ಭಾನುವಾರ, ಜನವರಿ 26, 2020
21 °C
ವಿಶ್ಲೇಷಣೆ

Explainer | ಅಮೆರಿಕವನ್ನು ಮಣಿಸಬಲ್ಲದೇ ಇರಾನ್‌ ಸೇನೆ? ಏಕೆ ಈ ಸಂಘರ್ಷ? ಮುಂದೇನು?

ಡಿ.ಎಂ. ಘನಶ್ಯಾಮ Updated:

ಅಕ್ಷರ ಗಾತ್ರ : | |

ತಾಯ್ನೆಲದಿಂದ ಸಾವಿರಾರು ಕಿಲೋಮೀಟರ್‌ ಆಚೆಗಿನ ಯುದ್ಧ ನಿರ್ವಹಿಸುವಲ್ಲಿ ಅಮೆರಿಕ ಮೊದಲಿನಿಂದಲೂ ಚಾಣಾಕ್ಷ. ಎರಡನೇ ಮಹಾಯುದ್ಧದಲ್ಲಿ ಅಮೆರಿಕದ ಪರ್ಲ್‌ ಹಾರ್ಬರ್‌ ಮೇಲೆ ಜಪಾನ್ ಯುದ್ಧವಿಮಾನಗಳು ದಾಳಿ ಮಾಡಿದ ನಂತರ (1941) ಯಾವುದೇ ಯುದ್ಧವೂ ಅಮೆರಿಕ ನೆಲದಲ್ಲಿ ನಡೆದಿಲ್ಲ. ಭಯೋತ್ಪಾದಕ ದಾಳಿಗಳು ಮಾತ್ರ ಇದಕ್ಕೆ ಅಪವಾದ. ವೈರಿ ನೆಲದಲ್ಲಿಯೇ ಯುದ್ಧ ನಡೆಯಬೇಕು ಎನ್ನುವ ಯುದ್ಧತಂತ್ರವನ್ನು ಅಮೆರಿಕ ಚಾಣಾಕ್ಷತನದಿಂದ ಪಾಲಿಸಿಕೊಂಡು ಬಂದಿದೆ. ರಷ್ಯಾದೊಂದಿಗೆ ಶೀತಲಯುದ್ಧ ಚಾಲ್ತಿಯಲ್ಲಿದ್ದಾಗಲೂ ಯಾವ್ಯಾವುದೋ ದೇಶಗಳಲ್ಲಿ ಅಮೆರಿಕದ ಸಿಐಎ ಏಜೆಂಟ್‌ಗಳು ಆಟ ಆಡಿದ್ದರು. ಅಮೆರಿಕ ಸೇನೆ ದಾಳಿ ಅಥವಾ ರಕ್ಷಣಾ ಕಾರ್ಯಾಚರಣೆ ನೆಪದಲ್ಲಿ ನೆಲೆಗಳನ್ನು ನಿರ್ಮಿಸಿಕೊಂಡಿತ್ತು. ಆದರೆ ತನ್ನದೇ ನೆಲದಲ್ಲಿ ಯುದ್ಧದ ಬಿಸಿ ಪೂರ್ಣಪ್ರಮಾಣದಲ್ಲಿ ತಾಗಲು ಅಮೆರಿಕ ಸರ್ಕಾರಗಳು ಬಿಡಲಿಲ್ಲ.

ತನ್ನ ಹಿತಾಸಕ್ತಿಗೆ ಧಕ್ಕೆ ತರುವ ಶಕ್ತಿಯೊಂದು ರೂಪುಗೊಳ್ಳುತ್ತಿದೆ ಎನ್ನಿಸಿದ ತಕ್ಷಣ ಯಾವುದೋ ಒಂದು ನೆಪ ತೆಗೆದು ರಣಕಹಳೆ ಮೊಳಗಿಸುವುದು ಅಮೆರಿಕ ಅನುಸರಿಸಿಕೊಂಡು ಬಂದಿರುವ ಮತ್ತೊಂದು ಯುದ್ಧತಂತ್ರ. ಈಗ ಇರಾನ್‌ ಸೇನಾಧಿಕಾರಿ ಖಾಸಿಂ ಸುಲೇಮಾನಿ ಹತ್ಯೆಯ ನಂತರ ಬಿಗಡಾಯಿಸಿರುವ ಪರಿಸ್ಥಿತಿ, ಅಮೆರಿಕದ ಮೇಲೆ ನಿರ್ಣಾಯಕ ಎನಿಸುವಂಥ ದೊಡ್ಡಮಟ್ಟದ ದಾಳಿ ನಡೆಸಲೇಬೇಕಾದ ಒತ್ತಡಕ್ಕೆ ಇರಾನ್‌ ಸಿಲುಕಿರುವುದು ಕೂಡಾ ಇಂಥದ್ದೇ ಕಾರ್ಯತಂತ್ರದ ಭಾಗ. 

ಸುಲೇಮಾನಿಯನ್ನು ಕೊಲ್ಲಲು ಆದೇಶ ನೀಡಿದ್ದು ಟ್ರಂಪ್ ತೆಗೆದುಕೊಂಡ ಮೂರ್ಖ ನಿರ್ಧಾರ ಎನ್ನುವ ವಾದ ಇರುವಂತೆಯೇ, ಇದು ಅಮೆರಿಕ ಸೇನೆ ನಾಜೂಕಾಗಿ ಹೆಣೆದ ಕಾರ್ಯತಂತ್ರ ಎಂಬ ಪ್ರತಿವಾದವೂ ಚಾಲ್ತಿಯಲ್ಲಿದೆ.


ಇರಾನ್‌ ಕ್ಷಿಪಣಿ ಪರೀಕ್ಷೆ

ಮರುಳುಗಾಡಿನ ಕುದಿಬಿಂದು

ಇರಾನ್, ಇರಾಕ್, ಸಿರಿಯಾ, ಇಸ್ರೇಲ್, ಲೆಬನಾನ್, ಯುಎಇ, ಕುವೈತ್, ಈಜಿಪ್ಟ್‌... ಇತ್ಯಾದಿ 13 ದೇಶಗಳನ್ನು ಮಧ್ಯಪ್ರಾಚ್ಯ ದೇಶಗಳು ಎಂದು ಗುರುತಿಸಲಾಗುತ್ತದೆ. ಈ ಗುಂಪಿನಲ್ಲಿ ಇಸ್ರೇಲ್ ಹೊರತುಪಡಿಸಿದರೆ ಉಳಿದೆಲ್ಲ ದೇಶಗಳಲ್ಲಿ ಮುಸ್ಲಿಂ ಬಾಹುಳ್ಯ. ಸುನ್ನಿ ಮತ್ತು ಷಿಯಾ ಮುಸ್ಲಿಮರ ದಾಯಾದಿ ಮತ್ಸರ. ಒಬ್ಬರ ಏಣಿಯನ್ನು ಇನ್ನೊಬ್ಬರು ಕೆಳಗೆಳೆಯುವ ಹಗೆತನ.

ಮರಳುಗಾಡಿನ ಅಡಿಯಲ್ಲಿರುವ ಅಪಾರ ತೈಲ ಸಂಪನ್ಮೂಲವನ್ನೇ ಗಮನದಲ್ಲಿರಿಸಿಕೊಂಡಿರುವ ಜಗತ್ತಿನ ದೊಡ್ಡಣ್ಣ ಅಮೆರಿಕ ಮೊದಲಿನಿಂದಲೂ ಸುನ್ನಿ ಮುಸ್ಲಿಮರ ಪರ. ಯುಎಇ, ಕುವೈತ್ ಸೇರಿದಂತೆ ಹಲವೆಡೆ ಅಮೆರಿಕದ ಸೇನೆ ಹತ್ತಾರು ವರ್ಷಗಳಿಂದ ನೆಲೆಗಳನ್ನು ಹೊಂದಿದೆ. ಅರಬ್ ದೇಶಗಳಲ್ಲಿ ಷಿಯಾ ಮುಸ್ಲಿಮರ ದನಿಯಾಗಿರುವ ಇರಾನ್‌ಗೆ ಅಮೆರಿಕ ಜೀವಂತ ಶತ್ರು. ಅಮೆರಿಕ ಬೆಂಬಲದಲ್ಲಿ ಮುಗುಳ್ನಗುವ ಇಸ್ರೇಲ್ ಆ ಶತ್ರುವಿನ ಪ್ರತೀಕ.

40 ವರ್ಷಗಳ ಹಿಂದೆ (1979) ಇಸ್ಲಾಮಿಕ್ ಕ್ರಾಂತಿಯ ಮೂಲಕ ಅಮೆರಿಕ ಕೈಗೊಂಬೆ ಸರ್ಕಾರ ಕೆಡವಿ ಅಧಿಕಾರಕ್ಕೆ ಬಂದವರು ಇರಾನ್‌ ಸರ್ವೋಚ್ಚ ನಾಯಕ ಅಯಾತ್‌ಉಲ್ಲಾ ಅಲಿ ಖೊಮೇನಿ. ಎಂಟು ವರ್ಷಗಳ ಸುದೀರ್ಘ ಅವಧಿಯ (1980–88) ಇರಾಕ್–ಇರಾನ್ ಯುದ್ಧದಲ್ಲಿ ದೇಶವನ್ನು ಮುನ್ನಡೆಸಿದ ಖೊಮೇನಿಗೆ ಮಿಲಿಟರಿಯನ್ನು ಸಾಂಪ್ರದಾಯಿಕವಾಗಿ ಸದೃಢಗೊಳಿಸಲು ಕಾಲಾವಕಾಶವೇ ಸಿಗಲಿಲ್ಲ. ಆದರೆ ನಂತರದ ದಿನಗಳಲ್ಲಿ ನಡೆದ ಘಟನಾವಳಿಗಳಿಂದ ಅವರು ಮಿಲಿಟರಿ ಕಾರ್ಯತಂತ್ರದ ಹೊಸ ಪಾಠಗಳನ್ನು ಕಲಿತರು.

ಮತ್ತೊಂದು ದೇಶದೊಳಗೆ ನುಸುಳಿ, ಸದ್ದಿಲ್ಲದೆ ತಮ್ಮ ದೇಶದ ಕಡೆಗೆ ಒಲಿಸಿಕೊಂಡು, ಒಲಿದವರನ್ನು ಸಶಕ್ತಗೊಳಿಸಿ, ಒಪ್ಪದವರನ್ನು ಹೊಸಕಿಹಾಕಿ, ಬೆಂಬಲಿಸುವವರ ಕೈಗೆ ಶಸ್ತ್ರಕೊಟ್ಟು ನಡೆಸುವ ಮುಸುಕಿನ ಯುದ್ಧವನ್ನು ತನ್ನ ಪರವಾಗಿ ತಿರುಗಿಸಿಕೊಳ್ಳುವ ಅಪರೂಪದ ಚಾಣಾಕ್ಷತೆ ಖೊಮೇನಿಗೆ ಸಿದ್ಧಿಸಿದೆ. ಈ ಸಿದ್ಧಿಯ ಮೂರ್ತರೂಪದಂತಿದ್ದವರು ಖಾಸಿಂ ಸುಲೇಮಾನಿ. ಖೊಮೇನಿ ಮತ್ತು ಸುಲೇಮಾನಿ ರೂಪಿಸಿದ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ಸ್‌ ಕಾರ್ಪ್ಸ್‌ನ ಕೆನೆಪದರ ಎನಿಸಿರುವ ಖದ್ಸ್‌ ಫೋರ್ಸ್‌ನಲ್ಲಿ ಇಂಥ ಚಾಣಾಕ್ಷರೇ ಸಾವಿರಾರು ಮಂದಿಯಿದ್ದಾರೆ!

ಇರಾನ್‌ನ ಸೇನಾ ಸಾಮರ್ಥ್ಯ ಮತ್ತು ಅಮೆರಿಕದಂಥ ದೊಡ್ಡಣ್ಣನ ಎದುರು ತೊಡೆತಟ್ಟುವ ಅದರ ಧೈರ್ಯ ಅರ್ಥ ಮಾಡಿಕೊಳ್ಳಲು ನಾವು ಖದ್ಸ್‌ ಫೋರ್ಸ್‌ನ ಜೊತೆಗೆ ಇರಾನ್ ಈಗಿರುವಂತೆ ರೂಪುಗೊಳ್ಳಲು ಕಾರಣವಾದ ಹಲವು ಘಟನಾವಳಿಗಳನ್ನು ಅವಲೋಕಿಸಬೇಕು. 

ಇರಾನ್ ಮೇಲೆ ಇರಾಕ್ ದಾಳಿ ಮತ್ತು ಸುದೀರ್ಘ ಯುದ್ಧ (1980–88), ಕುವೈತ್ ಮೇಲೆ ಇರಾಕ್ ಆಕ್ರಮಣ (1990), ಕುವೈತ್‌ನಿಂದ ಇರಾಕ್‌ ಸೇನೆಯನ್ನು ಹೊರದಬ್ಬಲು ಅಮೆರಿಕ ನಡೆಸಿದ ಆಪರೇಷನ್ ಡೆಸರ್ಟ್ ಸ್ಟಾರ್ಮ್ (1991) ಕಾರ್ಯಾಚರಣೆ, ಇರಾಕ್ ಅಧ್ಯಕ್ಷರಾಗಿದ್ದ ಸದ್ದಾಂ ಹುಸೇನ್ ಆಡಳಿತದಿಂದ ಖುರ್ದ್ ಜನರ ಸಾಮೂಹಿಕವಾಗಿ ಹತ್ಯೆ, ಅಮೆರಿದಿಂದ ಸದ್ದಾ ಹುಸೇನ್ ಪದಚ್ಯುತಿ ಮತ್ತು ಹತ್ಯೆ (2006), ಸುನ್ನಿಗಳಿಂದ ತುಳಿಸಿಕೊಂಡಿದ್ದ ಅತೃಪ್ತ ಷಿಯಾಗಳ ಕುದಿ ಮನಸು, ನುಗ್ಗಿ ಬಂದ ಐಸಿಸ್ ಉಗ್ರರಿಗೆ ಹೆದರಿ ಹಿಮ್ಮೆಟ್ಟಿದ ಇರಾಕ್ ಸೇನೆ (2014)... ಹೀಗೆ ಇರಾನ್‌ ಇಂದು ಗಳಿಸಿರುವ ಸೈನಿಕ ಸಾಮರ್ಥ್ಯ, ಪ್ರಾದೇಶಿಕ ಪ್ರಭಾವ ಮತ್ತು ತೋರುತ್ತಿರುವ ಧೈರ್ಯಕ್ಕೆ ಹಲವು ಆಯಾಮಗಳಿವೆ.


ಅಮೆರಿಕದ ದಾಳಿಯಲ್ಲಿ ಹತರಾದ ಇರಾನ್‌ನ ಮೇಜರ್‌ ಜನರಲ್ ಖಾಸಿಂ ಸುಲೇಮಾನಿ

ಅಮೆರಿಕದ ಜತೆಗೆ ದುಡಿದಿದ್ದ ಖಾಸಿಂ ಸುಲೇಮಾನಿ

ತನಗೆ ಸಡ್ಡು ಹೊಡೆದ ಎಲ್ಲ ಸರ್ಕಾರಗಳನ್ನು ಅಮೆರಿಕ ಕೆಡವಿದೆ. ಇರಾಕ್ ಆಕ್ರಮಿಸಿಕೊಳ್ಳಲು ಮುನ್ನುಗ್ಗುತ್ತಿದ್ದ ಅಮೆರಿಕ ಸೇನೆಗೆ ಸದ್ದಾಂ ಹುಸೇನ್‌ಗೆ ನಿಷ್ಠವಾಗಿರುವ ಸೇನಾಪಡೆಗಳಿಗಿಂತ ಹೆಚ್ಚು ತಲೆನೋವಾಗಿದ್ದು ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ಸ್‌ ಕೋರ್ಪ್ಸ್‌ನ ಅಂಗವಾಗಿದ್ದ ಖದ್ಸ್‌ ಫೋರ್ಸ್‌ ಆಯೋಜಿಸುತ್ತಿದ್ದ ದಾಳಿಗಳು.

ಸದ್ದಾಂ ಹತ್ಯೆಯ ನಂತರ ಇರಾಕ್ ಸೇನೆಯನ್ನು ಪುನರ್‌ ಸಂಘಟಿಸುವ ಹೊಣೆ ಹೊತ್ತ ಅಮೆರಿಕ ವ್ಯವಸ್ಥಿತವಾಗಿ ಷಿಯಾಗಳನ್ನು ಮೂಲೆಗುಂಪು ಮಾಡಲು ಯತ್ನಿಸಿದಾಗ ಮತ್ತೆ ಖದ್ಸ್‌ ಫೋರ್ಸ್‌ ಸದ್ದು ಮಾಡಿತ್ತು. ಸ್ಥಳೀಯ ಷಿಯಾ ಯುವಕರನ್ನು ಸಂಘಟಿಸಿ, ತರಬೇತಿ ನೀಡಿ, ಶಸ್ತ್ರಾಸ್ತ್ರ ಪೂರೈಸಿ ಒಳಗೊಂದೊಳಗೆ ತನ್ನತ್ತ ಒಲಿಸಿಕೊಂಡಿತ್ತು. ಎಲ್ಲ ಗೊತ್ತಿದ್ದರೂ ಏನೂ ಮಾಡಲಾಗದ ಸ್ಥಿತಿಯಲ್ಲಿದ್ದ ಅಮೆರಿಕ ಅಣುಶಕ್ತಿ ರಿಯಾಕ್ಟರ್‌ಗಳನ್ನು ದಾಳವಾಗಿಸಿಕೊಂಡು ಇರಾನ್‌ ಮಟ್ಟಹಾಕಲು ಯತ್ನಿಸುತ್ತಿತ್ತು.

ಬರಾಕ್ ಒಬಾಮಾ ಅಮೆರಿಕ ಅಧ್ಯಕ್ಷರಾಗಿದ್ದಾಗ (2011) ಅಲ್‌ಖೈದಾ ನಾಯಕ ಒಸಾಮಾ ಬಿಲ್‌ ಲಾಡೆನ್‌ನನ್ನು ಅಮೆರಿಕ ಸೇನೆ ಕೊಂದುಹಾಕಿದ ನಂತರ ಕಟ್ಟರ್ ಇಸ್ಲಾಮ್ ಭಯೋತ್ಪಾದಕರಲ್ಲಿ ಆವರಿಸಿಕೊಂಡ ನಾಯಕಹೀನ ಸ್ಥಿತಿಯನ್ನು ಐಸಿಸ್ (ಇಸ್ಲಾಮಿಕ್ ಸ್ಟೇಟ್) ತನ್ನ ಲಾಭಕ್ಕೆ ಬಳಸಿಕೊಂಡಿತು. ಸದ್ದಾಂ ಹುಸೇನ್‌ ಆಡಳಿತದಲ್ಲಿ ಸೈನಿಕರಾಗಿದ್ದ ಸುನ್ನಿಗಳನ್ನು ಏಕಾಏಕಿ ಸೇನೆಯಿಂದ ಹೊರಹಾಕುವ ತಪ್ಪನ್ನೂ ಇರಾಕ್ ಮತ್ತು ಅದಕ್ಕೆ ಸಲಹೆಗಾರರಾಗಿ ಕೆಲಸ ಮಾಡಿದ್ದ ಅಮೆರಿಕ ಸೇನಾಧಿಕಾರಿಗಳು ಮಾಡಿದ್ದರು. ಇಂಥ ಸೈನಿಕರೇ ಐಸಿಸ್‌ನ ಆಧಾರವಾದರು, ತರಬೇತುದಾರರಾದರು.

ಕೇವಲ ಕಾಗದದ ದಾಖಲೆಗಳನ್ನು ಸೃಷ್ಟಿಸಿ ಸೈನಿಕರ ಸಂಬಳವನ್ನೂ ಲಪಟಾಯಿಸುವಷ್ಟು ಭ್ರಷ್ಟರಾಗಿದ್ದ ಇರಾಕ್ ಸೇನಾಧಿಕಾರಿಗಳಿಗೆ ಐಸಿಸ್ ಉಗ್ರರ ಉಪಟಳ ಎದುರಿಸಲು ಸಾಧ್ಯವಾಗಲಿಲ್ಲ. ಐಸಿಸ್ ಎದುರು ಇರಾಕ್ ಮತ್ತು ಸಿರಿಯಾ ಸೇನೆಗಳು ಸೋಲೊಪ್ಪಿಕೊಂಡಾಗ ಅಮೆರಿಕಕ್ಕಿಂತಲೂ ಮೊದಲು ಇರಾಕಿಗಳ ಮತ್ತು ಸಿರಿಯಾ ಜನರ ನೆರವಿಗೆ ಬಂದಿದ್ದು ಇರಾನ್‌ನ ಖದ್ಸ್‌ ಫೋರ್ಸ್‌. ಮುಂದೆ ಐಸಿಸ್ ಉಗ್ರರ ವಿರುದ್ಧದ ಹೋರಾಟ ನಿರ್ಣಾಯಕ ಘಟ್ಟ ಮುಟ್ಟಿದಾಗ ಅಮೆರಿಕ ಮತ್ತು ಇರಾನ್ ಪರಸ್ಪರ ಹೆಗಲಿಗೆಣೆಯಾಗಿ ಹೋರಾಡಿದವು. ಇದೀಗ ಅಮೆರಿಕ ಸೇನೆಯಿಂದ ಹತರಾದ ಇರಾನ್ ಸೇನಾಧಿಕಾರಿ ಮೇಜರ್‌ ಜನರಲ್ ಖಾಸಿಂ ಸುಲೇಮಾನಿ ಆಗ ಅಮೆರಿಕ ಸೇನೆಗೆ ಗುಪ್ತಚರ ಮತ್ತು ದಾಳಿ ಮಾಹಿತಿಯ ಆಧಾರವಾಗಿದ್ದರು.


ಇರಾಕ್‌ನಲ್ಲಿ ಅಮೆರಿಕ ಸೇನಾ ವಾಹನಗಳು

ಮೊದಲ ದಾಳ ಇರಾನ್ ಪರ

ಇರಾನ್‌ನ ಸರ್ವೋಚ್ಚ ನಾಯಕ ಅಯಾತ್‌ಉಲ್ಲಾ ಅಲಿ ಖೊಮೇನಿ ನಂತರದ ಪ್ರಭಾವಿಯಾಗಿದ್ದವರು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ಸ್‌ನ ಖದ್ಸ್‌ ಫೋರ್ಸ್‌ ಮುಖ್ಯಸ್ಥರಾಗಿದ್ದ ಮೇಜರ್ ಜನರಲ್ ಖಾಸಿಂ ಸುಲೇಮಾನಿ. ಇರಾಕ್‌, ಲೆಬನಾನ್, ಸಿರಿಯಾ, ಯೆಮೆನ್, ಹೈಟಿ ದೇಶಗಳಲ್ಲಿ ಇರಾನ್‌ನ ಪ್ರಭಾವವನ್ನು ವ್ಯಾಪಕವಾಗಿ ವಿಸ್ತರಿಸಿದ ಚಾಣಾಕ್ಷನೀತ. ಇರಾಕ್‌ನಲ್ಲಿ ದಿನದಿಂದ ದಿನಕ್ಕೆ ಅಮೆರಿಕ ಪ್ರಭಾವ ಕಡಿಮೆಯಾಗುತ್ತಿದ್ದರೆ, ಇರಾನ್ ಪ್ರಭಾವ ಹೆಚ್ಚಾಗುತ್ತಿತ್ತು. ಅಮೆರಿಕ ಅಧ್ಯಕ್ಷರಾಗಿದ್ದ ಬಿಲ್ ಕ್ಲಿಂಟನ್ ಮತ್ತು ಬರಾಕ್ ಒಬಾಮಾ ಇದನ್ನು ಗಮನಿಸಿದ್ದರೂ ಸುಲೇಮಾನಿಗೆ ‘ಹುತಾತ್ಮ’ ಪಟ್ಟ ಸಿಕ್ಕರೆ ಆಗುವ ಅನಾಹುತದ ಅರಿವಿದ್ದ ಕಾರಣ ಸುಮ್ಮನಿದ್ದರು. ಆದರೆ ‘ಕ್ರೇಜಿ’ ಟ್ರಂಪ್‌ಗೆ ಇಂಥ ತಾಳ್ಮೆ ಇರಲಿಲ್ಲ.

ಯಾವುದಾದರೂ ನೆಪ ಹುಡುಕಿ ಅಮೆರಿಕಗೆ ತನ್ನ ಸಾಮರ್ಥ್ಯ ತೋರಿಸಬೇಕೆಂದುಕೊಂಡಿದ್ದ ಇರಾನ್‌ಗೆ ಮತ್ತು ಹೇಗಾದರೂ ಮಾಡಿ ಮಧ್ಯಪ್ರಾಚ್ಯದಲ್ಲಿ ಇರಾನ್ ಪ್ರಭಾವ ಕಡಿಮೆ ಮಾಡಬೇಕು ಎಂದು ಹಾತೊರೆಯುತ್ತಿದ್ದ ಅಮೆರಿಕಕ್ಕೆ ಪರಸ್ಪರ ತೊಡೆತಟ್ಟಲು ಸುಲೇಮಾನಿ ಸಾವು ಉತ್ತಮ ನೆಪವಾಯಿತು.

‘ಅಮೆರಿಕ ಹಿತಾಸಕ್ತಿ ರಕ್ಷಣೆಗಾಗಿ ಇಷ್ಟೆಲ್ಲಾ ಮಾಡಬೇಕಾಯ್ತು’ ಎಂದ ಬಿಂಬಿಸಲು ಟ್ರಂಪ್ ಸಾಹೇಬರು ಸರಣಿ ಟ್ವೀಟ್‌ಗಳನ್ನು ಮಾಡಿದರು. ಇರಾನ್‌ ಸರ್ಕಾರ ಸುಲೇಮಾನಿ ಶವವನ್ನು ದೇಶದ ಉದ್ದಗಲಕ್ಕೂ ಓಡಾಡಿಸಿ, ಜನರ ದುಃಖವನ್ನೇ ಆಕ್ರೋಶವನ್ನಾಗಿ, ಅಮೆರಿಕ ವಿರುದ್ಧದ ದ್ವೇಷವನ್ನು ದೇಶಭಕ್ತಿಯನ್ನಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾಯಿತು. ಮಧ್ಯಪ್ರಾಚ್ಯದಲ್ಲಿ ಇನ್ನೊಂದು ಯುದ್ಧಕ್ಕೆ ಅಮೆರಿಕದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದರೆ, ಇರಾನ್ ಜನ ಇದನ್ನು ಅಳಿವು ಉಳಿವಿನ ಪ್ರಶ್ನೆ ಎಂದುಕೊಂಡಿದ್ದಾರೆ. ಅಷ್ಟರಮಟ್ಟಿಗೆ ಮೊದಲ ದಾಳ ಇರಾನ್ ಪರವೇ ಉರುಳಿದೆ.


ಇರಾಕ್‌ನಲ್ಲಿ ಹಾರಾಡುತ್ತಿರುವ ಅಮೆರಿಕ ಜೆಟ್‌ ಯುದ್ಧವಿಮಾನಗಳು

ಇರಾನ್ ಸೇನೆಯ ಗಾತ್ರವೆಷ್ಟು?

ಇರಾಕ್‌ನಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ದಾಳಿ ಮಾಡಿರುವ ಇರಾನ್‌ ಸೇನೆಗೆ ಅಷ್ಟುದೊಡ್ಡ ದೇಶವನ್ನು ಎದುರುಹಾಕಿಕೊಳ್ಳುವ ಸಾಮರ್ಥ್ಯವಿದೆಯೇ?

ಎರಡೂ ದೇಶಗಳ ಸೈನಿಕ ಬಲದ ಅಂಕಿಅಂಶಗಳನ್ನು ಹೋಲಿಸಿ ನೋಡಿದರೆ ಖಂಡಿತ ಹಾಗೆ ಅನ್ನಿಸುವುದಿಲ್ಲ. ರಕ್ಷಣಾ ವ್ಯವಹಾರಗಳಿಗೆ ಸಂಬಂಧಿಸಿದ ನಿಯತಕಾಲಿಕೆಗಳು ಉಲ್ಲೇಖಿಸುವ ‘ಗ್ಲೋಬಲ್‌ ಫೈರ್ ಪವರ್’ ಜಾಲತಾಣದ ಪ್ರಕಾರ ಅಮೆರಿಕ ವಿಶ್ವದ ನಂಬರ್ 1 ಸೇನಾ ಶಕ್ತಿ.

ಅಮೆರಿಕ ಸಶಸ್ತ್ರಪಡೆಗಳಲ್ಲಿರುವ ಒಟ್ಟು ಸಿಬ್ಬಂದಿ ಸಂಖ್ಯೆ 21.50 ಲಕ್ಷ. ಈ ಪೈಕಿ 13 ಲಕ್ಷ ಸಕ್ರಿಯ, 8.60 ಲಕ್ಷ ಮಂದಿ ಮೀಸಲು. ವಾಯುಪಡೆಯಲ್ಲಿರುವ ಒಟ್ಟು ಯುದ್ಧವಿಮಾನಗಳ ಸಂಖ್ಯೆ 13,398, ಹೆಲಿಕಾಪ್ಟರ್‌ಗಳ ಸಂಖ್ಯೆ 5,760. ಅಮೆರಿಕ ಸೇನೆಯಲ್ಲಿ 6,287 ಯುದ್ಧ ಟ್ಯಾಂಕ್‌ಗಳು ಮತ್ತು 39,223 ಸಶಸ್ತ್ರ ವಾಹನಗಳು (ಆರ್ಮೊರ್ಡ್‌ ಫೈಟಿಂಗ್ ವೆಹಿಕಲ್ಸ್) ಇವೆ. 415 ಯುದ್ಧನೌಕೆಗಳಿರುವ ಅಮೆರಿಕ ಸಾಗರದಲ್ಲಿಯೂ ದೊಡ್ಡ ಶಕ್ತಿ. 24 ವಿಮಾನವಾಹಕ ನೌಕೆಗಳು ಮತ್ತು 68 ಜಲಾಂತರ್ಗಾಮಿಗಳು ಅಮೆರಿಕ ಬಳಿಯಿವೆ. ಅಮೆರಿಕದ ವಾರ್ಷಿಕ ರಕ್ಷಣಾ ಬಜೆಟ್ 71 ಲಕ್ಷ ಕೋಟಿ ಡಾಲರ್, ಆಪತ್ತಿಗೆ ಒದಗುವ ವಿದೇಶಿ ಮೀಸಲು ನಿಧಿ / ಚಿನ್ನ 12.5 ಲಕ್ಷ ಕೋಟಿ ಡಾಲರ್‌ನಷ್ಟಿದೆ.

ಈಗ ಇರಾನ್ ವಿಚಾರಕ್ಕೆ ಬರೋಣ. ಗ್ಲೋಬಲ್ ಫೈರ್‌ ಪವರ್ ಜಾಲತಾಣವು ಇರಾನ್‌ಗೆ ಜಾಗತಿಕ ರ‍್ಯಾಂಕಿಂಗ್‌ನಲ್ಲಿ 14ನೇ ಸ್ಥಾನ ನೀಡಿದೆ. ಇರಾನ್ ಸಶಸ್ತ್ರಪಡೆಗಳಲ್ಲಿರುವ ಒಟ್ಟು ಸಿಬ್ಬಂದಿ 8.73 ಲಕ್ಷ. ಈ ಪೈಕಿ 5.23 ಲಕ್ಷ ಮಂದಿ ಸಕ್ರಿಯರಾಗಿದ್ದರೆ, 3.50 ಲಕ್ಷ ಮಂದಿ ಮೀಸಲು. ಇರಾನ್ ವಾಯುಪಡೆಯಲ್ಲಿರುವ ಯುದ್ಧ ವಿಮಾನಗಳ ಸಂಖ್ಯೆ 509, ಹೆಲಿಕಾಪ್ಟರ್‌ಗಳ ಸಂಖ್ಯೆ 126. ಇರಾನ್ ಬಳಿ 1,634 ಯುದ್ಧ ಟ್ಯಾಂಕ್‌ಗಳು ಮತ್ತು 2,345 ಸಶಸ್ತ್ರ ವಾಹನಗಳು (ಆರ್ಮೊರ್ಡ್‌ ಫೈಟಿಂಗ್ ವೆಹಿಕಲ್ಸ್) ಇವೆ. ಯುದ್ಧನೌಕೆಗಳ ಸಂಖ್ಯೆ 398, ಒಂದೂ ವಿಮಾನವಾಹನ ನೌಕೆಯಿಲ್ಲ, 34 ಸಬ್‌ಮರೀನ್‌ಗಳಿವೆ. ವಾರ್ಷಿಕ ರಕ್ಷಣಾ ಬಜೆಟ್– 630 ಕೋಟಿ ಡಾಲರ್, ವಿದೇಶಿ ಮೀಸಲು ನಿಧಿ / ಚಿನ್ನ– 12 ಲಕ್ಷ ಕೋಟಿ ಡಾಲರ್‌ನಷ್ಟಿದೆ.

ಮೇಲ್ನೋಟದ ಹೋಲಿಕೆಯಲ್ಲಿ ಅಮೆರಿಕ ಸೈನಿಕ ಶಕ್ತಿಯ ಸನಿಹಕ್ಕೂ ಇರಾನ್ ಬರುವುದಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಆದರೆ ಯುದ್ಧವೆಂದರೆ ಮುಖಾಮುಖಿ ಹೋರಾಟ ಎಂದಷ್ಟೇ ಇರಾನ್ ಪರಿಗಣಿಸಿಲ್ಲ. ಅಮೆರಿಕದಂಥ ದೈತ್ಯ ಶಕ್ತಿಯ ವಿರುದ್ಧ ಮುಸುಕಿನ ಯುದ್ಧಕ್ಕಾಗಿ ಹತ್ತಾರು ವರ್ಷಗಳಿಂದ ಹಲವಾರು ದೇಶಗಳಲ್ಲಿ ಶಕ್ತಿಕೇಂದ್ರಗಳನ್ನು ರೂಪಿಸಿಕೊಂಡಿದೆ. ಅಮೆರಿಕ ಇರಾನ್‌ ನೆಲದ ಮೇಲೆ ಬಾಂಬ್ ಹಾಕಿದರೆ ವಿಶ್ವದ ಹಲವು ದೇಶಗಳಲ್ಲಿ ಅಮೆರಿಕದ ಹಿತಾಸಕ್ತಿಗಳ ವಿರುದ್ಧ ಶಕ್ತಿಕೇಂದ್ರಗಳು ಮುಗಿಬೀಳುತ್ತವೆ. ಏಕಕಾಲಕ್ಕೆ ಅಮೆರಿಕ ಹಲವು ಯುದ್ಧಭೂಮಿಗಳನ್ನು ಎದುರಿಸಬೇಕಾಗುತ್ತದೆ ಎನ್ನುವುದು ಇದರ ತಾತ್ಪರ್ಯ.

ಈ ತಂತ್ರವನ್ನು ಹೆಣೆದು ಕಾರ್ಯರೂಪಕ್ಕೆ ತಂದವರು ಖಾಸಿಂ ಸುಲೇಮಾನಿ. ಆತ ಖದ್ಸ್‌ ಫೋರ್ಸ್‌ ಅನ್ನು ವ್ಯಕ್ತಿ ಕೇಂದ್ರಿತವಾಗಿ ಬೆಳೆಸದೇ, ಒಂದು ದೇಶ ಮತ್ತು ಸಮುದಾಯ ನಿಷ್ಠ ಸಂಘಟನೆಯಾಗಿ ಬೆಳೆಸಿದ. ಹೀಗಾಗಿ ಖಾಸಿಂ ಸುಲೇಮಾನಿ ಮೃತಪಟ್ಟಿದ್ದರೂ ಇರಾನ್‌ನ ಯುದ್ಧೋತ್ಸಾಹ ಕಳೆಕುಂದಿಲ್ಲ. ಬದಲಾಗಿ ಪ್ರತೀಕಾರಕ್ಕಾಗಿ ಅದು ಈಗ ತಹತಹಿಸುತ್ತಿದೆ.

ಇರಾನ್ ಆಡಳಿತ ವ್ಯವಸ್ಥೆಯೂ ಅಮೆರಿಕಕ್ಕಿಂತ ಭಿನ್ನ. ಅಲ್ಲಿ ಜನರು ಚುನಾಯಿಸಿದ ಸರ್ಕಾರವಿದೆ. ಅದರ ಜೊತೆಜೊತೆಗೆ ಸರ್ವೋಚ್ಚ ನಾಯಕ ಅಯಾತ್‌ಉಲ್ಲಾ ಅಲಿ ಖೊಮೇನಿ ಇದ್ದಾರೆ. ಇದೇ ರೀತಿ ಸರ್ಕಾರಕ್ಕೆ ನಿಷ್ಠವಾಗಿರುವ ಸೇನೆಯ ಜೊತೆಗೆ ಸರ್ವೋಚ್ಚ ನಾಯಕನಿಗೆ ನೇರವಾಗಿ ವರದಿ ಮಾಡಿಕೊಳ್ಳುವ ಐಆರ್‌ಜಿಸಿ (ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ಸ್‌ ಕಾರ್ಪ್ಸ್‌) ಇದೆ. 

ದೇಶದೊಳಗೆ ಭಿನ್ನಮತ ತಲೆಯೆತ್ತದಂತೆ ನೋಡಿಕೊಳ್ಳುವ ‘ಬಸಿಜ್’ ಮತ್ತು ವಿದೇಶಗಳಲ್ಲಿ ಇರಾನ್ ಹಿತ ಕಾಪಾಡುವ ಖದ್ಸ್‌ ಫೋರ್ಸ್‌ಗಳನ್ನೂ ಐಆರ್‌ಜಿಸಿ ನಿಯಂತ್ರಿಸುತ್ತಿದೆ. ಇರಾಕ್‌ ವಿರುದ್ಧದ ಯುದ್ಧದಲ್ಲಿ ಅನುಸರಿಸಿದ್ದ ‘ಮಾನವ ಅಲೆಗಳ ದಾಳಿ’ (ಹ್ಯೂಮನ್ ವೇವ್ಸ್‌ ಅಟ್ಯಾಕ್) ತಂತ್ರವನ್ನು ಇರಾನ್ ಇಂದಿಗೂ ಮರೆತಿಲ್ಲ. ನಿರ್ದಿಷ್ಟ ಸಮಯ ಮತ್ತು ಸ್ಥಳದಲ್ಲಿ ಒಮ್ಮೆಲೆ ಸಾವಿರಾರು ಮಂದಿಯನ್ನು ಸೇರಿಸುವಷ್ಟು ಸಾಮರ್ಥ್ಯ ಬಸಿಜ್‌ ಸಂಘಟನೆಗೆ ಇದೆ.

ಹಲವು ದೇಶಗಳಲ್ಲಿ ಸರ್ಕಾರಿ ಅಧಿಕಾರಿಗಳು, ರಾಯಭಾರಿಗಳು, ಪುಡಿ ರೌಡಿಗಳು, ಭಯೋತ್ಪಾದಕರು, ಪ್ರಭಾವಿ ರಾಜಕಾರಿಣಿಗಳು ಖದ್ಸ್‌ ಫೋರ್ಸ್‌ನ ಋಣದಲ್ಲಿದ್ದಾರೆ. ಈ ಸಂಘಟನೆಯು ತನ್ನ ಎಲ್ಲ ಘಟಕಗಳನ್ನು ಕ್ರಿಯಾಶೀಲಗೊಳಿಸಿದರೆ ಏಕಕಾಲದಲ್ಲಿ, ಹಲವು ಹಂತಗಳಲ್ಲಿ ಅಮೆರಿಕ ಮೇಲೆ ಪ್ರತಿದಾಳಿ ಆರಂಭವಾಗುತ್ತದೆ. ಮರಳುಗಾಡಿನ ದೇಶಗಳಲ್ಲಿ ಇಂಥ ಸುದೀರ್ಘ ಯುದ್ಧಗಳು ಅಮೆರಿಕಕ್ಕೆ ಹೊಸತೇನೂ ಅಲ್ಲ. ಆದರೆ ತಮಗೆ ಸಂಬಂಧವೇಪಡದ ದೇಶದಿಂದ ಬರುವ ಶವಪೆಟ್ಟಿಗೆಗಳನ್ನು ಜನರು ಎಷ್ಟು ದಿನ ಸಹಿಸಿಕೊಂಡಾರು? ಹೀಗಾಗಿಯೇ ಹಿಂದೆ ವಿಯೆಟ್ನಾಂನಲ್ಲಿ ಅನುಭವಿಸಿದ ಗತಿಯನ್ನೇ ಅಮೆರಿಕ ಈ ಬಾರಿ ಮಧ್ಯಪ್ರಾಚ್ಯದಲ್ಲಿಯೂ ಅನುಭವಿಸಬಹುದು ಎಂದು ಮಿಲಿಟರಿ ತಜ್ಞರು ವಿಶ್ಲೇಷಿಸುತ್ತಿದ್ದಾರೆ.


ಇರಾಕ್‌ನಲ್ಲಿ ಅಮೆರಿಕ ಸೇನಾ ಕಾರ್ಯಾಚರಣೆ

ಇರಾನ್ ಬಳಿ ಕ್ಷಿಪಣಿಗಳಿವೆ ಎಚ್ಚರಿಕೆ

ಸಾಂಪ್ರದಾಯಿಕ ಯುದ್ಧಗಳನ್ನು ಎದುರಿಸಲು ಸಮರ್ಥ ಸೇನೆ, ಯುದ್ಧವಿಮಾನಗಳು ಮತ್ತು ಸಾಕಷ್ಟು ಶಸ್ತ್ರಾಸ್ತ್ರಗಳು ಬೇಕು. ಈ ವಿಚಾರದಲ್ಲಿ ತನಗಿರುವ ಮಿತಿಗಳನ್ನು ಅರಿತುಕೊಂಡಿರುವ ಇರಾನ್‌, ಆ ಕೊರತೆಗಳನ್ನು ಕ್ಷಿಪಣಿಗಳ ಮೂಲಕ ತುಂಬಿಕೊಳ್ಳಲು ಯತ್ನಿಸುತ್ತಿದೆ.

ಮಧ್ಯಪ್ರಾಚ್ಯದಲ್ಲಿ ಅತ್ಯಂತ ಪ್ರಖರ ಮತ್ತು ನಿಖರ ಕ್ಷಿಪಣಿ ದಾಳಿ ಸಾಮರ್ಥ್ಯ ಇರಾನ್‌ಗೆ ಇದೆ ಎಂಬುದನ್ನು ಸ್ವತಃ ಅಮೆರಿಕ ಒಪ್ಪಿಕೊಳ್ಳುತ್ತದೆ. ಹತ್ತಿರದ ಮತ್ತು ಮಧ್ಯಮ ದೂರದ ಗುರಿಗಳನ್ನು ನಿಖರವಾಗಿ ತಲುಪಬಲ್ಲ ದೊಡ್ಡಸಂಖ್ಯೆಯ ಕ್ಷಿಪಣಿಗಳು ಇರಾನ್‌ ಬತ್ತಳಿಕೆಯಲ್ಲಿರುವ ದೊಡ್ಡ ಅಸ್ತ್ರ. ಇದೀಗ ಬಾಹ್ಯಾಕಾಶ ತಂತ್ರಜ್ಞಾನದತ್ತ ಗಮನ ಹರಿಸುತ್ತಿರುವ ಇರಾನ್, ಖಂಡಗಳನ್ನು ದಾಟಿ ಬಹುದೂರದ ಗುರಿಗಳನ್ನು ಮುಟ್ಟಬಲ್ಲ ಖಂಡಾಂತರ ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸುವ ಯತ್ನದಲ್ಲಿದೆ.

ಪರಮಾಣು ರಿಯಾಕ್ಟರ್ ಸಂಬಂಧ ಕೆಲ ದೇಶಗಳೊಂದಿಗೆ 2015ರಲ್ಲಿ ಮಾಡಿಕೊಂಡ ಒಪ್ಪಂದದಂತೆ ಇರಾನ್ ತನ್ನ ದೂರಗಾಮಿ ಕ್ಷಿಪಣಿ ಯೋಜನೆಗಳನ್ನು ಸ್ಥಗಿತಗೊಳಿಸಿತ್ತು. ಆದರೆ ಸುಲೇಮಾನಿ ಹತ್ಯೆಯ ನಂತರ ನಾನು ಹಳೆಯ ಒಪ್ಪಂದಕ್ಕೆ ಬದ್ಧನಾಗಿಲ್ಲ ಎಂದು ಇರಾನ್ ಹೇಳಿದೆ. ಹೀಗಾಗಿ ಇರಾನ್ ತನ್ನ ದೂರಗಾಮಿ ಕ್ಷಿಪಣಿ ಅಭಿವೃದ್ಧಿ ಯೋಜನೆಯನ್ನು ಮತ್ತೆ ಆರಂಭಿಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಇರಾನ್‌ನಲ್ಲಿ ಸುಪರ್ದಿಯಲ್ಲಿ ಈಗ ಇರುವ ಕ್ಷಿಪಣಿಗಳನ್ನು ಬಳಸಿಯೇ ಸೌದಿ ಅರೇಬಿಯಾ ಮತ್ತು ಗಲ್ಫ್‌ ದೇಶಗಳಲ್ಲಿರುವ ಅಮೆರಿಕದ ಹಲವು ನೆಲೆಗಳನ್ನು ಧ್ವಂಸಮಾಡಬಹುದು. ಇಸ್ರೇಲ್‌ವರೆಗೂ ಈ ಕ್ಷಿಪಣಿಗಳು ಸುಲಭವಾಗಿ ತಲುಪಬಲ್ಲವು.

ಇರಾನ್‌ನ ಕ್ಷಿಪಣಿ ಸಾಮರ್ಥ್ಯ ಮನಗಂಡೇ ಕಳೆದ ವರ್ಷ ಅಮೆರಿಕ ಪೇಟ್ರಿಯಟ್ ಕ್ಷಿಪಣಿ ನಿರೋಧಕ ವ್ಯವಸ್ಥೆಯನ್ನು ಮಧ್ಯಪ್ರಾಚ್ಯಕ್ಕೆ ರವಾನಿಸಿತ್ತು. ಇದು ಖಂಡಾಂತರ, ಶಬ್ದಾತೀತ ಕ್ಷಿಪಣಿಗಳು ಮತ್ತು ಅತ್ಯಾಧುನಿಕ ವಿಮಾನಗಳ ದಾಳಿಯಿಂದ ರಕ್ಷಣೆ ನೀಡುವ ಸಾಮರ್ಥ್ಯ ಹೊಂದಿದೆ.


ಇರಾಕ್‌ನಲ್ಲಿ ಬಾಂಬ್ ಹಾಕುತ್ತಿರುವ ಅಮೆರಿಕದ ಹೆಲಿಕಾಪ್ಟರ್

ಇರಾನ್ ಬಳಿ ಅಣ್ವಸ್ತ್ರವಿದೆಯೇ?

ಇರಾನ್ ಬಳಿ ಸದ್ಯಕ್ಕೆ ಅಣ್ವಸ್ತ್ರವಿಲ್ಲ. ಆದರೆ ಅಣ್ವಸ್ತ್ರ ಸಿದ್ಧಪಡಿಸುವ ತಂತ್ರಜ್ಞಾನ, ಕಚ್ಚಾಸಾಮಗ್ರಿ, ಸವಲತ್ತು ಮತ್ತು ಪರಿಕರಗಳು ಇರಾನ್ ಬಳಿಯಿವೆ. ‘ಸರ್ಕಾರ ಆದೇಶ ನೀಡಿದ 2ರಿಂದ 3 ತಿಂಗಳೊಳಗೆ ಅಣ್ವಸ್ತ್ರ ಅಭಿವೃದ್ಧಿಪಡಿಸುವ ಸಾಮರ್ಥ್ಯ ಇರಾನ್‌ಗೆ ಇದೆ’ ಎಂದು 2015ರಲ್ಲಿ ಅಮೆರಿಕ ಅಧ್ಯಕ್ಷರಾಗಿದ್ದ ಬರಾಕ್ ಒಬಾಮಾ ಹೇಳಿದ್ದರು.

ವಿಶ್ವದ ಆರು ದೊಡ್ಡ ದೇಶಗಳೊಂದಿಗೆ ಇರಾನ್‌ ಅಣುಶಕ್ತಿ ಒಪ್ಪಂದ ಮಾಡಿಕೊಂಡ ನಂತರ, ಇರಾನ್‌ನ ನ್ಯೂಕ್ಲಿಯರ್ ಚಟುವಟಿಕೆಗಳ ಮೇಲೆ ಸಾಕಷ್ಟು ನಿಯಂತ್ರಣ ಮತ್ತು ಪರಿಶೀಲನಾ ವ್ಯವಸ್ಥೆಗಳು ಜಾರಿಗೆ ಬಂದವು. ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಈ ಒಪ್ಪಂದದಿಂದ 2018ರಲ್ಲಿ ಹೊರಗೆ ಬಂದರು.

ಇರಾನ್‌ನ ಅಣುಶಕ್ತಿ ಸಂಶೋಧನೆಗಳ ಮೇಲೆ ನಿಗಾ ಇರಿಸುವುದು, ಅಣ್ವಸ್ತ್ರ ತಯಾರಿಯನ್ನು ಕ್ಲಿಷ್ಟಗೊಳಿಸುವುದು ಮತ್ತು ಸುದೀರ್ಘ ಸಮಯ ತೆಗೆದುಕೊಳ್ಳುವಂತೆ ಮಾಡುವುದು ಈ ಒಪ್ಪಂದದ ಉದ್ದೇಶವಾಗಿತ್ತು. ಆದರೆ ಅಮೆರಿಕ ಸೇನೆ ಇರಾನ್‌ನ ಮೇಜರ್ ಜನರಲ್ ಸುಲೇಮಾನಿ ಅವರನ್ನು ಕೊಂದಿದ್ದನ್ನೇ ನೆಪವಾಗಿಸಿಕೊಂಡು ಇರಾನ್, ‘ಇನ್ನು ಈ ಒಪ್ಪಂದ ಮತ್ತು ಕಟ್ಟುಪಾಡುಗಳಿಗೆ ನಾನು ಬದ್ಧನಾಗಿ ಇರುವುದಿಲ್ಲ’ ಎಂದು ಘೋಷಿಸಿದೆ.


ಸುಲೇಮಾನಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ ಇರಾನ್ ನಾಗರಿಕರು

ಡ್ರೋಣ್ ತಂತ್ರ

ಹಲವು ವರ್ಷಗಳಿಂದ ಆರ್ಥಿಕ ದಿಗ್ಬಂಧನಗಿದ್ದರೂ ಇರಾನ್‌ಗೆ ಡ್ರೋಣ್ ಬಳಕೆ ಸಾಮರ್ಥ್ಯ ದೊಡ್ಡ ಶಕ್ತಿಯಾಗಿ ರೂಪುಗೊಂಡಿದೆ. 2016ರಲ್ಲಿ ಐಸಿಸ್ (ಇಸ್ಲಾಮಿಕ್ ಸ್ಟೇಟ್) ವಿರುದ್ಧ ನಡೆದ ನಿರ್ಣಾಯಕ ಹೋರಾಟಗಳಲ್ಲಿ ಇರಾನ್ ನಿರ್ಮಿತ ಡ್ರೋಣ್‌ಗಳೂ ಬಳಕೆಯಾಗಿದ್ದವು. ಸಿರಿಯಾದಲ್ಲಿರುವ ನೆಲೆಗಳ ಮೂಲಕ ಇಸ್ರೇಲ್‌ನ ವಾಯುಗಡಿಗೂ ಇರಾನ್‌ನ ಡ್ರೋಣ್‌ಗಳು ಹಾರಾಡಿ ಗೂಢಚರ್ಯೆ ನಡೆಸಿದ್ದವು.

ಸ್ಟ್ರೇಟ್ ಆಫ್ ಹೊರ್ಮುಜ್ ಸಮುದ್ರದಲ್ಲಿ ಇರಾನ್‌ ವಾಯುಗಡಿ ಉಲ್ಲಂಘಿಸಿದ್ದ ಅಮೆರಿಕದ ಸಮೀಕ್ಷಾ ಡ್ರೋಣ್‌ ಒಂದನ್ನು ಇರಾನ್‌ ಜೂನ್ 2019ರಲ್ಲಿ ಹೊಡೆದುಹಾಕಿತ್ತು. ತನ್ನ ಸಹವರ್ತಿಗಳು ಮತ್ತು ತಾನು ಹುಟ್ಟುಹಾಕಿದ ಸಶಸ್ತ್ರದಳಗಳಿಗೆ ಡ್ರೋಣ್‌ಗಳನ್ನು ಪೂರೈಸುವ, ಮಾರುವ, ತಂತ್ರಜ್ಞಾನ ಹಸ್ತಾಂತರಿಸುವ ಚಟುವಟಿಕೆಗಳಲ್ಲಿಯೂ ಇರಾನ್ ತೊಡಗಿಕೊಂಡಿದೆ. ಒಂದು ವೇಳೆ ಯುದ್ಧ ಘೋಷಣೆಯಾದರೆ ಈ ಹಿಂದೆಂದೂ ವಿಶ್ವ ಕಂಡುಕೇಳರಿಯದ ರೀತಿಯಲ್ಲಿ ಡ್ರೋಣ್‌ಗಳು ಸದ್ದು ಮಾಡುತ್ತವೆ, ಬಾಂಬ್‌ಗಳನ್ನು ಎಸೆಯುತ್ತವೆ.

ಸೈಬರ್ ದಾಳಿ ಸಾಮರ್ಥ್ಯ

‘ನನ್ನನ್ನು ಕೆಣಕಿದರೆ ಮರುಳುಗಾಡಿನಲ್ಲಿ ಬಿಸಿಲಿನಲ್ಲಿ ಮಾತ್ರವೇ ಅಲ್ಲ, ನಿಮ್ಮದೇ ವಾಷಿಂಗ್‌ಟನ್‌ನ ಹವಾನಿಯಂತ್ರಿತ ಕಚೇರಿಯಲ್ಲಿಯೂ ನಿಮ್ಮನ್ನು ಕಂಗಾಲು ಮಾಡಬಲ್ಲೆ’ ಎಂದು ಇರಾನ್‌ 2012ರಲ್ಲಿಯೇ ಸೈಬರ್ ದಾಳಿಯ ಮೂಲಕ ನಿರೂಪಿಸಿತ್ತು.

ಸೈಬರ್ ದಾಳಿಯನ್ನು ಯುದ್ಧಾಸ್ತ್ರವನ್ನಾಗಿ ಇರಾನ್ ರೂಪಿಸಿಕೊಂಡಿದ್ದರ ಹಿನ್ನೆಲೆಯೂ ರೋಚಕವಾಗಿದೆ. 2010ರಲ್ಲಿ ಇರಾನ್‌ನ ನ್ಯೂಕ್ಲಿಯರ್ ಘಟಕಗಳ ಮೇಲೆ ಪ್ರಬಲ ಸೈಬರ್ ದಾಳಿ ಆಗಿತ್ತು. ಅದರಿಂದ ಸಾವರಿಸಿಕೊಂಡ ಇರಾನ್‌ಗೆ ಇದು ಉತ್ತಮ ದಾಳಿ ಸಾಧ್ಯತೆ ತೆರೆದಿಟ್ಟ ಅಸ್ತ್ರವಾಗಿ ಕಂಡಿತ್ತು. ಈ ಘಟನೆಯ ನಂತರ ಇರಾನ್ ತನ್ನದೇ ಆದ ಸೈಬರ್‌ಸ್ಪೇಸ್ ಸಾಮರ್ಥ್ಯ ವೃದ್ಧಿಗೆ ಗಮನ ನೀಡಿತ್ತು.

ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ಸ್‌ ಕಾರ್ಪ್ಸ್‌ ತನ್ನದೇ ಆದ ಸೈಬರ್‌ ಕಮಾಂಡ್‌ ಹೊಂದಿದೆ ಎಂದು ಹಲವರು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅದು ವಾಣಿಜ್ಯ ಮತ್ತು ಮಿಲಿಟರಿ ಗೂಢಚರ್ಚೆಯಲ್ಲಿ ಸಕ್ರಿಯವಾಗಿ ಭಾಗಿಯಾಗಿದೆ ಎಂದು ನಂಬಲು ಹಲವು ಆಧಾರಗಳನ್ನು ರಕ್ಷಣಾ ವ್ಯವಹಾರಗಳಿಗೆ ಸಂಬಂಧಿಸಿದ ಜಾಲತಾಣಗಳು ಪ್ರಕಟಿಸಿವೆ.

ಅಮೆರಿಕದ ಬ್ಯಾಂಕ್‌ ಸರ್ವರ್‌ಗಳ ಮೇಲೆ ಇರಾನ್‌ ಸೈಬರ್ ದಾಳಿಗೆ ಯತ್ನಿಸಿತ್ತು 2012ರಲ್ಲಿ ಒಮ್ಮೆ ಅಮೆರಿಕ ಅಧಿಕಾರಿಗಳು ಹೇಳಿದ್ದರು. ವೈಮಾನಿಕ ಕಂಪನಿಗಳು, ರಕ್ಷಣಾ ಗುತ್ತಿಗೆದಾರರು, ಇಂಧನ ಮತ್ತು ನೈಸರ್ಗಿಕ ಸಂಪನ್ಮೂಲಗಳ ಕಂಪನಿಗಳನ್ನು ಗುರಿಯಾಗಿಸಿ ಇರಾನ್‌ ನಿಯಮಿತವಾಗಿ ಸೈಬರ್ ಗೂಢಚರ್ಚೆ ನಡೆಸಿದೆ ಎಂದು 2019ರಲ್ಲಿ ಅಮೆರಿಕ ಮತ್ತೊಮ್ಮೆ ಆರೋಪಿಸಿತ್ತು.

2019ರಲ್ಲಿ ಮೈಕ್ರೊಸಾಫ್ಟ್‌ ಸಹ ಇರಾನ್ ಮೂಲದ ಮತ್ತು ಇರಾನ್ ಸರ್ಕಾರದ ಜೊತೆಗೆ ಸಂಬಂಧ ಹೊಂದಿರುವ ಹ್ಯಾಕರ್‌ಗಳ ಗುಂಪು ಅಮೆರಿಕ ಅಧ್ಯಕ್ಷ ಚುನಾವಣೆ ಪ್ರಚಾರದಲ್ಲಿ ಹಸ್ತಕ್ಷೇಪ ನಡೆಸಲು ಪ್ರಯತ್ನಿಸಿತ್ತು. ಅಮೆರಿಕ ಸರ್ಕಾರದ ಅಧಿಕಾರಿಗಳ ಹೆಸರಿನಲ್ಲಿರುವ ವಿವಿಧ ಅಕೌಂಟ್‌ಗಳನ್ನು ಹ್ಯಾಕ್ ಮಾಡಲು ಯತ್ನಿಸಿತ್ತು ಎಂದು ಆರೋಪಿಸಿತ್ತು.

ಯಾರಿಗೆ ಗೆಲುವು?

ವಿಶ್ವದ ಹಲವು ಮಾಧ್ಯಮಗಳು ವರದಿ ಮಾಡುತ್ತಿರುವಂತೆ ಇರಾನ್–ಅಮೆರಿಕ ಸಂಘರ್ಷ ಖಂಡಿತ 3ನೇ ಮಹಾಯುದ್ಧದಲ್ಲಿ ಪರ್ಯಾವಸನಗೊಳ್ಳುವುದಿಲ್ಲ. ಆದರೆ ಅಂಥದ್ದೊಂದು ಮಹಾಯುದ್ಧಕ್ಕೆ ಮತ್ತು ಅಂಥದ್ದೊಂದು ಮಹಾಯುದ್ಧವಾದರೆ ಅದರ ಪರಿಣಾಮ ಹೇಗಿರುತ್ತದೆ ಎಂಬ ಚರ್ಚೆಯನ್ನು ಮಾತ್ರ ಖಂಡಿತ ಹುಟ್ಟು ಹಾಕಬಲ್ಲದು. ಎರಡೂ ದೇಶಗಳ ನಡುವೆ ಒಂದು ವೇಳೆ ಪೂರ್ಣ ಪ್ರಮಾಣದ ಯುದ್ಧವೇ ಘೋಷಣೆಯಾದರೆ ಜಗತ್ತಿನ ಬಲಾಢ್ಯ ಶಕ್ತಿಗಳಾದ ರಷ್ಯಾ, ಚೀನಾಗಳು ಒಂದೋ ತಟಸ್ಥವಾಗುತ್ತವೆ ಅಥವಾ ಇರಾನ್ ಪರ ನಿಲ್ಲುತ್ತವೆ. ಇರಾನ್ ಮತ್ತು ಅಮೆರಿಕ ಜೊತೆಗೆ ಭಾರತಕ್ಕೆ ಮೈತ್ರಿಯಿದೆ. ಹೀಗಾಗಿ ಭಾರತ ಯಾವುದೇ ಒಂದು ದೇಶದ ಪರವಾಗಿ ನಿಲ್ಲುವ ಸಾಹಸ ಮಾಡಲಾರದೆ ಅಂತರ ಕಾಯ್ದುಕೊಳ್ಳುತ್ತದೆ.

ಏನೂ ಪ್ರಭಾವವಿಲ್ಲದ ಕಾಲದಲ್ಲಿ, ಸಂಘಟನಾತ್ಮಕ ಸಮಸ್ಯೆಗಳು ಸಾಕಷ್ಟು ಇದ್ದ ಅವಧಿಯಲ್ಲಿ ಇರಾಕ್‌ ಜೊತೆಗೆ 8 ವರ್ಷಗಳ ಯುದ್ಧ ಮಾಡಿ ದಕ್ಕಿಸಿಕೊಂಡ ದೇಶ ಇರಾನ್. ಈಗ ಅದರ ಅಧ್ಯಕ್ಷ ಆಯತುಲ್ಲಾ ಅಲಿ ಖೊಮೇನಿಗೆ ಸ್ವದೇಶದಲ್ಲಿ ಹೇಳಿಕೊಳ್ಳುವಂಥ ವಿರೋಧವಿಲ್ಲ, ಅಕ್ಕಪಕ್ಕದ ದೇಶಗಳಲ್ಲಿ ವ್ಯಾಪಕ ಪ್ರಭಾವವಿದೆ. ಆರ್ಥಿಕ ಸ್ಥಿತಿ ಕುಸಿದಿದ್ದರೂ ಸರ್ಕಾರಕ್ಕೆ ಬೇಷರತ್ ಬೆಂಬಲ ಘೋಷಿಸುವ ಮನಸ್ಥಿತಿಯ ಜನರಿದ್ದಾರೆ.

ಈವರೆಗಿನ ಬೆಳವಣಿಗೆಗಳನ್ನೂ ಸೂಕ್ಷ್ಮವಾಗಿ ಗಮನಿಸಿದಾಗ ಅನ್ನಿಸುವುದಿಷ್ಟು. ಸಂಘರ್ಷದ ಅವಧಿ ಹೆಚ್ಚಿದಷ್ಟೂ ಇರಾನ್‌ನ ಗೆಲುವಿನ ಸಾಧ್ಯತೆಯೂ ಹೆಚ್ಚಾಗುತ್ತೆ. ಮುಂದಿನ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್‌ ಗೆದ್ದರೂ ಅಥವಾ ಸೋತರೂ, ಮಧ್ಯಪ್ರಾಚ್ಯದ ಯುದ್ಧಕ್ಕೆ ಸ್ವದೇಶದಲ್ಲಿ ಹೆಚ್ಚುವ ವಿರೋಧವನ್ನು ನಿರ್ವಹಿಸವುದೇ ಅಮಿರಕ್ಕೆ ದೊಡ್ಡ ಸವಾಲು ಆಗುವ ಸಾಧ್ಯತೆ ಇದೆ.

 

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು