ಬಿಜೆಪಿ ಪದಾಧಿಕಾರಿಗಳಲ್ಲಿ ಮೇಲ್ಜಾತಿಯವರೇ ಹೆಚ್ಚು

7

ಬಿಜೆಪಿ ಪದಾಧಿಕಾರಿಗಳಲ್ಲಿ ಮೇಲ್ಜಾತಿಯವರೇ ಹೆಚ್ಚು

Published:
Updated:

ನವದೆಹಲಿ: ಕಮಲ ಪಕ್ಷ ದೇಶದಾದ್ಯಂತ ಅರಳಬೇಕು ಎನ್ನುವುದು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಘಟಕದ ಅಧ್ಯಕ್ಷ ಅಮಿತ್‌ ಶಾ ಗುರಿ. ಇದನ್ನು ಸಾಧಿಸಲು ಅವರು ಹಗಲಿರುಳು ಶ್ರಮಿಸುತ್ತಿದ್ದಾರೆ. ಪಕ್ಷದಿಂದ ದೂರವೇ ಉಳಿದಿರುವ ಕೆಳ ಜಾತಿಯ ಮತದಾರರನ್ನು ಸೆಳೆಯಲು ಸಾಮಾಜಿಕ ಮಾಧ್ಯಮಗಳನ್ನು ಗಾಳ ಮಾಡಿಕೊಂಡಿದ್ದಾರೆ. ಆದರೆ ಪಕ್ಷದ ಆಡಳಿತ ವ್ಯವಸ್ಥೆಯಲ್ಲಿ ಮಾತ್ರ ಮೇಲ್ಜಾತಿಗೆ ಸೇರಿದವರ ಸಂಖ್ಯೆಯೇ ಢಾಳಾಗಿ ಕಾಣಿಸುತ್ತದೆ.

ಆದರೆ ಬಿಜೆಪಿ ತನ್ನದೇ ಆದ ಸಂಘಟನೆ ವ್ಯವಸ್ಥೆಯಿಂದ ಬೆಳೆದುಬಂದಿದೆ. ಕಳೆದ 38 ವರ್ಷಗಳಿಂದಲೂ ಪಕ್ಷ ಮೇಲ್ಜಾತಿಯವರ ಹಿಡಿತದಲ್ಲಿದ್ದು ಹಿಂದುಳಿದ ಜಾತಿಗಳು, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಮತ್ತು ಇತರೆ ಅಲ್ಪಸಂಖ್ಯಾತ ಸಮುದಾಯಗಳಿಗೆ ಕಡಿಮೆ ಪ್ರಮಾಣದಲ್ಲಿ ಪ್ರಾತಿನಿಧ್ಯ ನೀಡಲಾಗಿದೆ.

ಈ ಕುರಿತು ಅಧ್ಯಯನ ನಡೆಸಿರುವ ‘ದಿ ಪ್ರಿಂಟ್‌‘ ಸುದ್ದಿ ತಾಣ ಬಿಜೆಪಿ ಆಡಳಿತ ವ್ಯವಸ್ಥೆಯಲ್ಲಿರುವ ಜಾತಿ ಅಸಮಾನತೆ ಕುರಿತು ವಿಶ್ಲೇಷಣಾತ್ಮಕ ವರದಿ ಪ್ರಕಟಿಸಿದೆ. ಪಕ್ಷದ ಉನ್ನತ ಹುದ್ದೆಗಳಲ್ಲಿ ಶೇ 60ರಷ್ಟು ಸಾಮಾನ್ಯ ವರ್ಗದವರಿದ್ದಾರೆ. ಶೇ 65ರಷ್ಟು ಸಾಮಾನ್ಯ ವರ್ಗದವರೇ ವಿವಿಧ ರಾಜ್ಯ ಘಟಕಗಳಲ್ಲಿ ಅಧ್ಯಕ್ಷರಾಗಿದ್ದಾರೆ.

ಕೆಳಹಂತದ ನಾಯಕತ್ವದಲ್ಲಿಯೂ ಇದೇ ಪರಿಸ್ಥಿತಿ ಇದೆ. ಶೇ 65 ರಷ್ಟು ಜಿಲ್ಲಾ ಘಟಕಗಳ ಅಧ್ಯಕ್ಷರು ಸಾಮಾನ್ಯ ವರ್ಗಕ್ಕೆ ಸೇರಿದವರಾಗಿದ್ದಾರೆ.

ಬ್ರಾಹ್ಮಣ–ಬನಿಯಾ ಜಾತಿಗೆ ಸೇರಿದ ಪಕ್ಷ ಎಂಬ ಹಣೆಪಟ್ಟಿ ಕಳಚಿಕೊಳ್ಳಲು ಕಳೆದ ಕೆಲ ವರ್ಷಗಳಿಂದ ಬಿಜೆಪಿ ಪ್ರಯತ್ನಿಸುತ್ತಿದೆ. ದಲಿತರನ್ನು ಸೆಳೆಯುವ ತಂತ್ರಗಳು ಇದೇ ಪ್ರಯತ್ನದ ಭಾಗ. ಆದರೆ, ಪಕ್ಷದ ಈ ಪ್ರಯತ್ನ ಹಿರಿಯ ಪದಾಧಿಕಾರಿಗಳ ಹುದ್ದೆಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ದಲಿತರು, ಬುಡಕಟ್ಟು ಜನಾಂಗಗಳಿಗೆ ಸೇರಿದವರು ಮತ್ತು ಮುಸ್ಲಿಮರಿಗೆ ಪಕ್ಷದಲ್ಲಿ ಗಣನೀಯ ಪ್ರಾತಿನಿಧ್ಯ ಇಲ್ಲ. ಈ ಸಮುದಾಯಕ್ಕೆ ಸೇರಿದ ಕೇವಲ ಇಬ್ಬರು ಮಾತ್ರ ರಾಷ್ಟ್ರೀಯ ಘಟಕದ ಪದಾಧಿಕಾರಿಗಳಾಗಿದ್ದಾರೆ. ಯಾರು ಕೂಡ ರಾಜ್ಯ ಘಟಕದ ಅಧ್ಯಕ್ಷರಾಗಿಲ್ಲ.

ಹೀಗೆ ಬೆಳಕಿಗೆ ಬಂತು

ಬಿಜೆಪಿಯ 50 ರಾಷ್ಟ್ರೀಯ ಪದಾಧಿಕಾರಿಗಳು, 97 ರಾಷ್ಟ್ರೀಯ ಕಾರ್ಯಕಾರಿ ಸದಸ್ಯರು, 29 ರಾಜ್ಯ ಹಾಗೂ 7 ಕೇಂದ್ರಾಡಳಿತ ಪ್ರದೇಶಗಳಿಗೆ ಸೇರಿದ ಒಟ್ಟು 36 ರಾಜ್ಯ ಘಟಕಗಳ ಅಧ್ಯಕ್ಷರು, 752 ಜಿಲ್ಲಾ ಘಟಕಗಳ ಅಧ್ಯಕ್ಷರ ಮಾಹಿತಿ ಕಲೆ ಹಾಕಿ ‘ದಿ ಪ್ರಿಂಟ್’ ತಂಡ ಈ ವರದಿ ಸಿದ್ಧಪಡಿಸಿದೆ. ಬುಡಕಟ್ಟು ವರ್ಗಗಳೇ ಹೆಚ್ಚಿನ ಸಂಖ್ಯೆಯಲ್ಲಿರುವ ಈಶಾನ್ಯ ರಾಜ್ಯಗಳಾದ ಅಸ್ಸಾಂ ಮತ್ತು ತ್ರಿಪುರ ರಾಜ್ಯಗಳಲ್ಲಿ ಬಿಜೆಪಿ ಪದಾಧಿಕಾರಿಗಳಲ್ಲಿಯೂ ಇದೇ ವರ್ಗಕ್ಕೆ ಸೇರಿದವರು ಗಣನೀಯ ಸಂಖ್ಯೆಯಲ್ಲಿದ್ದಾರೆ. ಹೀಗಾಗಿ ಆ ಎರಡೂ ರಾಜ್ಯಗಳ ಮಾಹಿತಿಯನ್ನು ಈ ವರದಿಯಲ್ಲಿ ಸೇರಿಸಿಲ್ಲ. ಪದಾಧಿಕಾರಿಗಳ ಮಾಹಿತಿಯ ಪಟ್ಟಿಯನ್ನು ಬಿಜೆಪಿ ವೆಬ್‌ಸೈಟ್‌ನಿಂದ ಪಡೆಯಲಾಗಿದೆ. 

ಮುಸ್ಲಿಮರು, ಬೌದ್ಧರು ಮತ್ತು ಕ್ರೈಸ್ತರನ್ನು ಅಲ್ಪಸಂಖ್ಯಾತರು ಎಂದು ಪರಿಗಣಿಸಲಾಗಿದೆ. ಸಿಖ್ಖರನ್ನು ಅಲ್ಪಸಂಖ್ಯಾತರು ಎಂದು ಪರಿಗಣನೆ ಮಾಡಿಲ್ಲ. ಈ ಸಮುದಾಯದವರು ಪಂಜಾಬ್‌ ರಾಜ್ಯದಲ್ಲಿ ಬಿಜೆಪಿಯನ್ನು ಪ್ರತಿನಿಧಿಸುತ್ತಾರೆ. ಪಂಜಾಬ್‌ ಹೊರತುಪಡಿಸಿ ರಾಷ್ರೀಯ ಕಾರ್ಯಕಾರಣಿಯಲ್ಲಿ ಇಬ್ಬರು ಸದಸ್ಯರಿದ್ದಾರೆ. ಹಾಗೆಯೇ ಮಧ್ಯಪ್ರದೇಶ, ಛತ್ತೀಸಗಢ ರಾಜ್ಯಗಳ ತಲಾ ಒಂದು ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನದಲ್ಲಿ ಸಿಖ್ಖರಿದ್ದಾರೆ.

ನಿಚ್ಚಳವಾಗಿ ಇದು ಮೇಲ್ಜಾತಿ ಬಾಹುಳ್ಯದ ಪಕ್ಷ

ಬಿಜೆಪಿಯ 50 ರಾಷ್ಟ್ರೀಯ ಪದಾಧಿಕಾರಿಗಳ ಪೈಕಿ 17 ಮಂದಿ ಬ್ರಾಹ್ಮರು, 21 ಜನ ಇತರೆ ಮುಂದುವರಿದ ಜಾತಿಯವರು, ನಾಲ್ವರು ಇತರೆ ಹಿಂದುಳಿದ ವರ್ಗದವರು, ಮೂವರು ಪರಿಶಿಷ್ಟ ಜಾತಿಯವರು, ಇಬ್ಬರು ಪರಿಶಿಷ್ಟ ವರ್ಗದವರು, ಇಬ್ಬರು ಮುಸ್ಲಿಂ ಸಮುದಾಯದವರು ಮತ್ತು ಒಬ್ಬರು ಸಿಖ್‌ ಧರ್ಮರಾಗಿದ್ದಾರೆ.

ಪ್ರಮುಖ ನಿರ್ಣಯಗಳನ್ನು ಕೈಗೊಳ್ಳುವ ನಿರ್ಣಾಯಕ ಸಮಿತಿಯಲ್ಲಿ ಮೂವರು ದಲಿತರು ಮತ್ತು ಇಬ್ಬರು ಮುಸ್ಲಿಮರಿದ್ದಾರೆ. ಮೂವರು ದಲಿತರಲ್ಲಿ ಒಬ್ಬರು ಪಕ್ಷದ ದಲಿತ ಮೋರ್ಚಾದ ಅಧ್ಯಕ್ಷರಾಗಿದ್ದಾರೆ. ಇಬ್ಬರು ಮುಸ್ಲಿಮರಲ್ಲಿ ಒಬ್ಬರು ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷರಾಗಿದ್ದಾರೆ. ಆದರೆ ಬುಡಕಟ್ಟು ವರ್ಗವನ್ನು ಪ್ರತಿನಿಧಿಸುತ್ತಿರುವ ಎಸ್‌ಟಿ ಮೋರ್ಚಾದ ಅಧ್ಯಕ್ಷರಾದ ಮಧ್ಯಪ್ರದೇಶದ ಜ್ಯೋತಿ ಧ್ರುವೆ ಅವರ ಜಾತಿ ಪ್ರಮಾಣ ಪತ್ರವನ್ನು ರಾಜ್ಯ ಸರ್ಕಾರ ರದ್ದುಪಡಿಸಿದೆ. ಪ್ರಕರಣ ಇದೀಗ ಕೋರ್ಟ್ ಅಂಗಳದಲ್ಲಿದೆ.

ರಾಷ್ಟ್ರೀಯ ಪದಾಧಿಕಾರಿಗಳಲ್ಲಿ ಶೇ 76ರಷ್ಟು ಮೇಲ್ವರ್ಗದವರಿದ್ದಾರೆ, ಶೇ 8 ರಷ್ಟು ಇತರೆ ಹಿಂದುಳಿದ ವರ್ಗದರು, ಶೇ 6ರಷ್ಟು ಪರಿಶಿಷ್ಟ ಜಾತಿಯವರಿದ್ದಾರೆ. ಪಕ್ಷದ ರಾಷ್ಟ್ರೀಯ ಕಾರ್ಯಕಾರಣಿಯಲ್ಲಿ  ಒಟ್ಟು 97 ಸದಸ್ಯರಿದ್ದಾರೆ. ಇವರಲ್ಲಿ 29 ಜನ ಬ್ರಾಹ್ಮರು, 37 ಜನರು ಇತರೆ ಮೇಲ್ಜಾತಿಯವರು, 18 ಜನರು ಹಿಂದುಳಿದ ಜಾತಿಗಳಿಗೆ ಸೇರಿದವರು. ಏಳು ಜನ ಪರಿಶಿಷ್ಟ ಜಾತಿಯವರು, ಮೂವರು ಅಲ್ಪಸಂಖ್ಯಾತ ಸಮುದಾಯದವರು, ತಲಾ ಒಬ್ಬರು ಸಿಖ್ ಮತ್ತು ಪರಿಶಿಷ್ಟ ವರ್ಗದ ಸದಸ್ಯರಿದ್ದಾರೆ. ಚಂದನ್ ಮಿತ್ರ ರಾಜೀನಾಮೆ ನೀಡಿದ ಕಾರಣ ರಾಷ್ಟ್ರೀಯ ಕಾರ್ಯಕಾರಣಿಯಲ್ಲಿ ಒಂದು ಸ್ಥಾನ ಖಾಲಿ ಇದೆ. ಒಟ್ಟಾರೆ 69 ಸದಸ್ಯರು ಮುಂದುವರೆದ ಜಾತಿಯವರು, 27 ಜನರು ಮಾತ್ರ ಇತರೆ ಸಮುದಾಯದವರಾಗಿದ್ದಾರೆ.

ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ ಒಟ್ಟು 36 ರಾಜ್ಯ ಘಟಕಗಳ ಪೈಕಿ ಎಲ್ಲಿಯೂ ದಲಿತರು ಅಧ್ಯಕ್ಷರಾಗಿಲ್ಲ. ಏಳು ಜನ ಬ್ರಾಹ್ಮಣರು, 17 ಮಂದಿ ಮುಂದುವರಿದ ಜಾತಿಯವರು, ಆರು ಜನ ಪರಿಶಿಷ್ಟ ವರ್ಗದವರು, ಆರು ಜನ ಇತರೆ ಹಿಂದುಳಿದ ವರ್ಗದವರು ಸೇರಿದಂತೆ ಒಬ್ಬರು ಮಾತ್ರ ಮುಸ್ಲಿಮರಿದ್ದಾರೆ. ಈ ಲೆಕ್ಕಾಚಾರದ ಪ್ರಕಾರ ಪಕ್ಷದ ಶೇ 66 ರಷ್ಟು ರಾಜ್ಯ ಘಟಕದ ಅಧ್ಯಕ್ಷರು ಮೇಲ್ಜಾತಿಗಳಿಗೆ ಸೇರಿದವರೇ ಆಗಿದ್ದಾರೆ.

ಜಿಲ್ಲಾ ಘಟಕಗಳ ಅಂಕಿಅಂಶಗಳನ್ನು ವಿಶ್ಲೇಷಿಸಿದಾಗ ಶೇ 65ರಷ್ಟು ಅಧ್ಯಕ್ಷರು ಮೇಲ್ಜಾತಿಗೆ ಸೇರಿದವರೇ ಆಗಿರುವುದು ಬೆಳಕಿಗೆ ಬಂತು. ಬಿಜೆಪಿಯು ಒಟ್ಟು 746 ಜಿಲ್ಲಾ ಘಟಕಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಿದೆ. 487 ಜಿಲ್ಲಾ ಘಟಕದ ಅಧ್ಯಕ್ಷರು ಮೇಲ್ಜಾತಿಗಳಿಗೆ ಸೇರಿದವರಾಗಿದ್ದಾರೆ. ಶೇ 25 ರಷ್ಟು ಜಿಲ್ಲೆಗಳಲ್ಲಿ ಇತರೆ ಹಿಂದುಳಿದ ವರ್ಗದವರು, ಶೇ 4 ರಷ್ಟು ದಲಿತರು, ಶೇ 2 ರಷ್ಟು ಮಾತ್ರ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಮೂರು ಜಿಲ್ಲಾ ಘಟಕಗಳ ಅಧ್ಯಕ್ಷರ ಜಾತಿ ಮಾತ್ರ ಸ್ಪಷ್ಟವಾಗಿ ಅರಿವಾಗಲಿಲ್ಲ.

ವಿವಿಧ ಸಮುದಾಯಗಳು ದೇಶದ ಒಟ್ಟು ಜನಸಂಖ್ಯೆಯಲ್ಲಿ ಪಡೆದುಕೊಂಡಿರುವ ಪಾಲಿನ ಅನುಪಾತದ ಸನಿಹಕ್ಕೂ ಈ ಲೆಕ್ಕಾಚಾರ ಬರುವುದಿಲ್ಲ. 2011ರ ಜನಗಣತಿ ಪ್ರಕಾರ ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ 16.6 ರಷ್ಟು ದಲಿತರು, ಶೇ 8.6 ರಷ್ಟು ಪರಿಶಿಷ್ಟ ವರ್ಗದವರು, ಶೇ 14 ರಷ್ಟು ಮುಸ್ಲಿಮರಿದ್ದಾರೆ. ಜಾತಿಗಣತಿಯ ಅಂಕಿಅಂಶಗಳು ಇನ್ನೂ ಬಿಡುಗಡೆಯಾಗಿಲ್ಲ. ಹೀಗಾಗಿ ಇದನ್ನು ಕರಾರುವಾಕ್ ಸಂಖ್ಯೆ ಎಂದು ಹೇಳಲು ಸಾಧ್ಯವಿಲ್ಲ. 2007ರಲ್ಲಿ ಎನ್‌ಎಸ್‌ಎಸ್‌ಒ (ನ್ಯಾಷನಲ್ ಸ್ಯಾಂಪಲ್ ಸರ್ವೆ ಆರ್ಗನೈಸೇಷನ್) ನಡೆಸಿದ್ದ ಸಮೀಕ್ಷೆಯ ಪ್ರಕಾರ ನಮ್ಮ ದೇಶದ ಒಟ್ಟು ಜನಸಂಖ್ಯೆಯ ಪೈಕಿ ಶೇ 41ರಷ್ಟು ಇತರೆ ಹಿಂದುಳಿದ ವರ್ಗದವರಿದ್ದಾರೆ.

ರಾಜ್ಯವಾರು ಮಾಹಿತಿ...

ಹೊಸ ರೀತಿಯ ಜಾತಿ ಹೊಂದಾಣಿಕೆ ಲೆಕ್ಕಾಚಾರವನ್ನು ಬಳಸಿಕೊಂಡ 2017ರಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿ ಸ್ಪಷ್ಟ ಬಹುತದೊಂದಿಗೆ ಅಧಿಕಾರಕ್ಕೆ ಬಂತು. ಆಗ ಶೇ 72ರಷ್ಟು ಜಿಲ್ಲಾ ಘಟಕದ ಅಧ್ಯಕ್ಷರು ಸಾಮಾನ್ಯ ವರ್ಗದವರಾಗಿದ್ದರು. ಇವರಲ್ಲಿ ಶೇ 30 ರಷ್ಟು ಬ್ರಾಹ್ಮರು, ಶೇ 15ರಷ್ಟು ಬನಿಯಾಗಳು, ಶೇ 26 ರಷ್ಟು ಮುಂದುವರೆದ ಜಾತಿಯವರು. ಶೇ 21 ರಷ್ಟು ಜನಸಂಖ್ಯೆ ಹೊಂದಿರುವ ದಲಿತರು ಕೇವಲ ಎರಡು ಜಿಲ್ಲಾ ಘಟಕಗಳಲ್ಲಿ ಮಾತ್ರ ಅಧ್ಯಕ್ಷರಾಗಿದ್ದಾರೆ. ಶೇ 26 ರಷ್ಟು ಇತರೆ ಹಿಂದುಳಿದ ವರ್ಗದವರು ಜಿಲ್ಲಾ ಘಟಕಗಳ ಅಧ್ಯಕ್ಷರಾಗಿದ್ದಾರೆ. ಉತ್ತರ ಪ್ರದೇಶದಲ್ಲಿ 71 ಜಿಲ್ಲೆಗಳಿವೆ ಆದರೆ ಬಿಜೆಪಿ ಆಡಳಿತಾತ್ಮಕ ಕಾರಣಗಳಿಗಾಗಿ 92 ಜಿಲ್ಲಾ ಘಟಕಗಳನ್ನು ರೂಪಿಸಿದೆ. 

ಬಿಹಾರದಲ್ಲಿ ಗೆಲುವು ಸಾಧಿಸಬೇಕು ಎನ್ನುವ ಬಿಜೆಪಿ ಕನಸು 2015ರಲ್ಲಿ ಯಶಸ್ವಿಯಾಗಲಿಲ್ಲ. ಇದೇ ಕಾರಣಕ್ಕೆ ಬಿಜೆಪಿ ಬಿಹಾರವನ್ನು ಮಹತ್ವದ ರಾಜ್ಯ ಎಂದು ಪರಿಗಣಿಸುತ್ತದೆ. ಬಿಹಾರದ 40 ಜಿಲ್ಲಾ ಘಟಕಗಳ ಪೈಕಿ 6 ಬ್ರಾಹ್ಮಣರು, 16 ಜನ ಮುಂದುವರೆದ ಜಾತಿಯವರು, 11 ಇತರೆ ಹಿಂದುಳಿದವರು ಮತ್ತು ಒಬ್ಬರು ಮಾತ್ರ ದಲಿತರಿದ್ದಾರೆ. ಜಿಲ್ಲಾ ಘಟಕಗಳ ಅಧ್ಯಕ್ಷರ ಸ್ಥಾನವನ್ನು ಒಟ್ಟಾಗಿ ವಿಶ್ಲೇಷಿಸಿದರೆ ಶೇ 55 ರಷ್ಟು ಮುಂದುವರಿದ ಜಾತಿಯವರೇ ಇರುವುದು ಗಮನಕ್ಕೆ ಬರುತ್ತದೆ.

ಚುನಾವಣೆ ಹೊಸ್ತಿಲಲ್ಲಿರುವ ರಾಜ್ಯಗಳು...

2019ರ ಲೋಕಸಭೆ ಚುನಾವಣೆಗೂ ಮುನ್ನ ರಾಜಸ್ಥಾನ, ಮಧ್ಯ ಪ್ರದೇಶ, ಛತ್ತಸಗಢ ರಾಜ್ಯಗಳ ವಿಧಾನಸಭಾ ಚುನಾವಣೆ ನಡೆಯಲಿದೆ. ಇದು ಬಿಜೆಪಿಗೆ ಸೆಮಿಫೈನಲ್‌ ಇದ್ದಂತೆ. ಈ ಎಲ್ಲ ರಾಜ್ಯಗಳಲ್ಲಿಯೂ ಬಿಜೆಪಿ ಅಧಿಕಾರದಲ್ಲಿದೆ. ಮಧ್ಯಪ್ರದೇಶದಲ್ಲಿ ಶೇ 70 ರಷ್ಟು ಜಿಲ್ಲಾ ಘಟಕಗಳ ಅಧ್ಯಕ್ಷರು ಬ್ರಾಹ್ಮರು, ಬನಿಯಾಗಳು ಮತ್ತು ಮುಂದುವರೆದ ಜಾತಿಯವರೇ ಇದ್ದಾರೆ. ಒಬಿಸಿ ಶೇ 25 ರಷ್ಟು, ಶೇ 4 ರಷ್ಟು ಪರಿಶಿಷ್ಟ ವರ್ಗದವರಿದ್ದಾರೆ. 55 ಜಿಲ್ಲಾ ಘಟಕಗಳ ಅಧ್ಯಕ್ಷರ ಪೈಕಿ 13 ಬ್ರಾಹ್ಮಣರು, 6 ಬನಿಯಾಗಳು ಮತ್ತು ಒಬ್ಬರು ಸಿಖ್ಖರಿದ್ದಾರೆ.

ರಾಜಸ್ಥಾನದಲ್ಲಿ ಇತ್ತೀಚೆಗೆ ನಡೆದ ಲೋಕಸಭಾ ಉಪ ಚುನಾವಣೆಯಲ್ಲಿ ಬಿಜೆಪಿ ಎರಡು ಸ್ಥಾನಗಳನ್ನು ಕಳೆದುಕೊಳ್ಳುವ ಮೂಲಕ ತೀವ್ರ ಹಿನ್ನೆಡೆ ಅನುಭವಿಸಿದೆ. ಶೇ 71 ರಷ್ಟು ಜಿಲ್ಲಾ ಅಧ್ಯಕ್ಷರು ಮುಂದುವರೆದ ಜಾತಿಗಳಿಗೆ (ಬ್ರಾಹ್ಮಣ, ಬನಿಯಾ, ಜೈನ್‌, ರಜಪೂತ, ಕಾಯಸ್ಥರು) ಸೇರಿದವರು. ಶೇ 23 ಇತರೆ ಹಿಂದುಳಿದ ವರ್ಗದವರು ಮತ್ತು ಇಬ್ಬರು ದಲಿತರು ಮಾತ್ರ ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದಾರೆ.

ಛತ್ತೀಸ್‌ಗಢ ರಾಜ್ಯದಲ್ಲಿ ಮಾತ್ರ ಗಮನಾರ್ಹ ಸಂಖ್ಯೆಯಲ್ಲಿ, ಅಂದರೆ ಶೇ 45 ರಷ್ಟು ಇತರೆ ಹಿಂದುಳಿದವರು ಅಧ್ಯಕ್ಷರಾಗಿದ್ದಾರೆ. ಶೇ 7ರಷ್ಟು ಮಾತ್ರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸೇರಿದವರಾಗಿದ್ದಾರೆ. 

ಪಶ್ಚಿಮ ರಾಜ್ಯಗಳಲ್ಲಿ...

ಪ್ರಧಾನ ಮಂತ್ರಿ ನರೇದ್ರ ಮೋದಿ ಅವರ ಸ್ವಂತ ರಾಜ್ಯ ಗುಜರಾತ್‌ನಲ್ಲಿ 41 ಜಿಲ್ಲಾ ಘಟಕಗಳ ಅಧ್ಯಕ್ಷರ ಪೈಕಿ ಮೂವರು ಬ್ರಾಹ್ಮಣರು, 21 ಮುಂದುವರಿದ ಜಾತಿಯವರಿದ್ದಾರೆ, ಆರು ಮಂದಿ ಬುಡಕಟ್ಟು ವರ್ಗದವರು, ಎಂಟು ಮಂದಿ ಇತರೆ ಹಿಂದುಳಿದ ಜಾತಿಗಳಿಗೆ ಸೇರಿದವರು ಹಾಗೂ ಮೂವರು ದಲಿತರಿದ್ದಾರೆ. ಪ್ರಭಾವಶಾಲಿ ಪಟೇಲ್ ಸಮುದಾಯದವರೇ ಶೇ 31ರಷ್ಟು ಜಿಲ್ಲಾಧ್ಯಕ್ಷರಾಗಿದ್ದಾರೆ.

ಮಹಾರಾಷ್ಟ್ರದ 40 ಜಿಲ್ಲೆಗಳ ಪೈಕಿ 15 ಜಿಲ್ಲೆಗಳಲ್ಲಿ ಪ್ರಭಾವಿ ಮರಾಠ ಸಮುದಾಯದವರು, 11 ಜಿಲ್ಲೆಗಳಲ್ಲಿ ಬ್ರಾಹ್ಮಣರು, ಆರು ಕಡೆ ಇತರೆ ಮುಂದುವರಿದ ಜಾತಿಯವರು, ನಾಲ್ಕು ಕಡೆ ಇತರೆ ಹಿಂದುಳಿದವರು, ಮೂರು ಕಡೆ ಪರಿಶಿಷ್ಟ ವರ್ಗದವರು ಮತ್ತು ಒಂದು ಜಿಲ್ಲೆಯಲ್ಲಿ ಮುಸ್ಲಿಮ್ ಸಮುದಾಯಕ್ಕೆ ಸೇರಿದವರು ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದಾರೆ. 

ಪೂರ್ವ ರಾಜ್ಯಗಳು..

ಪಶ್ಚಿಮ ಬಂಗಾಳದ ಒಟ್ಟು 37 ಜಿಲ್ಲಾ ಘಟಕಗಳ ಅಧ್ಯಕ್ಷರ ಪೈಕಿ ಎರಡು ಜಿಲ್ಲೆಗಳಲ್ಲಿ ದಲಿತರು, ಐದು ಕಡೆ ಒಬಿಸಿ ಸಮುದಾಯಕ್ಕೆ ಸೇರಿದವರು ಇದ್ದಾರೆ. ಉಳಿದೆಡೆ ಸಾಮಾನ್ಯ ವರ್ಗಕ್ಕೆ ಸೇರಿದವರು ಜಿಲ್ಲಾ ಘಟಕಗಳ ಅಧ್ಯಕ್ಷರಾಗಿದ್ದಾರೆ. ಬಿಜೆಪಿ ಆಡಳಿತ ಇರುವ ಅಸ್ಸಾಂ ರಾಜ್ಯದಲ್ಲಿ ಶೇ 45ರಷ್ಟು ಮುಂದುವರಿದ ಜಾತಿಯವರು, ಶೇ 32 ರಷ್ಟು ಒಬಿಸಿಯವರು, ಶೇ 21 ರಷ್ಟು ಪರಿಶಿಷ್ಟ ವರ್ಗದವರು ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದಾರೆ. ಒಂದು ಜಿಲ್ಲಾ ಘಟಕದಲ್ಲಿ ಮುಸ್ಲಿಂ ಸಮುದಾಯದವರು ಅಧ್ಯಕ್ಷರಾಗಿದ್ದಾರೆ. 

ಉತ್ತರ ಮತ್ತು ದಕ್ಷಿಣದ ರಾಜ್ಯಗಳು...

ಕರ್ನಾಟಕದ 36 ಜಿಲ್ಲಾ ಘಟಕಗಳ ಪೈಕಿ  28 ಜನರು ಸಾಮಾನ್ಯ ವರ್ಗಕ್ಕೆ ಸೇರಿದವರಾಗಿದ್ದಾರೆ. 36 ಅಧ್ಯಕ್ಷ ಸ್ಥಾನಗಳಲ್ಲಿ 19 ಲಿಂಗಾಯತರು, 7 ಒಕ್ಕಲಿಗರು, 2 ಇತರೆ, 5 ಒಬಿಸಿ ಮತ್ತು ಮೂವರು ಪರಿಶಿಷ್ಟ ಜಾತಿಯ ಅಧ್ಯಕ್ಷರಿದ್ದಾರೆ. 

ಎಐಎಡಿಎಂಕೆ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಲು ಬಿಜೆಪಿ ಹವಣಿಸುತ್ತಿರುವ ತಮಿಳುನಾಡಿನಲ್ಲಿ ಶೇ 71 ರಷ್ಟು ಹಿಂದುಳಿದ ವರ್ಗದವರೇ ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದಾರೆ. ಜಮ್ಮು ಮತ್ತು ಕಾಶ್ಮೀರದ 23 ಜಿಲ್ಲಾ ಘಟಕಗಳ ಅಧ್ಯಕ್ಷರ ಪೈಕಿ ಶೇ 48 ರಷ್ಟು ಮೇಲ್ವರ್ಗದವರೇ ಅಧ್ಯಕ್ಷರಾಗಿದ್ದಾರೆ. ಇವರಲ್ಲಿ ಶೇ 41ರಷ್ಟು ಮಂದಿ ಜಮ್ಮು ಮೂಲದವರು.

ಮೋದಿ ಇತರೆ ಹಿಂದುಳಿದ ವರ್ಗದವರು...

ಬಿಜೆಪಿಯ ಆಡಳಿತ ಘಟಕದಲ್ಲಿರುವ ಜಾತಿ ಅಸಮಾನತೆ ಕುರಿತು ಪ್ರತಿಕ್ರಿಯೆ ಪಡೆಯಲು ‘ದಿ ಪ್ರಿಂಟ್’ ಸುದ್ದಿತಾಣದ ವರದಿಗಾರರು ಕೆಲ ಹಿರಿಯ ನಾಯಕರನ್ನು ಸಂಪರ್ಕಿಸಿದರು. ಈ ಬಗ್ಗೆ ಅವರು ಮಾತನಾಡಲು ನಿರಾಕರಿಸಿದರು. ‘ಸ್ಥಳೀಯ ಜಾತಿಗಳ ಪ್ರಾಬಲ್ಯದ ಆಧಾರದ ಮೇಲೆ ಜಿಲ್ಲಾ ಘಟಕದ ಅಧ್ಯಕ್ಷರನ್ನು ನೇಮಕ ಮಾಡಲಾಗುತ್ತಿದೆ’ ಎಂದು ಬಿಜೆಪಿಯ ಮೂಲಗಳು ತಿಳಿಸಿವೆ. 

ಪ್ರಧಾನಿ ನರೇಂದ್ರ ಮೋದಿ ಅವರು ಸ್ವತಃ ಇತರೆ ಹಿಂದುಳಿದ ವರ್ಗಕ್ಕೆ ಸೇರಿದವರು. ಇದು ನಮ್ಮ ಪಕ್ಷ ಹಿಂದುಳಿದವರ ಪರವಾಗಿದೆ ಎಂಬುದನ್ನು ತೋರಿಸುತ್ತದೆ ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ  ಈ ಅಸಮಾನತೆ ಸರಿಪಡಿಸುವುದಾಗಿ ಅವರು ಹೇಳಿದ್ದಾರೆ. 

ಬರಹ ಇಷ್ಟವಾಯಿತೆ?

 • 11

  Happy
 • 0

  Amused
 • 1

  Sad
 • 1

  Frustrated
 • 4

  Angry

Comments:

0 comments

Write the first review for this !