ಭಾನುವಾರ, ಜನವರಿ 26, 2020
22 °C
ಅಮೆರಿಕದ ನೌಕಾಪಡೆಯ ವಾಯುನೆಲೆಗೆ ರಾಜನಾಥ್ ಸಿಂಗ್ ಭೇಟಿ

‘ರಕ್ಷಣಾ ಸಂಬಂಧಕ್ಕೆ ಮತ್ತಷ್ಟು ಬಲ’

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್ : ಅಮೆರಿಕದ ನೌಕಾಪಡೆಯ ವಾಯುನೆಲೆಗೆ ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿ ನೀಡಿದ್ದು, ಉಭಯ ದೇಶಗಳ ನಡುವಿನ ರಕ್ಷಣಾ ಸಂಬಂಧಗಳು ಮತ್ತಷ್ಟು ಬಲಗೊಳ್ಳಲಿವೆ ಎಂದು ಆಶಿಸಿದ್ದಾರೆ.  

ವರ್ಜೀನಿಯಾದ ನಾರ್ಫೋಕ್‌ನಲ್ಲಿರುವ ನೌಕಾಪಡೆಯ ವಾಯುನೆಲೆಯಲ್ಲಿ ಅವರು ಬೋಯಿಂಗ್‌ ಫೈಟರ್ ಜೆಟ್‌ನ ಪ್ರದರ್ಶನವನ್ನು ವೀಕ್ಷಿಸಿದರು.

ರಾಜನಾಥ್ ಸಿಂಗ್ ಅವರೊಂದಿಗೆ ವಿದೇಶಾಂಗ ವ್ಯವಹಾರಗಳ ಸಚಿವ ಡಾ.ಎಸ್. ಜೈಶಂಕರ್ ಸೇರಿದಂತೆ ಭಾರತದ ರಕ್ಷಣಾ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.

ಅಮೆರಿಕದ ರಕ್ಷಣಾ ಕಾರ್ಯದರ್ಶಿ ಮೈಕ್ ಎಸ್ಪರ್, ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ವಿವಿಧ ವಿಮಾನಗಳ ಕಾರ್ಯನಿರ್ವಹಣೆಯ ಕುರಿತು ರಾಜನಾಥ್ ಅವರಿಗೆ ಮಾಹಿತಿ ನೀಡಿದರು.

‘ಅಮೆರಿಕದ ನಾರ್ಫೋಕ್‌ನ ಓಷಿಯಾನ ನೌಕಾ ಪಡೆಯ ವಾಯುನೆಲೆಗೆ ಭೇಟಿ ಕೊಟ್ಟಿದ್ದೆ. ಅಲ್ಲಿ ಸ್ಥಿರ ಪ್ರದರ್ಶನ ಮತ್ತು ಎಫ್‌/ಎ–18 ಇ ವಿಮಾನ ಹಾರಾಟವನ್ನು ವೀಕ್ಷಿಸಿದೆ’ ಎಂದು ರಾಜನಾಥ್ ಸಿಂಗ್ ಮಂಗಳವಾರ ಟ್ವೀಟ್ ಮಾಡಿದ್ದರು.  

 ‘ನಿಮಿಟ್ಜ್ ಕ್ಲಾಸ್ ವಿಮಾನ ನೌಕೆಯಾದ ಯುಎಸ್‌ಎಸ್ ಡ್ವೈಟ್ ಡಿ. ಐಸೆನ್‌ಹೌವರ್‌ನಲ್ಲಿ ಪ್ರಯಾಣಿಸುವ ಅವಕಾಶ ನನ್ನದಾಗಿತ್ತು. ಭಾರತ ಮತ್ತು ಅಮೆರಿಕ ನಡುವಿನ ಬಲವಾದ ರಕ್ಷಣಾ ಸಂಬಂಧಗಳನ್ನು ಇದು ಪ್ರತಿಬಿಂಬಿಸುತ್ತದೆ’ ಎಂದೂ ರಾಜನಾಥ್ ಮತ್ತೊಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

‘ರಾಜನಾಥ್ ಅವರ ಅಮೆರಿಕ ಭೇಟಿಯು ಉಭಯ ದೇಶಗಳ ರಕ್ಷಣಾ ಪಾಲುದಾರಿಕೆ ಮತ್ತು ನೌಕಾಪಡೆಗಳ ನಡುವಿನ ನಿಕಟ ಸಂಬಂಧವನ್ನು ಎತ್ತಿತೋರಿಸಿದೆ’ ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ. 

ಭಾರತೀಯ ವಾಯುಪಡೆ ಮತ್ತು ನೌಕಾಪಡೆಯಲ್ಲಿ ಕೆಲ ವಿಮಾನಗಳನ್ನು ಸೇರ್ಪಡೆಗೊಳಿಸಲು ಸರ್ಕಾರ ಗಂಭೀರವಾಗಿ ಪರಿಶೀಲಿಸುತ್ತಿರುವ ಹಿನ್ನೆಲೆಯಲ್ಲಿ ರಾಜನಾಥ್ ಅವರ ಈ ಭೇಟಿಯು ಅತ್ಯಂತ ಮಹತ್ವ ಪಡೆದುಕೊಂಡಿದೆ ಎನ್ನಲಾಗಿದೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು