ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇಡಂ: ಜ್ಞಾನಾರ್ಜನೆಯ ಕೇಂದ್ರಗಳಲ್ಲಿ ನೀರವ ಮೌನ

ಸೇಡಂ: ಮಾತಾ ಮಾಣಿಕೇಶ್ವರಿ ಶಿಕ್ಷಣ ಸಂಸ್ಥೆಯ ಶಾಲೆಗಳು ಭಣ ಭಣ!
Last Updated 9 ಮಾರ್ಚ್ 2020, 9:28 IST
ಅಕ್ಷರ ಗಾತ್ರ

ಸೇಡಂ: ಸದಾ ಕಿಲ ಕಿಲ ಮಕ್ಕಳ ಸಂಭ್ರಮ ಹಾಗೂ ಆಟೋಟಗಳಿಂದ ತುಂಬಿ ತುಳುಕುತ್ತಿದ್ದ ಯಾನಾಗುಂದಿಯ ಮಹಾಯೋಗಿನಿ ಮಾತಾಮಾಣಿಕೇಶ್ವರಿ ಶಿಕ್ಷಣ ಸಂಸ್ಥೆಯ ಶಾಲಾ–ಕಾಲೇಜುಗಳಲ್ಲಿ ಭಾನುವಾರ ನೀರವ ಮೌನ ಮನೆಮಾಡಿತ್ತು.

ನಗು–ಮುಖದೊಂದಿಗೆ ಬೆಳಿಗ್ಗೆದ್ದು ಶಾಲೆಗೆ ತೆರಳುವ ವಿದ್ಯಾರ್ಥಿಗಳ ಮೊಗದಲ್ಲಿ ಆತಂಕದ ಛಾಯೇ ಆವರಿಸಿತ್ತು. ಶಾಲೆ ಮತ್ತು ವಸತಿ ಕೇಂದ್ರಗಳು ಖಾಲಿ–ಖಾಲಿ.. ಮಾತೆ ಮಾಣಿಕೇಶ್ವರಿ ಅಮ್ಮನವರ ಅಗಲಿಕೆ ವಿದ್ಯಾರ್ಥಿಗಳ ಪಾಲಿಗೆ ನುಂಗಲಾರದ ತುತ್ತಾಗಿತ್ತು. ಮಾತೆಯ ಆಶೀರ್ವಾದದಿಂದ ಅಕ್ಷರ ಜ್ಞಾನ ಕಲಿಕೆಗೆ ಆಗಮಿಸಿದ ಮಕ್ಕಳ ದಿಕ್ಸೂಚಿಗೆ ಅಧ್ಯಯನಕ್ಕೆ ಅಮ್ಮನ (ಮಾಣಿಕೇಶ್ವರಿ) ಸಾವು ಬರಸಿಡಿಲು ಬಡಿದಂತಾಗುವುದಲ್ಲದೆ ಮುಂದಿನ ನಮ್ಮ ಪರಿಸ್ಥಿತಿ ಅನಾಥವೇ, ಎಂಬ ದುಃಖ ದುಮ್ಮಾನ ಕಾಡುತ್ತಿದ್ದವು.

ಸಂಸ್ಥೆಯ ವಿದ್ಯಾರ್ಥಿಗಳಲ್ಲಿ ದುಃಖ, ಮೌನ ಮತ್ತು ಮಾತೆಯನ್ನು ಕಳೆದುಕೊಂಡೆವಲ್ಲ ಎಂಬ ನೂರಾರು ಆಲೋಚನೆಗಳ ಸರಮಾಲೆ ಹರಿದಾಡುತ್ತಿದ್ದವು. ಶನಿವಾರ ಅಮ್ಮನ ಸಾವು ಖಚಿತಗೊಳ್ಳುತ್ತಿದ್ದಂತೇಯೇ ವಸತಿ ವಿದ್ಯಾರ್ಥಿಗಳು ಮಾಣಿಕ್ಯಗಿರಿಯ ಅಮ್ಮನತ್ತ ದೌಡಾಯಿಸಿದ್ದರು. ಶನಿವಾರ ರಾತ್ರಿಯಿಂದ ನಿರುತ್ಸಾಹದಲ್ಲಿದ್ದ ಎಲ್ಲರಲ್ಲಿಯೂ ಏನೆಂಬ ಆತಂಕದ ಸಾಂದರ್ಭಿಕತೆ, ನಮಗಾರು ದಿವ್ಯ ದರ್ಶನ ನೀಡುವರೆಂಬ ಪ್ರಶ್ನಾತೀತ ಆಲೋಚನೆ. ನಮ್ಮೊಂದಿಗೆ ಅಮ್ಮಳಿದ್ದಾಳೆ. ಅವಳೇ ನಮಗೆ ಸರ್ವಸ್ವ ಎಂಬ ಉತ್ಸಾಹ ಶನಿವಾರ ರಾತ್ರಿಯಿಂದಲೇ ದೂರವೇ ಸರಿದಿತ್ತು. ವಸತಿ ನಿಲಯದಲ್ಲಿ ವಿದ್ಯಾರ್ಥಿಗಳ ಸಾಮಗ್ರಿ ಬಿಟ್ಟರೆ ಎಲ್ಲವೂ ಶೂನ್ಯವೆಂಬಂತೆ ಭಾಸವಾಗುತ್ತಿತ್ತು.

ಒಂದನೇ ತರಗತಿಯಿಂದ ಪಿಯುಸಿವರೆಗೆ ಕನ್ನಡ ಮಾಧ್ಯಮ ಮತ್ತು ಒಂದರಿಂದ 5ನೇ ತರಗತಿವರೆಗೆ ಇಂಗ್ಲಿಷ್‌ ಮಾಧ್ಯಮ ಶಾಲೆ ಹಾಗೂ ಡಿ.ಇಡಿ. ವಿದ್ಯಾರ್ಥಿಗಳಲ್ಲಿ ಅಮ್ಮನವರ ಅಗಲಿಕೆಯ ನುಡಿ ಬಿಟ್ಟರೆ ಬೇರಾವ ಮಾತುಗಳು ಸುಳಿಯಲಿಲ್ಲ. 500ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿರುವ ಶಾಲೆಯಲ್ಲಿ, ಅನೇಕ ಸಿಬ್ಬಂದಿಯೂ ಇದ್ದಾರೆ.

ಬಾಕ್ಸ್‌...

ನಮ್ಮೆಲ್ಲರಿಗೂ ಮಾರ್ಗದರ್ಶನವಾಗಿದ್ದ ಅಮ್ಮನ ಲಿಂಗೈಕ್ಯದ ವಿಷಯ ತಿಳಿದು ದುಃಖ ಒತ್ತರಿಸಿ ಬಂತು. ಮುಂದಿನ ದಿನಗಳಲ್ಲಿಯೂ ಅವರ ಆಶೀರ್ವಾದ ನಮ್ಮ ಮೇಲಿರಲಿದೆ ಎಂಬ ನಂಬಿಕೆ ಇದೆ.

ಮಹೇಶ, ವಿದ್ಯಾರ್ಥಿ

ನಮ್ಮಿಂದ ಅಮ್ಮ ದೈಹಿಕವಾಗಿ ದೂರವಾಗಿರಬಹುದು. ಆದರೆ ನಮ್ಮನ್ನು ಯಾವತ್ತೂ ಕೈಹಿಡಿಯುತ್ತಾಳೆ ಎಂಬ ನಂಬಿಕೆ ಇದೆ. ಮಾತೆ ಎಂದಿಗೂ ನಮ್ಮೊಡನೆಯೇ ಇದ್ದಾರೆ.

ರುದ್ರಗೌಡ, ವಿದ್ಯಾರ್ಥಿ,

ನಮ್ಮಮ್ಮ ಎಂದಿಗೂ ನಮ್ಮಮ್ಮಳೇ ಅವಳಿಗೆ ಅವಳೇ ಸರಿಸಾಟಿ. ಅವಳ ದಿವ್ಯ ಶಕ್ತಿರೂಪ ನಮ್ಮ ಬಾಳನ್ನು ಪ್ರಕಾಶಿಸಲಿದೆಯೆಂಬ ಅಪಾರ ನಂಬಿಕೆ ಇದೆ.

ಅನುಯಾ, ವಿದ್ಯಾರ್ಥಿನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT