ಶುಕ್ರವಾರ, ಸೆಪ್ಟೆಂಬರ್ 25, 2020
27 °C

ಯುಪಿಎಸ್‌ಸಿ: ಮಳವಳ್ಳಿಯ ಅಭಿಷೇಕ್‌ ಗೌಡ 278ನೇ ರ‍್ಯಾಂಕ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಭಿಷೇಕ್‌ ಗೌಡ

ಮೈಸೂರು/ಮಂಡ್ಯ/ಹಾಸನ: ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕು ಮಾರಗೌಡನಹಳ್ಳಿ ಗ್ರಾಮದ ಅಭಿಷೇಕ್‌ ಗೌಡ ಯುಪಿಎಸ್‌ಸಿ ಪರೀಕ್ಷೆಯಲ್ಲಿ 278ನೇ ರ‍್ಯಾಂಕ್‌ ಪಡೆದಿದ್ದಾರೆ.

ಎಂಬಿಬಿಎಸ್‌ ಪದವೀಧರನಾಗಿರುವ ಅವರು 3ನೇ ಯತ್ನದಲ್ಲಿ ಯಶಸ್ವಿಯಾಗಿದ್ದಾರೆ. ಬೆಂಗಳೂರಿನ ಇನ್‌ಸೈಟ್‌ ಸಂಸ್ಥೆಯಲ್ಲಿ 6 ತಿಂಗಳು ತರಬೇತಿ ಪಡೆದಿದ್ದರು. ನಂತರ ಸ್ವಯಂಪ್ರೇರಿತವಾಗಿ ಪರೀಕ್ಷೆಗೆ ಸಿದ್ಧವಾಗಿದ್ದರು. 

10ನೇ ತರಗತಿವರೆಗೂ ಮಾರಗೌಡನಹಳ್ಳಿಯಲ್ಲಿ ಕನ್ನಡ ಮಾಧ್ಯಮದಲ್ಲೇ ಕಲಿತು, ಪಿಯುಸಿಯನ್ನು ಮಂಡ್ಯ ತಾಲ್ಲೂಕಿನ ಕೊಮ್ಮೇರಹಳ್ಳಿ ಬಿಜಿಎಸ್‌ ಸಂಸ್ಥೆಯಲ್ಲಿ ಓದಿದ್ದರು. ಹೊಸಕೋಟೆಯ ಎಂವಿಜೆ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್‌ ಪದವಿ ಪೂರೈಸಿದ್ದರು.

‘ಪ್ರೌಢಶಾಲೆ ಹಂತದಲ್ಲೇ ಯುಪಿಎಸ್‌ಸಿ ಪರೀಕ್ಷೆ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದೆ. ಎಂಬಿಬಿಎಸ್‌ ಮುಗಿಯುತ್ತಿದ್ದಂತೆ ಎರಡೂವರೆ ವರ್ಷ ಪರೀಕ್ಷೆಗಾಗಿ ಸತತ ಪ್ರಯತ್ನ ನಡೆಸಿದೆ. ವಿಶ್ವಾಸದ ಓದಿಗೆ ಫಲ ಸಿಕ್ಕಿದೆ. ಸಂದರ್ಶನಕ್ಕೆ ಮಂಡ್ಯ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಅವರ ಮಾರ್ಗದರ್ಶನ ಪಡೆದೆ’ ಎಂದು ಅಭಿಷೇಕ್‌ ತಿಳಿಸಿದರು.


ವರುಣ್‌ ಕೆ ಗೌಡ

ಮೊದಲ ಯತ್ನದಲ್ಲೇ ಯಶಸ್ಸು: ಯುಪಿಎಸ್‌ಸಿ ಪರೀಕ್ಷೆಯಲ್ಲಿ ಮೈಸೂರಿನ ತಿ.ನರಸೀಪುರ ತಾಲ್ಲೂಕು ಬನ್ನೂರು ಹೋಬಳಿ ಅತ್ತಹಳ್ಳಿ ಗ್ರಾಮದ ವರುಣ್‌ ಕೆ ಗೌಡ ಮೊದಲ ಪ್ರಯತ್ನದಲ್ಲೇ 528ನೇ ರ‍್ಯಾಂಕ್‌ ಪಡೆದುಕೊಂಡಿದ್ದಾರೆ.

ಅವರು ಮೈಸೂರು ವೈದ್ಯಕೀಯ ಕಾಲೇಜಿನಲ್ಲಿ ಕಳೆದ ವರ್ಷ ಎಂಬಿಬಿಎಸ್‌ ಪೂರೈಸಿದ್ದರು.

‘ಸಮಾಜದ ದೊಡ್ಡ ವರ್ಗದ ಜನರ ಸೇವೆ ಮಾಡಬೇಕು ಎಂಬ ಕನಸು ಇತ್ತು. ಆದ್ದರಿಂದ ಯುಪಿಎಸ್‌ಸಿ ಪರೀಕ್ಷೆ ಬರೆದೆ. ಮೊದಲ ಪ್ರಯತ್ನದಲ್ಲೇ ರ‍್ಯಾಂಕ್‌ ದೊರೆಯುವ ನಿರೀಕ್ಷೆ ಇರಲಿಲ್ಲ’ ಎಂದು ಪ್ರತಿಕ್ರಿಯಿಸಿದರು.

‘ನಮ್ಮದು ಕೃಷಿಕ ಕುಟುಂಬ. ತಂದೆ ಕೃಷಿ ಚಟುವಟಿಕೆ ನೋಡಿಕೊಂಡಿದ್ದಾರೆ. ತಾಯಿ ಗೃಹಿಣಿ. ಪ್ರಿಲಿಮ್‌ ಮತ್ತು ಮುಖ್ಯ ಪರೀಕ್ಷೆಗೆ ಕೋಚಿಂಗ್‌ಗೆ ಹೋಗಿಲ್ಲ. ಮನೆಯಲ್ಲೇ ಕುಳಿತು ಓದಿದೆ. ಸಂದರ್ಶನ ಎದುರಿಸಲು ಅಲ್ಪ ಮಾರ್ಗದರ್ಶನ ಪಡೆದುಕೊಂಡೆ’ ಎಂದರು.

636ನೇ ರ‍್ಯಾಂಕ್‌: ಮೈಸೂರಿನ ವಿಜಯಶ್ರೀಪುರದ ಪ್ರಜ್ವಲ್‌ ಅವರು 636ನೇ ರ‍್ಯಾಂಕ್‌ ಪಡೆದುಕೊಂಡಿದ್ದಾರೆ. ಮೈಸೂರು ಎನ್‌ಐಇ ಕಾಲೇಜಿನಲ್ಲಿ ಬಿಇ (ಮೆಕ್ಯಾನಿಕಲ್‌) ಕಲಿತಿರುವ ಅವರು ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಡಿಸೈನ್‌ ಎಂಜಿನಿಯರ್‌ ಆಗಿ ಕೆಲಸ ಮಾಡುತ್ತಿದ್ದಾರೆ.

ನಾಲ್ಕನೇ ಪ್ರಯತ್ನದಲ್ಲಿ ಇವರಿಗೆ ಯಶಸ್ಸು ಲಭಿಸಿದೆ. ಕಳೆದ ಬಾರಿ ಸಂದರ್ಶನಕ್ಕೆ ಆಯ್ಕೆಯಾಗಿದ್ದರೂ, ರ‍್ಯಾಂಕ್‌ ಲಭಿಸಿರಲಿಲ್ಲ.

‘ಕೆಳ ಮಧ್ಯಮ ವರ್ಗದ ಕುಟುಂಬದಿಂದ ಬಂದರೂ ಕಷ್ಟಪಟ್ಟು ಓದಿದೆ. ತಂದೆ ಹೋಟೆಲ್‌ನಲ್ಲಿ ಸೂಪರ್‌ವೈಸರ್‌ ಆಗಿ ಕೆಲಸ ಮಾಡುತ್ತಿದ್ದರು. ತಾಯಿ ಗೃಹಿಣಿ. ಕುಟುಂಬದ ಆರ್ಥಿಕ ಸ್ಥಿತಿ ಚೆನ್ನಾಗಿರಲಿಲ್ಲ. ಆದ್ದರಿಂದ ಕೆಲಸದ ನಡುವೆಯೂ ಓದಿಕೊಂಡು ಪರೀಕ್ಷೆ ಬರೆಯಬೇಕಾಗಿತ್ತು. ಈ ಸಾಧನೆ ಖುಷಿ ನೀಡಿದೆ’ ಎಂದು ತಿಳಿಸಿದರು.

594ನೇ ರ‍್ಯಾಂಕ್: ಯುಪಿಎಸ್‌ಸಿ ಪರೀಕ್ಷೆಯಲ್ಲಿ ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಹರಳಕಟ್ಟ ಗ್ರಾಮದ ದರ್ಶನ್‌ 594ನೇ ರ‍್ಯಾಂಕ್ ಪಡೆದಿದ್ದಾರೆ.

2009ರಲ್ಲಿ ಮೆಕ್ಯಾನಿಕಲ್‌ ಎಂಜಿನಿಯರಿಂಗ್ ಪದವಿ ಪಡೆದು ಇನ್ಫೊಸಿಸ್‌ನಲ್ಲಿ ಮೂರು ವರ್ಷ ಕೆಲಸ ಮಾಡಿದರು. ಅದೇ ಕಂಪನಿಯಲ್ಲಿ ಅಮೆರಿಕದಲ್ಲಿ ಎರಡೂವರೆ ವರ್ಷ ಕೆಲಸ ಮಾಡಿ, ಪರೀಕ್ಷೆ ತಯಾರಿಗಾಗಿ ಉದ್ಯೋಗಕ್ಕೆ ರಾಜೀನಾಮೆ ನೀಡಿದರು.

1ರಿಂದ 8ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಓದಿ, ಪರೀಕ್ಷೆಯನ್ನೂ ಕನ್ನಡದಲ್ಲೇ ಬರೆದು, ನಾಲ್ಕನೇ ಪ್ರಯತ್ನದಲ್ಲಿ ಪರೀಕ್ಷೆ ಪಾಸ್‌ ಮಾಡಿದ್ದಾರೆ.

‘ಸಾಕಷ್ಟು ಸ್ಪರ್ಧೆ ಇದೆ. ಈ ಬಾರಿ ಪರೀಕ್ಷೆ ಪಾಸ್‌ ಮಾಡಲೇಬೇಕೆಂಬ ಗುರಿ ಹೊಂದಿದೆ. ‘ಪ್ರಜಾವಾಣಿ’ ಪತ್ರಿಕೆಯಲ್ಲಿ ಪ್ರಕಟವಾದ ಲೇಖನಗಳು ಕನ್ನಡದಲ್ಲಿ ಪಾಸು ಮಾಡಲು ಸ್ಫೂರ್ತಿ ನೀಡಿದವು. ಸಂಪಾದಕೀಯ ಹಾಗೂ ಅಂಕಣಗಳನ್ನು ಸಂಗ್ರಹಿಸಿಕೊಂಡಿದ್ದು ಬಹಳ ಅನುಕೂಲವಾಯಿತು’ ಎಂದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು