ಶುಕ್ರವಾರ, 9 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೃಹಸ್ಥರಿಂದ ಧರ್ಮದ ಉಳಿವು, ಸನ್ಯಾಸಿಗಳಿಂದಲ್ಲ

ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಅಭಿಮತ
Last Updated 16 ಏಪ್ರಿಲ್ 2018, 8:22 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಧರ್ಮ ಉಳಿಯುವುದು ಗೃಹಸ್ಥರಿಂದಲೇ ಹೊರತು ಸನ್ಯಾಸಿಗಳು, ವಿರಕ್ತರಿಂದ ಅಲ್ಲ’ ಎಂದು ಮುಂಡರಗಿ ತೋಂಟದಾರ್ಯ ಶಾಖಾಮಠದ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

ನಗರದ ವೀರಾಪುರ ರಸ್ತೆಯಲ್ಲಿನ ಗುರುಬಸವ ಮಂಟಪ ಟ್ರಸ್ಟ್‌ ಕಮಿಟಿ ವತಿಯಿಂದ ಭಾನುವಾರ ಸಂಜೆ ಹಮ್ಮಿಕೊಂಡಿದ್ದ ಬಸವೇಶ್ವರ ಜಯಂತ್ಯುತ್ಸವದಲ್ಲಿ ಮಾತನಾಡಿದ ಅವರು, ‘ಲಿಂಗಾಯತವು ಬಸವಣ್ಣ ಸ್ಥಾಪಿಸಿದ ಗೃಹಸ್ಥ ಧರ್ಮ. ಆದರೆ, ಅವರು ಸನ್ಯಾಸ ಧರ್ಮ ಸ್ಥಾಪಿಸಿದ್ದರು ಎಂದು ಕೆಲವರು ಹೇಳುತ್ತಾರೆ. ಈ ಬಗ್ಗೆ ನನಗೆ ಅನುಮಾನವಿದೆ. ಮಹಮ್ಮದ್ ಪೈಗಂಬರ್ ಮತ್ತು ಬಸವಣ್ಣನವರು ಗೃಹಸ್ಥ ಧರ್ಮವನ್ನು ಶ್ರೇಷ್ಠತೆಯಿಂದ ನೋಡಿದವರು’ ಎಂದು ಸ್ವಾಮೀಜಿ ಹೇಳಿದರು.

‘ನೆಂಟರು ಬಂದರೆ ಸಮಯವಿಲ್ಲವೆನ್ನು, ಶರಣರು ಬಂದರೆ ಸತ್ಕರಿಸು ಎಂದವನು ಬಸವಣ್ಣ. ಆದರೆ, ಈಗಿನ ಮಠಾಧಿಪತಿಗಳು–ಸ್ವಾಮೀಜಿಗಳು ತಮ್ಮ
ಅಣ್ಣ ತಮ್ಮಂದಿರನ್ನು, ಅಕ್ಕ-ತಂಗಿಯರನ್ನು ಮಠದ ಮ್ಯಾನೇಜರ್‌ಗಳನ್ನಾಗಿ ನೇಮಿಸಿಕೊಳ್ಳುತ್ತಿದ್ದಾರೆ’ ಎಂದು ನಿಜಗುಣಾನಂದ ಶ್ರೀ ಟೀಕಿಸಿದರು.

‘ಮುಸ್ಲಿಮರು ನಮಾಜ್, ಕ್ರೈಸ್ತರು ಪ್ರಾರ್ಥನೆ, ವೈದಿಕರು ಹೋಮ ಹವನ ಮಾಡುತ್ತಾ ತಮ್ಮ ಧರ್ಮವನ್ನು ಉಳಿಸುತ್ತಾರೆ. ಅದೇ ರೀತಿ ಲಿಂಗಾಯತರು ಲಿಂಗ ಧರಿಸಿ, ಲಿಂಗ ಪೂಜೆ ಮಾಡಿ, ವಚನಗಳನ್ನು ಪಠಿಸುವ ಮೂಲಕ ಧರ್ಮದ ಉಳಿವಿಗೆ ಶ್ರಮಿಸಬೇಕು’ ಎಂದು ಸ್ವಾಮೀಜಿ ಸಲಹೆ ನೀಡಿದರು.

‘ಅರಿವು ಗುರು ಎನ್ನುವುದನ್ನು ಈಗಿನ ಸ್ವಾಮೀಜಿಗಳು ಅರಿವೆ (ಬಟ್ಟೆ) ಗುರು ಎಂದುಕೊಂಡಿದ್ದಾರೆ. ಕಾವಿ ಧರಿಸಿದ ಮಾತ್ರಕ್ಕೆ ಗುರುವಾಗುವುದಿಲ್ಲ. ಅರಿವಿನ ಪ್ರಜ್ಞೆಯನ್ನು ಕೊಟ್ಟ ಗುರು ಬಸವಣ್ಣ ಮತ್ತು ಶರಣರು. ನಾವು ಈಗ ಅವರನ್ನು ಮರೆತಿದ್ದೇವೆ. ಮೂಗು ಕೊಟ್ಟವರನ್ನು ಮರೆತು, ಮೂಗುತಿ ಕೊಟ್ಟವರನ್ನು ಮೆರೆಸುತ್ತಿದ್ದೇವೆ’ ಎಂದು ವಿಷಾದಿಸಿದರು.

‘ಸ್ವಾಮೀಜಿ ಯಾವತ್ತೂ ಗುರು ಆಗುವುದಿಲ್ಲ. ಅವರು ಧರ್ಮ ಪ್ರಸಾರಕರು ಮಾತ್ರ. ದಾಸೋಹ ಮಾಡಿದರೆ ಧರ್ಮ ಉಳಿಯುವುದಿಲ್ಲ. ಬಸವಣ್ಣನ ತತ್ವ ಪಾಲಿಸಿದರೆ ಧರ್ಮ ಉಳಿಯುತ್ತದೆ’ ಎಂದರು.

ಅನುಭಾವಿ ಬಸವ ಕಿರಣ ಕಾರ್ಯಕ್ರಮ ಉದ್ಘಾಟಿಸಿದರು. ಟ್ರಸ್ಟ್‌ನ ಗೌರವ ಕಾರ್ಯಾಧ್ಯಕ್ಷ ಚಂದ್ರಶೇಖರ ಕರವೀರಶೆಟ್ಟರ ಅಧ್ಯಕ್ಷತೆ ವಹಿಸಿದ್ದರು. ಸಿದ್ದಣ್ಣ
ಲಂಗೋಟಿ, ಬಸವರಾಜ ಲಿಂಗಶೆಟ್ಟರ, ಸುಲೋಚನಾ ಭೂಸನೂರ ಇದ್ದರು.

‘ಒಂಟಿಯಾದ ಬಸವಣ್ಣ’

‘ಈಗ ಬಸವಣ್ಣನ ಸ್ಥಿತಿಯನ್ನು ನೋಡಿದರೆ ಅಯ್ಯೋ ಎನಿಸುತ್ತದೆ. ಹರಳಯ್ಯನನ್ನು ಸಮಗಾರರು, ಚೌಡಯ್ಯನನ್ನು ಅಂಬಿಗರು ಹೀಗೆ, ಒಬ್ಬೊಬ್ಬ ಶರಣರನ್ನು ಒಂದೊಂದು ಜಾತಿಯವರು ಇಟ್ಟುಕೊಂಡು ಬಸವಣ್ಣನನ್ನು ಒಂಟಿ ಮಾಡಿದ್ದಾರೆ’ ಎಂದು ನಿಜಗುಣಪ್ರಭು ಸ್ವಾಮೀಜಿ ವಿಷಾದಿಸಿದರು. ‘ಲಿಂಗಾಯತ ಧರ್ಮಕ್ಕೆ ಇದು ಸಂಕ್ರಮಣ ಕಾಲ. ಚಿಂತನೆ ನಡೆಯುತ್ತಿರುವ ಕಾಲ. ಬಸವೇಶ್ವರರೇ ಪ್ರಜಾಪ್ರಭುತ್ವವಿದ್ದಂತೆ. ಲಿಂಗಾಯತವೇ ಈ ದೇಶದ ರಾಷ್ಟ್ರಧರ್ಮ’ ಎಂದು ಅಭಿಪ್ರಾಯಪಟ್ಟರು.

‘ಬಸವಣ್ಣ ಗುಡಿ ಕಟ್ಟಲಿಲ್ಲ’

‘ಬಸವಣ್ಣ ಮಠ–ಗುಡಿ ಕಟ್ಟಿ ಕುಳಿತಿದ್ದರೆ ನಾವೆಲ್ಲ ಶೋಷಿತರಾಗುತ್ತಿದ್ದೆವು. ಆದರೆ ಹಾಗೆ ಮಾಡದೆ ಸಮಾಜ ಸುಧಾರಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು’ ಎಂದು ನಿಜಗುಣಪ್ರಭು ಸ್ವಾಮೀಜಿ ಹೇಳಿದರು. ‘ಬಸವಣ್ಣ ಏನು ಮಾಡಿದ ಎಂದು ಕೆಲವರು ಪ್ರಶ್ನಿಸುತ್ತಾರೆ. ಅವರು ಏನು ಮಾಡಬೇಕಿತ್ತು? ಗಂಡನನ್ನು ಕಳೆದುಕೊಂಡು ತಲೆ ತಲೆಬೋಳಿಸಿಕೊಂಡಿದ್ದ ಮಹಿಳೆಯನ್ನು ದೇವರಂತೆ ಕಂಡದ್ದು ತಪ್ಪಾ?  ಹರಳಯ್ಯನ ಮನೆಗೆ ಭೇಟಿ ನೀಡಿದ್ದು, ಮಾದಾರ ಚನ್ನಯ್ಯನ ಮನೆಯಲ್ಲಿ ಊಟ ಮಾಡಿದ್ದು ತಪ್ಪಾ? ಕಲ್ಲು ದೇವರಲ್ಲ ಅಂದಿದ್ದು ತಪ್ಪಾ ? ಹಾವಿಗೆ ಹಾಲು ಎರೆಯಬೇಡಿ ಅಂದಿದ್ದು ತಪ್ಪಾ ? ಜನರಲ್ಲಿ ಅರಿವಿನ ಪ್ರಜ್ಞೆ ಮೂಡಿಸಿದ್ದು ತಪ್ಪಾ’ ಎಂದು ಅವರು ಪ್ರಶ್ನಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT