ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Explainer | ನ್ಯೂಯಾರ್ಕ್‌ನಲ್ಲಿ ಕೊರೊನಾ ತಾಂಡವ: ಆಡಳಿತ ಎಡವಿದ್ದೆಲ್ಲಿ?

Last Updated 15 ಏಪ್ರಿಲ್ 2020, 11:24 IST
ಅಕ್ಷರ ಗಾತ್ರ
ADVERTISEMENT
""
""
""

ನ್ಯೂಯಾರ್ಕ್: ವಿಶ್ವದ ಇತರೆಲ್ಲಾ ದೇಶಗಳಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಅಮೆರಿಕ ಪ್ರಜೆಗಳಲ್ಲಿ ಕೋವಿಡ್-19 ಕಾಣಿಸಿಕೊಂಡಿದೆ. ಕೊರೊನಾ ವೈರಸ್ ಸೋಂಕಿನಿಂದ ಅಮೆರಿಕ ಅಕ್ಷರಶಃ ತಲ್ಲಣಿಸಿದೆ. ಅಮೆರಿಕದಲ್ಲಿ ಸಂಭವಿಸಿರುವ ಒಟ್ಟು ಸಾವುಗಳ ಪೈಕಿ ಅರ್ಧದಷ್ಟು ನ್ಯೂಯಾರ್ಕ್‌ನಲ್ಲಿ ವರದಿಯಾಗಿವೆ. ನ್ಯೂಯಾರ್ಕ್‌ ಆಡಳಿತದ ಚುಕ್ಕಾಣಿ ಹಿಡಿದವರು ಸೂಕ್ತ ಕಾಲದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಂಡಿದ್ದರೆ ಪರಿಸ್ಥಿತಿ ಇಷ್ಟು ಬಿಗಡಾಯಿಸುತ್ತಿತ್ತೆ?

ನ್ಯೂಯಾರ್ಕ್ ಆಡಳಿತ ಎಡವಿದ್ದೆಲ್ಲಿ?

ಶುಕ್ರವಾರದ ಹೊತ್ತಿಗೆ ನ್ಯೂಯಾರ್ಕ್ ರಾಜ್ಯದಲ್ಲಿಒಟ್ಟು 1.60 ಸಾವಿರ ಕೋವಿಡ್-19 ಪ್ರಕರಣಗಳು ವರದಿಯಾಗಿದ್ದವು. ಇದು ಯೂರೋಪ್‌ನಲ್ಲಿ ಅತಿಹೆಚ್ಚು ಬಾಧಿತ ದೇಶಗಳೆನಿಸಿರುವ ಸ್ಪೇನ್ ಮತ್ತು ಇಟಲಿಗಿಂತಲೂ ಕೆಟ್ಟ ಸಂಖ್ಯೆ. ನ್ಯೂಯಾರ್ಕ್‌ನಲ್ಲಿ ಕಳೆದ ಶುಕ್ರವಾರದವರೆಗೆ ಒಟ್ಟು 7,800 ಮಂದಿ ಮೃತಪಟ್ಟಿದ್ದಾರೆ.

ನ್ಯೂಯಾರ್ಕ್ ರಾಜ್ಯಪಾಲ ಆಂಡ್ರ್ಯೂ ಕೌಮೋ ಈ ಕುರಿತು ಪದೇಪದೇ ಎಚ್ಚರಿಸುತ್ತಿದ್ದರು. ನ್ಯೂಯಾರ್ಕ್‌ಗೆ ವಿದೇಶಗಳಿಂದ ಬರುವವರ ಸಂಖ್ಯೆ ಹೆಚ್ಚು. ನ್ಯೂಯಾರಕ್‌ ನಗರವೊಂದರಲ್ಲಿಯೇ 93,000 ಪ್ರಕರಣಗಳು ದೃಢಪಟ್ಟಿವೆ. ಇದು ಸೋಂಕು ಹೆಚ್ಚಾಗಲು ಸೂಕ್ತ ವಾತಾವರಣ ರೂಪಿಸಿದೆ ಎಂದು ಹೇಳಿದ್ದರು.

ಅಮೆರಿಕದ ಆರ್ಥಿಕ ರಾಜಧಾನಿ ಎನಿಸಿರುವ ನ್ಯೂಯಾರ್ಕ್‌ ನಿವಾಸಿಗಳ ಸಂಖ್ಯೆ 86 ಲಕ್ಷ. ಪ್ರತಿ ಚದರ ಕಿ.ಮೀಗೆ 10 ಸಾವಿರ ಮಂದಿಯ ಜನದಟ್ಟಣೆ ಇದೆ. ಇದು ಅಮೆರಿಕದಲ್ಲಿ ಅತಿಹೆಚ್ಚು ಜನದಟ್ಟಣೆ ಇರುವ ನಗರ. ನ್ಯೂಯಾರ್ಕ್‌ನ ಸಬ್‌ವೇಗಳಲ್ಲಿ ಲಕ್ಷಾಂತರ ಪ್ರಯಾಣಿಕರು ಪರಸ್ಪರ ದೇಹಕ್ಕೆ ದೇಹ ತಾಗಿಸಿಕೊಂಡು ಸಂಚರಿಸುತ್ತಾರೆ. ಅಲ್ಲಿನ ಫುಟ್‌ಪಾತ್‌ಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಅಸಾಧ್ಯ ಎನಿಸುವಷ್ಟು ಕಷ್ಟ.

ನ್ಯೂಯಾರ್ಕ್‌ ಪ್ರತಿ ವರ್ಷ 6 ಕೋಟಿಗೂ ಹೆಚ್ಚು ಜನರನ್ನು ಆಕರ್ಷಿಸುತ್ತದೆ. ಅಮೆರಿಕಕ್ಕೆ ಪ್ರವಾಸಿಗರನ್ನು ಕರೆತರುವ ಹೆಬ್ಬಾಗಿಲು ನ್ಯೂಯಾರ್ಕ್ ನಗರ. ಇದರ ಇನ್ನೊಂದು ಅರ್ಥವೆಂದರೆ ವೈರಸ್ ಸೋಂಕಿತರು ಅಮೆರಿಕಕ್ಕೆ ಬಂದರೆ ಅವರು ಮೊದಲು ಹೆಜ್ಜೆಯಿಡುವುದೇ ನ್ಯೂಯಾರ್ಕ್ ನಗರಕ್ಕೆ.

ಯೂರೋಪ್‌ನಿಂದ ಬಂದವರಿಂದಅಮೆರಿಕದಲ್ಲಿ ಫೆಬ್ರುವರಿ ಮೊದಲ ವಾರದಲ್ಲೇ ಕೋವಿಡ್-19 ಹರಡಲು ಶುರುವಾಯಿತು. ಆದರೆ ನ್ಯೂಯಾರ್ಕ್‌ನಲ್ಲಿ ಮೊದಲ ಪರೀಕ್ಷೆ ದೃಢಪಟ್ಟಿದ್ದು ಮಾರ್ಚ್ 1ರಂದು. ನ್ಯೂಯಾರ್ಕ್‌ನಲ್ಲಿ ದೊಡ್ಡಮಟ್ಟದ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆ ಇದೆ ಎಂದು ಹಲವು ಸಂಶೋಧಕರು ವಿಶ್ಲೇಷಿಸಿದ್ದರು.

ವಿಪರೀತ ಜನಸಂದಣಿ ಇರುವ, ಮೂಲ ಸೌಕರ್ಯಗಳಲ್ಲಿ ಸಮಸ್ಯೆಯಿರುವ ಬ್ರಾನ್‌ಕ್ಸ್‌ ಮತ್ತು ಕ್ವೀನ್ಸ್‌ ಪ್ರದೇಶದಲ್ಲಿ ಜನರು ಈಗಾಗಲೇ ಹಲವಾರು ಬಗೆಯ ಆರೋಗ್ಯ ಸಮಸ್ಯೆಗಳನ್ನು ಜನರು ಎದುರಿಸುತ್ತಿದ್ದಾರೆ. ಸೋಂಕಿನ ಪ್ರಮಾಣವೂ ಇಲ್ಲಿ ಜಾಸ್ತಿಯಿದೆ.

'ನ್ಯೂಯಾರ್ಕ್ ನಗರದಲ್ಲಿ ವೈರಸ್‌ ಸೋಂಕು ವ್ಯಾಪಕವಾಗಿ ಹರಡಬಹುದು ಎಂಬ ಭೀತಿ ವ್ಯಕ್ತವಾಗಿತ್ತು. ಅಂಥ ಎಲ್ಲಾ ಪೂರಕ ವಾತಾವರಣವೂ ರೂಪುಗೊಂಡಿತ್ತು' ಎಂದು ಕೊಲಂಬಿಯಾ ವಿಶ್ವವಿದ್ಯಾಲಯದ ಸಾರ್ವಜನಿಕ ಆರೋಗ್ಯ ವಿಭಾಗವದ ಪ್ರಾಧ್ಯಾಪಕ ಮತ್ತು ದುರಂತ ನಿರ್ವಹಣೆ ತಜ್ಞ ಇರ್ವಿನ್ ರೆಡ್ಲೆನೆರ್ ಅಭಿಪ್ರಾಯಪಡುತ್ತಾರೆ.

ಕೊರೊನಾ ವೈರಸ್ ಸೋಂಕಿತರು ಮತ್ತು ಸಾವಿನ ವಿವರ (ಏಪ್ರಿಲ್ 13 ಸಂಜೆ 7.30ರ ದತ್ತಾಂಶ)

ಸಮಸ್ಯೆಯ ತೀವ್ರತೆ ಅಂದಾಜಿಸುವಲ್ಲಿಅಧಿಕಾರಿಗಳು ವಿಫಲರಾದರೆ?

ಮಾರ್ಚ್‌ 2ರಂದು ರಾಜ್ಯದ 2ನೇ ಪ್ರಕರಣವು ನ್ಯೂ ರೊಚೆಲ್ಲೆದಲ್ಲಿ ಪತ್ತೆಯಾಯಿತು. ನ್ಯೂಯಾರ್ಕ್‌ಗೆ ತುಸುವೇ ಉತ್ತರದಲ್ಲಿರುವ ನಗರ ಅದು. ನ್ಯೂಯಾರ್ಕ್‌ನ ಆರೋಗ್ಯ ಸೇವೆ ವ್ಯವಸ್ಥೆಯು ಜಗತ್ತಿನಲ್ಲಿಯೇ ಅತ್ಯುತ್ತಮಎಂದು ಹೇಳುತ್ತಾರೆ.

ಇತರ ದೇಶಗಳಲ್ಲಿ ಇರುವಷ್ಟು ಕೆಟ್ಟದಾಗಿ ಇಲ್ಲಿಯೂ ಸೋಂಕು ತಾಂಡವವಾಡಬಹುದು ಎಂದು ನಾವು ಅಂದುಕೊಂಡಿರಲಿಲ್ಲ ಎಂದು ಅಲ್ಲಿನ ಅಧಿಕಾರಿಗಳು ವಿಶ್ವಾಸದಿಂದ ಇದ್ದರು.

ಸಾಕಷ್ಟು ಪೂರ್ವಾಪರ ಆಲೋಚಿಸಿದ ನಂತರ ನ್ಯೂಯಾರ್ಕ್‌ ನಗರದ ಮೇಯರ್ ಬಿಲ್ ಡೆ ಬ್ಲಾಸಿಯೊ ಶಾಲೆಗಳು, ಬಾರ್ ಮತ್ತು ರೆಸ್ಟೊರೆಂಟ್‌ಗಳು ತೆರೆಯುವಂತಿಲ್ಲ ಎಂದು ಮಾರ್ಚ್ 16ರಂದು ಘೋಷಿಸಿದರು. ಇದಾದ ಒಂದು ವಾರದ ನಂತರ ಅಂದರೆ ಮಾರ್ಚ್ 22ರಂದು ರಾಜ್ಯಪಾಲರು ಅತ್ಯಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ವ್ಯಾಪಾರಗಳನ್ನು ನಿಲ್ಲಿಸಬೇಕು. ಜನರು ಮನೆಗಳಿಂದ ಹೊರಬರಬಾರದು ಎಂದು ಆದೇಶಿಸಿದರು. ಆದರೆ ಈ ನಿರ್ಧಾರ ತೆಗೆದುಕೊಳ್ಳಲು ಅವರು ದೀರ್ಘಕಾಲ ತೆಗೆದುಕೊಂಡರು ಎಂದು ತಜ್ಞರು ದೂರುತ್ತಾರೆ.

ನ್ಯೂಯಾರ್ಕ್ ನಗರದಮೇಯರ್ ಮತ್ತು ನ್ಯೂಯಾರ್ಕ್‌ನರಾಜ್ಯಪಾಲರು ಸಮನ್ವಯದಿಂದ ಕೆಲಸ ಮಾಡಲಿಲ್ಲ. ಎರಡು ವಿಭಿನ್ನ ಧ್ರುವಗಳಿಗೆ ಆಡಳಿತವನ್ನು ಎಳೆಯುತ್ತಿದ್ದರು ಎಂದು ತಜ್ಞರು ದೂರಿದರು.

'ಒಬ್ಬರು ನಮ್ಮ ರಾಜ್ಯದ ಶಾಲೆ ಮತ್ತು ರೆಸ್ಟೊರೆಂಟ್‌ಗಳನ್ನು ಎಷ್ಟು ಬೇಗ ಆದರೆ ಅಷ್ಟು ಬೇಗ ಬಾಗಿಲು ಹಾಕಬೇಕು ಎಂದು ಹೇಳುತ್ತಿದ್ದರು. ಆದರೆ ಇನ್ನೊಬ್ಬರು ಅದರಿಂದ ಸಾಕಷ್ಟು ಆರ್ಥಿಕ ಮತ್ತು ಸಾಮಾಜಿಕ ಸಮಸ್ಯೆಗಳು ಎದುರಾಗುತ್ತವೆ ಎನ್ನುತ್ತಿದ್ದರು' ಎಂದು ರೆಡ್ಲೆನರ್ ಹೇಳುತ್ತಾರೆ.

ಜನರಿಗೆ ಏನು ಮಾಡಬೇಕು ಎಂಬುದು ಸ್ಪಷ್ಟವಾಗಿ ತೋಚಲಿಲ್ಲ. ಆಡಳಿತದ ಕೆಳಮಟ್ಟದಲ್ಲಿ, ಜನರ ಕೈಗೆಟುವಂತೆ ಇದ್ದ ಸರ್ಕಾರಿ ನೌಕರರನ್ನು ಜನರು ಮಾರ್ಗದರ್ಶನಕ್ಕಾಗಿ ಎದುರು ನೋಡಿದರು. ಅವರೂ ಏನೂ ಹೇಳುವ ಸ್ಥಿತಿಯಲ್ಲಿ ಇರಲಿಲ್ಲ. ಕೇಂದ್ರ ಸರ್ಕಾರದಿಂದ ಸ್ಪಷ್ಟ ಸೂಚನೆ,ಅಧ್ಯಕ್ಷರಿಂದಲೂ ಸ್ಪಷ್ಟ ಸಂದೇಶ ಇರಲಿಲ್ಲ.

ಅಮೆರಿಕದ ವಿವಿಧ ರಾಜ್ಯಗಳಲ್ಲಿ ಸೋಂಕಿತರು ಮತ್ತು ಸಾವಿನ ಸಂಖ್ಯೆ

ಇತರ ರಾಜ್ಯಗಳು ಚೆನ್ನಾಗಿ ನಿರ್ವಹಿಸಿದವೇ?

ಅಮೆರಿಕದಲ್ಲಿ ಅತಿಹೆಚ್ಚು ಜನದಟ್ಟಣೆ ಇರುವ ರಾಜ್ಯದ ಕ್ಯಾಲಿಫೋರ್ನಿಯಾ. ಕೋವಿಡ್-19 ಹರಡುವುದನ್ನು ತಡೆಗಟ್ಟಲು ಕ್ಯಾಲಿಫೋರ್ನಿಯಾ ಆಡಳಿತ ಚುರುಕಾಗಿ ಸ್ಪಂದಿಸಿತು. ಅದನ್ನು ಅತ್ಯುತ್ತಮ ಉದಾಹರಣೆ ಎಂದೂ ಅಮೆರಿಕದಲ್ಲಿ ಭಾವಿಸುತ್ತಾರೆ. ಅಲ್ಲಿ ಶುಕ್ರವಾರದ ಹೊತ್ತಿಗೆ ಕೇವಲ 20,000 ಸೋಂಕು ಪ್ರಕರಣಗಳು ದೃಢಗೊಂಡಿದ್ದವು. ಸಾವಿನ ಸಂಖ್ಯೆ 550.

ಮಾರ್ಚ್ 16ರಂದು ಸ್ಯಾನ್‌ಫ್ರಾನ್ಸಿಸ್ಕೊ ಬೇ ಪ್ರದೇಶದ ಆರು ಕೌಂಟಿಗಳು ಮನೆಯೊಳಗೆ ಇರಿ ಎಂದು ತಮ್ಮ ಪ್ರಜೆಗಳಿಗೆ ಆದೇಶಿಸಿತು. ನಂತರದ ದಿನಗಳಲ್ಲಿ ಇಡೀ ರಾಜ್ಯಕ್ಕೆ ನಿರ್ಬಂಧದ ಆದೇಶ ವಿಸ್ತರಿಸಲಾಯಿತು.

ಆರು ನೆರೆಯ ದೇಶಗಳು ಒಂದಾಗಿ ನಿರ್ಬಂಧದ ಆದೇಶ ಜಾರಿ ಮಾಡಿದವು. ಅವು ಅಮೆರಿಕಕ್ಕಿಂತಲೂ ಬಹಳ ಮೊದಲೇ ಇಂಥ ಆದೇಶ ಜಾರಿ ಮಾಡಿದ್ದವು' ಎಂದು ಜಾನ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಮೆಗ್ಗಾನ್ ಮೆಕ್‌ಗಿಂಟಿ ಹೇಳಿದರು.

ನ್ಯೂಯಾರ್ಕ್‌ ಒಂದು ನಿರ್ಧಾರ ತೆಗೆದುಕೊಂಡರೆ ವೆಸ್ಟ್‌ಚೆಸ್ಟರ್ (ಕೌಂಟಿ) ಮತ್ತೊಂದು ನಿರ್ಧಾರ ತೆಗೆದುಕೊಳ್ಳುತ್ತಿತ್ತು. ಲಾಂಗ್ ಐಲ್ಯಾಂಡ್ ಇನ್ನೊಂದು ನಿರ್ಧಾರ ಪ್ರಕಟಿಸುತ್ತಿತ್ತು' ಎಂದು ಅವರು ನುಡಿದರು.

ನ್ಯೂಯಾರ್ಕ್‌ನಲ್ಲಿ ಶಾಲೆಗಳನ್ನು ಮುಚ್ಚಬೇಕು ಎಂದು ಆದೇಶಿಸಿ ಇದೀಗ ಆರು ದಿನಗಳು ಕಳೆದಿವೆ. ನಿವಾಸಿಗಳು ಮನೆಗಳಿಗೆ ಸೀಮಿತರಾಗಿದ್ದಾರೆ.

'ಸೋಂಕು ನಿಯಂತ್ರಣದ ವಿಚಾರದಲ್ಲಿ ಆರು ದಿನ ಎನ್ನುವುದು ಆರು ಜ್ಯೋತಿವರ್ಷಗಳಿದ್ದಂತೆ. ಸೋಂಕು ನಿಯಂತ್ರಣ ಮತ್ತು ಹರಡುವುದನ್ನು ನಿಯಂತ್ರಿಸುವ ವಿಚಾರದಲ್ಲಿ ಅದು ಮಹತ್ವದ ಪಾತ್ರ ನಿರ್ವಹಿಸಬಲ್ಲದು. ನ್ಯೂಯಾರ್ಕ್ ವಿಚಾರದಲ್ಲಿ ಅಲ್ಲಿನ ಆಡಳಿತ ಚುಕ್ಕಾಣಿ ಹಿಡಿದಿದ್ದವರು ಸಕಾಲದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿಲ್ಲ. ನ್ಯೂಯಾರ್ಕ್ ಇದಕ್ಕಾಗಿ ಬಹುಕಾಲ ಕಾದಿತ್ತು ಎಂದು ಮೆಕ್ ಗಿಂಟಿ ಅಭಿಪ್ರಾಯಪಡುತ್ತಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ಯಾರನ್ನು ದೂರುವುದು?

ಈಗ ಸದ್ಯಕ್ಕೆ ಪ್ರತಿದಿನ ಸೋಂಕಿತರ ಸಂಖ್ಯೆ, ಸಾವಿನ ಸಂಖ್ಯೆ ಹೆಚ್ಚುತ್ತಿರುವುದರಿಂದ ಎಲ್ಲರೂ ಗಾಬರಿಯಾದಂತೆ ಇದ್ದಾರೆ. ಒಮ್ಮೆ ಈ ಸಂಖ್ಯೆ ಇಳಿಯಲು ಆರಂಭವಾದರೆ ಹರಕೆಯ ಕುರಿಗಳನ್ನು ಹುಡುಕುವ ಕೆಲಸ ಶುರುವಾಗುತ್ತೆ.

ಟ್ರಂಪ್ ಆಡಳಿತವು ಪರೀಕ್ಷಾ ಕಿಟ್‌ಗಳನ್ನು ಸಕಾಲಕ್ಕೆ ಕಳಿಸಿಕೊಡಲಿಲ್ಲ ಎಂದು ಡೆಮಕ್ರಟ್ ನಾಯಕರಾದಕ್ಯುಮೊ ಮತ್ತು ಡೆ ಬ್ಲಾಸಿಯೊ ಆರೋಪಿಸುತ್ತಾರೆ. ಇಂದಿಗೂ ನ್ಯೂಯಾರ್ಕ್‌ ನಗರಕ್ಕೆ ಬೇಕಿರುವಷ್ಟು ಪ್ರಮಾಣದ ಟೆಸ್ಟಿಂಗ್ ಕಿಟ್‌ಗಳು ಬಂದಿಲ್ಲ.

ತುರ್ತು ಅಗತ್ಯವೆನಿಸಿರುವವೆಂಟಿಲೇಟರ್‌ಗಳ ತಯಾರಿಕೆಗೆ ತುರ್ತು ಪರಿಸ್ಥಿತಿಯ ಅಧಿಕಾರ ಹೇರಬೇಕಾದ ಅನಿವಾರ್ಯತೆ ಸೃಷ್ಟಿಸಿದ್ದಕ್ಕೂ ನ್ಯೂಯಾರ್ಕ್ ಅಧಿಕಾರಿಗಳು ಕೇಂದ್ರ ಸರ್ಕಾರವನ್ನು ದೂರುತ್ತಾರೆ.

ಕೊರೊನಾ ವೈರಸ್‌ನಿಂದ ಆಗಿರುವ ಸಾವುಗಳ ಸಂಖ್ಯೆ ಸೆಪ್ಟೆಂಬರ್ 11, 2001ರ ವಿಶ್ವ ವಾಣಿಜ್ಯ ಕಟ್ಟಡದ ಮೇಲಿನ ದಾಳಿಯಿಂದ ಸತ್ತವರ ಸಂಖ್ಯೆಗಿಂತಲೂ ಹೆಚ್ಚು. ಹೀಗಾಗಿಯೇ ನ್ಯೂಜರ್ಸಿಯ ರಾಜ್ಯಪಾಲ ಫಿಲ್ ಮುರ್ಫಿ ಅಂಥದ್ದೇ ಒಂದು ಆಯೋಗ ರಚಿಸಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

'ಅಮೆರಿಕದಲ್ಲಿ ಈಗ ಏನೆಲ್ಲಾ ಆಯಿತು ಅದರಿಂದ ನಾವು ಪಾಠ ಕಲಿಯಬೇಕು. ಏನಾಯಿತು ಎಂಬುದನ್ನು ಅರಿಯದಿದ್ದರೆ ಮುಂದೆ ಅಂಥ ಪರಿಸ್ಥಿತಿ ಉದ್ಭವವಾಗದಂತೆ ತಡೆಯುವುದಾದರೂ ಹೇಗೆ?' ಎಂದು ಕ್ಯುಮೊ ಪ್ರಶ್ನಿಸಿದರು.

ಸತ್ತವರು ಮತ್ತು ನಿರುದ್ಯೋಗಿಗಳಾದ ಲಕ್ಷಾಂತರ ಮಂದಿಯನ್ನು ಗಮನಿಸಿದಾಗ ಈ ಸಾಂಕ್ರಾಮಿಕ ಹೇಗೆ ಹರಡಿತು, ನಾವು ಏನೆಲ್ಲಾ ತಪ್ಪು ಮಾಡಿದೆವು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಾದ್ದು ನಮ್ಮ ಹೊಣೆಗಾರಿಕೆ ಎನಿಸುತ್ತದೆ ಎನ್ನುತ್ತಾರೆ ಮಿಕ್ ಗಿಂಟಿ.

(ಮಾಹಿತಿ: ಎಎಫ್‌ಪಿ, ಇತರ ವೆಬ್‌ಸೈಟ್‌ಗಳು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT