ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವೇಗೌಡರ ಬಗ್ಗೆ ಎಚ್‌ಡಿಕೆ ಪುಸ್ತಕ ಬರೀತಾರೆ !

Last Updated 23 ಜುಲೈ 2020, 6:34 IST
ಅಕ್ಷರ ಗಾತ್ರ

ಒಂದು ವರ್ಷದ 'ರಾಜಕೀಯ ಲಾಕ್‌ಡೌನ್’ ಮತ್ತು ನಾಲ್ಕು ತಿಂಗಳ 'ಕೊರೊನಾ ಲಾಕ್‌ಡೌನ್’ ಅವಧಿಯಲ್ಲಿ ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರು ರಾಜಕಾರಣ ಬದಿಗಿಟ್ಟು ಗಂಭೀರವಾದ ಓದು, ಅಧ್ಯಯನದಲ್ಲಿ ತೊಡಗಿದ್ದಾರೆ.

ಮೊದಲಿನಿಂದಲೂ ಓದುವ ಹವ್ಯಾಸ ಮೈಗೂಡಿಸಿಕೊಂಡಿರುವ ಕುಮಾರಸ್ವಾಮಿ ಅವರು, ಈ ಲಾಕ್‌ಡೌನ್ ಅವಧಿಯಲ್ಲಿ ತಮ್ಮ ಸಂಗ್ರಹದಲ್ಲಿದ್ದ ಅನೇಕ ಪುಸ್ತಕಗಳನ್ನು ಓದಿದ್ದಾರೆ. ಹಲವು ಗಣ್ಯರ ಆತ್ಮಚರಿತ್ರೆ, ದೇಶ, ವಿದೇಶಗಳ ರಾಜಕೀಯ ಇತಿಹಾಸದ ಪುಸ್ತಕಗಳನ್ನು ಅವರು ತಿರುವಿ ಹಾಕುತ್ತಿದ್ದಾರೆ. ಹೀಗೆ, ರಾಜಕೀಯ ಗಣ್ಯರು ಮತ್ತು ಮಾಜಿ ಪ್ರಧಾನಿಗಳ ಜೀವನ ಕುರಿತಾದ ಪುಸ್ತಕಗಳನ್ನು ಓದುವಾಗ ಅವರಿಗೆ ‘ನನ್ನ ಮನೆಯಲ್ಲಿಯೇ ಇರುವ ನನ್ನ ತಂದೆ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರ ಬಗ್ಗೆ ಏಕೆ ಪುಸ್ತಕ ಬರೆಯಬಾರದು?’ ಎಂಬ ಆಲೋಚನೆ ಬಂದಿದೆ. ಹಾಗೆ ಯೋಚನೆ ಬಂದಿದ್ದೇ ತಡ, ದೊಡ್ಡಗೌಡರ ಬಗ್ಗೆ ಪುಸ್ತಕ ಬರೆಯಲು ಸಜ್ಜಾಗಿದ್ದಾರೆ.

ಗೌಡರ ವೈಯಕ್ತಿಕ ಮತ್ತು ರಾಜಕೀಯ ಜೀವನದ ಏಳುಬೀಳುಗಳನ್ನು ನನ್ನಷ್ಟು ಹತ್ತಿರದಿಂದ ಕಂಡವರು ಯಾರು ಎಂದು ಪ್ರಶ್ನಿಸಿಕೊಂಡ ಅವರು, ಪ್ರಮುಖ ಘಟನಾವಳಿಗಳ ನೋಟ್ಸ್‌ ಮಾಡಿಕೊಳ್ಳುತ್ತಿದ್ದಾರೆ. ಗೌಡರ ಬದುಕು,ಸಾಧನೆಯ ಹಾದಿ ಮತ್ತು ರಾಜಕಾರಣದಲ್ಲಿ ಅವರು ಏರಿದ ಎತ್ತರದ ಸ್ಥಾನಮಾನಗಳ ಬಗ್ಗೆ ಮಾತ್ರವಲ್ಲ, ಅವರ ವೈಯಕ್ತಿಕ ಜೀವನದ ಇಣುಕು ನೋಟದ ಅಪರೂಪದ ಘಟನೆಗಳು ಪುಸ್ತಕದಲ್ಲಿ ದಾಖಲಾಗಲಿವೆ. ಕುಟುಂಬದ ಯಜಮಾನರಾಗಿ ಗೌಡರು ಹೇಗಿದ್ದರು. ಮಕ್ಕಳನ್ನು ಹೇಗೆ ಬೆಳೆಸಿದರು ಎಂಬ ಕುತೂಹಲಕಾರಿ ಅಂಶಗಳು ಈ ಪುಸ್ತಕದಲ್ಲಿ ಇರಲಿವೆ ಎಂದು ಕುಮಾರಸ್ವಾಮಿ ’ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡರು.

ದೇವೇಗೌಡರನ್ನು ಅವರು ಈಗಲೂ ಕರೆಯುವುದು ‘ದೊಡ್ಡವರು’ ಎಂದೇ. ಅಮ್ಮನ ಜತೆ ಸಲುಗೆ ಜಾಸ್ತಿ. ಎಷ್ಟೋ ದಿನ ದೊಡ್ಡ ಗೌಡರ ಎದುರು ಕುಳಿತುಕೊಂಡು ಮಾತನಾಡಲು ಕುಮಾರಸ್ವಾಮಿ ಹೆದರುತ್ತಿದ್ದರಂತೆ. ಅಪ್ಪನ ಜತೆ ಏನೇ ಮಾತನಾಡುವುದಿದ್ದರೂ ಅಮ್ಮನ ರಾಯಭಾರ ಬೇಕಿತ್ತು. ಈಗಲೂ ದೊಡ್ಡವರು ಊಟ ಮಾಡುವಾಗ ಕರೆದರೆ, ಅಳುಕಿನಿಂದಲೇ ಅವರ ಎದುರು ಕುಳಿತುಕೊಳ್ಳುತ್ತಾರಂತೆ. ’ಇಂಥ ಹಲವು ಪ್ರಸಂಗಗಳನ್ನೂ ಪುಸ್ತಕದಲ್ಲಿ ದಾಖಲಿಸುತ್ತೇನೆ’ ಎಂದರು ಕುಮಾರಸ್ವಾಮಿ.

ಲಾಕ್‌ಡೌನ್‌ ದಿನಚರಿ

ಪ್ರತಿದಿನ ಬೆಳಿಗ್ಗೆ ಎಂಟರಿಂದ ಹತ್ತು ಕನ್ನಡ ಮತ್ತು ಇಂಗ್ಲಿಷ್ ಪತ್ರಿಕೆಗಳ ಮೇಲೆ ಕಣ್ಣಾಡಿಸುವುದರೊಂದಿಗೆ ಅವರ ದಿನಚರಿ ಆರಂಭವಾಗುತ್ತದೆ. ಸುದ್ದಿಗಳ ಹೊರತಾಗಿ ಅಂಕಣ ಬರಹ ಮತ್ತು ಭಾನುವಾರದ ಪುರವಣಿಗಳ ಲೇಖನಗಳನ್ನು ಅವರು ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳುವುದಿಲ್ಲ. ಆ ಕ್ಷಣಕ್ಕೆ ಓದಲು ಆಗದಿದ್ದರೆ ಪತ್ರಿಕೆಗಳನ್ನು ಎತ್ತಿಟ್ಟುಕೊಂಡು, ಸಮಯ ಸಿಕ್ಕಾಗ ಓದುತ್ತಾರೆ.ಪ್ರತಿದಿನ ರಾತ್ರಿ 1ರಿಂದ 2 ಗಂಟೆಯಾದರೂ ಪುಸ್ತಕದೊಂದಿಗೆ ಅವರು ನಂಟು ಕಡಿದುಕೊಂಡಿರುವುದಿಲ್ಲ. ಕೆಲವೊಮ್ಮೆ ಅದು ಬೆಳಗಿನ ಜಾವದವರೆಗೂ ಮುಂದುವರೆಯುತ್ತದೆ.

ಸದ್ಯ ಡಾ.ಬಿ.ಆರ್. ಅಂಬೇಡ್ಕರ್‌ ಅವರ ‘ರೆವಲ್ಯೂಷನ್‌ ಮತ್ತು ಕೌಂಟರ್‌ ರೆವಲ್ಯೂಷನ್‌ ಇನ್‌ ಏನ್ಸಿಯಂಟ್‌ ಇಂಡಿಯಾ’ ಎಂಬ ಕೃತಿಯನ್ನು ಕೈಗೆತ್ತಿಕೊಂಡಿದ್ದಾರೆ. ಲಾಲ್‌ ಬಹದ್ದೂರ್ ಶಾಸ್ತ್ರಿ ಸೇರಿದಂತೆಹಲವು ಮಾಜಿ ಪ್ರಧಾನಿಗಳು ಮತ್ತು ಗಣ್ಯರ ಜೀವನ ಚರಿತ್ರೆಗಳನ್ನು ಈಗಾಗಲೇ ಓದಿ ಮುಗಿಸಿದ್ದಾರೆ.

ಮೋಡಿ ಮಾಡಿದ ಚಕ್ರವರ್ತಿ ಅಶೋಕ

ಹಿಂದಿ ಚಾನೆಲ್‌ನಲ್ಲಿ450 ಕಂತುಗಳಲ್ಲಿ ಪ್ರಸಾರವಾದ ‘ಅಶೋಕಾ’ ಕುಮಾರಸ್ವಾಮಿ ಅವರ ಅತ್ಯಂತ ಇಷ್ಟದ ಧಾರಾವಾಹಿ. ಅಶೋಕ, ಚಂದ್ರಗುಪ್ತ ಮೌರ್ಯ, ಬಿಂದುಸಾರ, ಚಾಣಕ್ಯನ ಪಾತ್ರಗಳು ಇವರ ಮೇಲೆ ಪ್ರಭಾವ ಬೀರಿವೆ. ಸದ್ಯ ವೂಟ್‌ನಲ್ಲಿ ‘ಅಶೋಕಾ’ ಧಾರಾವಾಹಿಯಎಲ್ಲ ಕಂತುಗಳನ್ನು ನೋಡುತ್ತಿದ್ದಾರೆ. ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಹೊಸ ‘ಮಹಾಭಾರತ’ವನ್ನೂ ಅವರು ತಪ್ಪಿಸಿಕೊಳ್ಳುತ್ತಿಲ್ಲ. ಒಂದು ವೇಳೆ ನೋಡಲು ಆಗದಿದ್ದರೆ ಸಹಾಯಕ ಸಿಬ್ಬಂದಿಗೆ ರೆಕಾರ್ಡ್‌ ಮಾಡಿಟ್ಟುಕೊಳ್ಳುವಂತೆ ಸೂಚಿಸಿರುತ್ತಾರೆ. ಸಮಯ ಸಿಕ್ಕಾಗ ಅದನ್ನು ನೋಡುತ್ತಾರೆ.

ಸದ್ಯ ಅವರು ಓದು ಮತ್ತು ಧಾರಾವಾಹಿಗಳ ವೀಕ್ಷಣೆಯಲ್ಲಿಯೇದಿನದಲ್ಲಿ 16ರಿಂದ 17 ತಾಸು ಕಳೆಯುತ್ತಿದ್ದಾರೆ. ಕನ್ನಡದಲ್ಲಿ ಡಾ. ರಾಜ್‌ಕುಮಾರ್‌ ಅವರ ಸಿನಿಮಾಗಳು ಎಂದರೆ ಅಚ್ಚುಮೆಚ್ಚು ಎಂದು ಹೇಳುವುದನ್ನು ಕುಮಾರಸ್ವಾಮಿ ಅವರು ಮರೆಯಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT