ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು ಜಿಲ್ಲೆಯಲ್ಲಿ ವರುಣನ ಅಬ್ಬರ, ಹಾರಂಗಿ ಜಲಾಶಯ ಬಹುತೇಕ ಭರ್ತಿ

ಹಾರಂಗಿ ಜಲಾಶಯದಿಂದ ನದಿಗೆ 2,500 ಕ್ಯುಸೆಕ್‌ ನೀರು ಬಿಡುಗಡೆ
Last Updated 17 ಜುಲೈ 2020, 5:52 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮುಂಗಾರು ಮಳೆ ಅಬ್ಬರಿಸುತ್ತಿದೆ. ಕಾವೇರಿ ನದಿಯೂ ಸೇರಿದಂತೆ ಹಳ್ಳ, ಕೊಳ್ಳಗಳು ಮೈದುಂಬಿ ಹರಿಯುತ್ತಿವೆ.

ಕುಶಾಲನಗರ ಸಮೀಪದ ಹಾರಂಗಿ ಜಲಾಶಯಕ್ಕೆ ಒಳಹರಿವು ಏರಿಕೆಯಾಗುತ್ತಲೇ ಇದ್ದು ಮುಂಜಾಗ್ರತಾ ಕ್ರಮವಾಗಿ ಶುಕ್ರವಾರ 2,500 ಕ್ಯುಸೆಕ್‌ ನೀರನ್ನು ನದಿಗೆ ಬಿಡುಗಡೆ ಮಾಡಲಾಯಿತು.

ನದಿಯ ಅಚ್ಚುಕಟ್ಟು ಭಾಗದ ಜನರಿಗೆ ಸೈರನ್‌ ಹಾಕುವ ಮೂಲಕ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚನೆ ನೀಡಲಾಯಿತು. ಕ್ರಸ್ಟ್‌ಗೇಟ್‌ ತೆರೆಯುವ ಮೊದಲು ಶಾಸಕ ಎಂ.ಪಿ.ಅಪ್ಪಚ್ಚು ರಂಜನ್‌ ಪೂಜೆ ಸಲ್ಲಿಸಿದರು.

ಜಲಾಶಯದ ಗರಿಷ್ಠ ಮಟ್ಟವು 2,859 ಅಡಿಯಾಗಿದ್ದು, ಶುಕ್ರವಾರ ಬೆಳಿಗ್ಗೆಯ ವೇಳೆಗೆ 2,854 ಅಡಿ ನೀರು ಸಂಗ್ರಹವಿತ್ತು. ಜಲಾಶಯಕ್ಕೆ 4,864 ಕ್ಯುಸೆಕ್‌ ಒಳಹರಿವು ಇದೆ.

ಮಡಿಕೇರಿ, ಸೋಮವಾರಪೇಟೆ, ಗರಗಂದೂರು, ಮಾದಾಪುರ ಭಾಗದಲ್ಲಿ ಬಿಡದೇ ಸುರಿಯುತ್ತಿರುವ ಮಳೆಯಿಂದ ಜಲಾಶಯದ ಒಳಹರಿವು ಏರಿಕೆ ಆಗುತ್ತಲೇ ಇದೆ.

ಜಲಾಶಯ ಇನ್ನೂ ಭರ್ತಿಯಾಗಲು 5 ಅಡಿ ಬಾಕಿಯಿರುವಾಗಲೇ ನದಿಗೆ ನೀರು ಬಿಡುಗಡೆ ಮಾಡಲಾಯಿತು.

ಜಿಲ್ಲೆಯ ನಾಪೋಕ್ಲು ಹಾಗೂ ಭಾಗಮಂಡಲದಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು ಜನಜೀವನ ಅಸ್ತವ್ಯಸ್ತವಾಗಿದೆ.

ಭಾಗಮಂಡಲದ ತ್ರಿವೇಣಿ ಸಂಗಮವು ಮತ್ತೆ ಭರ್ತಿಯಾಗಿದೆ. ಬಲಮುರಿ ಹಾಗೂ ಬೇತ್ರಿಯಲ್ಲಿ ಕಾವೇರಿ ನದಿಯು ಮೈದುಂಬಿ ಹರಿಯುತ್ತಿದೆ. ಜಿಲ್ಲೆಯ ಜಲಪಾತಗಳು ಹಾಲ್ನೊರೆಯಂತೆ ಧುಮ್ಮಿಕ್ಕುತ್ತಿವೆ.

24 ಗಂಟೆಯ ಅವಧಿಯಲ್ಲಿ ನಾಪೋಕ್ಲು 12 ಸೆಂ.ಮೀ, ಸಂಪಾಜೆ 7, ಶಾಂತಳ್ಳಿ 8, ಭಾಗಮಂಡಲ 5.8 ಸೆಂ.ಮೀ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT