ಆಯುಷ್ಮಾನ್‌ ಭಾರತ ವಿಲೀನ ಬೇಡ: ಲೋಕಸಭೆಯಲ್ಲಿ ಸಂಸದೆ ಶೋಭಾ ಆಗ್ರಹ

ಮಂಗಳವಾರ, ಜೂಲೈ 16, 2019
24 °C

ಆಯುಷ್ಮಾನ್‌ ಭಾರತ ವಿಲೀನ ಬೇಡ: ಲೋಕಸಭೆಯಲ್ಲಿ ಸಂಸದೆ ಶೋಭಾ ಆಗ್ರಹ

Published:
Updated:

ನವದೆಹಲಿ: ಬಡಜನರ ಚಿಕಿತ್ಸೆಗೆ ನೆರವಾಗಲು ಕೇಂದ್ರ ಸರ್ಕಾರ ಆರಂಭಿಸಿರುವ ‘ಆಯುಷ್ಮಾನ್ ಭಾರತ’ ಯೋಜನೆಯನ್ನು ರಾಜ್ಯ ಸರ್ಕಾರದ ‘ಆರೋಗ್ಯ ಕರ್ನಾಟಕ’ ಕಾರ್ಯಕ್ರಮದಿಂದ ಹೊರಗಿರಿಸಲು ಕ್ರಮ ಕೈಗೊಳ್ಳುವಂತೆ ಉಡುಪಿ–ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಮನವಿ ಮಾಡಿದರು.

ಲೋಕಸಭೆಯಲ್ಲಿ ಸೋಮವಾರ ಶೂನ್ಯವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ಕೇಂದ್ರದ ಯೋಜನೆಯನ್ನು ರಾಜ್ಯ ಸರ್ಕಾರ ಆರಂಭಿಸಿರುವ ಯೋಜನೆ ಅಡಿ ವಿಲೀನಗೊಳಿಸಿ, ಕೆಲವು ನಿಯಮ ರೂಪಿಸಿದ್ದರಿಂದ ಬಡಜನರಿಗೆ ತೀವ್ರ ಸಮಸ್ಯೆ ಎದುರಾಗಿದೆ ಎಂದು ಆರೋಪಿಸಿದರು.

ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಾಗಿ ಪರೀಕ್ಷೆಗೆ ಒಳಪಟ್ಟ ನಂತರವಷ್ಟೇ ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗಬೇಕು ಎಂಬ ನಿಯಮವನ್ನು ಕರ್ನಾಟಕ ಸರ್ಕಾರ ರೂಪಿಸಿದೆ. ಇದರಿಂದಾಗಿ ಪ್ರತಿ ವ್ಯಕ್ತಿಗೆ ₹ 5 ಲಕ್ಷದ ಚಿಕಿತ್ಸಾ ನೆರವು ನೀಡುವ ಕೇಂದ್ರದ ಯೋಜನೆಯ ಉಪಯೋಗ ಪಡೆಯಲು ಜನರು ಪರದಾಡುವಂತಾಗಿದೆ ಎಂದು ಅವರು ಹೇಳಿದರು.

ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಚಿಕಿತ್ಸಾ ಸೌಲಭ್ಯದ ಕೊರತೆ ಇರುವುದರಿಂದ ರೋಗಿಗಳು ಶಸ್ತ್ರಚಿಕಿತ್ಸೆಗೆ ಒಳಪಡಲು ವಿಳಂಬವಾಗುತ್ತಿದೆ. ಕೇಂದ್ರದ ಆರೋಗ್ಯ ಸಚಿವರು ಕೂಡಲೇ ರಾಜ್ಯ ಸರ್ಕಾರದ ಸಂಬಂಧಿಸಿದ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಚರ್ಚಿಸಿ, ರಾಜ್ಯದ ಜನತೆಗೆ ಸುಲಭವಾಗಿ ಅಗತ್ಯ ಚಿಕಿತ್ಸಾ ಸೌಲಭ್ಯ ದೊರೆಯುವಂತೆ ನೋಡಿಕೊಳ್ಳಬೇಕು. ಈ ಕುರಿತು ಎದುರಾಗುತ್ತಿರುವ ತೊಂದರೆ ನಿವಾರಿಸಬೇಕು ಎಂದು ಅವರು ಕೋರಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !