ಸೋಮವಾರ, ಜೂನ್ 21, 2021
28 °C

ಕರ್ತವ್ಯದ ವೇಳೆ ಮದ್ಯ ಸೇವಿಸಿದ್ದ 13 ಮಂದಿ ವಿಮಾನಯಾನ ಸಿಬ್ಬಂದಿ ಅಮಾನತು

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ‘ವಿಮಾನ ನಿಲ್ದಾಣಗಳಲ್ಲಿ ಹಾಗೂ ವಿಮಾನಗಳಲ್ಲಿ ಕಾರ್ಯನಿರ್ವಹಿಸುವ ವಿವಿಧ ವಿಭಾಗಗಳ 13 ಸಿಬ್ಬಂದಿ ಕರ್ತವ್ಯದ ವೇಳೆಯಲ್ಲಿ ಮದ್ಯ ಸೇವಿಸಿರುವುದು ‘ಮದ್ಯಸೇವನೆ ಪತ್ತೆ ಪರೀಕ್ಷೆ’ಯಲ್ಲಿ ತಿಳಿದುಬಂದಿದೆ. ಇವರನ್ನು ಮೂರು ತಿಂಗಳ ಅವಧಿಗೆ ಅಮಾನತು ಮಾಡಲಾಗಿದೆ’ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯದ (ಡಿಜಿಸಿಎ) ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.

ಅಮಾನತುಗೊಂಡವರಲ್ಲಿ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಇಬ್ಬರು ಹಾಗೂ ಇಂಡಿಗೊದ ಏಳು ಸಿಬ್ಬಂದಿ ಸಹ ಸೇರಿದ್ದಾರೆ.

‘ಪರೀಕ್ಷೆಯಲ್ಲಿ ವಿಫಲರಾದವರಲ್ಲಿ ಬಹುತೇಕರು ವಿಮಾನ, ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದ ಸುರಕ್ಷತೆಯಂತ ಸೂಕ್ಷ್ಮ ಕೆಲಸಗಳನ್ನು ನಿರ್ವಹಿಸುವವರು. ಇಂತಹವರು ಕರ್ತವ್ಯ ವೇಳೆ ಮದ್ಯಸೇವಿಸುವುದರಿಂದ ಅಪಾಯ, ಅವಘಡ ಎದುರಾಗುವ ಸಂಭವ ಇರುತ್ತದೆ’ ಎಂದು ಅಧಿಕಾರಿ ಹೇಳಿದ್ದಾರೆ.

ವಿಮಾನ ನಿರ್ವಹಣೆ, ಸಂಚಾರ ನಿಯಂತ್ರಣ ಸೇರಿದಂತೆ ಎಲ್ಲಾ ವಿಭಾಗದ ಸಿಬ್ಬಂದಿಯನ್ನು ಮದ್ಯ ಸೇವನೆ ಪತ್ತೆ ಪರೀಕ್ಷೆಗೆ ಒಳಪಡಿಸಬೇಕು ಎಂದು ಡಿಜಿಸಿಎ ಸೆ.16ರಿಂದ ನಿಯಮ ಜಾರಿಗೆ ತಂದಿದೆ. ಸದ್ಯ ಸಿಬ್ಬಂದಿ ಸ್ವಇಚ್ಛೆಯಿಂದ ಪರೀಕ್ಷೆಗೊಳಪಡಬಹುದು. ಆದರೆ ನವೆಂಬರ್‌ನಿಂದ ಈ ಪರೀಕ್ಷೆ ಕಡ್ಡಾಯವಾಗಲಿದೆ.

‘ಮೊದಲ ಬಾರಿಗೆ ಪರೀಕ್ಷೆ ಎದುರಿಸಲು ನಿರಾಕರಿಸಿದರೆ, ತಪ್ಪಿಸಿಕೊಳ್ಳಲು ಯತ್ನಿಸಿದರೆ ಅಥವಾ ಪರೀಕ್ಷೆಯಲ್ಲಿ ವಿಫಲವಾದರೆ ಅಂತಹವರನ್ನು ಮೂರು ತಿಂಗಳು ಕರ್ತವ್ಯದಿಂದ ಅಮಾನತುಗೊಳಿಸಲಾಗುತ್ತದೆ. ಎರಡನೇ ಬಾರಿಗೆ ನಿಯಮ ಉಲ್ಲಂಘಿಸಿದರೆ 1 ವರ್ಷ ಅವರ ಪರವಾನಗಿ ಅಮಾನತುಗೊಳಿಸಲಾಗುತ್ತದೆ’ ಎಂದು ನಿಯಮದಲ್ಲಿ ಉಲ್ಲೇಖಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು