ಸೋಮವಾರ, ಸೆಪ್ಟೆಂಬರ್ 28, 2020
24 °C
ಮಳೆಯಿಂದಾಗಿ ಪ್ರವಾಹ ಸಾಧ್ಯತೆ

1,980 ಗ್ರಾಮಗಳ 52 ಲಕ್ಷ ಜನರ ಸ್ಥಳಾಂತರಕ್ಕೆ ಚಿಂತನೆ: ಸಚಿವ ಆರ್‌. ಅಶೋಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

R ashoka

ಬೆಂಗಳೂರು: ‘ರಾಜ್ಯದಲ್ಲಿ ಮಳೆಯಿಂದಾಗಿ ಪ್ರವಾಹ ಉಂಟಾಗಬಹುದೆಂಬ ಕಾರಣಕ್ಕೆ 19 ಜಿಲ್ಲೆಗಳ 1,980 ಗ್ರಾಮಗಳ ಸುಮಾರು 52 ಲಕ್ಷ ಜನರನ್ನು ತಾತ್ಕಾಲಿಕವಾಗಿ ಸ್ಥಳಾಂತರಿಸಲು ಚಿಂತನೆ ನಡೆದಿದೆ’ ಎಂದು ಕಂದಾಯ ಸಚಿವ ಆರ್‌.ಅಶೋಕ ತಿಳಿಸಿದರು.

ವಿಪತ್ತು ನಿರ್ವಹಣಾ ಸಮಿತಿ ಸಭೆಯ ಬಳಿಕ ಶನಿವಾರ ಮಾತನಾಡಿದ ಅವರು, ‘ಕೇರಳ ಮತ್ತು  ಮಹಾರಾಷ್ಟ್ರ ರಾಜ್ಯಗಳಿಂದ ನೀರು ಬಂದರೆ ಸಮಸ್ಯೆಯಾಗಲಿದೆ. ಹೀಗಾಗಿ, ನಮ್ಮ ಜಿಲ್ಲಾಧಿಕಾರಿಗಳು ವಾಟ್ಸ್‌ ಆ್ಯಪ್‌ ಗ್ರೂಪ್‌ ಮಾಡಿಕೊಂಡು, ಆ ರಾಜ್ಯಗಳ ಅಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿರುವಂತೆ ಸೂಚಿಸಿದ್ದೇನೆ’ ಎಂದರು.

‘ನೀರು ಬಿಡುವ ಬಗ್ಗೆ ಒಂದು ವಾರ ಮೊದಲೇ ಅಕ್ಕ-ಪಕ್ಕದ ರಾಜ್ಯಗಳು ಮಾಹಿತಿ ನೀಡಬೇಕು. ಅದಕ್ಕಾಗಿ ಸಮನ್ವಯ ಸಮಿತಿ ರಚಿಸಿದ್ದೇವೆ. ಕೊಯ್ನಾ ಜಲಾಶಯದಿಂದ ಈಗಾಗಲೇ 17 ಸಾವಿರ ಕ್ಯುಸೆಕ್‌ ನೀರು ಬರುತ್ತಿದೆ. ಪ್ರವಾಹದಿಂದ ಉಂಟಾಗಬಹುದಾದ ಸಮಸ್ಯೆ ಪರಿಹರಿಸಲು 1,980 ಗ್ರಾಮಗಳಿಗೂ ನೋಡಲ್‌ ಅಧಿಕಾರಿಗಳನ್ನು ನೇಮಿಸಲಾಗಿದೆ’ ಎಂದರು.

‘ಸಂತ್ರಸ್ತರಿಗೆ ನೆಲೆ ಕಲ್ಪಿಸಲು 1,740 ಸಾಂತ್ವನ ಕೇಂದ್ರಗಳನ್ನು ಗುರುತಿಸಲಾಗಿದೆ. ಜಿಲ್ಲಾಧಿಕಾರಿಗಳ ಪಿ.ಡಿ ಖಾತೆಯಲ್ಲಿ ₹ 1,144 ಕೋಟಿ ಇದೆ. ವಾರದೊಳಗೆ ಇಲಾಖಾ ಸಮನ್ವಯ ಕಾರ್ಯಪಡೆ ರಚಿಸಲಾಗುವುದು’ ಎಂದರು.

‘ಎನ್‌ಡಿಆರ್‌ಎಫ್‌ ಕಾರ್ಯಪಡೆ ಕೂಡ 15 ದಿನಗಳಿಗೊಮ್ಮೆ ಸಭೆ ನಡೆಸಬೇಕು. ಅಗ್ನಿಶಾಮಕ ಸಿಬ್ಬಂದಿಗೂ ಅಣಕು ಪ್ರದರ್ಶನ ನಡೆಸಲು ಸೂಚಿಸಿದ್ದೇನೆ. ಭೂಕುಸಿತ ಉಂಟಾಗುವ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ ವಹಿಸಲಾಗುವುದು. ಕಳೆದ ವರ್ಷ ಕೊಡಗಿನಲ್ಲಿ ಭೂಕುಸಿತದಿಂದ ಹೆಚ್ಚು ಜನ ಮೃತಪಟ್ಟಿದ್ದರು. ಹೀಗಾಗಿ, ಕುಸಿತ ಉಂಟಾಗುವ ಸಾಧ್ಯತೆಯ ಬಗ್ಗೆ ಸಮೀಕ್ಷೆ ನಡೆಸಲಾಗಿದೆ’ ಎಂದೂ ಅಶೋಕ ಹೇಳಿದರು.

‘ವಂಚಕ 65 ಕಂಪನಿಗಳ ₹ 137 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು’

‘ಜನರನ್ನು ವಂಚಿಸುತ್ತಿದ್ದ 65 ಕಂಪನಿಗಳ ₹ 137 ಕೋಟಿ ಮೌಲ್ಯದ ಆಸ್ತಿಯನ್ನು ನಾನು ಕಂದಾಯ ಸಚಿವನಾದ ಬಳಿಕ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ’ ಎಂದು ಆರ್‌. ಅಶೋಕ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ಕಣ್ವಾ ಕೋ ಆಪರೇಟಿವ್‌ ಸಂಘದ ₹ 31 ಕೋಟಿ, ಆಲ್‌ ಆರ್‌ ವೆಂಚರ್ಸ್‌ ₹ 10 ಕೋಟಿ, ಇನ್ನೊವೇಟಿವ್‌ ಬ್ಯುಜಿನೆಸ್‌ ₹ 37 ಕೋಟಿ, ದಿವ್ಯ ಸ್ಪಂದನ ಕೋ ಆಪರೇಟಿವ್‌ ಸಂಘದ ₹ 3.49 ಲಕ್ಷ, ಲೋಕಮಾನ್ಯ ಕೋ–ಆಪರೇಟಿವ್‌ನ‌ ₹ 107 ಕೋಟಿ ಆಸ್ತಿ ಜಪ್ತಿ ಮಾಡಲಾಗಿದೆ. ಅಲ್ಲದೆ, ಐಎಂಎ ಆಸ್ತಿಯನ್ನೂ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ’ ಎಂದು ವಿವರಿಸಿದರು.

‘ಕೋವಿಡ್‌ನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರಕ್ಕಾಗಿ ದಾಸನಪುರದಲ್ಲಿ 7, ಉತ್ತರಹಳ್ಳಿಯಲ್ಲಿ 4, ಜಿಗಣಿಯಲ್ಲಿ 3, ಸರ್ಜಾಪುರ, ದೊಡ್ಡಜಾಲ 1.70, ಮಾರೇನಹಳ್ಳಿ, ಹುಣುಸೂರುಗಳಲ್ಲಿ ತಲಾ 1 ಎಕರೆ ಜಾಗ ಗುರುತಿಸಲಾಗಿದೆ. ಸರ್ವಧರ್ಮದವರಿಗೂ ಒಂದೇ ಕಡೆ ಶವ ಸಂಸ್ಕಾರ ನಡೆಯಲಿದೆ’ ಎಂದೂ ಅಶೋಕ ತಿಳಿಸಿದರು.

‘ಸ್ಮಶಾನ, ಶಾಲೆ ನಿರ್ಮಾಣ, ಘನ ತ್ಯಾಜ್ಯ ನಿರ್ವಹಣೆ, ವಸತಿಶಾಲೆ, ಕುಡಿಯುವ ನೀರು ವ್ಯವಸ್ಥೆಗೆ, ಗ್ರಾಮ ಪಂಚಾಯಿತಿ ಕಚೇರಿ ನಿರ್ಮಾಣದ ಉದ್ದೇಶಗಳಿಗೆ ಒಟ್ಟು 2,553 ಎಕರೆಯಷ್ಟು ಕಂದಾಯ ಇಲಾಖೆ ಭೂಮಿ ನೀಡಲಾಗಿದೆ. ಪ್ರತಿ ಗ್ರಾಮದಲ್ಲೂ ಸ್ಮಶಾನ ಇರಬೇಕು ಎನ್ನುವುದು ನನ್ನ ಉದ್ದೇಶ. ಸತ್ತ ವ್ಯಕ್ತಿಗಳಿಗೆ ಗೌರವಯುತವಾಗಿ ಅಂತ್ಯ ಸಂಸ್ಕಾರ ನಡೆಯಬೇಕು. ಹೀಗಾಗಿ, ಸ್ಮಶಾನ ನಿರ್ಮಿಸಲು ಸೂಚಿಸಿದ್ದೇನೆ’ ಎಂದೂ ಅಶೋಕ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು