ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವು ನೋವಿನಲ್ಲಿ ಸಾರ್ಸ್‌ ಮೀರಿಸಿದ ಕೊರೊನಾ ವೈರಸ್‌: ಒಂದೇ ದಿನದಲ್ಲಿ 89 ಜನ ಬಲಿ

Last Updated 9 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ಬೀಜಿಂಗ್‌:ಕೊರೊನಾ ವೈರಸ್‌ ಸೋಂಕಿನಿಂದಾಗಿ ಚೀನಾದಲ್ಲಿ ಶನಿವಾರ 89 ಜನ ಬಲಿಯಾಗಿದ್ದು, ಸೋಂಕಿನಿಂದಾಗಿ ಇಲ್ಲಿಯವರೆಗೂ ಅಸುನೀಗಿದವರ ಸಂಖ್ಯೆ 811ಕ್ಕೆ ಏರಿಕೆಯಾಗಿದೆ.

ಸೋಂಕು ವ್ಯಾಪಿಸಲು ಆರಂಭವಾದ ಬಳಿಕ ಒಂದೇ ದಿನದಲ್ಲಿ ಇಷ್ಟೊಂದು ಜನ ಮೃತಪಟ್ಟಿರುವುದು ಇದೇ ಮೊದಲಾಗಿದೆ.2002ರಲ್ಲಿ ಚೀನಾದಲ್ಲಿ ಕಾಣಿಸಿಕೊಂಡಿದ್ದ ತೀವ್ರ ಉಸಿರಾಟ ಸಮಸ್ಯೆ ರೋಗದಿಂದ (ಸಾರ್ಸ್‌–ಸೀವಿಯರ್‌ ಅಕ್ಯೂಟ್‌ ರೆಸ್ಪಿರೇಟರಿ ಸಿಂಡ್ರೋಮ್‌) ಸಂಭವಿಸಿದ 770ಕ್ಕೂ ಅಧಿಕ ಜನ ಮೃತಪಟ್ಟಿದ್ದರು. ಈ ಸಂಖ್ಯೆಯನ್ನೂ ಕೊರೊನಾ ವೈರಸ್‌ ಸೋಂಕು ಮೀರಿಸಿದೆ.

ಚೀನಾದಲ್ಲಿ ಇಲ್ಲಿಯವರೆಗೂ 37,198 ಜನರಲ್ಲಿ ಸೋಂಕು ಇರುವುದು ದೃಢಪಟ್ಟಿದ್ದು, ಶನಿವಾರ ಒಂದೇ ದಿನ 2,656 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಶನಿವಾರ ಅಸುನೀಗಿದ 89 ಜನರ ಪೈಕಿ 81 ಜನ ಹ್ಯುಬೆ ಪ್ರಾಂತ್ಯದವರಾಗಿದ್ದಾರೆ ‌ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ ಮಾಹಿತಿ ನೀಡಿದೆ. ಹ್ಯುಬೆ ಪ್ರಾಂತ್ಯದಲ್ಲಿ ಮೊದಲ ಬಾರಿಗೆ ಈ ಸೋಂಕು ಕಾಣಿಸಿಕೊಂಡಿತ್ತು.

ಪಾಕಿಸ್ತಾನದ ಐವರಲ್ಲಿ ಸೋಂಕು ಶಂಕೆ (ಇಸ್ಲಾಮಾಬಾದ್‌, ಪಿಟಿಐ): ಚೀನಾದಿಂದ ವಿಮಾನದಲ್ಲಿ ಆಗಮಿಸಿದ ಐವರಲ್ಲಿ ಕೊರೊನಾ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿದ್ದು, ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ‘ಶುಕ್ರವಾರ ಏರ್‌ ಚೈನಾ ವಿಮಾನದಲ್ಲಿ ಇವರೆಲ್ಲರೂ ಇಸ್ಲಾಮಾಬಾದ್‌ಗೆ ಆಗಮಿಸಿದ್ದರು. ನಿಲ್ದಾಣದಲ್ಲಿ ಆರೋಗ್ಯ ತಪಾಸಣೆ ವೇಳೆ ದೇಹದ ತಾಪಮಾನ ಸಾಮಾನ್ಯಕ್ಕಿಂತ ಅಧಿಕವಾಗಿದ್ದ ಕಾರಣ ಇವರನ್ನು ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ದಾಖಲಿಸಲಾಗಿದೆ’ ಎಂದು ಎಕ್ಸ್‌ಪ್ರೆಸ್‌ ಟ್ರಿಬ್ಯೂನ್‌ ವರದಿ ಮಾಡಿದೆ.

ನಿಟ್ಟುಸಿರು ಬಿಟ್ಟ ಪ್ರವಾಸಿಗರು (ಹಾಂಗ್‌ಕಾಂಗ್‌, ಎಎಫ್‌ಪಿ): ಸೋಂಕಿನ ಭೀತಿಯಿಂದ ಕಳೆದ ಐದು ದಿನಗಳಿಂದ ಹಡಗಿನಲ್ಲೇ ಬಂಧಿಯಾ
ಗಿದ್ದ 1,800ಕ್ಕೂ ಅಧಿಕ ಸಿಬ್ಬಂದಿ ಹಾಗೂ ಅಷ್ಟೇ ಸಂಖ್ಯೆಯಪ್ರವಾಸಿಗರಿಗೆ ಹಡಗಿನಿಂದ ಇಳಿಯಲು ಭಾನುವಾರ ಅನುಮತಿ ನೀಡಲಾಗಿದೆ. ದಿ ವಲ್ಡ್‌ ಡ್ರೀಮ್‌ ಹೆಸರಿನ ಈ ಹಡಗಿನಲ್ಲಿ ವಿಯೆಟ್ನಾಂಗೆ ಮೂವರು ಚೀನಾ ಪ್ರಜೆಗಳು ಪ್ರಯಾಣ ಬೆಳೆಸಿದ್ದರು. ಇವರಲ್ಲಿ ಕೊರೊನಾ ಸೋಂಕು ಪತ್ತೆ
ಯಾದ ಕಾರಣ, ಹಡಗು ಹಾಂಗ್‌ಕಾಂಗ್‌ ಪ್ರವೇಶಿಸುತ್ತಿದ್ದಂತೆಯೇ ಅದನ್ನು ಸರ್ಕಾರ ತಡೆದಿತ್ತು.

ಚೀನಾಗೆ ಹೋಗಲು ನಕಾರ(ಢಾಕಾ, ಪಿಟಿಐ): ಚೀನಾದಲ್ಲಿರುವ ತನ್ನ 171 ಪ್ರಜೆಗಳನ್ನು ಕರೆತರುವ ಯೋಜನೆಯನ್ನು ಬಾಂಗ್ಲಾ ರದ್ದುಗೊಳಿಸಿದೆ. ಚೀನಾಗೆ ಹೋಗಲು ವಿಮಾನದ ಸಿಬ್ಬಂದಿ ಒಪ್ಪದೇ ಇರುವ ಕಾರಣ ಮತ್ತೊಮ್ಮೆ ವಿಮಾನ ಕಳುಹಿಸಲು ಸಾಧ್ಯವಿಲ್ಲ ಎಂದು ಬಾಂಗ್ಲಾದೇಶ ವಿದೇಶಾಂಗ ಸಚಿವ ಎ.ಕೆ.ಅಬ್ದುಲ್‌ ಮೊಮೆನ್‌ ತಿಳಿಸಿದರು. ಫೆ.1ರಂದು ಬಿಮನ್‌ ಏರ್‌ಲೈನ್ಸ್‌ನ ಬೋಯಿಂಗ್‌ 777ನಲ್ಲಿ 312 ಬಾಂಗ್ಲಾ ಪ್ರಜೆಗಳು ತಾಯ್ನಾಡಿಗೆ ಮರಳಿ ಬಂದಿದ್ದರು.

ಒಡಿಶಾ: ಸೋಂಕು ಪತ್ತೆಯಾಗಿಲ್ಲ

ಭುವನೇಶ್ವರ್‌: ‘ಕೊರೊನಾ ಸೋಂಕಿನ ಲಕ್ಷಣಗಳಿದ್ದವ್ಯಕ್ತಿಯ ಆರೋಗ್ಯ ವರದಿ ಬಂದಿದ್ದು, ಆತನಿಗೆ ಸೋಂಕು ತಗುಲಿಲ್ಲ ಎಂದು ದೃಢಪಟ್ಟಿದೆ. ಹೀಗಾಗಿ ಕಟಕ್‌ನ ಸರ್ಕಾರಿ ಆಸ್ಪತ್ರೆಯ ಪ್ರತ್ಯೇಕ ನಿಗಾ ಘಟಕದಲ್ಲಿದ್ದ ವ್ಯಕ್ತಿಯನ್ನು ಮನೆಗೆ ಕಳುಹಿಸಲಾಗಿದೆ’ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

‘ಬೀಜಿಂಗ್‌ ಮೂಲದ ಕಂಪನಿಯಲ್ಲಿ ಇಂಜಿನಿಯರ್‌ ಆಗಿದ್ದ ಈತ, ಇತ್ತೀಚೆಗೆ ಹಾಂಗ್‌ಕಾಂಗ್‌ ತೆರಳಿದ್ದ. ಅಲ್ಲಿಂದ ಬಂದ ಬಳಿಕ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿತ್ತು’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಚೀನಾ ನಿಯೋಗದ ಭೇಟಿಗೆ ತಡೆ (ಪಣಜಿ, ಪಿಟಿಐ): ಚೀನಾದ ರೂಪದರ್ಶಿಗಳು, ಛಾಯಾಚಿತ್ರಗ್ರಾಹಕರು, ಆನ್‌ಲೈನ್‌ ಬುಕ್ಕಿಂಗ್‌ ತಜ್ಞರಿದ್ದ ನಿಯೋಗದ ಭೇಟಿಯನ್ನು ಗೋವಾ ಪ್ರವಾಸೋದ್ಯಮ ಸಂಘ(ಟಿಟಿಎಜಿ) ತಡೆ ಹಿಡಿದಿದೆ. ‘ಕೊರೊನಾ ವೈರಸ್‌ ಸೋಂಕು ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ನಿಯೋಗದ ಭೇಟಿಯನ್ನು ತಡೆಹಿಡಿಯಲಾಗಿದೆ’ ಎಂದು ಸಂಘದ ಅಧ್ಯಕ್ಷ ಸಾವಿಯೊ ಮೆಸ್ಸಿಯಾಸ್‌ ತಿಳಿಸಿದರು.ಗೋವಾಗೆ ಚೀನಾದ ಪ್ರವಾಸಿಗರನ್ನು ಸೆಳೆಯುವ ಉದ್ದೇಶದಿಂದ ಟಿಟಿಎಜಿ ನಿಯೋಗವನ್ನು ಆಹ್ವಾನಿಸಿತ್ತು.

ಮದ್ಯಪಾನ ತಪಾಸಣೆ ರದ್ದು

ನವದೆಹಲಿ: ಸೋಂಕು ವ್ಯಾಪಿಸುತ್ತಿರುವ ಕಾರಣದಿಂದಾಗಿ ಮುಂದಿನ 15 ದಿನಕೇರಳದ ಕಲ್ಲಿಕೋಟೆ, ಕಣ್ಣೂರು, ತಿರುವನಂತಪುರ ಹಾಗೂ ಕೊಚ್ಚಿನ್‌ ವಿಮಾನ ನಿಲ್ದಾಣಗಳ ಸಿಬ್ಬಂದಿಯ ಮದ್ಯಪಾನ ತಪಾಸಣೆಯನ್ನು (ಬ್ರೆತ್‌ಅನಲೈಜರ್‌ ಪರೀಕ್ಷೆ) ಡಿಜಿಸಿಎ ರದ್ದುಗೊಳಿಸಿದೆ. ಆದರೆ ವಿಮಾನ ಇಳಿದ ನಂತರ ಸಿಬ್ಬಂದಿ ಮದ್ಯಪಾನ ತಪಾಸಣೆಗೆ ಕಡ್ಡಾಯವಾಗಿ ಒಳಗಾಗಬೇಕು ಎಂದು ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT