ಗುರುವಾರ , ಅಕ್ಟೋಬರ್ 17, 2019
24 °C
ಇಸ್ಲಾಂ ಕುರಿತು ತಿಳಿವಳಿಕೆ ಮೂಡಿಸಲು ಮುಂದಾದ ಪಾಕ್, ಮಲೇಷ್ಯಾ, ಟರ್ಕಿ

‘ಇಸ್ಲಾಮೊಫೋಬಿಯಾ’ ವಿರುದ್ಧ ಚಾನಲ್

Published:
Updated:
Prajavani

ಇಸ್ಲಾಮಾಬಾದ್: ‘ಇಸ್ಲಾಮೊಫೋಬಿಯಾ’ ವಿರುದ್ಧ ಹೋರಾಟ ನಡೆಸಲು ಪಾಕಿಸ್ತಾನ, ಟರ್ಕಿ ಹಾಗೂ ಮಲೇಷ್ಯಾ ಸರ್ಕಾರ ಜಂಟಿಯಾಗಿ ಇಂಗ್ಲಿಷ್ ಚಾನಲ್ ಆರಂಭಿಸಲಿದೆ ಎಂದು ಪಾಕಿಸ್ತಾನದ ‘ದಿ ನ್ಯೂಸ್ ಇಂಟರ್‌ನ್ಯಾಷನಲ್’ ವರದಿ ಮಾಡಿದೆ.

ಕಳೆದ ವಾರ ನಡೆದ ವಿಶ್ವಸಂಸ್ಥೆಯ 74ನೇ ಮಹಾಅಧಿವೇಶನದ ವೇಳೆ ಮಲೇಷ್ಯಾ ಪ್ರಧಾನಿ ಮಹತಿರ್ ಮೊಹಮ್ಮದ್, ಟರ್ಕಿ ಅಧ್ಯಕ್ಷ ತಯ್ಯಿಪ್ ಎರ್ಡೊಗನ್ ಹಾಗೂ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರು ಈ ಚಾನಲ್ ಆರಂಭಿಸುವ ಕುರಿತು ಚರ್ಚೆ ನಡೆಸಿದ್ದರು.

‘ಇಸ್ಲಾಂ ಧರ್ಮ ಹಾಗೂ ಮುಸ್ಲಿಮರ ಕುರಿತ ಹಲವು ವರದಿಗಳು ಸಾಕಷ್ಟು ತಪ್ಪು ಮಾಹಿತಿಗಳಿಂದ ಕೂಡಿರುತ್ತವೆ. ಉದಾಹರಣೆಗೆ ಮುಸ್ಲಿಮರನ್ನು ಭಯೋತ್ಪಾದಕರು ಎಂದು ಬಿಂಬಿಸಲಾಗುತ್ತದೆ ಹಾಗೂ ಜಗತ್ತು ಇದನ್ನೇ ಸತ್ಯ ಎಂದು ಭಾವಿಸುತ್ತದೆ. ಇಸ್ಲಾಂ, ಭಯೋತ್ಪಾದನೆ ಪ್ರೋತ್ಸಾಹಿಸುವ ಧರ್ಮ ಎನ್ನುವ ಆರೋಪ ಇದೆ. ಇದನ್ನು ದೂರ ಮಾಡಲು, ಇಸ್ಲಾಂ ಧರ್ಮ ಏನು ಬೋಧಿಸುತ್ತದೆ ಎನ್ನುವುದನ್ನು ತಿಳಿಸಲು ಕ್ರಮ ಕೈಗೊಳ್ಳಬೇಕು’ ಎಂದು ಮಹತಿರ್ ಹೇಳಿದ್ದಾರೆ.

ಚಾನಲ್ ಆರಂಭಿಸಲು ಮೂರೂ ದೇಶಗಳ ಮಾಹಿತಿ ಇಲಾಖೆಗಳು ಜಂಟಿಯಾಗಿ ಕಾರ್ಯನಿರ್ವಹಿಸಲಿವೆ ಎಂದು ಮಹತಿರ್ ಹೇಳಿದ್ದಾರೆ. ಆದರೆ ಚಾನಲ್ ಯಾವಾಗ ಕಾರ್ಯಾರಂಭ ಮಾಡಲಿದೆ ಎಂದು ನಿಖರವಾಗಿ ತಿಳಿಸಿಲ್ಲ.

‘ಮುಸ್ಲಿಮರ ಕುರಿತು ತಪ್ಪು ಕಲ್ಪನೆ ಹೊಂದಿರುವ ಜನರಲ್ಲಿ ತಿಳಿವಳಿಕೆ ಮೂಡಿಸಲಾಗುತ್ತದೆ. ಧರ್ಮನಿಂದನೆಯ ಸೂಕ್ತ ವ್ಯಾಖ್ಯಾನವನ್ನು ತಿಳಿಸಲಾಗುತ್ತದೆ. ಇಸ್ಲಾಂ ಇತಿಹಾಸದ ಕುರಿತು ಜಗತ್ತಿಗೆ ಮಾಹಿತಿ ನೀಡಲು ವೆಬ್‌ ಸರಣಿಗಳು, ಚಲನಚಿತ್ರಗಳನ್ನು ಪ್ರಸಾರ ಮಾಡಲಾಗುತ್ತದೆ’ ಎಂದು ಇಮ್ರಾನ್ ಖಾನ್ ಹೇಳಿದ್ದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಏನಿದು ಇಸ್ಲಾಮೊಫೋಬಿಯಾ?

ಇಸ್ಲಾಂ ಧರ್ಮ ಅಥವಾ ಮುಸ್ಲಿಮರ ಕುರಿತ ಭಯ, ದ್ವೇಷ ಅಥವಾ ಪೂರ್ವಗ್ರಹ ಹೊಂದಿರುವುದನ್ನು ಇಸ್ಲಾಮೊಫೋಬಿಯಾ ಎನ್ನಲಾಗುತ್ತದೆ.

Post Comments (+)