ಗುರುವಾರ , ಮೇ 6, 2021
30 °C
ರಾಜ್ಯದಾದ್ಯಂತ 497 ಕೇಂದ್ರಗಳಲ್ಲಿ ಸಿಇಟಿ ನಿರಾತಂಕ

ಸಿಇಟಿ: ಗಣಿತಕ್ಕೆ ಶೇ 89 ಹಾಜರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೋವಿಡ್‌ ನಡುವೆಯೂ ರಾಜ್ಯದಾದ್ಯಂತ 497 ಕೇಂದ್ರಗಳಲ್ಲಿ ಜೀವವಿಜ್ಞಾನ ಮತ್ತು ಗಣಿತ ವಿಷಯಗಳಿಗೆ ಗುರುವಾರ ನಡೆದ ಸಾಮಾನ್ಯ ಪ್ರವೇಶ ಪರೀಕ್ಷೆಗೆ (ಸಿಇಟಿ)ಕ್ರಮವಾಗಿ ಶೇ 75.89 ಮತ್ತು ಶೇ 89.22 ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಯಾವುದೇ ಗೊಂದಲಗಳಿಲ್ಲದೆ ನಿರಾತಂಕವಾಗಿ ಪರೀಕ್ಷೆಗಳು ನಡೆದಿವೆ.

ಸಿಇಟಿಗೆ ನೋಂದಣಿಯಾಗಿದ್ದ ಒಟ್ಟು1,94,419 ವಿದ್ಯಾರ್ಥಿಗಳ ಪೈಕಿ, ಜೀವವಿಜ್ಞಾನ ಪರೀಕ್ಷೆಯನ್ನು 1,47,491 ಹಾಗೂ ಗಣಿತ ಪರೀಕ್ಷೆಯನ್ನು 1,73,408 ಮಂದಿ ಬರೆದಿದ್ದಾರೆ.

ಸಿಇಟಿ – 2019ರಲ್ಲಿ ನೋಂದಣಿಯಾಗಿದ್ದ 1,94,311 ವಿದ್ಯಾರ್ಥಿಗಳ ಪೈಕಿ, ಜೀವವಿಜ್ಞಾನ ಪರೀಕ್ಷೆಯನ್ನು 1,48,022 (ಶೇ 79.90) ಹಾಗೂ ಗಣಿತ ಪರೀಕ್ಷೆಗೆ 178517 (ಶೇ 91.92) ವಿದ್ಯಾರ್ಥಿಗಳು ಹಾಜರಾಗಿದ್ದರು.

ಕೋವಿಡ್‌ ದೃಢಪಟ್ಟವರಿಗೂ ಅವಕಾಶ: ಪ್ರಸಕ್ತ ಸಾಲಿನಲ್ಲಿ ಸಿಇಟಿಗೆ ನೋಂದಾಯಿತ 60 ವಿದ್ಯಾರ್ಥಿಗಳಲ್ಲಿ ಕೋವಿಡ್‌ ದೃಢಪಟ್ಟಿದ್ದು, ಈ ಪೈಕಿ, ಜೀವವಿಜ್ಞಾನ ಪರೀಕ್ಷೆಗೆ 49 ಮತ್ತು ಗಣಿತ ಪರೀಕ್ಷೆಗೆ 57 ವಿದ್ಯಾರ್ಥಿಗಳು ಹಾಜರಾದರು. ಭೌತವಿಜ್ಞಾನ ಮತ್ತು ರಸಾಯನವಿಜ್ಞಾನ ವಿಷಯಗಳ ಪರೀಕ್ಷೆ ಶುಕ್ರವಾರ (ಜುಲೈ 31) ನಡೆಯಲಿದೆ.

ಕೋವಿಡ್-19 ಹಿನ್ನೆಲೆ ಹಾಗೂ ಹೈಕೋರ್ಟ್ ನಿರ್ದೇಶನದ ಅನ್ವಯ ಪರೀಕ್ಷಾ ಕೇಂದ್ರಗಳಲ್ಲಿ ಆಯಾಜಿಲ್ಲೆಯ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಮತ್ತು ಬೆಂಗಳೂರಿನಲ್ಲಿ ಬಿಬಿಎಂಪಿ ಸಹಯೋಗದಲ್ಲಿ ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು.

ಒಂದು ಕೊಠಡಿಯಲ್ಲಿ 24 ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿತ್ತು. ಕೋವಿಡ್ ದೃಢಪಟ್ಟಿದ್ದ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿಗಳಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಈ ಪರೀಕ್ಷಾ ಕೇಂದ್ರಗಳಲ್ಲಿ ವೈದ್ಯರೇ ಪರೀಕ್ಷಾ ಕೊಠಡಿಯ ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸಿದರು. ವೈದ್ಯರ ಜತೆಗೆ ಒಬ್ಬ ನರ್ಸ್ ಕೂಡ ಇದ್ದರು.

ಉಪ ಮುಖ್ಯಮಂತ್ರಿ ಭೇಟಿ: ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥ
ನಾರಾಯಣ ಅವರು ಮಲ್ಲೇಶ್ವರದ ಎಂಇಎಸ್ ಕಾಲೇಜು ಹಾಗೂ ಶೇಷಾದ್ರಿಪುರಂ ಕಾಂಪೋಸಿಟ್ ಪಿಯು ಕಾಲೇಜಿನ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಕೋವಿಡ್-19 ಹಿನ್ನೆಲೆಯಲ್ಲಿ ಕೈಗೊಂಡಿರುವ ಮುನ್ನೆಚ್ಚರಿಕೆ ಕ್ರಮಗಳನ್ನು ಪರಿಶೀಲಿಸಿದರು.

ಕೋವಿಡ್‌ ದೃಢಪಟ್ಟ ವಿದ್ಯಾರ್ಥಿಗಳು ಪರೀಕ್ಷೆ ಬರೆದ ನಗರದ ಜಿಕೆವಿಕೆ ಕ್ಯಾಂಪಸ್‌ನ ಕೋವಿಡ್ ಕೇರ್ ಸೆಂಟರ್‌ನ ಕೇಂದ್ರಕ್ಕೆ ಪಿಪಿಇ ಕಿಟ್‌ ಧರಿಸಿ ಭೇಟಿ ನೀಡಿದ ಅಶ್ವತ್ಥನಾರಾಯಣ, ಅಲ್ಲಿ ಪರೀಕ್ಷೆಗೆ ಹಾಜರಾಗಿದ್ದ ನಾಲ್ವರು ವಿದ್ಯಾರ್ಥಿಗಳ ಕ್ಷೇಮ ವಿಚಾರಿಸಿದರು.

ಸಿಇಟಿ ಫಲಿತಾಂಶ ಬಂದ ಬಳಿಕ ಕೌನ್ಸೆಲಿಂಗ್ ಸೇರಿದಂತೆ ಎಲ್ಲ ಪ್ರಕ್ರಿಯೆಗಳನ್ನು ಸಂಪೂರ್ಣವಾಗಿ ಆನ್‌ಲೈನ್‌ನಲ್ಲಿಯೇ ನಡೆಸಲಾಗುವುದು. ವಿದ್ಯಾರ್ಥಿ ಮತ್ತು ಪೋಷಕರು ಸಿಇಟಿ ಘಟಕಕ್ಕೆ ಬರುವ ಅಗತ್ಯವಿಲ್ಲ. ವಿದ್ಯಾರ್ಥಿಗಳು ಕಾಲೇಜನ್ನು ಆಯ್ಕೆ ಮಾಡಿಕೊಂಡ ನಂತರ ನೇರವಾಗಿ ಕಾಲೇಜಿಗೆ ಹೋಗಿ ಪ್ರವೇಶ ಪಡೆಯಬಹುದು ಎಂದು ಅಶ್ವತ್ಥನಾರಾಯಣ ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು