ಮಂಗಳವಾರ, ನವೆಂಬರ್ 19, 2019
29 °C
ಗಮನಹರಿಸುವಂತೆ ಅಂತರರಾಷ್ಟ್ರೀಯ ಸಮುದಾಯಕ್ಕೆ ಒತ್ತಾಯ

ಪಿಒಕೆ ಕುರಿತ ಭಾರತ ನಿಲುವಿಗೆ ಪಾಕ್‌ ಆಕ್ಷೇಪ

Published:
Updated:

ಇಸ್ಲಾಮಾಬಾದ್‌‌: ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (ಪಿಒಕೆ) ಕುರಿತು ಭಾರತ ಆಕ್ರಮಣಕಾರಿ ಹೇಳಿಕೆ ನೀಡುತ್ತಿದೆ ಎಂದು ಆರೋಪಿಸಿರುವ ಪಾಕಿಸ್ತಾನ, ಅಂತರರಾಷ್ಟ್ರೀಯ ಸಮುದಾಯ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದೆ.

‘ಪಿಒಕೆ ಭಾರತದ ಭಾಗವಾಗಿದ್ದು, ಮುಂದಿನ ದಿನಗಳಲ್ಲಿ ಅದು ನಮ್ಮದಾಗಲಿದೆ’ ಎಂದು ಭಾರತದ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಮಂಗಳವಾರ ಹೇಳಿಕೆ ನೀಡಿದ್ದರು. 

‘ಇದು ಬೇಜವಾಬ್ದಾರಿ ಮತ್ತು ಬೆದರಿಕೆ ಹಾಕುವ ಹೇಳಿಕೆಯಾಗಿದೆ. ಇದರಿಂದ ಶಾಂತಿ ಪ್ರಕ್ರಿಯೆಗೆ ಧಕ್ಕೆಯಾಗಲಿದೆ. ಉಭಯ ದೇಶಗಳ ನಡುವೆ ಈಗಾಗಲೇ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಳ್ಳಲಿದೆ’ ಎಂದು ಪಾಕಿಸ್ತಾನದ ವಿದೇಶಾಂಗ ಕಚೇರಿ ಹೇಳಿಕೆ ನೀಡಿದೆ.

‘ಭಾರತದ ಪ್ರಚೋದನಾಕಾರಿ ಹೇಳಿಕೆಯನ್ನು ಖಂಡಿಸುತ್ತೇವೆ. ಕಾಶ್ಮೀರದಲ್ಲಿ ನಡೆದಿರುವ ಮಾನವ ಹಕ್ಕುಗಳ ಉಲ್ಲಂಘನೆಯನ್ನು  ಅಂತರರಾಷ್ಟ್ರೀಯ ಸಮುದಾಯ ಖಂಡಿಸಿದೆ. ಅಮಾಯಕ ಜನರ ಮೇಲೆ ನಡೆಸಿರುವ ದೌರ್ಜನ್ಯವನ್ನು ಮರೆಮಾಚಿ, ಅಂತರರಾಷ್ಟ್ರೀಯ ಸಮುದಾಯದ ಗಮನವನ್ನು ಬೇರೆಡೆ ಸೆಳೆಯಲು ಭಾರತ ಇಂತಹ ಪ್ರಯತ್ನ ಮಾಡುತ್ತಿದೆ’ ಎಂದು ದೂರಿದೆ.

‘ಪಾಕಿಸ್ತಾನ ಸಹ ಶಾಂತಿಗೆ ಬದ್ಧವಾಗಿದೆ. ಆದರೆ, ಯಾವುದೇ ಅತಿಕ್ರಮಣಕ್ಕೆ ಪರಿಣಾಮಕಾರಿಯಾಗಿ ತಿರುಗೇಟು ನೀಡಲಾಗುವುದು’ ಎಂದು ತಿಳಿಸಿದೆ.

 

ಪ್ರತಿಕ್ರಿಯಿಸಿ (+)