ಶುಕ್ರವಾರ, ಜನವರಿ 21, 2022
30 °C

ಸೌದಿ ಅರೇಬಿಯಾದ ಪ್ರಮುಖ ತೈಲ ಸಂಸ್ಕರಣಾ ಘಟಕದ ಮೇಲೆ ಡ್ರೋನ್‌ ದಾಳಿ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ದುಬೈ: ಸೌದಿ ಅರಾಮ್ಕೊ ಸಂಸ್ಥೆಯ ತೈಲ ಘಟಕಗಳ ಮೇಲೆ ಡ್ರೋನ್‌ ದಾಳಿ ನಡೆದಿದೆ. ಶನಿವಾರ ಸೂರ್ಯೋದಯಕ್ಕೂ ಮುನ್ನ ಪೂರ್ವ ಸೌದಿ ಅರೇಬಿಯಾದ ತೈಲ ಸಂಸ್ಕರಣ ಘಟಕ ಮತ್ತು ತೈಲ ನಿಕ್ಷೇಪ ವಲಯದಲ್ಲಿ ಬೆಂಕಿ ವ್ಯಾಪಿಸಿದೆ. 

ಯೆಮೆನ್‌ನ ಹೌತಿ ಬಂಡುಕೋರರು ಡ್ರೋನ್‌ ದಾಳಿ ನಡೆಸಿದ್ದಾಗಿ ಹೇಳಿಕೊಂಡಿರುವುದಾಗಿ ಎಪಿ ವರದಿ ಮಾಡಿದೆ. 

ಬುಖ್ಯಾಕ್‌ನ ತೈಲ ಸಂಸ್ಕರಣಾ ಘಟಕ ಮತ್ತು ಖುರೈಸ್‌ ತೈಲ ನಿಕ್ಷೇಪದಲ್ಲಿ ಡ್ರೋನ್‌ ದಾಳಿ ನಡೆದಿದ್ದು, ಗಾಯಗೊಂಡಿರುವವರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಬುಖ್ಯಾಕ್‌ನ ದಾಳಿಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ವ್ಯಾಪಿಸುತ್ತಿರುವ ಬೆಂಕಿ, ಹೊಗೆ ಹಾಗೂ ಗುಂಡಿನ ಮೊರೆತದ ಸದ್ದನ್ನು ವಿಡಿಯೊದಲ್ಲಿ ಗಮನಿಸಬಹುದಾಗಿದೆ. 

ಬುಖ್ಯಾಕ್‌ನ ಅಬ್ಕೈಕ್‌ ತೈಲ ಸಂಸ್ಕರಣಾ ಘಟಕವು ಜಗತ್ತಿನ ಅತಿ ದೊಡ್ಡ ಕಚ್ಚಾ ತೈಲ ಸಂಸ್ಕರಣ (ಸ್ಟೆಬಿಲೈಜೇಷನ್‌) ವ್ಯವಸ್ಥೆ ಹೊಂದಿದೆ ಎಂದು ಸಂಸ್ಥೆ ಹೇಳಿಕೊಂಡಿದೆ. ಈ ಘಟಕದಲ್ಲಿ ಕಚ್ಚಾ ತೈಲ ಸಂಸ್ಕರಿಸಿದ ನಂತರಷ್ಟೇ ಟ್ಯಾಂಕರ್‌ಗಳ ಮೂಲಕ ತೈಲ ಸಾಗಣೆ ನಡೆಯುತ್ತದೆ. ಸಾಗಣೆಯಲ್ಲಿ ಯಾವುದೇ ಅಪಾಯ ಉಂಟಾಗದಂತೆ ಹೈಡ್ರೋಜನ್‌ ಸಲ್ಫೈಡ್‌ ಅಂಶಗಳನ್ನು ತೆಗೆದು ಹಾಕುವುದು ಹಾಗೂ ಆವಿಯಾಗುವಿಕೆಯಿಂದ ಉಂಟಾಗುವ ಒತ್ತಡವನ್ನು ಇಲ್ಲಿನ ಪ್ರಕ್ರಿಯೆಯಲ್ಲಿ ಕಡಿಮೆ ಮಾಡಲಾಗುತ್ತದೆ. ಅಂದಾಜಿನ ಪ್ರಕಾರ, ಈ ಘಟಕವು ನಿತ್ಯ 70 ಲಕ್ಷ ಬ್ಯಾರಲ್‌ ಕಚ್ಚಾ ತೈಲ ಸಂಸ್ಕರಿಸುವ ಸಾಮರ್ಥ್ಯ ಹೊಂದಿದೆ. 

ಈ ಘಟಕವನ್ನು ಗುರಿಯಾಗಿಸಿ ಉಗ್ರರು ದಾಳಿ ನಡೆಸಲು ಪ್ರಯತ್ನ ನಡೆಸಿದ್ದರು. 2006ರ ಫೆಬ್ರುವರಿಯಲ್ಲಿ ಆತ್ಮಾಹುತಿ ದಾಳಿಯ ಪ್ರಯತ್ನ ನಡೆಸಿ ವಿಫಲವಾದ ಬಗ್ಗೆ ಅಲ್‌–ಖೈದಾ ಉಗ್ರ ಸಂಘಟನೆ ಹೇಳಿಕೊಂಡಿತ್ತು. 

ಸದ್ಯ ಜಾಗತಿಕ ಮಾರುಕಟ್ಟೆಯಲ್ಲಿ ಒಂದು ಬ್ಯಾರೆಲ್‌ಗೆ 60 ಡಾಲರ್‌ನಲ್ಲಿ ವಹಿವಾಟು ನಡೆಯುತ್ತಿದೆ. ವಾರಾಂತ್ಯದಿಂದಾಗಿ ವಹಿವಾಟು ಮಾರುಕಟ್ಟೆ ಕಾರ್ಯನಿರ್ವಹಿಸುತ್ತಿಲ್ಲ. ಹಾಗಾಗಿ, ದಾಳಿಯ ನಂತರವೂ ಕಚ್ಚಾ ತೈಲದ ಬೆಲೆಯ ಮೇಲೆ ತಕ್ಷಣದ ಪ್ರಭಾವ ಕಂಡುಬಂದಿಲ್ಲ. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು