆ.

ಲೇಹ್‌ನಲ್ಲಿರುವ ಕಮಾಂಡಿಂಗ್ ಕಚೇರಿಯ ಅಧಿಕಾರಿ ಲೆಫ್ಟಿನೆಂಟ್ ಜನರಲ್ ಹರೀಂದರ್ ಸಿಂಗ್ ಹಾಗೂ ಟಿಬೆಟ್ ಮಿಲಿಟರಿ ಡಿಸ್ಟ್ರಿಕ್ಟ್‌ನ ಕಮಾಂಡರ್ ಮೇಜರ್ ಜನರಲ್ ಲಿಯು ಲಿನ್ ಅವರು ಮಾಲ್ಡೊದಲ್ಲಿ ಶನಿವಾರ ಮಾತುಕತೆ ನಡೆಸಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು