ಸೋಮವಾರ, ಮಾರ್ಚ್ 8, 2021
22 °C
ಕೋವಿಡ್‌ ಪಿಡುಗು: ದೆಹಲಿ, ಮುಂಬೈ, ಪುಣೆ, ಅಹಮದಾಬಾದ್‌, ಚೆನ್ನೈ ನಗರಗಳಲ್ಲೇ ಹೆಚ್ಚು ಸೋಂಕಿತರು

ದೇಶದ 14 ಜಿಲ್ಲೆಗಳೇ ಕೊರೊನಾ ಕೇಂದ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ದೇಶದ 14 ಜಿಲ್ಲೆಗಳಲ್ಲಿ ಕೊರೊನಾ ವೈರಾಣು ಪಸರಿಸುವಿಕೆ ನಿಯಂತ್ರಿಸುವುದು ಪಿಡುಗಿನ ವಿರುದ್ಧದ ಹೋರಾಟದಲ್ಲಿ ನಿರ್ಣಾಯಕ ಎಂಬುದು ಈಗ ಇರುವ ಚಿತ್ರಣ. ಸೋಂಕಿನ ಶೇ 64ರಷ್ಟು ಪ್ರಕರಣಗಳು ಈ ಜಿಲ್ಲೆಗಳಲ್ಲಿಯೇ ಇವೆ. ಈ 14 ಜಿಲ್ಲೆಗಳಲ್ಲಿ ಸೋಂಕು ಪ್ರಸರಣ ತಡೆ ಚಟುವಟಿಕೆಯನ್ನು ಗಟ್ಟಿಗೊಳಿಸಬೇಕಿದೆ ಎಂಬುದರತ್ತ ಸರ್ಕಾರದ ಹೊಸ ಅಂಕಿ ಅಂಶಗಳು ಬೆಳಕು ಚೆಲ್ಲಿವೆ.

ಈ 14 ಜಿಲ್ಲೆಗಳ ಪೈಕಿ, ಐದು ದೊಡ್ಡ ನಗರಗಳಾದ ದೆಹಲಿ, ಪುಣೆ, ಮುಂಬೈ, ಅಹಮದಾಬಾದ್‌ ಮತ್ತು ಚೆನ್ನೈನಲ್ಲಿ ಸೋಂಕಿತರ ಪ್ರಮಾಣವು ಶೇ 47ರಷ್ಟಿದೆ. 

ಈ ಪಟ್ಟಿಯಲ್ಲಿರುವ ದಕ್ಷಿಣದ ನಗರಗಳೆಂದರೆ ಚೆನ್ನೈ ಮತ್ತು ಹೈದರಾಬಾದ್ ಮಾತ್ರ‌. ದೇಶದ ಒಟ್ಟು ಸೋಂಕಿತರಲ್ಲಿ ಶೇ 7ರಷ್ಟು ಮಂದಿ ಮಾತ್ರ ಇಲ್ಲಿ ಇದ್ದಾರೆ. ಮಹಾರಾಷ್ಟ್ರದ ಒಟ್ಟು ಪ್ರಕರಣಗಳಲ್ಲಿ ಮುಂಬೈ ನಗರದ ಪಾಲು ಶೇ 61ರಷ್ಟು. ಗುಜರಾತ್‌ನ ಪ್ರಕರಣಗಳಲ್ಲಿ ಶೇ 71ರಷ್ಟು ಅಹಮದಾಬಾದ್‌ನಲ್ಲಿಯೇ ಇವೆ. 

ಕೋವಿಡ್‌ ನಿಯಂತ್ರಣಕ್ಕೆ ರಾಜ್ಯಗಳು ಅನುಸರಿಸಿದ ಕಾರ್ಯತಂತ್ರವನ್ನು ಪರಿಶೀಲಿಸಲು ಕೇಂದ್ರ ತಂಡವು 20 ಜಿಲ್ಲೆಗಳಿಗೆ ಭೇಟಿ ನೀಡಿತ್ತು. ಆ 20 ಜಿಲ್ಲೆಗಳಲ್ಲಿ ನಿರ್ಣಾಯಕವಾದ ಈ 14 ಜಿಲ್ಲೆಗಳೂ ಸೇರಿದ್ದವು. 

ಕೆಲವು ನಗರಗಳಲ್ಲಿ ಪ್ರಕರಣಗಳು ಅತಿ ವೇಗವಾಗಿ ದ್ವಿಗುಣವಾಗುತ್ತಿವೆ ಎಂಬುದೂ ಕಳವಳಕಾರಿ ಅಂಶ. ಚೆನ್ನೈಯಲ್ಲಿ 6.2 ದಿನ, ದೆಹಲಿಯಲ್ಲಿ 7.1 ದಿನ, ಪುಣೆಯಲ್ಲಿ 11 ದಿನ ಮತ್ತು ಅಹಮದಾಬಾದ್‌ನಲ್ಲಿ 7.1 ದಿನದಲ್ಲಿ ಪ್ರಕರಣಗಳು ದುಪ್ಪಟ್ಟಾಗುತ್ತಿವೆ. ರಾಷ್ಟ್ರಮಟ್ಟದಲ್ಲಿ ಪ್ರಕರಣ ದ್ವಿಗುಣಗೊಳ್ಳುವ ಅವಧಿ 10 ದಿನ. 

ಈ ಜಿಲ್ಲೆಗಳು ಹೆಚ್ಚು ಅಪಾಯದ ಸ್ಥಿತಿಯಲ್ಲಿ ಇರುವುದರಿಂದ ಕೇಂದ್ರದ ಇನ್ನೊಂದು ತಂಡ ಈ ಜಿಲ್ಲೆಗಳಿಗೆ ಭೇಟಿ ನೀಡಲಿದೆ. 

ಕೆಲದಿನಗಳ ಹಿಂದೆ ಈ ಪಟ್ಟಿಯಲ್ಲಿ ವಡೋದರ ಮತ್ತು ಕರ್ನೂಲ್‌ ಕೂಡ ಇದ್ದವು. ಆದರೆ, ಇಲ್ಲಿನ ಪರಿಸ್ಥಿತಿ ಸುಧಾರಿಸಿದೆ. ಕೋಲ್ಕತ್ತ ಈ ಪಟ್ಟಿಗೆ ಹೊಸ ಸೇರ್ಪಡೆ. ಅಲ್ಲಿ ಮರಣ ಪ್ರಮಾಣ ಶೇ 10ರಷ್ಟಿರುವುದು ಕಳವಳವನ್ನು ಹೆಚ್ಚಿಸಿದೆ. 

14 ಜಿಲ್ಲೆ ಯಾವುವು?: ಮುಂಬೈ, ದೆಹಲಿ, ಆಗ್ರಾ, ಅಹಮದಾಬಾದ್‌, ಪುಣೆ, ಇಂದೋರ್‌, ಠಾಣೆ, ಜೈಪುರ, ಜೋಧಪುರ, ಸೂರತ್‌, ಕೋಲ್ಕತ್ತ, ಭೋಪಾಲ್‌, ಹೈದರಾಬಾದ್‌, ಚೆನ್ನೈ.

‘ಯಾವುದೇ ಪರಿಸ್ಥಿತಿಗೂ ದೇಶ ಸಜ್ಜು’

ಕೋವಿಡ್‌ಗೆ ಸಂಬಂಧಿಸಿ ಯಾವುದೇ ಪರಿಸ್ಥಿತಿ ಸೃಷ್ಟಿಯಾದರೂ ಎದುರಿಸಲು ದೇಶ ಸಜ್ಜಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್‌ ಹೇಳಿದ್ದಾರೆ. ಶನಿವಾರ ಒಂದೇ ದಿನ ಸೋಂಕು ಪ್ರಕರಣಗಳಲ್ಲಿ 3,320 ಏರಿಕೆ
ಯಾಗಿದೆ. ಏರಿಕೆಯು ಮೂರು ಸಾವಿರಕ್ಕಿಂತ ಹೆಚ್ಚಾಗಿರುವುದು ಸತತ 3ನೇ ದಿನ. ಪ್ರಕರಣಗಳ ಒಟ್ಟು ಸಂಖ್ಯೆ 59,662 ಎಂದು ಆರೋಗ್ಯ ಇಲಾಖೆ ಹೇಳಿದೆ. ಆದರೆ, ರಾಜ್ಯಗಳು ಕೊಟ್ಟ ಅಂಕಿಅಂಶಗಳನ್ನು ಲೆಕ್ಕ ಹಾಕಿ ಪಿಟಿಐ ಕೊಟ್ಟ ಮಾಹಿತಿ ಪ್ರಕಾರ, ಒಟ್ಟು ಸಂಖ್ಯೆಯು 62,513ಕ್ಕೆ ಏರಿಕೆಯಾಗಿದೆ.

 

84,600: ಶನಿವಾರ ನಡೆಸಲಾದ ಪರೀಕ್ಷೆಗಳು

95,000: ಒಂದು ದಿನದ ಪರೀಕ್ಷೆಯ ಸಾಮರ್ಥ್ಯ

7,645: ದೇಶದಲ್ಲಿ ಈಗ ಇರುವ ಕ್ವಾರಂಟೈನ್‌ ಕೇಂದ್ರಗಳು

453: ಕೋವಿಡ್‌ ಪರೀಕ್ಷೆಯ ಪ್ರಯೋಗಾಲಯಗಳ ಸಂಖ್ಯೆ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು