‘ದೇಶದ ಭದ್ರತೆ, ಹಿತಾಸಕ್ತಿ ಬಲಿಕೊಡುತ್ತಿದ್ದೀರಿ’

7
ರಫೇಲ್ ಒಪ್ಪಂದ ಜಟಾಪಟಿ: ರಾಹುಲ್ ವಿರುದ್ಧ ಸಚಿವ ಅರುಣ್ ಜೇಟ್ಲಿ ಕಿಡಿಕಿಡಿ

‘ದೇಶದ ಭದ್ರತೆ, ಹಿತಾಸಕ್ತಿ ಬಲಿಕೊಡುತ್ತಿದ್ದೀರಿ’

Published:
Updated:
Deccan Herald

ನವದೆಹಲಿ: ‘ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌, ದೇಶಕ್ಕೆ ಸುಳ್ಳು ಹೇಳುತ್ತಿದೆ’ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಆರೋಪಿಸಿದ್ದಾರೆ.

ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದ ವಿವರಗಳನ್ನು ಅವರು ತಮ್ಮ ಫೇಸ್‌ಬುಕ್‌ ವಾಲ್‌ನಲ್ಲಿ ಬರೆದುಕೊಂಡಿದ್ದಾರೆ. ಒಪ್ಪಂದದ ಕೆಲವು ವಿವರಗಳನ್ನು ಆ ಬರಹದಲ್ಲಿ ಅವರು ಬಹಿರಂಗಪಡಿಸಿದ್ದಾರೆ. ಒಪ್ಪಂದದ ಬಗ್ಗೆ ಕಾಂಗ್ರೆಸ್‌ ಎತ್ತುತ್ತಿರುವ ಪ್ರಶ್ನೆಗಳಿಗೆ ಉತ್ತರಿಸಿರುವ ಅವರು, ರಾಹುಲ್‌ ಗಾಂಧಿ ಮುಂದೆಯೂ ಕೆಲವು ಪ್ರಶ್ನೆಗಳನ್ನು ಇಟ್ಟಿದ್ದಾರೆ.

‘ಯುದ್ಧವಿಮಾನಗಳ ಅಗತ್ಯವಿದೆ ಎಂದು 2001ರಲ್ಲೇ ರಕ್ಷಣಾ ಸಚಿವಾಲಯ ಹೇಳಿತ್ತು. ಆದರೆ ಪ್ರಕ್ರಿಯೆ ಶುರುವಾದದ್ದೇ 2007ರಲ್ಲಿ. 2012ರಲ್ಲಿ ಒಪ್ಪಂದ ಅಂತಿಮಗೊಳ್ಳುವ ಸಂದರ್ಭದಲ್ಲಿ ಯುಪಿಎ ಸರ್ಕಾರವು ಮರುಪರಿಶೀಲನೆಗೆ ಆದೇಶಿಸಿದೆ. ಇದರಿಂದ 11 ವರ್ಷಗಳ ಶ್ರಮ ವ್ಯರ್ಥವಾಗಿತ್ತು. ಹಾಗೂ ಹೀಗೂ 2015ರಲ್ಲಿ ನಾವು ಒಪ್ಪಂದವನ್ನು ಅಂತಿಮಗೊಳಿಸಿದ್ದೇವೆ. ಈಗ ಮತ್ತೆ ಸಂದೇಹ ವ್ಯಕ್ತಪಡಿಸಿ ಭಾರತ–ಫ್ರಾನ್ಸ್ ನಡುವಣ ಸಂಬಂಧವನ್ನು ಹಾಳು ಮಾಡುತ್ತಿದ್ದೀರಿ. ಈ ಮೂಲಕ ದೇಶದ ಹಿತಾಸಕ್ತಿಯನ್ನು ಬಲಿಕೊಡುತ್ತಿದ್ದೀರಿ’ ಎಂದು ಜೇಟ್ಲಿ ಆರೋಪಿಸಿದ್ದಾರೆ.

‘ರಾಹುಲ್ ತಕ್ಷಣವೇ ಉತ್ತರಿಸಿ...’

‘ಕೆಲವಾರು ವಿಷಯಗಳನ್ನು ಮಾತ್ರ ಬಹಿರಂಗಪಡಿಸಲು ಒಪ್ಪಂದದಲ್ಲಿನ ಷರತ್ತು ಅವಕಾಶ ನೀಡುತ್ತದೆ. ನಾನು ಹೇಳುತ್ತಿರುವ ವಿಚಾರಗಳು ಮತ್ತು ಕೇಳುತ್ತಿರುವ ಪ್ರಶ್ನೆಗಳೂ ಆ ಷರತ್ತಿನ ಮಿತಿಯಲ್ಲಿಯೇ ಇದೆ ಎಂಬುದನ್ನು ಸ್ಪಷ್ಟಪಡಿಸುತ್ತಿದ್ದೇನೆ. ಈ ಪ್ರಶ್ನೆಗಳಿಗೆ ರಾಹುಲ್ ಗಾಂಧಿಯಾಗಲೀ, ಕಾಂಗ್ರೆಸ್ ಆಗಲೀ ಎಲ್ಲಿ ಬೇಕಾದರೂ ಉತ್ತರ ನೀಡಲಿ. ಆದರೆ ತಕ್ಷಣವೇ ಉತ್ತರಿಸಲಿ’ ಎಂದು ಅರುಣ್ ಜೇಟ್ಲಿ ಆಗ್ರಹಿಸಿದ್ದಾರೆ.
* ಯುದ್ಧವಿಮಾನ ಖರೀದಿ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳಲು ಯುಪಿಎ ಸರ್ಕಾರ ಅಸಮರ್ಥವಾಗಿತ್ತು. ಈ ಅಸಮರ್ಥತೆಯ ಕಾರಣದಿಂದಲೇ ರಫೇಲ್‌ ಒಪ್ಪಂದ ದಶಕದಷ್ಟು ವಿಳಂಬವಾಯಿತು ಎಂಬುದನ್ನು ನೀವು ಒಪ್ಪುತ್ತೀರಾ?

* ನಮ್ಮ ನೆರೆಯ ದೇಶಗಳು ತಮ್ಮ ದಾಳಿ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿದ್ದ ಸಂದರ್ಭದಲ್ಲಿ ಭಾರತಕ್ಕೆ ಆಧುನಿಕ ಯುದ್ಧವಿಮಾನಗಳ ಅಗತ್ಯ ಇರಲಿಲ್ಲವೇ? ಯುಪಿಎ ಸರ್ಕಾರ ಮಾಡಿದ ವಿಳಂಬದಿಂದ ರಾಷ್ಟ್ರದ ಭದ್ರತೆ ವಿಚಾರದಲ್ಲಿ ರಾಜಿ ಮಾಡಿಕೊಂಡಂತಾಗಲಿಲ್ಲವೇ?  

* ಪ್ರತಿ ವಿಮಾನದ ಬೆಲೆ ₹ 700 ಕೋಟಿ ಎಂದು ದೆಹಲಿಯಲ್ಲಿ ಮತ್ತು ಕರ್ನಾಟಕದಲ್ಲಿ ಯಾವ ಆಧಾರದಲ್ಲಿ ರಾಹುಲ್ ಗಾಂಧಿ ಹೇಳಿಕೆ ನೀಡಿದರು? ಸಂಸತ್ತಿನಲ್ಲಿ ಆ ಬೆಲೆಯನ್ನು ಅವರು ₹ 520 ಕೋಟಿಗೆ ಇಳಿಸಿದರು. ಜೈಪುರದಲ್ಲಿ ಆ ಬೆಲೆಯನ್ನು ₹ 540 ಕೋಟಿಗೆ ಏರಿಸಿದರು. ಹೈದರಾಬಾದ್‌ನಲ್ಲಿ ಆ ಬೆಲೆಯನ್ನು ₹ 526 ಕೋಟಿಗೆ ತಂದು ನಿಲ್ಲಿಸಿದ್ದಾರೆ. ನಿಜಕ್ಕೆ ಒಂದೇ ಮುಖವಿರುತ್ತದೆ. ಆದರೆ ಸುಳ್ಳಿಗೆ ಹಲವು ಮುಖಗಳು. ರಫೇಲ್ ಒಪ್ಪಂದವನ್ನು ಪರಿಶೀಲಿಸದೆ ಆರೋಪಿಸಿದ್ದರಿಂದಲೇ ಇಷ್ಟೆಲ್ಲಾ ಸುಳ್ಳು ಹೇಳಬೇಕಾಯಿತಲ್ಲವೇ? 

* ವಿನಿಮಯ ದರದಲ್ಲಾಗುವ ವ್ಯತ್ಯಾಸವು ವಿಮಾನಗಳ ಬೆಲೆಯ ಮೇಲೂ ಪರಿಣಾಮ ಬೀರುತ್ತದೆ ಎಂಬ ಷರತ್ತು ಒಪ್ಪಂದದಲ್ಲಿ ಇರುವುದು ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್‌ ಪಕ್ಷಕ್ಕೆ ಗೊತ್ತಿಲ್ಲವೇ? ಇಷ್ಟು ವರ್ಷದಲ್ಲಿ ರೂಪಾಯಿ ಮತ್ತು ಯೂರೊ ಮೌಲ್ಯದಲ್ಲಿ ಎಷ್ಟು ವ್ಯತ್ಯಾಸವಾಗಿದೆ ಎಂಬುದನ್ನು ಅರಿತುಕೊಂಡು ಬೆಲೆಯನ್ನು ಹೋಲಿಕೆ ಮಾಡುವುದು ಅವರಿಗೆ ಗೊತ್ತಿಲ್ಲವೇ?

* ಯುಪಿಎ ಒಪ್ಪಿಕೊಂಡಿದ್ದ ಬೆಲೆಗಿಂತ ನಾವು ಒಪ್ಪಿಕೊಂಡಿರುವ ಬೆಲೆ ಶೇ 9ರಷ್ಟು ಅಗ್ಗ. ರಾಹುಲ್‌ಗೆ ಇದು ಗೊತ್ತಿದೆಯೇ? ವಿಮಾನದ ಶಸ್ತ್ರಾಸ್ತ್ರಗಳಿಗೆ ನಾವು ಕೊಡಲು ಒಪ್ಪಿಕೊಂಡಿರುವುದಕ್ಕಿಂತ ಶೇ 20ರಷ್ಟು ಹೆಚ್ಚು ಹಣ ನೀಡಲು ಯುಪಿಎ ಸರ್ಕಾರವು ಸಿದ್ಧವಿತ್ತು. ಈ ಸತ್ಯವನ್ನು ರಾಹುಲ್ ನಿರಾಕರಿಸುತ್ತಾರಾ?

* ಇದು ಎರಡು ಸರ್ಕಾರಗಳ ನಡುವಣ ಒಪ್ಪಂದ. ರಫೇಲ್ ಯುದ್ಧವಿಮಾನಗಳ ಪೂರೈಕೆ ಸಂಬಂಧ ನಮ್ಮ ಸರ್ಕಾರವು ಯಾವುದೇ ಖಾಸಗಿ ಕಂಪನಿಯ ಜತೆಗೂ ಒಪ್ಪಂದ ಮಾಡಿಕೊಂಡಿಲ್ಲ. ಒಪ್ಪಂದದ ಪ್ರಕಾರ 36 ವಿಮಾನಗಳೂ ಯುದ್ಧಸನ್ನಧ ರೀತಿಯಲ್ಲೇ ಭಾರತಕ್ಕೆ ಪೂರೈಕೆಯಾಗುತ್ತವೆ. ಹಾಗಿದ್ದ ಮೇಲೆ ಭಾರತದಲ್ಲಿ ಅವನ್ನು ತಯಾರಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಹೀಗಾಗಿ ರಫೇಲ್‌ ಒಪ್ಪಂದದಲ್ಲಿ ಖಾಸಗಿ ಕಂಪನಿಯೊಂದಕ್ಕೆ ಲಾಭವಾಗಿದೆ ಎಂಬುದು ಸಂಪೂರ್ಣ ಸುಳ್ಳು. ಇದನ್ನೂ ರಾಹುಲ್ ನಿರಾಕರಿಸುತ್ತಾರಾ?

* ಬೆಲೆ ಸಮಾಲೋಚನಾ ಸಮಿತಿ, ಒಪ್ಪಂದ ಸಮಾಲೋಚನಾ ಸಮಿತಿಗಳು ಒಪ್ಪಂದ ಅಂತಿಮಗೊಳ್ಳುವ 14 ತಿಂಗಳು ಮೊದಲೇ ಸಭೆ ನಡೆಸಿದ್ದವು. ನಂತರ ರಕ್ಷಣಾ ವ್ಯವಹಾರಗಳ ಸಂಸದೀಯ ಸಮಿತಿಯೂ ಒಪ್ಪಿಗೆ ಸೂಚಿಸಿತ್ತು ಎಂಬುದನ್ನು ನೀವು ಅಲ್ಲಗೆಳೆಯುತ್ತೀರಾ?

ಬರಹ ಇಷ್ಟವಾಯಿತೆ?

 • 5

  Happy
 • 1

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !