ಮತದಾನದ ವೇಳೆ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ: ಕ್ಷಮೆಯಾಚಿಸಿದ ಇಮ್ರಾನ್‌

5

ಮತದಾನದ ವೇಳೆ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ: ಕ್ಷಮೆಯಾಚಿಸಿದ ಇಮ್ರಾನ್‌

Published:
Updated:
Deccan Herald

ಇಸ್ಲಾಮಾಬಾದ್‌ : ಜುಲೈ 25ರಂದು ನಡೆದ ಸಾರ್ವತ್ರಿಕ ಚುನಾವಣೆ ವೇಳೆ ಮತದಾನ ಮಾಡುವಾಗ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ್ ತೆಹ್ರೀಕ್‌–ಎ–ಇನ್ಸಾಫ್ (ಪಿಟಿಐ) ಪಕ್ಷದ ಪ್ರಧಾನಿ ಅಭ್ಯರ್ಥಿ ಇಮ್ರಾನ್‌ ಖಾನ್‌ ಅವರು ಚುನಾವಣಾ ಆಯೋಗಕ್ಕೆ ಶುಕ್ರವಾರ ಲಿಖಿತ ಕ್ಷಮೆಯಾಚನೆ ಮತ್ತು ಪ್ರಮಾಣ ಪತ್ರ ಸಲ್ಲಿಸಿದರು.

ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ಚುನಾವಣಾ ಆಯುಕ್ತ ಸರ್ದಾರ್‌ ಮೊಹಮದ್‌ ರಾಜಾ ನೇತೃತ್ವದ ನಾಲ್ವರು ಸದಸ್ಯರ ಪೀಠವು ತೀರ್ಪು ಕಾಯ್ದಿರಿಸಿದೆ ಎಂದು ತಿಳಿಸಿದೆ.

‘ತಮ್ಮ ಕಕ್ಷಿದಾರರು ಸಾರ್ವಜನಿಕವಾಗಿ ಮತ ಚಲಾಯಿಸಿದ್ದರ ಹಿಂದೆ ಯಾವುದೇ ಉದ್ದೇಶವಿರಲಿಲ್ಲ’ ಎಂದು ಇಮ್ರಾನ್‌ ಪರ ವಕೀಲ ಬಾಬರ್‌ ಅವಾನ್‌ ಅವರು ಗುರುವಾರ ಆಯೋಗಕ್ಕೆ ತಿಳಿಸಿದ್ದರು. ಆದರೆ, ಆಯೋಗವು ಇದನ್ನು ಒಪ್ಪಿರಲಿಲ್ಲ. ಚುನಾವಣಾ ಕಾಯ್ದೆ ಪ್ರಕಾರ ಗೌಪ್ಯವಾಗಿ ಮತ ಚಲಾಯಿಸದ ಯಾವುದೇ ವ್ಯಕ್ತಿಗೆ ಆರು ತಿಂಗಳು ಜೈಲು ಶಿಕ್ಷೆ ಇಲ್ಲವೇ ₹ 1 ಸಾವಿರ ದಂಡ ವಿಧಿಸಲು ಅವಕಾಶವಿದೆ.

ಇಮ್ರಾನ್‌ಗೆ ಅಭಿನಂದನೆ: ಭಾರತದ ಹೈಕಮಿಷನರ್‌ ಅಜಯ್‌ ಬಿಸಾರಿಯಾ, ಇಮ್ರಾನ್‌ಖಾನ್ ಅವರನ್ನು ಶುಕ್ರವಾರ ಭೇಟಿಯಾಗಿ ಅಭಿನಂದಿಸಿದರು. ಕಾಶ್ಮೀರ ವಿವಾದ ಸೇರಿದಂತೆ ಹಲವು ವಿಷಯಗಳ ಕುರಿತು ಖಾನ್‌ ಹಾಗೂ ಬಿಸಾರಿಯಾ ಚರ್ಚೆ ನಡೆಸಿದರು. ಈ ವೇಳೆ ಉಭಯ ದೇಶಗಳ ನಡುವೆ ಮಾತುಕತೆ ಪುನರಾರಂಭವಾಗಬೇಕು ಎಂಬ ಆಶಯವನ್ನು ಇಮ್ರಾನ್‌ ವ್ಯಕ್ತಪಡಿಸಿದರೆಂದು ಮಾಧ್ಯಮಗಳು ವರದಿ ಮಾಡಿವೆ.

ಅಕ್ರಮಕ್ಕಾಗಿ ಅಪಹರಿಸಿದ್ದರು: (ಕರಾಚಿ ವರದಿ): ‘ಚುನಾವಣೆಯಲ್ಲಿ ಅಕ್ರಮ ನಡೆಸುವುದಕ್ಕಾಗಿ ತಮ್ಮನ್ನು ಭದ್ರತಾ ಪಡೆಗಳು ಅಪಹರಣ ಮಾಡಿದ್ದವು’ ಎಂದು ಪಾಕಿಸ್ತಾನದ ಬಲೂಚಿಸ್ಥಾನದ ಚುನಾವಣಾ ಅಧಿಕಾರಿಯೊಬ್ಬರು ಹೇಳಿದ್ದಾರೆ.

‘ಮುತ್ತಹಿದಾ ಮಜ್ಲಿಸ್‌ ಅಮಾಲ್ ಪಕ್ಷದ ಪರ ನಕಲಿ ಮತಗಳನ್ನು ಹಾಕಲು ನೆರವಾಗುವಂತೆ ಒತ್ತಾಯ ಮಾಡಲಾಗಿತ್ತು’ ಎಂದು ಅವರು ಆರೋಪಿಸಿದ್ದಾರೆ.
**

18ಕ್ಕೆ ಇಮ್ರಾನ್‌ ಪ್ರಮಾಣವಚನ
ಪಾಕಿಸ್ತಾನ ನೂತನ ಸರ್ಕಾರದ ಸಂಸತ್‌ನ ಮೊದಲ ಅಧಿವೇಶನ ಸೋಮವಾರ ಆರಂಭವಾಗುವ ಸಾಧ್ಯತೆ ಇದೆ.

ಸಂಸತ್‌ನ ನೂತನ ಸದಸ್ಯರು ಅಂದು ಪ್ರಮಾಣ ಸ್ವೀಕರಿಸುವರು. ಇದರ ಬೆನ್ನಲ್ಲೇ ಸ್ಪೀಕರ್‌ ಮತ್ತು ಡೆಪ್ಯುಟಿ ಸ್ಪೀಕರ್‌ ಆಯ್ಕೆ ನಡೆಯಲಿದೆ.

ಇಮ್ರಾನ್‌ ಖಾನ್‌ ಅವರು ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಆಗಸ್ಟ್‌ 18ರಂದು ಪ್ರಮಾಣವಚನ ಸ್ವೀಕರಿಸುವರು ಎಂದು ಪಾಕಿಸ್ತಾನ್‌ ತೆಹ್ರೀಕ್‌–ಎ–ಇನ್ಸಾಫ್‌ (ಪಿಟಿಐ) ಹಿರಿಯ ಮುಖಂಡ ಫೈಸಲ್‌ ಜಾವೇದ್‌ ತಿಳಿಸಿದ್ದಾರೆ.

ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸುವಂತೆ ಭಾರತದ ಹಿರಿಯ ಕ್ರಿಕೆಟಿಗರಾದ ಕಪಿಲ್‌ ದೇವ್‌, ನವಜೋತ್‌ ಸಿಂಗ್‌ ಸಿಧು ಮತ್ತು ಸುನಿಲ್‌ ಗವಾಸ್ಕರ್‌ ಅವರನ್ನು ಇಮ್ರಾನ್‌ ಆಹ್ವಾನಿಸಿದ್ದಾರೆ ಎಂದೂ ಜಾವೇದ್‌ ಟ್ವೀಟ್‌ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !