ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವ್ಯವಸ್ಥೆಯ ತಾಣವಾದ ಸದಾಶಿವ ಬಡಾವಣೆ

ಹೂಳು ತುಂಬಿದ ಚರಂಡಿ, ತಿರುಗಿ ನೋಡದ ಜನಪ್ರತಿನಿಧಿಗಳು, ಅಧಿಕಾರಿಗಳ ನಿರ್ಲಕ್ಷ್ಯ: ಆಕ್ರೋಶ
Last Updated 29 ಮಾರ್ಚ್ 2018, 8:39 IST
ಅಕ್ಷರ ಗಾತ್ರ

ಗೌರಿಬಿದನೂರು: ಪಟ್ಟಣದ ಹಿರೇಬಿದನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸದಾಶಿವ ಬಡಾವಣೆ ಚರಂಡಿ ಅನೇಕ ತಿಂಗಳಿನಿಂದ ಶುಚಿ ಕಾಣದೇ ಕೊಚ್ಚೆ ನೀರು, ತ್ಯಾಜ್ಯದಿಂದ ತುಂಬಿಕೊಂಡು ದುರ್ವಾಸನೆ ಬೀರುತ್ತಿದೆ. ಇದರಿಂದ ವಾಹನ ಸವಾರರು, ಪಾದಚಾರಿಗಳು ಈ ರಸ್ತೆಯಲ್ಲಿ ಮೂಗು ಮುಚ್ಚಿ ಓಡಾಡುವ ಸ್ಥಿತಿ ನಿರ್ಮಾಣವಾಗಿದೆ.

ನಗರಸಭೆ ಕಾರ್ಯಾಲಯದಿಂದ ಕೂಗಳತೆ ದೂರದಲ್ಲಿರುವ ಈ ಬಡಾವಣೆ ಪಟ್ಟಣದ ಅತ್ಯಂತ ದುಬಾರಿ ಬೆಲೆ ಬಾಳುವ ನಿವೇಶನ, ಮನೆಗಳು ಹೊಂದಿದೆ. ಇಷ್ಟಾದರೂ ಇಲ್ಲಿನ ಮೂಲ ಸೌಕರ್ಯ, ಸ್ವಚ್ಛತೆ ಮಾತ್ರ ಕೊಳೆಗೇರಿ ನೆನಪಿಸುವಂತಿದೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

‘ವರ್ಷಗಳೇ ಕಳೆದರೂ ಈ ಭಾಗದ ಚರಂಡಿಗಳೆಲ್ಲ ಹೂಳು, ಕಸ, ಕಡ್ಡಿ, ಪ್ಲಾಸ್ಟಿಕ್‌ ವಸ್ತುಗಳಿಂದ ಅಧ್ವಾನಗೊಂಡು ಗಬ್ಬೆದ್ದು ನಾರುತ್ತಿವೆ. ಮಡುಗಟ್ಟಿ ನಿಂತ ನೀರಿನ ದುರ್ನಾತ ಜನರ ನೆಮ್ಮದಿ ಕಸಿಯುತ್ತಿದೆ. ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸ್ಥಳೀಯರು ಸಾಂಕ್ರಾಮಿಕ ರೋಗ ಭೀತಿಯಲ್ಲಿ ದಿನದೂಡುವಂತಾಗಿದೆ. ಅನೇಕ ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ’ ಎಂದು ಸ್ಥಳೀಯ ನಿವಾಸಿ ಅಶ್ವತ್ಥಮ್ಮ ಬೇಸರ ವ್ಯಕ್ತಪಡಿಸಿದರು.

‘ಚರಂಡಿ ಈ ಅವಸ್ಥೆ ಹಂದಿಗಳ ಹಾವಳಿ ಹೆಚ್ಚು ಮಾಡಿದೆ. ಈಗಾಗಲೇ ಬಡಾವಣೆಯಲ್ಲಿ ಎಲ್ಲಿ ನೋಡಿದರೂ ಚರಂಡಿಗಳು ಅಸಹ್ಯಕರ ಸ್ವರೂಪ ಪಡೆದಿವೆ. ಅವುಗಳನ್ನು ಹಂದಿಗಳು ಮತ್ತಷ್ಟು ಅಧ್ವಾನ ಮಾಡುತ್ತಿವೆ. ಈ ಬಗ್ಗೆ ಪಂಚಾಯಿತಿ ಯಾವೊಬ್ಬ ಅಧಿಕಾರಿ ಕಾಳಜಿ ತೋರಿ, ಸಮಸ್ಯೆ ಬಗೆಹರಿಸುವ ಗೋಜಿಗೆ ಹೋಗಿಲ್ಲ. ಅಧಿಕಾರಿಗಳ ಜಾಣ ಕುರುಡುತನ ಪ್ರದರ್ಶನದಿಂದ ಸ್ಥಳೀಯರು ಬೆಸತ್ತು ಹೋಗಿದ್ದಾರೆ’ ಎಂದು ಸದಾಶಿವ ಬಡಾವಣೆಯ ನಿವಾಸಿ ಖಾದರ್ ಆಕ್ರೋಶ ವ್ಯಕ್ತಪಡಿಸಿದರು.

‘ಚರಂಡಿಗಳ ಅವ್ಯವಸ್ಥೆಯ ಬಗ್ಗೆ ಅನೇಕ ಬಾರಿ ಪಿಡಿಒ ಗಮನಕ್ಕೆ ತರಲಾಗಿದೆ. ಆದರೂ ಯಾವುದೇ ಕ್ರಮ ಕೈಗೊಳ್ಳದೆ ಅವರು ಮಿನಾಮೇಷ ಎಣಿಸುತ್ತಿದ್ದಾರೆ. ಶೀಘ್ರದಲ್ಲಿಯೇ ಸಂಬಂಧಪಟ್ಟವರು ಚರಂಡಿ ಸ್ವಚ್ಛಗೊಳಿಸಲು ಕ್ರಮಕೈಗೊಳ್ಳದಿದ್ದರೆ ಪಂಚಾಯಿತಿ ಮುಂದೆ ಪ್ರತಿಭಟನೆ ನಡೆಸಲಾಗುವುದು’ ಎಂದು  ಸ್ಥಳೀಯ ನಿವಾಸಿ ಶ್ರೀರಾಮ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT