ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌–19: ನಲುಗಿದ ಪುಸ್ತಕೋದ್ಯಮ; ಸಹಜ ಸ್ಥಿತಿಗೆ ಬರಲು ಬೇಕು 1 ವರ್ಷ

ಶೇ 75–80 ರಷ್ಟು ವಹಿವಾಟು ಇಲ್ಲ
Last Updated 31 ಜುಲೈ 2020, 21:06 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌–19 ಮತ್ತು ಲಾಕ್‌ಡೌನ್‌ ಕನ್ನಡ ಪುಸ್ತಕೋದ್ಯಮಕ್ಕೆ ದೊಡ್ಡ ಪ್ರಮಾಣದ ಹೊಡೆತ ನೀಡಿದ್ದು, ಪುಸ್ತಕಗಳ ಮುದ್ರಣದಿಂದ ಹಿಡಿದು ಮಾರಾಟದವರೆಗೆ ಬಹುತೇಕ ಎಲ್ಲ ಚಟುವಟಿಕೆಗಳೂ ಸ್ಥಗಿತಗೊಂಡಿವೆ.

ಪುಸ್ತಕಗಳ ಸಗಟು ಮಾರಾಟ ಸ್ಥಗಿತಗೊಂಡಿದೆ. ಪುಸ್ತಕ ಮಳಿಗೆಗಳತ್ತ ಓದುಗರು ತಲೆ ಹಾಕುತ್ತಿಲ್ಲ. ಮಾರಾಟ ಶೇ 75ರಿಂದ 80ರಷ್ಟು ಕುಸಿದಿದೆ. ‘ಗತವೈಭವ’ ಮರಳಲು ಕನಿಷ್ಠ ಒಂದು ವರ್ಷವಾದರೂ ಬೇಕಾಗುತ್ತದೆ ಎನ್ನು
ತ್ತಾರೆ ಉದ್ಯಮದ ಪ್ರಮುಖರು.

‘ಮಾರುಕಟ್ಟೆಗೆ ಹೊಸ ಪುಸ್ತಕಗಳು ಬರುತ್ತಾ ಇಲ್ಲ. ಜಿಲ್ಲಾ ಮತ್ತು ತಾಲ್ಲೂಕುಗಳಿಂದ ಪುಸ್ತಕಗಳ ಸಗಟು ಖರೀದಿಗೆ ಬೇಡಿಕೆಯೂ ನಿಂತು ಹೋಗಿದೆ. ಚಿಲ್ಲರೆ ಮಾರಾಟದ ಮಳಿಗೆಗಳಲ್ಲಿ ಬೆರಳೆಣಿಯಷ್ಟು ಜನ ಬಂದರೆ ಹೆಚ್ಚು. ನಮ್ಮ ಮಳಿಗೆಗಳಲ್ಲಿ ಒಂದು ತಿಂಗಳಿಗೆ 10 ರಿಂದ 20 ಪ್ರತಿಗಳು ಮಾರಾಟ ಆದರೆ ಹೆಚ್ಚು ಎಂಬ ಸ್ಥಿತಿಗೆ ತಲುಪಿದ್ದೇವೆ’ ಎನ್ನುತ್ತಾರೆ ನವಕರ್ನಾಟಕ ಪ್ರಕಾಶನದ ರಮೇಶ್‌ ಉಡುಪ.

‘ನಮ್ಮ ಬಳಿ 30 ಹಸ್ತ ತಿಗಳು ಸಿದ್ಧ ಇವೆ. ಹಿಂದೆ ತಿಂಗಳಿಗೆ 5 ರಿಂದ 10 ಪುಸ್ತಕ ಹೊರತರುತ್ತಿದ್ದೆವು. 30 ರಿಂದ 40 ಪುಸ್ತಕಗಳ ಮರು ಮುದ್ರಣ ಆಗುತ್ತಿತ್ತು. ಈಗ 3 ರಿಂದ 4 ಹೊಸ ಪುಸ್ತಕ ಹೊರಬಂದರೆ ಹೆಚ್ಚು. ಪೂರ್ಣ ಪ್ರಮಾಣದ ಹಸ್ತಪ್ರತಿ ಇದ್ದರೂ ಮಾರಾಟದ ಖಾತರಿ ಇಲ್ಲದ ಕಾರಣ ಮುದ್ರಣದ ಸಾಹಸಕ್ಕೆ ಕೈ ಹಾಕುತ್ತಿಲ್ಲ’ ಎಂದು ಅವರು ಹೇಳಿದರು.

‘ಈ ಅವಧಿಯಲ್ಲಿ ಆನ್‌ಲೈನ್‌ ಮೂಲಕ ಪುಸ್ತಕ ಮಾರಾಟ ಶೇ 2 ರಷ್ಟು ಹೆಚ್ಚಾಗಿದೆ. ಹಿಂದೆ ಒಟ್ಟು ವಹಿವಾಟಿನಲ್ಲಿ ಶೇ 2 ರಷ್ಟು ಆನ್‌ಲೈನ್‌ ಮೂಲಕ ಮಾರಾಟ ಆಗುತ್ತಿತ್ತು. ಈಗ ಅದು ಶೇ 4ಕ್ಕೆ ಏರಿದೆ. ಪುಸ್ತಕ ಪ್ರದರ್ಶನಗಳು ನಿಂತೇ ಹೋಗಿವೆ. ಹೀಗಾಗಿ ವರ್ಷದ ಕೊನೆಯ ವೇಳೆಗೆ ಒಂದು ಸಾವಿರ ಪುಸ್ತಕಗಳನ್ನು ಡಿಜಿಟಲ್‌ ಆಗಿ ಮಾರ್ಪಡಿಸುವ(ಇ–ಬುಕ್) ಯೋಜನೆ ಹಾಕಿಕೊಂಡಿದ್ದೇವೆ’ ಎಂದು ಉಡುಪ ಹೇಳಿದರು.

ಕೈ ಚೆಲ್ಲಿದ ಸರ್ಕಾರ: ರಾಜ್ಯ ಸರ್ಕಾರ ಎಲ್ಲ ಹಣವನ್ನು ಕೋವಿಡ್‌–19ಗೇ ಬಳಸುತ್ತಿರುವುದರಿಂದ ಗ್ರಂಥಾಲಯಗಳಿಗೆ ಪುಸ್ತಕ ಖರೀದಿಗೆ ಹಣವೂ ಅದಕ್ಕೇ ಬಳಕೆಯಾಗುತ್ತಿದೆ. ಪುಸ್ತಕಗಳ ಖರೀದಿಯನ್ನೂ ಮಾಡುತ್ತಿಲ್ಲ ಹೀಗಾಗಿ ಯಾವ ಧೈರ್ಯದ ಮೇಲೆ ಬಂಡವಾಳ ಹೂಡುವುದು ಎಂದು ಕೆಲವು ಪ್ರಕಾಶಕರು ಪ್ರಶ್ನಿಸಿದ್ದಾರೆ.

ರಾಜ್ಯದಲ್ಲಿ ಸುಮಾರು 10 ಸಾವಿರ ಜನ ಪುಸ್ತಕೋದ್ಯಮ ಅವಲಂಬಿಸಿದ್ದಾರೆ. ಇದೊಂದು ಸರಪಳಿ. ಕಾಗದ ಪೂರೈಕೆದಾರ, ಕಟ್‌ ಮಾಡುವವನು, ಮುದ್ರಣ ಕಾರ್ಮಿಕರು, ಇಂಕ್ ಪೂರೈಕೆದಾರ, ಫೋಲ್ಡರ್‌, ಬೈಂಡರ್, ಡಿಟಿಪಿ ಆಪರೇಟರ್‌, ಪುಟ ವಿನ್ಯಾಸಗಾರ‌ ಹೀಗೆ ಪಟ್ಟಿ ಬೆಳೆಯತ್ತದೆ. ಇವರ ಕಥೆ ಏನಾಗಿದೆ ಎಂದು ಕೇಳುವವರು ಯಾರೂ ಇಲ್ಲ ಎನ್ನುತ್ತಾರೆ ಕರ್ನಾಟಕ ಪ್ರಕಾಶಕರ ಸಂಘದ ಸೃಷ್ಟಿ ನಾಗೇಶ್‌.

‘ಪುಸ್ತಕ ಮಳಿಗೆಗಳು ಸಾಲಾಗಿ ಬಾಗಿಲು ಹಾಕುತ್ತಿವೆ. ಸಂಕಷ್ಟದಲ್ಲಿ ಪುಸ್ತಕೋದ್ಯಮಕ್ಕೆ ಹೆಗಲು ನೀಡಬೇಕಿದ್ದ ಹೆಸರಾಂತ ಸಾಹಿತಿಗಳು ಮೌನಕ್ಕೆ ಶರಣಾಗಿದ್ದಾರೆ. ತಮ್ಮ ಪುಸ್ತಕ ಹೊರಬಂದರೆ ಸಾಕು, ಉಳಿದದ್ದು ಸಂಬಂಧ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ಇಂತಹ ಸ್ಥಿತಿಯಲ್ಲಿ ನಮ್ಮನ್ನು ಕೈಹಿಡಿದು ನಡೆಸುವವರು ಯಾರು’ ಎಂದು ಅವರು ಪ್ರಶ್ನಿಸಿದ್ದಾರೆ.

ಮಾರಾಟ ಪ್ರಮಾಣ ಎಷ್ಟು?

ಕೊರೊನಾ ಬರುವುದಕ್ಕೆ ಮೊದಲು ನಮ್ಮ ಪ್ರಕಾಶನ ತಿಂಗಳಿಗೆ ಸರಾಸರಿ ₹60 ಸಾವಿರದಷ್ಟು ವಹಿವಾಟು ನಡೆಸುತ್ತಿತ್ತು. ಕಳೆದ ನಾಲ್ಕು ತಿಂಗಳಲ್ಲಿ ಕೇವಲ ₹15 ಸಾವಿರದಿಂದ ₹20 ಸಾವಿರದಷ್ಟು ವಹಿವಾಟು ನಡೆದಿದೆ. ಎಲ್ಲ ಪ್ರಕಾಶಕರ ಸ್ಥಿತಿ ಹೀಗೆಯೇ ಇದೆ ಎಂದು ಪ್ರಕಾಶಕರೊಬ್ಬರು ತಿಳಿಸಿದರು.

ಸಿಗದ ಪರಿಹಾರ

ಸರ್ಕಾರ ದುರ್ಬಲ ವರ್ಗಕ್ಕೆ ₹5,000 ದಂತೆ ಪರಿಹಾರ ನೀಡಿದೆ. ಆದರೆ ಕಷ್ಟದಲ್ಲಿರುವ ಪ್ರಿಂಟರ್‌, ಬೈಂಡರ್‌, ಕಟ್ಟರ್‌ ಇತ್ಯಾದಿ ಸಣ್ಣಪುಟ್ಟ ಕೆಲಸದಲ್ಲಿ ತೊಡಗಿಕೊಂಡವರಿಗೆ ಒಂದು ಪೈಸೆಯೂ ಸಿಕ್ಕಿಲ್ಲ. ಸರ್ಕಾರ ಈಗ
ಲಾದರೂ ಇವರಿಗೆ ಪರಿಹಾರ ಕೊಡುವ ಬಗ್ಗೆ ಯೋಚಿಸಬೇಕು ಎನ್ನುತ್ತಾರೆ ಪ್ರಕಾಶಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT