ಶುಕ್ರವಾರ, ಜುಲೈ 30, 2021
28 °C
ಸಂಕಷ್ಟದಲ್ಲಿದ್ದವರಿಗೆ ನೆರವಾದ ₹ 5ಸಾವಿರ ಪರಿಹಾರ

ಕೈಸೇರಿದ ₹ 36 ಕೋಟಿ ಸಹಾಯಧನ

ಎಂ. ಮಹೇಶ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಕೊರೊನಾ ಸೋಂಕು ಹರಡುವುದನ್ನು ನಿಯಂತ್ರಿಸುವ ಉದ್ದೇಶದಿಂದ ಜಾರಿಗೊಳಿಸಲಾಗಿದ್ದ ಲಾಕ್‌ಡೌನ್‌ನಿಂದಾಗಿ ಬೆಲೆ ಕುಸಿತ ಉಂಟಾಗಿ ಸಂಕಷ್ಟಕ್ಕೆ ಒಳಗಾಗಿದ್ದ ಮೆಕ್ಕೆಜೋಳ ಬೆಳೆಗಾರರಿಗೆ ರಾಜ್ಯ ಸರ್ಕಾರದಿಂದ ಘೋಷಿಸಲಾಗಿದ್ದ ಸಹಾಯಧನ ಜಮೆಯಾಗುತ್ತಿದೆ.

ಮೆಕ್ಕೆಜೋಳ ಬೆಳೆಯುವ ಜಿಲ್ಲೆಗಳಲ್ಲಿ ಬೆಳಗಾವಿಯೂ ಪ್ರಮುಖವಾಗಿದೆ. ಹಲವು ತಾಲ್ಲೂಕುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಈ ಬೆಳೆಯನ್ನು ರೈತರು ಅವಲಂಬಿಸಿದ್ದಾರೆ. ಉತ್ತಮ ಫಸಲು ಕೂಡ ಬಂದಿತ್ತು. ಆದರೆ, ಲಾಕ್‌ಡೌನ್‌ ಪರಿಣಾಮ ಮಾರುಕಟ್ಟೆಗಳಿಲ್ಲದೆ, ಬೇಡಿಕೆಯೂ ಇಲ್ಲದೆ ಹಾಗೂ ಸಾಗಣೆಯೂ ಸಾಧ್ಯವಾಗದೆ ಬೆಳೆಗಾರರು ಕಂಗಾಲಾಗಿದ್ದರು.

‘ಮೆಕ್ಕೆಜೋಳಕ್ಕೆ ಸರ್ಕಾರದಿಂದ ಕ್ವಿಂಟಲ್‌ಗೆ ₹1,760 ಬೆಂಬಲ ಬೆಲೆ ಪ್ರಕಟಿಸಿದ್ದರೂ ರೈತರಿಗೆ ಉತ್ತಮ ಬೆಲೆ ಸಿಗುತ್ತಿಲ್ಲ. ಹೀಗಾಗಿ, ಅವರು ಕಂಗಾಲಾಗಿದ್ದಾರೆ. ಅವರಿಗೆ ನೆರವಾಗುವ ಉದ್ದೇಶದಿಂದ ಪ್ರತಿಯೊಬ್ಬರಿಗೂ ಒಂದು ಬಾರಿಯ ಪರಿಹಾರವಾಗಿ ₹5,000 ನೀಡಲಾಗುವುದು’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದರು. ಪ್ಯಾಕೇಜ್‌ ಘೋಷಿಸಿದ್ದರು. ಅದರಂತೆ ಹಂತ ಹಂತವಾಗಿ ಹಣ ಕೈಸೇರುತ್ತಿದೆ. ದಾಖಲೆಗಳು ಸರಿ ಇದ್ದವರಿಗೆ ಈಗಾಗಲೇ ನೆರವು ಸಿಕ್ಕಿದೆ. ಕೃಷಿ ಇಲಾಖೆಯು ನಡೆಸಿದ್ದ ಬೆಳೆ ಸಮೀಕ್ಷೆ ಆಧರಿಸಿ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ ಆಗುತ್ತಿದೆ. ಇದರಿಂದಾಗಿ, ಆರ್ಥಿಕವಾಗಿ ಸಂಕಷ್ಟಕ್ಕೆ ಒಳಗಾಗಿದ್ದವರಿಗೆ ಕೊಂಚ ಸಹಾಯ ಆಗದಂತಾಗಿದೆ.

ತ್ವರಿತವಾಗಿ ಅನುಮೋದನೆ:

‘ಶನಿವಾರದವರೆಗೆ ಜಿಲ್ಲೆಯಲ್ಲಿ 72,295 ಮೆಕ್ಕೆಜೋಳ ಬೆಳೆಗಾರರಿಗೆ ತಲಾ ₹ 5ಸಾವಿರದಂತೆ ₹ 36,14,75,000 ಪರಿಹಾರ ಸಿಕ್ಕಿದೆ. ಜಮೀನಿಗೆ ಒಬ್ಬರೇ ಮಾಲೀಕರಿದ್ದವರಿಗೆ ತೊಂದರೆಯಾಗಿಲ್ಲ. ಆದರೆ, ಜಂಟಿ ಮಾಲೀಕತ್ವ ಇರುವವರು ಬಾಂಡ್‌ ಸಲ್ಲಿಸಬೇಕು. ಕೆಲವರು ಸಲ್ಲಿಸಿ ಸಹಾಯಧನ ತೆಗೆದುಕೊಂಡಿದ್ದಾರೆ. ಸಲ್ಲಿಕೆಯಾಗುವ ಬಾಂಡ್‌ಗಳನ್ನು ಪರಿಶೀಲಿಸಿ ತ್ವರಿತವಾಗಿ ಅನುಮೋದನೆ ಕೊಡುತ್ತಿದ್ದೇವೆ. ಹಣವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ವರ್ಗಾವಣೆ ಮಾಡಲಾಗುತ್ತಿದೆ. ಇದರಿಂದ ಅವರಿಗೆ ನೆರವಾಗಿದೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಜಿಲಾನಿ ಮೊಕಾಶಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಗುರುತಿನ ಸಂಖ್ಯೆ (ಎಫ್‌ಐಡಿ) ನೋಂದಣಿ ಮಾಡಿಸಿಲ್ಲದವರಿಗೆ ಸದ್ಯಕ್ಕೆ ಪರಿಹಾರ ಸಿಕ್ಕಿಲ್ಲ. ಅಂತಹ ರೈತರು ಸಮೀಪದ ರೈತ ಸಂಪರ್ಕ ಕೇಂದ್ರಗಳಲ್ಲಿ ನೋಂದಣಿ ಮಾಡಿಸಬೇಕು. ಜಂಟಿ ಮಾಲೀಕತ್ವ ಹೊಂದಿರುವವರು ಕೂಡಲೇ ಬಾಂಡ್‌ ಪೇಪರ್‌ ತಂದುಕೊಡಬೇಕು. ಅದನ್ನು ಪರಿಹಾರಕ್ಕೆ ಪರಿಣಿಸಲಾಗುವುದು’ ಎಂದು ಮಾಹಿತಿ ನೀಡಿದರು.

ಜಂಟಿ ಮಾಲೀಕತ್ವ:

ಕೃಷಿ ಇಲಾಖೆಯ ಅಂಕಿ–ಅಂಶಗಳ ಪ್ರಕಾರ, ಜಂಟಿ ಮಾಲೀಕತ್ವ ಹೊಂದಿರುವ ಇನ್ನೂ 70ಸಾವಿರಕ್ಕೂ ಹೆಚ್ಚಿನ ರೈತರಿಗೆ ಪರಿಹಾರ ದೊರೆಯುವುದು ಬಾಕಿ ಇದೆ. ಬ್ಯಾಂಕ್‌ ಖಾತೆಗೆ ಆಧಾರ್‌ ಜೋಡಣೆ ಆಗದಿರುವುದು, ದಾಖಲೆ ಹೊಂದಾಣಿಕೆ ಆಗದಿರುವುದು ಸೇರಿದಂತೆ ಕೆಲವು ತಾಂತ್ರಿಕ ಕಾರಣದಿಂದಾಗಿ 2,131 ಮಂದಿಯನ್ನು ಸದ್ಯಕ್ಕೆ ಪರಿಹಾರಕ್ಕೆ ಪರಿಗಣಿಸಲಾಗಿಲ್ಲ. ಈವರೆಗೆ ಅಥಣಿ ತಾಲ್ಲೂಕಿನ ಹೆಚ್ಚಿನ ಮಂದಿಗೆ (17,355) ನೆರವು ಸಿಕ್ಕಿದೆ. ನಿಪ್ಪಾಣಿ ತಾಲ್ಲೂಕಿನ ಎಲ್ಲ 129 ರೈತರಿಗೂ ಸಹಾಯಧನ ಸಿಕ್ಕಿದೆ.

ಜಂಟಿ ಮಾಲೀಕತ್ವ ಹೊಂದಿರುವವರ ಪೈಕಿ ಚಿಕ್ಕೋಡಿ ತಾಲ್ಲೂಕಿನಲ್ಲಿ ಅತಿ ಹೆಚ್ಚು ಅಂದರೆ 1,261 ಮಂದಿ ನೆರವು ಪಡೆದಿದ್ದಾರೆ. ಇದೇ ವಿಭಾಗದಲ್ಲಿ ಕಾಗವಾಡ ತಾಲ್ಲೂಕಿನಲ್ಲಿ 1,778 ಮಂದಿಯಲ್ಲಿ ಸಹಾಯಧನ ಗಳಿಸಿದವರು ಈವರೆಗೆ 3 ಮಂದಿ ಮಾತ್ರ! ರಾಯಬಾಗ ತಾಲ್ಲೂಕಿನಲ್ಲಿ ಹೆಚ್ಚಿನವರು (10,180) ಇದ್ದಾರೆ. ಹುಕ್ಕೇರಿ ತಾಲ್ಲೂಕು (9,518) ನಂತರದ ಸ್ಥಾನದಲ್ಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು