ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ಸರ್ಕಾರದಿಂದ ಸರ್ವಾಧಿಕಾರಿ ಧೋರಣೆ: ಸಿದ್ದರಾಮಯ್ಯ

‘ಬಿಐಇಸಿ ಕೋವಿಡ್‌ ಆರೈಕೆ ಕೇಂದ್ರದಲ್ಲಿ ಅಗತ್ಯ ಸಿದ್ಧತೆ ಆಗಿಲ್ಲ’
Last Updated 21 ಜುಲೈ 2020, 10:40 IST
ಅಕ್ಷರ ಗಾತ್ರ

ಬೆಂಗಳೂರು: ‘ಕೊರೊನಾ ವಿಚಾರದಲ್ಲಿ ರಾಜ್ಯ ಸರ್ಕಾರ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. ವಿರೋಧ ಪಕ್ಷಗಳು ಸಲಹೆ ನೀಡಿದರೆ ಗಂಭೀರವಾಗಿ ಪರಿಗಣಿಸುವುದಿಲ್ಲ. ವಿಧಾನಮಂಡಲ ಅಧಿವೇಶನ ಕರೆಯುವುದಿಲ್ಲ. ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದೆ’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು.

ತುಮಕೂರು ರಸ್ತೆಯಲ್ಲಿ ಬೆಂಗಳೂರು ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ (ಬಿಐಇಸಿ) ಆರಂಭಿಸುತ್ತಿರುವ ಕೋವಿಡ್ ಆರೈಕೆ ಕೇಂದ್ರಕ್ಕೆ ಮಂಗಳವಾರ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, ‘ಸೋಂಕು ನಿಯಂತ್ರಿಸಲು ಸರ್ಕಾರ ಅಗತ್ಯಕ್ಕೆ ಅನುಗುಣವಾಗಿ ಸಿದ್ಧತೆ ಮಾಡಿಕೊಂಡಿಲ್ಲ. ಸರ್ಕಾರ ಉದಾಸೀನ ತೋರಿಸಿರುವುದು ಸ್ಪಷ್ಟವಾಗಿದೆ. ಸೋಂಕಿತರ ಚಿಕಿತ್ಸೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲೇ ಇಲ್ಲ. ರಾಜ್ಯ ಮತ್ತು ಕೇಂದ್ರ ಸರ್ಕಾರದ ಬೇಜವಾಬ್ದಾರಿತನ ಎದ್ದು ಕಾಣುತ್ತದೆ’ ಎಂದು ದೂರಿದರು.

‘ಬಿಐಇಸಿಯಲ್ಲಿ ಏಷ್ಯಾದಲ್ಲೇ ಅತಿದೊಡ್ಡ ಕೋವಿಡ್ ಆರೈಕೆ ಕೇಂದ್ರ ಆರಂಭಿಸಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದ್ದರು. ಹೀಗಾಗಿ, ವ್ಯವಸ್ಥೆ ಹೇಗಿದೆ ಎಂದು ನೋಡಲು ಹೋಗಿದ್ದೆ. ಅಲ್ಲಿ ಅಗತ್ಯಕ್ಕೆ ತಕ್ಕ ಸೌಲಭ್ಯಗಳಿಲ್ಲ. ಸರ್ಕಾರ ತಕ್ಷಣ ಆ ಕುರಿತು ಗಮನ ಹರಿಸಬೇಕು’ ಎಂದು ಆಗ್ರಹಿಸಿದರು.

‘ಶುಕ್ರವಾರದಿಂದ ಅಲ್ಲಿ ನೋಂದಣಿ ಪ್ರಕ್ರಿಯೆ ಆರಂಭವಾಗಲಿದೆ. ಸೋಂಕಿನ ಲಕ್ಷಣ ಇಲ್ಲದವರನ್ನು ದಾಖಲು ಮಾಡಿಕೊಳ್ಳಲಾಗುವುದು ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ಇಂಥ ಸೌಲಭ್ಯದಲ್ಲಿ ಪರಿಸ್ಥಿತಿಯನ್ನು ಸರ್ಕಾರ ಯಾವ ರೀತಿ ನಿಭಾಯಿಸುವುದೊ ಕಾದು ನೋಡಬೇಕು’ ಎಂದರು.

‘ಹಾಸಿಗೆ ಕೊರತೆಯಿಂದ ಕೊರೊನಾ ಸೋಂಕಿತರು ಸಾವನ್ನಪ್ಪುತ್ತಿದ್ದಾರೆ. ಹಾಸಿಗೆಗಳಿಗಾಗಿ ಅಲೆದಾಟ, ಚಿಕಿತ್ಸೆಗೆ ಪರದಾಟ ಎಂಬ ಸುದ್ದಿಗಳನ್ನು ನೋಡುತ್ತಿದ್ದೇವೆ. ಜುಲೈ, ಆಗಸ್ಟ್ ತಿಂಗಳಲ್ಲಿ ಸೋಂಕು ಉಲ್ಬಣಿಸಲಿದೆ ಎಂದು ತಜ್ಞರು ಮೊದಲೇ ಹೇಳಿದ್ದರು. ಲಾಕ್‍ಡೌನ್ ಅವಧಿಯಲ್ಲೇ ಇದಕ್ಕೆ ತಕ್ಕಂತೆ ಸಿದ್ಧತೆ ಮಾಡಿಕೊಳ್ಳಬೇಕಿತ್ತು. ಆಗ ಸರ್ಕಾರಕ್ಕೆ ಸಮಯ ಇರಲಿಲ್ಲ’ ಎಂದು ವ್ಯಂಗ್ಯವಾಡಿದರು.

‘ಈ ಕೇಂದ್ರದಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಹಾಸಿಗೆಗಳಿವೆ. ಎರಡು ಸಾವಿರಕ್ಕೂ ಹೆಚ್ಚು ವೈದ್ಯರು, ಅರೆ ವೈದ್ಯ ಸಿಬ್ಬಂದಿ ನೇಮಕ ಆಗಬೇಕು. ಇನ್ನೂ ನೇಮಕ ಪ್ರಕ್ರಿಯೆ ನಡೆಯುತ್ತಿದೆ. ಶುಕ್ರವಾರದಿಂದ ಸೋಂಕಿತರ ದಾಖಲಾತಿ ಆರಂಭವಾಗುತ್ತದೆ. ವೈದ್ಯರೇ ಇಲ್ಲ ಎಂದರೆ ಹೇಗೆ’ ಎಂದು ಪ್ರಶ್ನಿಸಿದರು.

‘ಹಾಸಿಗೆ, ದಿಂಬು, ಬೆಡ್‍ಶೀಟ್ ಒದಗಿಸುವ ಗುತ್ತಿಗೆದಾರರ ಸಮಸ್ಯೆಯೇ ಇನ್ನೂ ಇತ್ಯರ್ಥವಾಗಿಲ್ಲ. ₹ 800ರಂತೆ ಬಾಡಿಗೆಗೆ ಪಡೆಯುವುದಾಗಿ ಸರ್ಕಾರ ಹೇಳಿತ್ತು. ಟೀಕೆಗಳು ಬಂದ ಬಳಿಕ ಖರೀದಿ ಮಾಡುತ್ತಿದೆ. ಅದೂ ಇತ್ಯರ್ಥವಾಗಿಲ್ಲ. ಬಾಡಿಗೆಯೊ, ಖರೀದಿಯೊ ಎಂಬುದು ಮೊದಲು ಇತ್ಯರ್ಥವಾಗಬೇಕು. ಕೇಂದ್ರದಲ್ಲಿ ಶೌಚಾಲಯಗಳು ದೂರ ಇವೆ. ವಯಸ್ಸಾದವರು ಹೋಗಿ ಬರಲು ಕಷ್ಟ’ ಎಂದರು.

‘ಕೊರೊನಾ ವಿಚಾರದಲ್ಲಿ ಸರ್ಕಾರ ಕೈಗೊಂಡ ಕ್ರಮಗಳಿಗೆ ನಾವು 3-4 ತಿಂಗಳು ಸಹಕಾರ ನೀಡುತ್ತಾ ಬಂದೆವು. ಹಾಗೆಂದು ಕೊರೊನಾ ಉಪಕರಣಗಳ ಖರೀದಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದರೂ ಸುಮ್ಮನೇ ಕೂರಬೇಕೇ, ಪ್ರತಿಪಕ್ಷವಾಗಿ ನಮ್ಮ ಜವಾಬ್ದಾರಿ ನಿರ್ವಹಿಸುವುದೂ ತಪ್ಪೇ’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

‘ಸಚಿವ ಬಿ. ಶ್ರೀರಾಮುಲು ಅವರು ಪತ್ರಿಕಾಗೋಷ್ಠಿಯಲ್ಲಿ ಲೆಕ್ಕ ಕೊಟ್ಟಿರುವುದಾಗಿ ತಿಳಿಸಿದ್ದಾರೆ. ಪಕ್ಷದ ವತಿಯಿಂದ ಗುರುವಾರ ಪತ್ರಿಕಾಗೋಷ್ಠಿ ನಡೆಸಿ ನಾವೂ ದಾಖಲೆಗಳನ್ನು ಮುಂದಿಡುತ್ತೇವೆ. ಒಂದು ವೆಂಟಿಲೇಟರ್ ಖರೀದಿಗೆ ತಮಿಳುನಾಡು ಸರ್ಕಾರ ₹ 4.78 ಲಕ್ಷ ವೆಚ್ಚ ಮಾಡಿದೆ. ಆದರೆ, ಇಲ್ಲಿಯ ಸರ್ಕಾರ ₹ 15 ಲಕ್ಷದಿಂದ ₹ 18 ಲಕ್ಷ ಕೊಟ್ಟು ಖರೀದಿಸಿದೆ. ಅದನ್ನು ಭ್ರಷ್ಟಾಚಾರ ಎನ್ನದೇ ಏನೆಂದು ಕರೆಯಬೇಕು’ ಎಂದರು.

‘ಉಪಕರಣಗಳ ಗುಣಮಟ್ಟದ ಬಗ್ಗೆ ಮಾತನಾಡಲು ನಾನು ಸರ್ವಜ್ಞ ಅಥವಾ ತಜ್ಞ ಅಲ್ಲದಿರಬಹುದು. ಆದರೆ, ತಜ್ಞರ ಅಭಿಪ್ರಾಯ ಕೇಳಬಹುದಲ್ಲವೇ. ನಾವು ಒಂದು ಇಲಾಖೆಯ ಲೆಕ್ಕ ಕೇಳಿಲ್ಲ. ಐದಾರು ಇಲಾಖೆಗಳು ಮಾಡಿರುವ ಖರ್ಚಿನ ಬಗ್ಗೆ ಲೆಕ್ಕ ಕೇಳಿದ್ದೇವೆ. ಮಾಹಿತಿ ಕೋರಿ ವಾರದ ಹಿಂದೆಯೇ ಪತ್ರ ಬರೆದಿದ್ದರೂ ಮುಖ್ಯ ಕಾರ್ಯದರ್ಶಿ ಉತ್ತರ ಬಂದಿಲ್ಲ’ ಎಂದರು.

ಸಂದೇಶ ಹಾಕಿದ್ದರೆ ಅದು ಉದ್ಧಟತನ: ‘ದೇವರ ಬಗ್ಗೆ ನಂಬಿಕೆ ಇದೆಯೊ ಅಥವಾ ಇಲ್ಲವೊ ಎಂಬುದನ್ನು ಬಿಜೆಪಿಯವರು ಹೇಳಬೇಕು’ ಎಂದು ಸಿದ್ದರಾಮಯ್ಯ ಹೇಳಿದರು.

ಮಾಜಿ ಸಚಿವ ಮುರುಗೇಶ್ ನಿರಾಣಿಯವರು ದೇವರುಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಸಂದೇಶ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ದೇವರಿದ್ದಾನೆ, ದೇವರು ಒಬ್ಬನೇ. ದೇವರ ಬಗ್ಗೆ ನಂಬಿಕೆ ಇಟ್ಟುಕೊಂಡಿರುವವರು ಈ ರೀತಿ ಅವಹೇಳನಕಾರಿಯಾಗಿ ಸಂದೇಶಗಳನ್ನು ಹರಿಯಬಿಡುವುದಿಲ್ಲ’ ಎಂದರು.

‘ನಿರಾಣಿಯವರು ದೇವರ ಬಗ್ಗೆ ಅವಹೇಳನಕಾರಿಯಾದ ಸಂದೇಶ ಹಾಕಿದ್ದರೆ ಅದು ಉದ್ಧಟತನ. ನಾವೂ ವೇದ, ಪುರಾಣಗಳನ್ನು ಓದಿಕೊಂಡಿದ್ದೇವೆ. ಹಣ, ಅಧಿಕಾರ ಜಾಸ್ತಿಯಾದಾಗ ದೇವರ ಬಗ್ಗೆ ಹೀಗೆ ಅವಹೇಳನಕಾರಿಯಾಗಿ ನಡೆದುಕೊಳ್ಳುತ್ತಾರೆ’ ಎಂದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಮಾಜಿ ಸಚಿವ ಎಚ್.ಎಂ. ರೇವಣ್ಣ, ಬಿಬಿಎಂಪಿ ಸದಸ್ಯ ಶಿವರಾಜ್ ಜೊತೆಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT