ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ | ಜಗತ್ತಿನಾದ್ಯಂತ ಸಾವಿನ ಸಂಖ್ಯೆ 3 ಸಾವಿರ

ಚೀನಾದಲ್ಲಿ ಹೊಸ ಸೋಂಕು ಪ್ರಕರಣಗಳಲ್ಲಿ ಇಳಿಕೆ
Last Updated 2 ಮಾರ್ಚ್ 2020, 19:05 IST
ಅಕ್ಷರ ಗಾತ್ರ

ಬೀಜಿಂಗ್‌: ಜಗತ್ತಿನಾದ್ಯಂತ ಸೋಮವಾರದವರೆಗೆಕೋವಿಡ್‌ನಿಂದಾಗಿ 3 ಸಾವಿರ ಮಂದಿ ಮೃತಪಟ್ಟಿದ್ದು 89 ಸಾವಿರ ಮಂದಿಗೆ ಸೋಂಕು ತಗುಲಿದೆ.

‘ಜನವರಿ ನಂತರ ಇಲ್ಲಿಯವರೆಗೆ 202 ಹೊಸ ಪ್ರಕರಣಗಳು ದಾಖಲಾಗಿವೆ. ಹ್ಯುಬೆ ಪ್ರಾಂತ್ಯ ಹೊರತುಪಡಿಸಿ, ಚೀನಾದಲ್ಲಿ 6 ಹೊಸ ಪ್ರಕರಣಗಳು ದಾಖಲಾಗಿವೆಯಷ್ಟೆ’ ಎಂದು ಮಾಹಿತಿ ನೀಡಿದೆ.

‘ಸೋಂಕು ವ್ಯಾಪಕವಾಗಿರುವ ಚೀನಾದ ಹ್ಯುಬೆ ಪ್ರಾಂತ್ಯದಲ್ಲಿ ಮತ್ತಷ್ಟು ಮಂದಿಗೆ ಸೋಂಕು ತಗುಲಿದೆ.ಭಾನುವಾರ ಇಲ್ಲಿ 42 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ’ ಎಂದು ವಿಶ್ವ ಆರೋಗ್ಯ ಆಯೋಗ ಹೇಳಿದೆ. ಇದರೊಂದಿಗೆ ಚೀನಾ ಒಂದರಲ್ಲೇ ಸಾವಿನ ಸಂಖ್ಯೆ 2,912ಕ್ಕೆ ಏರಿದೆ.

ಹೊಸ ಪ್ರಕರಣಗಳು ಇಳಿಕೆ: ‘ಜನವರಿಗೆ ಹೋಲಿಸಿದರೆ ಸೋಂಕು ತಗುಲಿದ ಹೊಸ ಪ್ರಕರಣಗಳ ಸಂಖ್ಯೆ ಕಡಿಮೆ ಆಗಿದೆ’ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ ಹೇಳಿದೆ. ಆದರೆ, ಚೀನಾ ಹೊರತುಪಡಿಸಿ ಇತರೆ ದೇಶಗಳಲ್ಲಿ ಸೋಂಕು ಪ್ರಕರಣಗಳು ಹೆಚ್ಚು ಬೆಳಕಿಗೆ ಬರುತ್ತಿವೆ.

ಚೀನಾದಲ್ಲಿ 2,837 ಮಂದಿ ಸೋಂಕು ಪೀಡಿತರು ಚೇತರಿಸಿಕೊಂಡಿದ್ದು ಅವರನ್ನು ಭಾನುವಾರ ಆಸ್ಪತ್ರೆಯಿಂದ ಮನೆಗೆ ಕಳುಹಿಸಲಾಗಿದೆ.

ಬೇರೆ ಬೇರೆ ದೇಶಗಳಲ್ಲಿ ಸೋಂಕಿತರ ಸಂಖ್ಯೆ ಹಾಗೂ ಮೃತರ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಆಸ್ಟ್ರೇಲಿಯಾ ಮತ್ತು ಅಮೆರಿಕದಲ್ಲಿ ಕಳೆದ ವಾರ ತಲಾ ಒಬ್ಬರು ಸೋಂಕಿಗೆ ಬಲಿಯಾಗಿದ್ದರು. ಇಟಲಿಯಲ್ಲಿ ಕಳೆದ 48 ಗಂಟೆಗಳಲ್ಲಿ ಸೋಂಕಿತರ ಸಂಖ್ಯೆ ಎರಡು ಪಟ್ಟು ಹೆಚ್ಚಾಗಿದೆ.

‘60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮತ್ತು ಈಗಾಗಲೇ ಕಾಯಿಲೆಯಿಂದ ನಿತ್ರಾಣವಾಗಿದ್ದವರಿಗೆ ಈ ಸೋಂಕು ತಗುಲುತ್ತಿದೆ’ ಎಂದು ವಿಶ್ವ ಆರೋಗ್ಯ ಆಯೋಗ ಹೇಳಿದೆ.

ಇರಾನ್‌: ಸರ್ವೋಚ್ಛ ನಾಯಕನ ಸಲಹೆಗಾರ ಸಾವು
ಟೆಹ್ರಾನ್‌ (ಎಪಿ): ‘ಇರಾನ್‌ ಸರ್ವೋಚ್ಛ ನಾಯಕ ಅಯಾತ್‌ ಉಲ್ಲಾ ಖೊಮೇನಿ ಅವರ ಸಲಹೆಗಾರ ಮೊಹಮ್ಮದ್‌ ಮಿರ್‌ಮೊಹಮ್ಮದಿ (71) ಅವರು ಕೋವಿಡ್‌ ಸೋಂಕಿನಿಂದ ಸೋಮವಾರ ಮೃತಪಟ್ಟಿದ್ದಾರೆ’ ಎಂದು ಇರಾನಿ ರೆಡಿಯೊ ಹೇಳಿದೆ.

ಈ ಮೂಲಕ ಇರಾನ್‌ನಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 66ಕ್ಕೆ ಏರಿಕೆಯಾಗಿದೆ.

‘ಇರಾನ್‌ನಲ್ಲಿ 1,501 ಸೋಂಕಿತ ಪ್ರಕರಣಗಳು ದೃಢಪಟ್ಟಿವೆ. ಚೀನಾ ಹೊರತುಪಡಿಸಿದರೆ ಇರಾನ್‌ನಲ್ಲಿಯೇ ಸಾವಿನ ಸಂಖ್ಯೆ ಹೆಚ್ಚಿದೆ’ ಎಂದು ಇರಾನ್‌ ಆರೋಗ್ಯ ಸಚಿವಾಲಯದ ವಕ್ತಾರ ಅಲಿ ರಜಾ ಅಜಿಜಿ ತಿಳಿಸಿದರು.

ದಕ್ಷಿಣ ಕೊರಿಯಾ: 500 ಹೊಸ ಸೋಂಕು ಪ್ರಕರಣ ವರದಿ
ಸೋಲ್‌ (ಎಎಫ್‌ಪಿ): ದಕ್ಷಿಣ ಕೊರಿಯಾದಲ್ಲಿ ಹೊಸದಾಗಿ500 ಪ್ರಕರಣಗಳು ಸೋಮವಾರ ವರದಿಯಾಗಿವೆ. ಚೀನಾ ನಂತರ ಹೆಚ್ಚು ಪ್ರಕರಣ ದಾಖಲಾದ ದೇಶವಾಗಿದೆ. ಇಲ್ಲಿಯವರೆಗೆ 4,212 ಪ್ರಕರಣಗಳು ದಾಖಲಾಗಿವೆ.

‘ವೈರಸ್‌ನಿಂದ ನಾಲ್ಕು ಮಂದಿ ಮೃತಪಟ್ಟಿದ್ದಾರೆ. ದೇಶದಲ್ಲಿ ಸಾವಿನ ಸಂಖ್ಯೆ 22ಕ್ಕೆ ಏರಿದೆ’ ಎಂದು ಕೊರಿಯಾದ ರೋಗ ನಿಯಂತ್ರಣ ಮತ್ತು ತಡೆ ಕೇಂದ್ರ ಹೇಳಿದೆ.

ಬ್ಯಾಂಕಾಕ್‌: ವ್ಯಕ್ತಿ ಸಾವು
ಬ್ಯಾಂಕಾಕ್‌ (ಎಎಫ್‌ಪಿ): ಥಾಯ್ಲೆಂಡ್‌ನಲ್ಲಿ ಕೋವಿಡ್‌ ಸೋಂಕಿನಿಂದ 35 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಆದರೆ, ವ್ಯಕ್ತಿಯ ಸಾವು ವೈರಸ್‌ನಿಂದಲೇ ಆಗಿದೆ ಎನ್ನುವುದನ್ನು ಆರೋಗ್ಯ ಅಧಿಕಾರಿಗಳು ಒಪ್ಪುತ್ತಿಲ್ಲ.

ವ್ಯಕ್ತಿಗೆ ಡೆಂಗ್ಯು ಇದೆ ಎಂದು ವೈದ್ಯರು ಜನವರಿಯಲ್ಲಿ ಹೇಳಿದ್ದರು. ಆದರೆ, ಎರಡು ವಾರಗಳ ನಂತರ ಕೋವಿಡ್‌ ವೈರಸ್‌ ಇರುವುದಾಗಿ ದೃಢಪಡಿಸಿದರು. ಶನಿವಾರಅವರು ಮೃತಪಟ್ಟಿದ್ದಾರೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT