ಶುಕ್ರವಾರ, ಅಕ್ಟೋಬರ್ 2, 2020
21 °C

ಆರೋಗ್ಯ ಸೇತು ಆ್ಯಪ್ ಕಡ್ಡಾಯವೇ: ಹೈಕೋರ್ಟ್ ಪ್ರಶ್ನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈಕೋರ್ಟ್

ಬೆಂಗಳೂರು: ವಿಮಾನ ಪ್ರಯಾಣಿಕರು ಆರೋಗ್ಯ ಸೇತು ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವುದು ಕಡ್ಡಾಯವೇ ಎಂಬುದನ್ನು ಸ್ಪಷ್ಟಪಡಿಸುವಂತೆ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರಕ್ಕೆ(ಎಎಐ) ಹೈಕೋರ್ಟ್‌ ನಿರ್ದೇಶನ ನೀಡಿದೆ.

ಹಲವು ಸೇವೆಗಳಿಗೆ ಆ್ಯಪ್ ಬಳಕೆ ಕಡ್ಡಾಯ ಮಾಡಿರುವುದನ್ನು ಪ್ರಶ್ನಿಸಿ ಅನಿವರ್ ಎ. ಅರವಿಂದ್ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

‘ವಿಮಾನ ಪ್ರಯಾಣಕ್ಕೆ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವುದನ್ನು ಎಎಐ ಕಡ್ಡಾಯಗೊಳಿಸಿ ಜುಲೈ 30ರಂದು ಎಲ್ಲಾ ವಿಮಾನ ನಿಲ್ದಾಣಗಳಿಗೆ ಸೂಚನೆ ನೀಡಿದೆ’ ಎಂದು ಅರ್ಜಿದಾರರ ಪರ ವಕೀಲರು ವಿಚಾರಣೆ ವೇಳೆ ತಿಳಿಸಿದರು.

‘ಇದು ಪ್ರಯಾಣಿಕರಿಗೆ ನೀಡಿರುವ ಸಲಹೆಯಷ್ಟೇ. ಸ್ವಯಂ ಪ್ರೇರಿತವಾಗಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಲು ಅವರಿಗೆ ತಿಳಿಸಲಾಗಿದೆ. ಸೋಂಕು ಹರಡುವುದನ್ನು ಕಡಿಮೆ ಮಾಡುವುದು ಇದರ ಉದ್ದೇಶ’ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ವಿವರಿಸಿದರು.

‘ಮೆಟ್ರೊ ರೈಲು ಪ್ರಯಾಣಿಕರು ಸಹ ಪ್ರಯಾಣದ ವೇಳೆ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬೇಕು ಎಂದು ಬೆಂಗಳೂರು ಮೆಟ್ರೊ ನಿಗಮ ತಿಳಿಸಿದೆ. ಯಾವುದೇ ಒಂದು ಆ್ಯಪ್ ಕಡ್ಡಾಯಗೊಳಿಸಲು ಯಾವುದೇ ಕಾನೂನು ಅನುಮತಿಸುವುದಿಲ್ಲ’ ಎಂದು ಅರ್ಜಿದಾರರು ವಿಚಾರಣೆ ವೇಳೆ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು