ಮೊಸರಿನಲ್ಲಿ ಕಲ್ಲು ಹುಡುಕುವ ಮನೋಭಾವ: ಸಚಿವ ಅರುಣ್‌ ಜೇಟ್ಲಿ ವಾಗ್ದಾಳಿ

7
ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ಟೀಕಿಸುವವರ ವಿರುದ್ಧ ಕಿಡಿ

ಮೊಸರಿನಲ್ಲಿ ಕಲ್ಲು ಹುಡುಕುವ ಮನೋಭಾವ: ಸಚಿವ ಅರುಣ್‌ ಜೇಟ್ಲಿ ವಾಗ್ದಾಳಿ

Published:
Updated:

ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಟೀಕಿಸುವ ಎಲ್ಲರದ್ದೂ ‘ಮೊಸರಿನಲ್ಲಿ ಕಲ್ಲು ಹುಡುಕುವ ಮನೋಭಾವ’ ಎಂದು ಕೇಂದ್ರ ಸಚಿವ ಅರುಣ್‌ ಜೇಟ್ಲಿ ಹರಿಹಾಯ್ದಿದ್ದಾರೆ. ಇವರೆಲ್ಲರೂ ಸುಳ್ಳುಗಳನ್ನು ಸೃಷ್ಟಿಸುತ್ತಾ ಚುನಾಯಿತ ಸಾರ್ವಭೌಮ ಸರ್ಕಾರದ ಕೆಲಸಗಳಲ್ಲಿ ತಪ್ಪು ಹುಡುಕುವ ದ್ವಂದ್ವ ನೀತಿ ಅನುಸರಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಸಿಬಿಐ ನಿರ್ದೇಶಕ ಹುದ್ದೆಯಿಂದ ಅಲೋಕ್‌ ವರ್ಮಾ ಅವರನ್ನು ಉಚ್ಚಾಟಿಸುವ ನಿರ್ಧಾರವನ್ನು ಲೋಕಸಭೆಯಲ್ಲಿ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ವಿರೋಧಿಸಿದ್ದನ್ನು ಜೇಟ್ಲಿ ಆಕ್ಷೇಪಿಸಿದ್ದಾರೆ. ವರ್ಮಾ ಅವರದ್ದು ಬಹಳ ಸ್ಪಷ್ಟವಾದ ಪ್ರಕರಣವಾಗಿತ್ತು ಎಂದಿದ್ದಾರೆ. 

ಇದನ್ನೂ ಓದಿ: ಇಷ್ಟವಿಲ್ಲದಿದ್ದರೆ ಪಕ್ಷ ಬಿಡಿ: ಶತ್ರುಘ್ನಗೆ ಬಿಸಿ ಮುಟ್ಟಿಸಿದ ಬಿಜೆಪಿ​

ವರ್ಮಾ ಅವರ ಉಚ್ಚಾಟನೆಯ ಹಿಂದೆ ದುರುದ್ದೇಶ ಇತ್ತು ಎಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಕೆಯಾಗಿರುವ ಅರ್ಜಿಯಲ್ಲಿ ಖರ್ಗೆ ಅವರೂ ಫಿರ್ಯಾದುದಾರರು. ಸಿಬಿಐಯ ಉಚ್ಚಾಟಿತ ಮುಖ್ಯಸ್ಥರ ಪ್ರಚಾರಕರಾಗಿ ಖರ್ಗೆ ಕೆಲಸ ಮಾಡುತ್ತಿದ್ದಾರೆ. ಹೀಗಿರುವಾಗ ಅವರು ಸಿಬಿಐ ನಿರ್ದೇಶಕರ ಆಯ್ಕೆ ಸಮಿತಿಯ ಸಭೆಯಲ್ಲಿ ಭಾಗವಹಿಸಲೇಬಾರದಿತ್ತು ಎಂದು ಜೇಟ್ಲಿ ಹೇಳಿದ್ದಾರೆ. 

ಜೇಟ್ಲಿ ಅವರು ಫೇಸ್‌ಬುಕ್‌ನಲ್ಲಿ ಪ್ರಕಟಿಸಿರುವ ಲೇಖನದ ಟೀಕೆಗಳ ಮುಖ್ಯ ಗುರಿ ಕಾಂಗ್ರೆಸ್‌ ಪಕ್ಷ. ರಾಜಕೀಯ ವ್ಯವಸ್ಥೆಯಲ್ಲಿ ಇರುವ ಕೆಲವರು ತಾವು ಆಳುವುದಕ್ಕಾಗಿಯೇ ಹುಟ್ಟಿದವರು ಎಂದು ಭಾವಿಸಿದ್ದಾರೆ ಎಂದು ಪರೋಕ್ಷವಾಗಿ ಕಾಂಗ್ರೆಸ್ಸನ್ನು ಟೀಕಿಸಲಾಗಿದೆ.

ಇದನ್ನೂ ಓದಿ: ಕಾಂಗ್ರೆಸ್‌ ಜತೆ ಮೈತ್ರಿ ಕಷ್ಟ: ಎಎಪಿ

‘ಯಾವುದೇ ಸರ್ಕಾರ ಅಧಿಕಾರದಲ್ಲಿದ್ದರೂ ಕೆಲವರು ಅಧಿಕಾರ ಸ್ಥಾನಗಳಿಗೆ ನುಸುಳುವಲ್ಲಿ ಯಶಸ್ವಿಯಾಗುತ್ತಿದ್ದರು. ಸೈದ್ಧಾಂತಿಕವಾಗಿ ತಾವು ಎಡ ಅಥವಾ ತೀವ್ರ ಎಡಪಂಥೀಯರು ಎಂದು ಹೇಳಿಕೊಳ್ಳುವವರಿಗೆ ಈಗಿನ ಸರ್ಕಾರವು ಸ್ವೀಕಾರಾರ್ಹ ಅಲ್ಲವೇ ಅಲ್ಲ. ಹಾಗಾಗಿಯೇ ಎಲ್ಲದರಲ್ಲಿಯೂ ತಪ್ಪು ಹುಡುಕುವ ಹೊಸ ವರ್ಗ ಸೃಷ್ಟಿಯಾಗಿದೆ’ ಎಂದು ಜೇಟ್ಲಿ ಪ್ರತಿಪಾದಿಸಿದ್ದಾರೆ. 

ವೈದ್ಯಕೀಯ ತಪಾಸಣೆಗಾಗಿ ಜೇಟ್ಲಿ ಅವರು ಅಮೆರಿಕಕ್ಕೆ ತೆರಳಿದ್ದಾರೆ. ಹಾಗಾಗಿ ಇದೇ 31ರಂದು ಆರಂಭವಾಗಲಿರುವ ಬಜೆಟ್‌ ಅಧಿವೇಶನದಲ್ಲಿ ಭಾಗವಹಿಸುವುದು ಸಾಧ್ಯವಾಗಲಿದೆಯೇ ಎಂಬ ಊಹಾಪೋಹಗಳ ನಡುವೆಯೇ ಈ ಬರಹವನ್ನು ಜೇಟ್ಲಿ ಪ್ರಕಟಿಸಿದ್ದಾರೆ. 

ಇದನ್ನೂ ಓದಿ: ವಿರೋಧ ಪಕ್ಷಗಳ ರ‍್ಯಾಲಿ: ಬಿಜಪಿಗೆ ಸಾವಿನ ಗಂಟೆ: ಮಮತಾ

ನ್ಯಾಯಾಧೀಶ ಲೋಯಾ ಪ್ರಕರಣ, ರಫೇಲ್‌ ಖರೀದಿ ಒಪ್ಪಂದದ ಪ್ರಕರಣ, ಆರ್‌ಬಿಐ ಮತ್ತು ಸರ್ಕಾರದ ನಡುವಣ ಸಂಘರ್ಷ ಸೇರಿ ಹಲವು ವಿಚಾರಗಳನ್ನು ಜೇಟ್ಲಿ ಪ್ರಸ್ತಾಪಿಸಿದ್ದಾರೆ. ಒಂದು ಪತ್ರಿಕೆಯ ವರದಿಗಾರಿಕೆ ಬಗ್ಗೆಯೂ ಅವರು ಅಸಮಾಧಾನ ಹೊರಹಾಕಿದ್ದಾರೆ. 

ಒಂದು ಪತ್ರಿಕೆ ಕೂಡ ಉದ್ದೇಶಪೂರ್ವಕಾಗಿ ತಪ್ಪು ಹುಡುಕುವ ಕೆಲಸ ಮಾಡಿದೆ. ಸುಪ್ರೀಂ ಕೋರ್ಟ್‌ ಕೊಲಿಜಿಯಂ ಪ್ರಕ್ರಿಯೆಗಳು ಮತ್ತು ಇತರ ಸಮಾಲೋಚನೆಗಳ ವರದಿಗಾರಿಕೆಯನ್ನು ಗಮನಿಸಿದರೆ ‘ಷಡ್ಯಂತ್ರ’ವನ್ನು ಕಾಣಬಹುದು ಎಂದು ಹೇಳಿದ್ದಾರೆ. ಆದರೆ, ಆ ಪತ್ರಿಕೆ ಯಾವುದೆಂದು ಹೆಸರಿಸಿಲ್ಲ.

‘ನಮ್ಮ ಗುರಿ ಮತ್ತೆ ಮೋದಿ’

ದೇಶದ ಪ್ರತಿಭಾವಂತ ಯುವ ಜನರ ಕನಸುಗಳು ಮತ್ತು ಆಕಾಂಕ್ಷೆಗಳನ್ನು ಈಡೇರಿಸಲು ಬಿಜೆಪಿ ಬದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ಕೊಟ್ಟಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಮರಳಿ ಅಧಿಕಾರಕ್ಕೆ ತರಲು ಬಿಜೆಪಿ ಯುವ ಮೋರ್ಚಾ (ಬಿಜೆವೈಎಂ) ಅಭಿಯಾನ ಆರಂಭಿಸಿದ ದಿನವೇ ಮೋದಿ ಈ ಮಾತು ಹೇಳಿದ್ದಾರೆ.

‘ಭಾರತೀಯ ಯುವ ಮೋರ್ಚಾದ ಚೈತನ್ಯಯುತ ತಂಡವು ಆರಂಭಿಸಿರುವ ‘ವಿಜಯಲಕ್ಷ್ಯ 2019’ ಅಭಿಯಾನಕ್ಕೆ ಅಭಿನಂದನೆ. ಬಿಜೆಪಿಗೆ ಭಾರಿ ಬಹುಮತ ದೊರೆಯುವುದಕ್ಕಾಗಿ ಭಾರತದಾದ್ಯಂತ ಈ ಅಭಿಯಾನವು ಯುವ ಶಕ್ತಿಯನ್ನು ದೊಡ್ಡ ಮಟ್ಟದಲ್ಲಿ ಸಂಘಟಿಸಲಿದೆ’ ಎಂದು ಮೋದಿ ಟ್ವೀಟ್‌ ಮಾಡಿದ್ದಾರೆ. 

ಬಿಜೆವೈಎಂ ಅಧ್ಯಕ್ಷೆ ಪೂನಂ ಮಹಾಜನ್‌ ಅವರು 17 ವಿವಿಧ ಕಾರ್ಯಕ್ರಮಗಳನ್ನು ಒಳಗೊಂಡ ಅಭಿಯಾನಕ್ಕೆ ಚಾಲನೆ ಕೊಟ್ಟಿದ್ದಾರೆ. ‘ನಮ್ಮ ಗುರಿ, ಮತ್ತೆ ಮೋದಿ’ ಎಂಬ ಘೋಷ ವಾಕ್ಯದ ಮೂಲಕ ಯುವ ಜನರನ್ನು ಬಿಜೆಪಿ ಪರವಾಗಿ ಒಟ್ಟುಗೂಡಿಸುವುದು ಅಭಿಯಾನದ ಉದ್ದೇಶ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !